--Ads--

ಮತಪರಿಷ್ಕರಣೆ: ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಜಟಾಪಟಿ

On: May 18, 2026 5:40 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಮತಪರಿಷ್ಕರಣೆ: ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಜಟಾಪಟಿ

ತಾಂಡವಪುರ ಮೇ 18: ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದರೆ, ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಯಾವುದೇ ಗೊಂದಲವಿಲ್ಲದೇ ಎಸ್ಐಆರ್ ಪ್ರಕ್ರಿಯೆ ನಡೆಸುವಂತೆ ಒತ್ತಾಯಿಸಿದವು.

ಮೈಸೂರಿನ ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮತದಾರರ ಮ್ಯಾಪಿಂಗ್ ಕುರಿತು ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆಯಲ್ಲಿ ಕಾಂಗ್ರೆಸ್, ಬಿಎಸ್.ಪಿ ಮತ್ತು ಎಸ್ಡಿಪಿಐ ಪಕ್ಷಗಳು ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡದಂತೆ ಒತ್ತಾಯಿಸಿದವು. ಇತ್ತ ಬಿಜೆಪಿ ಮತ್ತು ಜೆಡಿಎಸ್ ಎಸ್ಐಆರ್ ಪ್ರಕ್ರಿಯೆಯನ್ನು ಸ್ವಾಗತಿಸಿದವು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲೆಯಲ್ಲಿ ವಿಶೇಷ ಮತದಾರರ ಪರಿಷ್ಕರಣೆಗೂ ಮುನ್ನ ಮ್ಯಾಪಿಂಗ್‌ಗೆ ಬಾಕಿ ಇರುವ ಮತದಾರರನ್ನು ಶೇ.100ರಷ್ಟು ಮ್ಯಾಪಿಂಗ್ ಮಾಡುವ ಗುರಿ ಹೊಂದಲಾಗಿದೆ. ಅರ್ಹ ಮತದಾರರನ್ನು ಮ್ಯಾಪಿಂಗ್‌ನಿಂದ ಕೈ ಬಿಡದಂತೆ ನೋಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಜೂ.19ರವರೆಗೆ ಮ್ಯಾಪಿಂಗ್ ಕಾರ್ಯ ನಡೆಯಲಿದೆ. 20ರಿಂದ ವಿಶೇಷ ಮತದಾರರ ಪರಿಷ್ಕರಣೆ ಕಾರ್ಯ ನಡೆಯಲಿದೆ. ಮ್ಯಾಪಿಂಗ್ ಮಾಡದ ಮತದಾರರ ಪಟ್ಟಿಯನ್ನು ಮನೆ ಮನೆಗೆ ತೆರಳಿ ಪರಿಶೀಲಿಸಿ ಮ್ಯಾಪಿಂಗ್‌ಗೆ ಸೇರ್ಪಡೆಗೊಳಿಸುವಂತೆ ಎಆರ್‌ಒಗಳಿಗೆ ಸೂಚನೆ ಕೊಡಲಾಗುವುದು. ಎಆರ್‌ಒಗಳು ಕ್ಷೇತ್ರದ ವ್ಯಾಪ್ತಿಗೆ ಬರುವ ಬಿಎಲ್‌ಒಗಳ ಜತೆ ಸೇರಿಕೊಂಡು ಶೇ.100ರಷ್ಟು ಮ್ಯಾಪಿಂಗ್ ಮಾಡುವ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಸಾಫ್ಟ್‌ವೇರ್‌ನಲ್ಲಿ ಇನಿಷಿಯಲ್ ವ್ಯತ್ಯಾಸ, ಹೆಸರಿನಲ್ಲಿ ಒಂದು ಅಕ್ಷರ ಕಡಿಮೆ, ಹೆಚ್ಚು ಇದ್ದರೆ ಮ್ಯಾಪಿಂಗ್ ಸಮಸ್ಯೆಯಾಗಲ್ಲ. ಬಿಎಲ್‌ಒಗಳು ಅದನ್ನು ಪರಿಶೀಲಿಸಿ ಅಪ್‌ಲೋಡ್ ಮಾಡಬಹುದು. ಆದರೆ, 2002ರ ಮತದಾರರ ಪಟ್ಟಿಯ ಪ್ರಕಾರ ಯಾವುದಾದರೂ ಬೂತ್ ಜ್ಞಾಪಕ ಇಲ್ಲದಿದ್ದರೂ ಕ್ಷೇತ್ರ ಯಾವುದು ಎನ್ನುವುದು ಗೊತ್ತಾಗಬೇಕು. ಅದರ ಆಧಾರದ ಮೇಲೆ ಮ್ಯಾಪಿಂಗ್ ಕಾರ್ಯದಲ್ಲಿ ಪರಿಶೀಲಿಸಲು ಸಾಧ್ಯವಾಗಲಿದೆ ಎಂದರು.

