ವಿಜಯ ದರ್ಪಣ ನ್ಯೂಸ್….
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ, ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ

ಕನಕಪುರ: ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ, ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮವನ್ನು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ, ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಕೆ ಎನ್ ಸುನೀತಾ ಅವರು, ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ನಾಲ್ವಡಿಯವರು 1884 ಜೂನ್ 4 ರಂದು ಜನಿಸಿದರು, ಅವರು ಮೈಸೂರು ಸಂಸ್ಥಾನದ 24ನೇ ಮಹಾರಾಜರಾಗಿ ಹತ್ತನೇ ವಯಸ್ಸಿಗೆ ಪಟ್ಟಾಭಿಷೇಕವನ್ನು ಅಲಂಕರಿಸಿ ರಾಜ್ಯಭಾರ ನಡೆಸಿದರು, ಇಂತಹ ಮಹನೀಯರ ಕಾರ್ಯಕ್ರಮಗಳನ್ನು ಪ್ರತಿ ದಿನವೂ ವಿಧ್ಯಾರ್ಥಿಗಳು ಸ್ಮರಿಸಿಕೊಳ್ಳಬೇಕು ಮಹನೀಯರ ಹಾಗೆ ನಿಮ್ಮ ಜೀವನದಲ್ಲಿ ಸಾಧನೆಯನ್ನು ಮಾಡುವಂತೆ ವಿಧ್ಯಾರ್ಥಿಗಳಿಗೆ ತಿಳಿಸಿದರು.

ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕಬ್ಬಾಳೇಗೌಡ ಮಾತನಾಡಿ, ‘ಮಹಿಳೆಯರ ಸಬಲೀಕರಣ, ವಿದ್ಯಾಭ್ಯಾಸ, ಶಿಕ್ಷಣ, ಕೃಷಿ, ಕೈಗಾರಿಕಾ ಕ್ಷೇತ್ರಕ್ಕೆ ಅಪಾರ ಉತ್ತೇಜನ ನೀಡಿದ ನಾಲ್ವಡಿ ಅವರು, ರಾಜ್ಯದಲ್ಲಿ ಮತ್ಯಾರು ಮಾಡದಂತಂಹ ಸಾಧನೆ ಮಾಡಿದ್ದಾರೆ. ಅವರು ನೀಡಿದ ಕೊಡುಗೆಗಳಿಗೆ ಅವರ ಹೆಸರುಗಳನ್ನು ಇಟ್ಟುಕೊಂಡಿಲ್ಲ. ಯೋಗ್ಯತೆ ಇದ್ದರೆ ಯೋಗ ತಾನಾಗಿಯೇ ಬರಲಿದೆ ಎಂದು ಬದುಕಿದವರು. ಕನ್ನಡನಾಡು ಮಾತ್ರವಲ್ಲದೆ ದೇಶದಲ್ಲಿ ಅವರ ಹೆಸರು ಅಜರಾಮರ’ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ, ಶಿಕ್ಷಣ ಇಲಾಖೆ ಕ್ಷೇತ್ರ, ಸಮನ್ವಯಾಧಿಕಾರಿ ಸಿ ಎಸ್ ರಾಜು ಮಾತನಾಡಿ,
ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಪ್ರತಿ ವರ್ಷ ಜೂನ್ ೪ ರಂದು ಆಚರಿಸಲಾಗುತ್ತದೆ. ಮೈಸೂರು ಸಂಸ್ಥಾನದ ೨೪ನೇ ಮಹಾರಾಜರಾಗಿದ್ದ ಇವರು ೧೮೮೪ ರ ಜೂನ್ ೪ ರಂದು ಜನಿಸಿದರು. ಇವರ ಜನ್ಮದಿನದ ಪ್ರಯುಕ್ತ ಮೈಸೂರು ಅರಮನೆ ಆವರಣ ಮತ್ತು ರಾಜ್ಯದಾದ್ಯಂತ ಸರ್ಕಾರದ ವತಿಯಿಂದ ವಿಶೇಷ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಮೈಸೂರು ರಾಜ್ಯದ ಅಭಿವೃದ್ಧಿಯ ಹರಿಕಾರರೆಂದು ಪ್ರಸಿದ್ಧರಾಗಿರುವ ಇವರ ಸಾಧನೆಗಳು ಮತ್ತು ಕೊಡುಗೆಗಳು ಈ ಇಂದಿಗೂ ಜೀವಂತ ಸಾಕ್ಷಿಯಾಗಿವೆ, ನಾಲ್ವಡಿಯವರ ಆಡಳಿತಾವಧಿಯನ್ನು (೧೯೦೨-೧೯೪೦) ಮೈಸೂರು ಇತಿಹಾಸದ ಸುವರ್ಣಯುಗ ಎಂದು ಕರೆಯಲಾಗುತ್ತದೆ. ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆಯಾದ ಶಿವನಸಮುದ್ರ ಯೋಜನೆ ಮತ್ತು ಕೃಷ್ಣರಾಜ ಸಾಗರ (KRS) ಅಣೆಕಟ್ಟು ಇವರ ಕಾಲದಲ್ಲಿ ನಿರ್ಮಾಣಗೊಂಡವು, ಮೈಸೂರು ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISC)ಸ್ಥಾಪನೆಗೆ ಅಪಾರ ಕೊಡುಗೆ ನೀಡಿದ್ದಾರೆ.
