--Ads--

ಶಾಂತವೇರಿ ಗೋಪಾಲಗೌಡರು…….

On: August 22, 2026 3:59 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಶಾಂತವೇರಿ ಗೋಪಾಲಗೌಡರು..

ಸತ್ತವರ ಹೆಸರಿಗಾಗಿ ಬಡಿದಾಡುತ್ತಾ, ಬದುಕಿರುವವರ ಸಾವಿಗೆ ಹವಣಿಸುವ ಸೈದ್ಧಾಂತಿಕ ಹೋರಾಟದ ಅಮಲಿನಲ್ಲಿ ಮತದಾರರು ತೇಲುತ್ತಿರುವಾಗ, ಹೆಣಕ್ಕಾಗಿ ರಣ ಹದ್ದುಗಳಂತೆ ಕಾಯುತ್ತಿರುವ ರಾಜಕೀಯ ಸನ್ನಿವೇಶದಲ್ಲಿ…

ಇಡೀ ರಾಜ್ಯದ ರಾಜಕೀಯ – ಸಾಮಾಜಿಕ – ರೈತ ಹೋರಾಟದ ಆದರ್ಶ ವ್ಯಕ್ತಿಯೊಬ್ಬರ ನೆನಪಾಗುತ್ತಿದೆ……

ರಾಜಕೀಯದಲ್ಲಿ ಸಾಮಾನ್ಯವಾಗಿ ಅತ್ಯಂತ ಆದರ್ಶ ವ್ಯಕ್ತಿಗಳು ತೀರಾ ಅಪರೂಪ. ಕೆಲವರು ವೈಯಕ್ತಿಕವಾಗಿ ಪ್ರಾಮಾಣಿಕರು, ದಕ್ಷರು, ಸಮಾಜ ಸೇವಕರು, ಹೋರಾಟಗಾರರು, ದೂರ ದೃಷ್ಟಿಯ ಚಿಂತಕರು ಹೀಗೆ ಬಿಡಿಬಿಡಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇವೆಲ್ಲವನ್ನೂ ಒಟ್ಟಾಗಿ ಸ್ವಲ್ಪ ಮಟ್ಟಿಗೆ ಮೇಳೈಸಿಕೊಂಡು ಕರ್ನಾಟಕ ರಾಜ್ಯದ ರಾಜಕೀಯದಲ್ಲಿ ಇಂದಿಗೂ ತಮ್ಮ ಛಾಪು ಮೂಡಿಸಿ ಸಮಾಜವಾದಿಗಳಲ್ಲಿ ಉತ್ಸಾಹ ಮೂಡಿಸುವ ವ್ಯಕ್ತಿತ್ವ ಶಾಂತವೇರಿ ಗೋಪಾಲಗೌಡರದು…..

ಅವರ ಹುಟ್ಟು, ಸಾವು, ಶಾಸಕತ್ವ, ಹೋರಾಟ, ಒಡನಾಟ, ಭಾಷಣ ಎಲ್ಲವೂ ಸಾಕಷ್ಟು ಮಾಹಿತಿ ಪುಸ್ತಕಗಳ ರೂಪದಲ್ಲಿ ಸಿಗುತ್ತವೆ. ಅದನ್ನು ಮೀರಿ ನಾವು ಹೇಗೆ ಅವರನ್ನು ಈಗಿನ ಸಂದರ್ಭದಲ್ಲಿ ಗ್ರಹಿಸಬಹುದು ಎಂದು ಯೋಚಿಸುತ್ತಿದ್ದಾಗ….

