ಸಮಸ್ಯೆಗಳ ಸುಳಿಯಿಂದಲೇ ಮೇಲೆದ್ದು!!
ವಿಜಯ ದರ್ಪಣ ನ್ಯೂಸ್…..
ಸಮಸ್ಯೆಗಳ ಸುಳಿಯಿಂದಲೇ ಮೇಲೆದ್ದು!!

ಹದವಾದ ಭೂಮಿಯಲ್ಲಿ ಹೂವಿನ ಬೀಜವನ್ನು ಬಿತ್ತಿ, ಅದಕ್ಕೆ ಬೇಕಾದ ನೀರನ್ನು ಹನಿಸಿ. ಗೊಬ್ಬರ ಪೂರೈಸುತ್ತವೆ. ಒಟ್ಟಿನಲ್ಲಿ ಅದಕ್ಕೆ ಬೇಕಾದ ರಕ್ಷಣೆಯನ್ನು ಒದಗಿಸುತ್ತೇವೆ. ಆದೊಂದು ದಿನ ಚಿಗುರೊಡೆಯುತ್ತದೆ ಸಸಿಯಾಗುತ್ತದೆ. ನಂತರ ಗಿಡವಾಗುತ್ತದೆ. ಮುಂದೊಂದು ದಿನ ಮೊಗೊಂದು ಹಿಗ್ಗಿ ಹಿಗ್ಗಿ ಸುಂದರ ಮುಂಜಾವಿನಲ್ಲಿ ಅರಳಿ ನಿಲ್ಲುತ್ತದೆ. ಗಿಡದ ನೆತ್ತಿಯ ಮೇಲಿನ ನಗುವ ಹೂ ಕಂಡು ನಮ್ಮ ತುಟಿಯಂಚಿನಲ್ಲಿ ನಗೆ ಹೂ ಅರಳುತ್ತದೆ. ಬೀಜವನ್ನು ಬೀಜವಾಗಿಯೇ ಬಿಟ್ಟಿದ್ದರೆ ಅದು ಹೂವಾಗಿ ಅರಳುತ್ತಿರಲಿಲ್ಲ. ನಮ್ಮ ನಗೆಗೆ ಕಾರಣವೂ ಆಗುತ್ತಿರಲಿಲ್ಲ. ಅಂತೆಯೇ ಸಮಸ್ಯೆಗಳೆಂಬ ಬೀಜಗಳನ್ನು ಹಾಗೆ ಬಿಟ್ಟಿದ್ದರೆ ಜೀವನದ ಆಟಪಾಟದಲ್ಲಿ ಓಟ-ಕೂಟದಲ್ಲಿ ಯಾವುದೇ ಬೆರಗುಗಳು ಬೆರಗಿನ ಅಭಿವ್ಯಕ್ತಿಗಳು ಕಾಣುತ್ತಲೇ ಇರಲಿಲ್ಲ.
ಸಮಸ್ಯೆಗಳಿಲ್ಲದ ಬದುಕು
ಬದುಕಿನಲ್ಲಿ ಆನಂದದ ಸುಗಂಧ ಸೂಸುತ್ತಿರಬೇಕು ಎಂದರೆ ಸಮಸ್ಯೆಗಳೆಂಬ ಪ್ರಶ್ನೆಗಳಿಗೆ ಬೆನ್ನು ತೋರಬಾರದು ಅವುಗಳ ಒಡನಾಟದಲ್ಲಿ ನಾವಿರಬೇಕು.
ಅವುಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಗುವ ದಾರಿ ಕೊಡುವ ಸಂತಸ, ಅನುಭವ ಇನ್ನಾವುದೂ ಕೊಡದು ಕೆಲವೊಮ್ಮೆ ಕೆಲ ಸಮಸ್ಯೆಗಳಿಗೆ ಉತ್ತರವಿಲ್ಲ ಎಂದೆನಿಸಿಬಿಡುತ್ತದೆ. ಹಲವಾರು ಸಮಸ್ಯೆಗಳಿಗೆ ಹಲವು ಜನ ಕೇವಲ ಮೌನದಲ್ಲೇ ಉತ್ತರ ನೀಡುವುದೂ ಉಂಟು. ಬಹುಶಃ ಕೆಲವು ಸಂದರ್ಭಗಳಲ್ಲಿ ಮುಂದಿನವರ ಬಳಿ ಉತ್ತರವಿರಲಿಕ್ಕಿಲ್ಲ ಎಂಬ ಭಾವ ಉಂಟಾಗುವುದು ಉಂಟು. ಸಮಸ್ಯೆಗಳ ಸುಳಿವಿನಲ್ಲಿ ಬದುಕು ದುಸ್ತರವೆನಿಸುತ್ತದೆ. ಮುಂದೆ ದಾರಿ ಕಾಣದಂತಾಗುತ್ತದೆ ಎಂದು ಗೊಣುಗುತ್ತೇವೆ. ಏನೇ ಹೇಳಿ ಸಮಸ್ಯೆಗಳು ಬದುಕನ್ನು ಸಕ್ರಿಯಗೊಳಿಸುತ್ತವೆ ವಿನಃ ನಿಷ್ಕ್ರಿಯಗೊಳಿಸುವುದಿಲ್ಲ. ಗಿರೀಶ ಕಾರ್ನಡರ ಯಯಾತಿಯಲ್ಲಿ ಬರುವ ಪ್ರಸಿದ್ದ ಮಾತಿನಂತೆ ‘ಬೆಳಕಿಲ್ಲದ ದಾರಿಯಲ್ಲಿ ನಡೆಯಬಲ್ಲೆ ಕನಸಿಲ್ಲದ ದಾರಿಯಲ್ಲಿ ಹೇಗೆ ನಡೆಯಲಿ!’ ಬಹಳಷ್ಟು ಆರ್ಥಪೂರ್ಣವೆನಿಸುತ್ತದೆ. ಸಮಸ್ಯೆಗಳಿಲ್ಲದ ಬದುಕು ಬದುಕೇ ಅಲ್ಲ ಅನಿಸುತ್ತದೆ.
ಹೊಸ ಹೊಳಹುಗಳು
ಸಮಸ್ಯೆಗಳ ಜತೆಗೆ ಹೆಜ್ಜೆ ಹಾಕುತ್ತಿರುವಾಗ ಬದುಕು ಸುಗಮವೆನಿಸುವುದಿಲ್ಲ. ಏಕೆಂದರೆ ಅವುಗಳಿಗೆ ಪರಿಹಾರ ಹುಡುಕದೇ ಬದುಕಿನ ಬಂಡಿ ಸಲೀಸಾಗಿ ಸಾಗದು. ಹಾಗೆ ತಿಳಿದು ನೋಡಿದರೆ ಸಮಸ್ಯೆಗಳು ಕ್ರಿಯಾಶೀಲ ಬದುಕಿನ ರೂಪ-ರೇಶೆಗಳಿದ್ದಂತೆ. ಸಮಸ್ಯೆಗಳಿಗೆ ಉತ್ತರವನ್ನು ಹುಡುಕುವ ನಿಟ್ಟಿನಲ್ಲಿ ಹೊಸ ಹೊಳಹುಗಳು ಹೊಳೆಯುವ ಸಾಧ್ಯತೆಗಳು ಇಲ್ಲದಿಲ್ಲ. ಸಮಸ್ಯೆಗಳೇ ಹಾಗೆ ಯೋಚನೆಗೆ ಹಚ್ಚುತ್ತವೆ. ಕೆಲವೊಂದು ಸಮಸ್ಯೆಗಳು ಮನದಲ್ಲಿ ಎಷ್ಟೊಂದು ಆಳವಾಗಿ ಬೇರೂರುತ್ತವೆಂದರೆ ಅವುಗಳಿಗೆ ಬೇಕಾದ ಉತ್ತರದ ಹುಡುಕಾಟದಲ್ಲಿ ಹಗಲು ರಾತ್ರಿ ಒಂದಾಗಿ ಬಿಡುತ್ತವೆ. ಹುಡುಕಾಟದಲ್ಲಿ ಬುದ್ದಿ ಭಾವಗಳ ಸುಂದರ ಸಾಂಗತ್ಯವಿದೆ. ಸಾಂಗತ್ಯದೊಂದಿಗೆ ಕೆಲವೊಮ್ಮೆ ಸಾಮರಸ್ಯವೂ ಜೊತೆಯಾಗುತ್ತದೆ. ಬಹಳಷ್ಟು ಸಲ ಸಾಂಗತ್ಯ ಸಾಮರಸ್ಯ ಸೇರಿ ಸ್ವಾರಸ್ಯವನ್ನು ಉಂಟು ಮಾಡುತ್ತದೆಂಬುದು ಅಚ್ಚರಿಯೇನಲ್ಲ.