ಆಯೋಗದ ಸೂಚನೆಯಂತೆ ಶೇ.100ರಷ್ಟು ಮ್ಯಾಪಿಂಗ್ ಮಾಡಬೇಕು. ಅರ್ಹರನ್ನು ಕೈಬಿಡದಂತೆ ನೋಡಿಕೊಳ್ಳಬೇಕು. ಈಗ ಮ್ಯಾಪಿಂಗ್ ಕಾರ್ಯವು ಶೇ.88ರಷ್ಟು ಆಗಿದೆ. ಮ್ಯಾಪಿಂಗ್ ಕೆಲಸ ಮುಗಿದ ಮೇಲೆ ವಿಶೇಷ ಮತದಾರರ ಪರಿಷ್ಕರಣೆ ವೇಳೆ ಪ್ರತಿಯೊಬ್ಬರಿಗೂ ವೋಟರ್ ಎನ್ಯುಮರೇಷನ್ ಫಾರಂಗಳನ್ನು ಕೊಡಲಾಗುವುದು.

ಆಗ ಮತ್ತೊಮ್ಮೆ ಪರಿಶೀಲಿಸಿ ಸೇರ್ಪಡೆಗೆ ಅವಕಾಶವಿದೆ. ಈಗ ಮತದಾರರ ಪಟ್ಟಿಯಲ್ಲಿ ಇದ್ದವರಲ್ಲಿ ಮೃತಪಟ್ಟವರು, ಕೈಬಿಟ್ಟವರು ಸೇರಿ ಎಲ್ಲರನ್ನು ಮ್ಯಾಪಿಂಗ್ ಮಾಡಲಾಗಿದೆ. ಎಸ್‌ಐಆರ್ ವೇಳೆ ಅದನ್ನು ಪರಿಶೀಲಿಸಲಾಗುತ್ತದೆ. ಯಾರೇ ಆಗಿದ್ದರೂ ಮತದಾರರ ಪಟ್ಟಿಯಿಂದ ಕೈ ಬಿಡದಂತೆ ಗಮನಹರಿಸಲು ಎಲ್ಲಾ ಎಆರ್‌ಒಗಳಿಗೆ ಸೂಚನೆ ನೀಡಲಾಗಿದೆ ಎಂದರು.

ರಾಜಕೀಯ ಪಕ್ಷಗಳ ನಾಯಕರ ಹಲವು ಅನುಮಾನಗಳಿಗೆ ಉತ್ತರಿಸಿದ ಡಿಸಿ, ಸಾಫ್ಟ್‌ವೇರ್‌ನಲ್ಲಿ ಕೆಲವು ಬದಲಾವಣೆ ಮಾಡುವ ಅನುಮಾನ, ಸಂಶಯ ಇದ್ದರೆ ಬಿಡಬೇಕು. ಮ್ಯಾಪಿಂಗ್‌ನಲ್ಲಿ ಒಬ್ಬರ ಹೆಸರು ಬಿಟ್ಟು ಹೋಗದಂತೆ ಕ್ರಮವಹಿಸುತ್ತೇವೆ. ಮ್ಯಾಪಿಂಗ್ ಕಾರ್ಯವೇ ಅಂತಿಮವಲ್ಲ.ಕೆಲವು ವ್ಯತ್ಯಾಸಗಳು ಕಂಡುಬಂದಲ್ಲಿ ನೇರವಾಗಿ ನನ್ನ ಗಮನಕ್ಕೆ ತಂದರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಐಶ್ವರ್ಯ, ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್, ಕಾರ್ಯದರ್ಶಿ ಜಾನ್ಸನ್, ನಗರಪಾಲಿಕೆ ಹೆಚ್ಚುವರಿ ಆಯುಕ್ತ ಜಿ.ಎಸ್.ಸೋಮಶೇಖರ್, ಉಪ ವಿಭಾಗಾಧಿಕಾರಿ ಆಶಪ್ಪ, ತಹಸಿಲ್ದಾರ್ ಕೆ.ಎಂ.ಮಹೇಶ್‌ಕುಮಾರ್, ನಗರಪಾಲಿಕೆ ಕಂದಾಯಾಧಿಕಾರಿ ದಾಸೇಗೌಡ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಡಾ. ಬಿ.ಜೆ.ವಿಜಯಕುಮಾರ್ ಕಾಂಗ್ರೆಸ್ ಪಕ್ಷದ ವಕ್ತಾರ ಎಮ್ ಲಕ್ಷ್ಮಣ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿಎಂ ರಾಮ ಎಂ ಶಿವಣ್ಣ ಎಂ ಸಿ ಉಂಡಿ ಶಿವಪ್ರಸಾದ್ ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಘುಮೂರ್ತಿ, ಉಪಾಧ್ಯಕ್ಷ ಮೈ.ಪು.ರಾಜೇಶ್, ವಿವಿ ಸಿಂಡಿಕೇಟ್ ಸದಸ್ಯ ಗೋಕುಲ್ ಗೋವರ್ಧನ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ.ಶಿವಣ್ಣ, ಈಶ್ವರ್ ಡಿ.ಚಕ್ಕಡಿ ಸೇರಿ ಕಾಂಗ್ರೆಸ್, ಬಿಜೆಪಿ, ಜಾದಳ, ಎಎಪಿ, ಬಿಎಸ್‌ಪಿ ಪಕ್ಷಗಳ ಪ್ರಮುಖರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now