ವಿಜಯ ದರ್ಪಣ ನ್ಯೂಸ್…..
ಮೈಸೂರುನಲ್ಲಿ ಸಾಧ್ವಿ ಸಂಸ್ಕಾರ ನಿಧಿಶ್ರೀ ಅವರ ಚಾತುರ್ಮಾಸಿಕ ಮಂಗಳ ಪ್ರವೇಶ

ತಾಂಡವಪುರ ಜುಲೈ 21ಮೈಸೂರಿನ ಸುಮತಿನಾಥ ಜೈನ್ ಶ್ವೇತಾಂಬರ ಮೂರ್ತಿ ಪೂಜಕ ಸಂಘದ ಆಶ್ರಯದಲ್ಲಿ ಸಾಧ್ವಿ ಸಂಸ್ಕಾರ ನಿಧಿಶ್ರೀಜಿ ಹಾಗೂ ಇತರೆ ಸಾಧ್ವಿಯರ ಚಾತುರ್ಮಾಸಿಕ ಮಂಗಳ ಪ್ರವೇಶ ಭಾನುವಾರ ಶುಭ ಮುಹೂರ್ತದಲ್ಲಿ ಮಹಾವೀರ ಭವನದಲ್ಲಿ ನೆರವೇರಿತು.
ಚರ್ಚ್ ಸರ್ಕಲ್‌ನಲ್ಲಿ ಮಹಿಳೆಯರು ಸಾಧ್ವಿ ವೃಂದಕ್ಕೆ ಸಂಪ್ರದಾಯಬದ್ಧವಾಗಿ ಸಾಮಯ್ಯ ಮಾಡಿ, ಪ್ರದಕ್ಷಿಣೆ ಹಾಕಿ ಅಕ್ಷತೆ ಅರ್ಪಿಸಿ ಮಂಗಳಗೀತೆಗಳನ್ನು ಹಾಡಿದರು. ಬಳಿಕ ಸಕಲ ಸಂಘದ ಸದಸ್ಯರೊಂದಿಗೆ ಭವ್ಯವಾದ ವರಘೋಡಾ (ಶೋಭಾಯಾತ್ರೆ) ನಡೆಯಿತು. ಪುರುಷರು ತಲೆಯ ಮೇಲೆ ಸಾಫಾ ಧರಿಸಿ ಸಾಂಪ್ರದಾಯಿಕ ವೇಷಭೂಷಣದಲ್ಲಿ ಭಾಗವಹಿಸಿದರು.
ಶೋಭಾಯಾತ್ರೆಯಲ್ಲಿ ಭಕ್ತರು ಭಗವಾನ್ ಮಹಾವೀರ ಸ್ವಾಮಿಯ ಜಯಘೋಷಗಳನ್ನು ಮೊಳಗಿಸಿದರು.
ಚರ್ಚ್ ಸರ್ಕಲ್‌ನಿಂದ ಆರಂಭವಾದ ವರಘೋಡಾದಲ್ಲಿ ಐದು ಮಹಿಳಾ ಮಂಡಳಿಗಳು ಹಾಗೂ ಸರ್ಗಮ್ ಮಂಡಳಿಯ ಸದಸ್ಯರು ಸಮವಸ್ತ್ರದಲ್ಲಿ ಭಾಗವಹಿಸಿದರು.
ಅಶೋಕ್ ಮಾರ್ಗದ ಮೂಲಕ ಸುಮತಿನಾಥ ಜಿನಾಲಯಕ್ಕೆ ತೆರಳಿ ಪ್ರಭು ದರ್ಶನ-ವಂದನೆ ಸಲ್ಲಿಸಿದ ನಂತರ ಮಹಾವೀರ ಭವನ ತಲುಪಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾಧ್ವಿ ಸಂಸ್ಕಾರ ನಿಧಿಶ್ರೀಜಿ, ಜೈನ ಧರ್ಮದಲ್ಲಿ ಚಾತುರ್ಮಾಸದ ಮಹತ್ವವನ್ನು ವಿವರಿಸಿದರು. ಚಾತುರ್ಮಾಸದಲ್ಲಿ ಜೈನ ಸಾಧು-ಸಾಧ್ವಿಯರ ನಗರ ಪ್ರವೇಶವು ಆಧ್ಯಾತ್ಮಿಕ ಹಾಗೂ ಸಾಮಾಜಿಕ ವರದಾನವಾಗಿದೆ.
ನಾಲ್ಕು ತಿಂಗಳ ಅವರ ವಾಸದಿಂದ ವ್ಯಕ್ತಿತ್ವ ನಿರ್ಮಾಣವಾಗುವುದರ ಜೊತೆಗೆ ಅಹಿಂಸೆ, ನಶಾಮುಕ್ತಿ, ಸಾತ್ವಿಕ ಜೀವನಶೈಲಿ ಹಾಗೂ ಸಾಮಾಜಿಕ ಸಾಮರಸ್ಯದಂತಹ ಸಕಾರಾತ್ಮಕ ಮೌಲ್ಯಗಳು ಸಮಾಜದಲ್ಲಿ ಬೆಳೆಯುತ್ತವೆ ಎಂದು ಹೇಳಿದರು.
ಸಾಧು-ಸಾಧ್ವಿಯರ ಪ್ರವಚನ, ಸ್ವಾಧ್ಯಾಯ ಹಾಗೂ ಮಾರ್ಗದರ್ಶನದಿಂದ ಜನರಲ್ಲಿ ಸಕಾರಾತ್ಮಕ ಚಿಂತನೆ ಮೂಡುತ್ತದೆ. ಕ್ರೋಧ, ಅಹಂಕಾರ ಮತ್ತು ಲೋಭದಂತಹ ಮನೋವಿಕಾರಗಳನ್ನು ದೂರ ಮಾಡಿ ಸರಳ ಹಾಗೂ ಕ್ಷಮಾಶೀಲ ಜೀವನ ನಡೆಸಲು ಪ್ರೇರಣೆ ದೊರೆಯುತ್ತದೆ ಎಂದರು.