ಸತ್ಯದ ಅರಿವು
ಸಮಸ್ಯೆಗಳ ಬೆನ್ನಿಗೆ ಬೇತಾಳದಂತೆ ಬಿದ್ದಾಗ ಸತ್ಯದ ಅರಿವು ಆಗುವುದು ಸತ್ಯದ ಅನುಭವ ಮನಸ್ಸಿಗೆ ನಾಟುವುದು. ಹೀಗೆ ಸತ್ಯದ ಅನುಭವ ಅನುಭಾವ ನಡೆದು ಬರುವುದು. ಇದು ಸಮಸ್ಯೆಗಳ ಲೋಕದ ಒಳಗನ್ನು ಹೊರಗನ್ನು ಒಳಗೊಂಡಿದೆ. ಮನುಷ್ಯ ಪ್ರಶ್ನೆಗಳ ಹಿಂದೆ ಬಿದ್ದಿರುವುದರಿಂದಲೇ ಬಹಿರಂಗದ ಬದುಕು ಸುಂದರ. ಅಂತರಂಗದ ಬದುಕು ಅದಕ್ಕಿಂತಲೂ ಸುಂದರ, ಹೊರಗೆ ಭವ್ಯ ಒಳಗೆ ದಿವ್ಯ. ಇದೆಲ್ಲ ಬದುಕಿನ ಸತ್ಯವನ್ನು ತಿಳಿಯುವ ದಾರಿಯಲ್ಲಿ ಸಾಧನೆ. ಸಿದ್ದಿ!
ಆಶಾದೀಪಗಳು
ಜೀವನದ ಹಾದಿಯಲ್ಲಿ ಸಿಗುವ ಪ್ರಶ್ನೆಗಳಿಗೆ ಆಶಾದೀಪಗಳಾಗಿ ಉತ್ತರಗಳು ನಿರಂತರವಾಗಿ ಉರಿಯುತ್ತಿರಬೇಕು ಆಗಲೇ ಬದುಕು ಆನಂದದ ಬೆಳಕು ನೀಡುತ್ತದೆ. ಬೆಳಕು, ಕತ್ತಲೆಗೆ ಹೆದರಿ ಕೂತಿದ್ದರೆ ಎಂದೂ ಹೊರ ಬರುತ್ತಲೇ ಇರಲಿಲ್ಲ. ಎಂದೋ ಒಂದು ದಿನ ಬೀಸುವ ಬಿರುಗಾಳಿಗೆ ಹೆದರಿ ಪುಟ್ಟ ಹಣತೆಯೊಂದು ಬೆಳಗಲು ನಿರಾಕರಿಸುವುದಿಲ್ಲ. ಅದು ತೈಲವಿರುವವರೆಗೆ ಬೆಳಗುತ್ತಲೇ ಇರುತ್ತದೆ. ಹಾಗೆಯೇ ಜೀವನದಲ್ಲಿ ಕಾಡುವ ಸಮಸ್ಯೆಗಳೆಂಬ ಪ್ರಶ್ನೆಗಳಿಗೆ ಭಯಪಟ್ಟು ಮುಂದೆ ಹೆಜ್ಜೆ ಇಡಲು ನಿರಾಕರಿಸಿದರೆ ಅಮೂಲ್ಯ ಬದುಕು ಅರ್ಥ ಕಳೆದುಕೊಳ್ಳುವುದು. ಹೆಡೆ ಎತ್ತಿ ನಿಂತ ಸಮಸ್ಯೆಗಳಿಗೆ ಎದೆಗುಂದದೆ ನಿರಾಶರಾಗದೇ ತಲೆ ಎತ್ತಿ ಎದುರಿಸುವುದೇ ಬದುಕಿನ ನಿಜವಾದ ಗುರಿ ಮತ್ತು ಗಮ್ಯ.

