ಜೆಡಿಎಸ್ನಿಂದ ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವು
ವಿಜಯ ದರ್ಪಣ ನ್ಯೂಸ್….
ಜೆಡಿಎಸ್ನಿಂದ ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವು

ದೇವನಹಳ್ಳಿ: ಇತ್ತೀಚೆಗೆ ದೇವನಹಳ್ಳಿ ಹೋಸಕೋಟೆ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಮರಣಕ್ಕೀಡಾದ ತಾಲೂಕಿನ ದೇವನಾಯಕನಹಳ್ಳಿ ಗ್ರಾಮದ ಯುವಕ ಗಗನ್ ಅವರ ನಿವಾಸಕ್ಕೆ ನಿಕಟಪೂರ್ವ ಶಾಸಕ ಎಲ್.ಎನ್ ನಿಸರ್ಗ ನಾರಾಯಣಸ್ವಾಮಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ. ಮಂಜುನಾಥ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಕೇಂದ್ರ ಸಚಿವರು ಹಾಗೂ ಜೆಡಿಎಸ್ ವರಿಷ್ಠರಾದ ಎಚ್.ಡಿ. ಕುಮಾರಸ್ವಾಮಿ ಅವರ ಸೂಚನೆಯ ಮೇರೆಗೆ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಮುಖಂಡರು, ಮೃತರ ಪೋಷಕರಿಗೆ ಧೈರ್ಯ ತುಂಬಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ನಿಂದ ಕುಟುಂಬಕ್ಕೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಸಫಲ್ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಗಗನ್, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು. ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡು ಕಂಗಾಲಾಗಿದ್ದ ಪೋಷಕರಿಗೆ ಮುಖಂಡರು ಸಾಂತ್ವನ ನೀಡಿದರು.
ನಿಸರ್ಗ ನಾರಾಯಣಸ್ವಾಮಿ ಬಳಿಕ ಮಾತನಾಡಿ, ತನ್ನದಲ್ಲದ ತಪ್ಪಿಗೆ ಯುವಕ ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ, ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಗಗನ್ ಸಾವು ತುಂಬಲಾರದ ನಷ್ಟವಾಗಿದೆ. ನಿಮ್ಮ ದುಃಖದಲ್ಲಿ ನಾವು ಭಾಗಿಗಳಾಗಿದ್ದು, ಸದಾ ನಿಮ್ಮೊಂದಿಗಿರುತ್ತೇವೆ ಎಂದು ಭರವಸೆ ನೀಡಿದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ಹೊಸಹಳ್ಳಿ ಟಿ.ರವಿ, ತಾಲ್ಲೂಕು ಸೊಸೈಟಿ ಮಾಜಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ನಿರ್ದೇಶಕರಾದ ಎಂ ಗಂಗಾಧರ, ಯರ್ತಿಗಾನಹಳ್ಳಿ ಶಿವಣ್ಣ, ವಕೀಲರ ಸಂಘದ ಅಧ್ಯಕ್ಷ ಜೊನ್ನಹಳ್ಳಿ ಮುನಿರಾಜು, ಮುಖಂಡರಾದ ಶಿವರಾಜ್, ಸಾದಹಳ್ಳಿ ಮಹೇಶ್, ವೆಂಕಟೇಶ್, ಶಿವಕುಮಾರ್, ಚಿಕ್ಕರಾಮಣ್ಣ ಗೋಪಾಲ್ ಹಾಗೂ ಛಲವಾದಿ ಮಹಾಸಭಾ ಅಧ್ಯಕ್ಷ ನಾಗರಾಜ್ ಸೇರಿದಂತೆ ಗ್ರಾಮದ ಪ್ರಮುಖರಿದ್ದರು.
&&&&&&&&&&&&&&&&&&&&&&&&&