ಗೆಳೆಯರೊಬ್ಬರು ಕರೆ ಮಾಡಿ
” ಚುನಾವಣಾ ಸಮಯದಲ್ಲಿ ಜಾತಿ ಧರ್ಮ ಹಣ ಹೆಂಡ ಸೀರೆ ಪಂಚೆ ಇನ್ನೇನೋ ಪಡೆದು, ಅದರ ಪ್ರಭಾವಕ್ಕೆ ಒಳಗಾಗಿ ತಮ್ಮನ್ನೇ ಮಾರಿಕೊಂಡು ದೇಶಕ್ಕೆ, ಸಮಾಜಕ್ಕೆ, ಪ್ರಜಾಪ್ರಭುತ್ವಕ್ಕೆ ಮೋಸ ಮಾಡುವವರನ್ನು ವೇಶ್ಯಾ ವೃತ್ತಿಯಲ್ಲಿ ನಿರತರಾದವರು ” ಎಂದು ಕರೆಯಬಹುದೇ ಎಂದು ಕೇಳಿದರು.

ಅದನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವಾಯಿತು. ನೋವು, ಕೋಪ, ವಿಷಾದದಿಂದ ಆ ರೀತಿ ಭಾವನಾತ್ಮಕವಾಗಿ ವೈಯಕ್ತಿಕ ನೆಲೆಯಲ್ಲಿ ಗೆಳೆಯರ ಬಳಿ ಹೇಳಿಕೊಳ್ಳಬಹುದು. ಆದರೆ ಸಾಮೂಹಿಕ ನೆಲೆಯಲ್ಲಿ ಅದು ಹೆಣ್ಣಿಗೆ ಮಾಡುವ ಅವಮಾನವಾಗುತ್ತದೆ. ಏಕೆಂದರೆ ವೇಶ್ಯಾವಾಟಿಕೆ ಕೇವಲ ಹೆಣ್ಣಿನ ವೃತ್ತಿಯಲ್ಲ. ಅಲ್ಲಿ ವಿಟ ಪುರುಷರು ಸಹ ಅಷ್ಟೇ ಪಾಲುದಾರರು. ಜೊತೆಗೆ ಅದು ತೀರಾ ವೈಯಕ್ತಿಕ ಮತ್ತು ಖಾಸಗಿಯಾದದ್ದು. ಇಲ್ಲಿ ಸಂತೋಷಕ್ಕಿಂತ ಹೆಣ್ಣಿನ ಬದುಕಿನ ಅನಿವಾರ್ಯತೆಯೇ ಮೇಲುಗೈ ಪಡೆಯುತ್ತದೆ…..

ಇದರಲ್ಲಿ ಭಾಗವಹಿಸುವವರ ಸಂಖ್ಯೆ ಸಹ ತೀರಾ ಕಡಿಮೆ ಮತ್ತು ಸಮಾಜಕ್ಕೆ ಇದರಿಂದ ನೇರವಾಗಿ ಅಂತಹ ದೊಡ್ಡ ಸಮಸ್ಯೆ ಏನೂ ಇಲ್ಲ. ಕೆಲವು ಸಂಪ್ರದಾಯವಾದಿಗಳು ಸ್ವಲ್ಪ ಗೊಣಗಾಡಬಹುದಷ್ಟೇ. ಉದಾರವಾದಿಗಳು ಅದು ಒಂದು ಒಪ್ಪಿತ ಸಹಜ ಪ್ರಾಕೃತಿಕ ಕ್ರಿಯೆ. ಅನೇಕ ದೇಶಗಳಲ್ಲಿ ಸರ್ಕಾರವೇ ಅನುಮತಿ ನೀಡಿದೆ ಮತ್ತು ನಮ್ಮ ‌ದೇಶದಲ್ಲಿ ಅನಾದಿ ಕಾಲದಿಂದಲೂ ಇದು ಅನಧಿಕೃತವಾಗಿ ನಡೆಯುತ್ತಲೇ ಇದೆ ಎಂದು ಹೆಚ್ಚು ತಲೆಕಡಿಸಿಕೊಳ್ಳುವುದಿಲ್ಲ.