ಇವರು ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (VISL) ಹಾಗೂ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಗಳನ್ನು ಆರಂಭಿಸಿದರು.ಪ್ರಜಾಪ್ರಭುತ್ವ: ಪ್ರಜಾಪ್ರತಿನಿಧಿ ಸಭೆಯನ್ನು ಬಲಪಡಿಸಿ, ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಭಾರತದ ಮೊದಲ ಸಂಸ್ಥಾನ ಮೈಸೂರು ಆಗಿದೆ.ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.
ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ, ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು ಎಂದು ಹೇಳಿದರು.
ಮುಖ್ಯ ಅತಿಥಿಗಳಾದ, ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ರಾಜ್ಯದ ಉತ್ತರ ಕರ್ನಾಟಕದ ಪ್ರತಿಯೊಬ್ಬ ರೈತರು ಸುಮಾರು ಇಪ್ಪತ್ತರಿಂದ ಮೂವತ್ತು ಎಕರೆ ಜಮೀನು ಹೊಂದಿದ್ದಾರೆ, ರೈತರು ಅಭಿವೃದ್ಧಿ ಕಾಣಲು ಆಗುತ್ತಿಲ್ಲ, ಮೈಸೂರು ಭಾಗದ ರೈತರು ಅರ್ಧ ಎಕರೆ ಒಂದು ಎಕರೆ ಜಮೀನಿದ್ದರು ಸದೃಢರಾಗಿದ್ದಾರೆ ಕಾರಣ ನಾಲ್ವಡಿಯವರು ನೀರಾವರಿ ಕ್ಷೇತ್ರಕ್ಕೆ ಕೊಟ್ಟ ದೊಡ್ಡ ಕೊಡುಗೆಯಿಂದ ಎಂದು ಹೇಳಿದರು.
ಜಯಕರ್ನಾಟಕ ಸಂಘಟನೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ನಾಲ್ವಡಿಯವರ ಕೊಡುಗೆ ದೇಶಕ್ಕೆ ಮಾದರಿಯಾಗಿದೆ, ಅವರ ದೂರದೃಷ್ಟಿಯಿಂದ ಮಂಡ್ಯದ ಜನತೆ ಹಾಗೂ ಬೆಂಗಳೂರಿನ ಜನರು ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯವಾಗಿದೆ, ನಮ್ಮದೇ ಕ್ಷೇತ್ರದ ಶಾಸಕರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ, ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ, ಕಾವೇರಿ ನೀರಿನ ಯೋಜನೆಯಿಂದ ಬೆಂಗಳೂರು ಬೃಹದಾಕಾರವಾಗಿ ಬೆಳೆಯಲು ಸಾಧ್ಯವಾಗಿದೆ, ಕಾವೇರಿ ನದಿ ಮೇಕೆ ದಾಟು ನಿಮ್ಮ ಕನಸಿನ ಯೋಜನೆಯಾಗಿದೆ, ತಾವು ಮುಖ್ಯಮಂತ್ರಿಗಳಾಗಿದೀರಿ ನಿಮ್ಮ ಅವಧಿಯಲ್ಲಿಯೇ ಮೇಕೆದಾಟು ಯೋಜನೆಯನ್ನು ಪೂರ್ಣಗೊಳಿಸಲು ಮುಂದಾಗಬೇಕು ಎಂದು ಒತ್ತಾಯ ಮಾಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವನ ಹಳ್ಳಿ ಶಿವಲಿಂಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ, ನಾಲ್ವಡಿಯವರು ಎಲ್ಲರಿಗೂ ಅನ್ನದಾತರಾಗಿದ್ದರು, ಅವರ ಜನ್ಮ ದಿನವನ್ನು ಸ್ಮರಣೀಯವಾಗಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ, ಮಹನೀಯರ ಕಾರ್ಯಕ್ರಮಗಳಲ್ಲಿ ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ ಸಿ ವೆಂಕಟೇಶ, ಪತ್ರಕರ್ತ ಎಂ ಎನ್ ಸುರೇಶ್, ಶಾಲಾ ಶಿಕ್ಷಕರು, ಶಿಕ್ಷಕಿಯರು, ಆಡಳಿತ ಮಂಡಳಿ ಹಾಗೂ ವಿಧ್ಯಾರ್ಥಿ, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.