ಭಾವವೂ ಮುಖ್ಯ
ಪ್ರಶ್ನೆಗಳಿಗೆ ಉತ್ತರ ಹುಡುಕುವಾಗ ನಮ್ಮ ಭಾವವೂ ಮುಖ್ಯವಾಗುತ್ತದೆ ‘ಯದ್ಭಾವಂ ತದ್ಭವತಿ’ ಎಂಬ ಸಂಸ್ಕೃತದ ಮಾತಿನಂತೆ ಭಾವದಂತೆ ಬದುಕು. ‘ಭಾವ ಶುದ್ಧವಿದ್ದರೆ ಭಾಗ್ಯಕ್ಕೇನು ಕಡಿಮೆ!’ ಎಂದಿದ್ದಾರೆ ಹಿರಿಯರು. ಮನ ಬುದ್ಧಿ ಭಾವದಿಂದ ಉತ್ತರಗಳನ್ನು ಹುಡುಕುವಲ್ಲಿ ನಿರತರಾದರೆ ಜೀವನದಲ್ಲಿ ಶಾಂತಿ ಸಮಾಧಾನ ನೆಲೆಸುತ್ತದೆ. ಮತಿಯಲ್ಲಿ ಒಂದು ರೀತಿ ಮಹಾಬೆಳಗು ಮೂಡುತ್ತದೆ. ಭಾವ ಶುದ್ಧವಾಗಿದ್ದರೆ ಸ್ವರ್ಗವೇ ಧರೆಗಿಳಿಯುತ್ತದೆ. ಕಾಡುವ ಪ್ರಶ್ನೆಗಳಿಗೆ ನಿರಾಯಾಸವಾಗಿ ಉತ್ತರ ಸಿಕ್ಕುತ್ತದೆ. ಭಾವ ವಿಕಾಸದ ಸುಂದರ ಸಾಧನಗಳೇ ಸಮಸ್ಯೆಗಳು.
ಜಾಣತನ
ನಾರದ ಮಹರ್ಷಿಗಳು ಭೇಟಿಯಾಗುವ ಮೊದಲು ವಾಲ್ಮೀಕಿ ಒಬ್ಬ ದರೋಡೆಕೋರ, ನೂರಾರು ಜನರ ಪ್ರಾಣ ತೆಗೆದುಕೊಂಡಿದ್ದ. ಆತನ ಪಾಪಕೃತ್ಯಗಳ ಘೋರ ಪರಿಣಾಮವನ್ನು ನಾರದರು ವಿವರಿಸಿದಾಗ ವಾಲ್ಮೀಕಿ ಕಣ್ಣೀರಿನಲ್ಲಿ ಕರಗಿಹೋದ. ನಾರದರು ಹೇಳಿದರು: ಹಿಂದಿನದೆಲ್ಲ ಮರೆತು ಬಿಡು. ಮುಂದೆ ಹೊಸಬೆಳಕನ್ನು
ಸತ್ಯದ ಸೂರ್ಯನನ್ನು ಸ್ವಾಗತಿಸು! ಅದು ನಿನ್ನ ಅರಿವಿನ ಮರುಜನ್ಮವಾಗಲಿ. ಆ ವಾಣಿ ಬೇಡನಲ್ಲಿ ಅಗಾಧ ಪರಿವರ್ತನೆ ತಂದಿತ್ತು. ಬೇಡ ಮರೆಯಾಗಿ ಮಹರ್ಷಿ ಅವತರಿಸಿದ್ದ, ಹೀಗೆ ಬದುಕಿನ ಬಹುತೇಕ ಪ್ರಶ್ನೆಗಳಿಗೆ ಈಗಾಗಲೇ ಅನೇಕ ಸಂತರು ಶರಣರು ಬಲ್ಲವರು ತಿಳಿದವರು ಹಿರಿಯರು ಅನುಭಾವಿಗಳು ಉತ್ತರವನ್ನು ನೀಡಿದ್ದಾರೆ. ಹಾಗೆ ನೀಡಿದ ಉತ್ತರಗಳನ್ನು ತಿಳಿದು ಆ ದಾರಿಯಲ್ಲಿ ನಡೆದರೆ ಬಹಳಷ್ಟು ಸಮಸ್ಯೆಗಳು ತೆಪ್ಪಗೆ ದೂರ ಸರಿಯುತ್ತವೆ. ನಾವೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಷ್ಟು ಬದುಕು ದೀರ್ಘವಾಗಿಲ್ಲ. ಕೆಲವೊಂದಿಷ್ಟು ಸಮಸ್ಯೆಗಳಿಗೆ ಈಗಾಗಲೇ ಕಂಡು ಹಿಡಿದ ಪರಿಹಾರಗಳನ್ನು ಪಾಲಿಸುವುದು ಜಾಣತನ.