ಚಾತುರ್ಮಾಸ ಅವಧಿಯಲ್ಲಿ ಜೈನ ಸಮಾಜ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಂಘಟಿತವಾಗಿ ಭಾಗವಹಿಸುತ್ತದೆ. ಪರ್ಯುಷಣ ಪರ್ವ, ಕ್ಷಮಾವಾಣಿ ಹಾಗೂ ಉತ್ತಮ ಕ್ಷಮೆಯಂತಹ ಆಚರಣೆಗಳ ಮೂಲಕ ಜನರು ಹಳೆಯ ವೈಮನಸ್ಸುಗಳನ್ನು ಮರೆತು ಪರಸ್ಪರ ಸೌಹಾರ್ದ ಬೆಳೆಸಿಕೊಳ್ಳುತ್ತಾರೆ. ದಾನಧರ್ಮ, ಬಡವರ ನೆರವು ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದ ಸಮುದಾಯದಲ್ಲಿ ಸಹಕಾರ ಮತ್ತು ಸಂಘಟನೆಯ ಮನೋಭಾವ ಬಲಗೊಳ್ಳುತ್ತದೆ ಎಂದು ತಿಳಿಸಿದರು.
ಮಳೆಗಾಲದಲ್ಲಿ ಒಂದೇ ಸ್ಥಳದಲ್ಲಿ ವಾಸಿಸುವುದು ಅಹಿಂಸೆಯ ಜೀವಂತ ಉದಾಹರಣೆಯಾಗಿದ್ದು, ಸೂಕ್ಷ್ಮ ಜೀವಿಗಳ ರಕ್ಷಣೆಗೆ ಸಹಕಾರಿಯಾಗಿದೆ. ರಾತ್ರಿಯ ಊಟ ತ್ಯಾಗ, ನೀರಿನ ಶುದ್ಧತೆ ಹಾಗೂ ಶುದ್ಧ ಸಸ್ಯಾಹಾರ ಪಾಲನೆಯಂತಹ ಮೌಲ್ಯಗಳು ಪರಿಸರ ಮತ್ತು ಆರೋಗ್ಯಕ್ಕೆ ಅನುಕೂಲಕರವಾಗಿವೆ ಎಂದು ಹೇಳಿದರು.
ಚಾತುರ್ಮಾಸದ ಸಂದರ್ಭದಲ್ಲಿ ಮಕ್ಕಳ ಹಾಗೂ ಯುವಕರಿಗಾಗಿ ವಿಶೇಷ ಧಾರ್ಮಿಕ ಮತ್ತು ನೈತಿಕ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಇದರಿಂದ ಹೊಸ ಪೀಳಿಗೆ ಸಂಸ್ಕೃತಿ, ಸದಾಚಾರ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಬೆಸೆದುಕೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಂಬಳಿ ಮತ್ತು ಗುರುಪೂಜನ ಚಢಾವೋಗಳ ಲಾಭಾರ್ಥಿಗಳು ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಗುರುಭಕ್ತರನ್ನು ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು. ವರಘೋಡಾದ ಸಂಪೂರ್ಣ ವ್ಯವಸ್ಥೆಯನ್ನು ಸುಮತಿನಾಥ ನವಯುವಕ ಮಂಡಳಿಯು ನಿರ್ವಹಿಸಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಭೇರುಮಲ್ ರಾಠೋಡ್, ಉಪಾಧ್ಯಕ್ಷ ತಿಕಮಚಂದ ವೇದಮುಥಾ, ಕಾರ್ಯದರ್ಶಿ ಕಾಂತಿಲಾಲ್ ಗುಲೆಚ್ಚಾ, ಖಜಾಂಚಿ ಪಾರಸ್ಮಲ್ ಸಿಂಘ್ವಿ, ವಿಮಲ್ ಭೇಸ್ವಾಡಾ, ದಯಾಲಾಲ್ ವೋಹ್ರಾ, ಪ್ರಕಾಶ್ ಸಾಲೇಚಾ, ರಾಜೇಂದ್ರ ಸೋಲಂಕಿ, ಸುರೇಶ್ ಭಿರ್ಲೋಚಾ, ಜಯಂತಿಲಾಲ್ ಪರಮಾರ್, ಹಂಸರಾಜ್ ಪಗಾರಿಯಾ, ಕಾಂತಿಲಾಲ್ ಚೌಹಾಣ್, ಅಶೋಕ್ ದಾಂತೇವಾಡಿಯಾ, ನವಯುವಕ ಮಂಡಳಿಯ ಅಧ್ಯಕ್ಷ ಜಯಕುಮಾರ್ ಸಾಲೇಚಾ, ಕಾರ್ಯದರ್ಶಿ ಲಲಿತ್ ರಾಠೋಡ್, ಸಹ ಕಾರ್ಯದರ್ಶಿ ಸಂದೀಪ್ ಸಂಕ್ಲೇಚಾ, ಖಜಾಂಚಿ ಆನಂದ್ ಸಾಲೇಚಾ, ಪಾರ್ಶ್ವ ಪದ್ಮಾವತಿ ಟ್ರಸ್ಟ್ ಅಧ್ಯಕ್ಷ ದಲೀಚಂದ ಶ್ರೀಶ್ರೀಮಾಲ್ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.