ಶೂನ್ಯಕ್ಕೆ ಸಮಾನ
ಅಹಂಕಾರದ ಅಜ್ಞಾನದ ಪೊರೆಯಲ್ಲಿ ನಾನು ನನ್ನದೇ ದಾರಿಯಲ್ಲಿ ಉತ್ತರ ಕಂಡುಕೊಳ್ಳುತ್ತೇನೆಂದು ಹೊರಟರೆ ಸಮಸ್ಯೆಗಳು ಮತ್ತಷ್ಟು ಇನ್ನಷ್ಟು ಉಲ್ಬಣಗೊಳ್ಳುತ್ತವೆ. ನಾವೆಷ್ಟೇ ಓದಿರಬಹುದು ಕೇಳಿರಬಹುದು ಪಂಡಿತರಾಗಿರಬಹುದು ಹಿರಿಯರ ಅನುಭಾವದ ನುಡಿಗಳ ಮುಂದೆ ನಮ್ಮದೆಲ್ಲವೂ ಶೂನ್ಯಕ್ಕೆ ಸಮಾನ. ಏಕೆಂದರೆ ನಾವು ಕಣ್ಣು ತೆರೆದಿಲ್ಲ. ತೆರೆದಿದ್ದರೂ ಸತ್ಯ ವಾಸ್ತವಿಕತೆ ಕಾಣುತ್ತಿಲ್ಲ. ವಿದ್ಯಾ ಮದದಲ್ಲಿ ಒಳಗಣ್ಣಿಗೆ ಮಂಜು ಕವಿದಿರಬಹುದು ಇಲ್ಲವೇ ಪೊರೆ ಬಂದಿರಬಹುದು. ಅದು ಅಜ್ಞಾನದ ಆಹಂಕಾರದ ಪೊರೆ. ಈ ಪೊರೆ ಹರಿಯುವವರೆಗೆ ನಮ್ಮ ಭಾವ ವಿಕಾಸವಾಗುವುದಿಲ್ಲ. ಹಂಸಕ್ಷೀರ ನ್ಯಾಯದಂತೆ ಸರಿಯಾದ ಪ್ರಶ್ನೆಗಳನ್ನು ಗ್ರಹಿಸಿ ಅವುಗಳಿಗೆ ಉತ್ತರ ಕಂಡುಕೊಳ್ಳಲು ಮುಂದಾಗಬೇಕು. ಅದು ಬದುಕಿನ ನಿಜವಾದ ದಾರಿ,
ಹೂವಾಗಿ ಅರಳಬಹುದು
ಬದುಕು ನಕ್ಷೆ ಹಿಡಿದು ಬರುವುದಿಲ್ಲ ಅದರ ದಾರಿ ನಿಗೂಢ, ಬದುಕಿನಲ್ಲಿ ಧುತ್ತೆಂದು ಬರುವ ಸಮಸ್ಯೆಗಳು ಜಟಿಲ ಪ್ರಶ್ನೆಗಳು ನಮ್ಮನ್ನು ಮುರಿಯಲು ಅಲ್ಲ, ಬದಲಿಗೆ ನಮ್ಮ ಶಕ್ತಿಯನ್ನು ಅರಿಯಲು ಎಂಬುದನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಬೇಕು. ಸಮಸ್ಯೆಗಳೆಂಬ ಪ್ರಶ್ನೆಗಳಲ್ಲಿ ಮುಳುಗುವುದೇ? ಇಲ್ಲವೇ ಅವುಗಳಿಗೆ ಉತ್ತರ ಕಂಡುಕೊಂಡು ಉತ್ತಮವಾಗಿ ಬಾಳುವುದೇ? ಎನ್ನುವ ಪ್ರಶ್ನೆಗೆ ಉತ್ತರದ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಆದರೆ ಆಯ್ಕೆಯ ಪರಿಣಾಮಗಳಿಂದ ಮುಕ್ತರಾಗುವ ಆಯ್ಕೆ ನಮಗಿಲ್ಲ ಎಂಬುದನ್ನು ಸರಿಯಾಗಿ ತಿಳಿದುಕೊಂಡು ಮುಂದುವರಿಯಬೇಕು. ಪ್ರಯತ್ನ ಯಾವತ್ತೂ ವ್ಯರ್ಥವಾಗುವುದಿಲ್ಲ. ಪರಿಹಾರ ಹುಡುಕುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿರಬೇಕು. ಪ್ರತಿಫಲ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಆಗ ಸಮಸ್ಯೆಗಳ ಸುಳಿಯಿಂದಲೇ ಮೇಲೆದ್ದು ಮುಳ್ಳುಗಳ ಮೇಲಿನ ಹೂವಾಗಿ ಅರಳಬಹುದು.