ಆದರೆ ಚುನಾವಣಾ ಸಮಯದಲ್ಲಿ ಬಹಳಷ್ಟು ಎಲ್ಲಾ ವರ್ಗದ ಜನ ಒಂದಲ್ಲ ಒಂದು ರೀತಿಯ ಆಮಿಷಕ್ಕೆ ಒಳಗಾಗಿ ತಮ್ಮನ್ನೇ ಮಾರಿಕೊಂಡು ಇಡೀ ವ್ಯವಸ್ಥೆ ಭ್ರಷ್ಟಗೊಂಡು ನಾರುವಂತೆ ಮಾಡಿರುವುದು ಎಲ್ಲಕ್ಕಿಂತ ಹೀನಾಯ ವೃತ್ತಿ ಎಂದು ಕರೆಯಬಹುದಲ್ಲವೇ…..

ಇದು ಸ್ವಲ್ಪ ಕಠಿಣವಾಯಿತೇ…..,
ಹೋಗಲಿ ತೀರಾ ಕಡು ಬಡವರಿಗೆ, ಊಟ ವಸತಿ ಇಲ್ಲದವರಿಗೆ ಇದರಿಂದ ವಿನಾಯಿತಿ ನೀಡೋಣ. ಏಕೆಂದರೆ ಬದುಕುವುದೇ ಕಷ್ಟವಾಗಿರುವಾಗ ಮೌಲ್ಯಗಳು ಸಹ ಅರ್ಥ ಕಳೆದುಕೊಳ್ಳುತ್ತವೆ. ” ಆರ್ಥಿಕ ಸ್ವಾತಂತ್ರ್ಯ ಇಲ್ಲದ ಎಲ್ಲಾ ಸ್ವಾತಂತ್ರ್ಯಗಳು‌ ನಿಷ್ಪ್ರಯೋಜಕ ” ಎಂದು ಕಾರ್ಲ್ ಮಾರ್ಕ್ಸ್ ಹೇಳುತ್ತಾರೆ. ಅದು ವಾಸ್ತವ ಸಹ.

ಆದರೆ ಮಧ್ಯಮ ವರ್ಗದವರು, ವಿದ್ಯಾವಂತರು, ಸರ್ಕಾರಿ ಅಧಿಕಾರಿಗಳು, ಶ್ರೀಮಂತರಲ್ಲಿ ಸಹ ಅನೇಕರು ಈ ಚುನಾವಣಾ ಅಕ್ರಮದಲ್ಲಿ ಹಣ ಪಡೆದು ಭಾಗಿಯಾಗುತ್ತಾರಲ್ಲವೇ ಅವರನ್ನು ಏನೆಂದು ಕರೆಯುವುದು.

ಜೊತೆಗೆ ಇಲ್ಲಿ ಕೇವಲ ಹಣ ಸ್ವೀಕರಿಸುವವರು ಮಾತ್ರವಲ್ಲ ಹಣ ಕೊಡುವವರು ಅದಕ್ಕಿಂತ ಎರಡು ಪಟ್ಟು ಅಪರಾಧಿಗಳು ಎಂದೇ ಪರಿಗಣಿಸ ಬೇಕಾಗುತ್ತದೆ. ಇದು ಮತ್ತಷ್ಟು ದೊಡ್ಡ ಹೀನಾಯ ವೃತ್ತಿ.

ಇಲ್ಲಿನ ವಿಚಿತ್ರವೆಂದರೆ ತೆಗೆದುಕೊಳ್ಳುವವರು ಭಿಕಾರಿಗಳಾದರೆ ಕೊಡುವವರು ಕೊಟ್ಯಾಧಿಪತಿಗಳಾಗಿ, ಅಧಿಕಾರವನ್ನು ಪಡೆದು ಜನರನ್ನು ವಂಚಿಸಿ ಇಡೀ ಸಮಾಜವನ್ನು ಅಧೋಗತಿಗೆ ತರುತ್ತಾರೆ. ಭ್ರಷ್ಟಾಚಾರ ಸರ್ವವ್ಯಾಪಿಯಾಗಲು ಕಾರಣ ಯಾರು ಯೋಚಿಸಿ….

ಇದು ನೆನಪಾಗಲು ಕಾರಣ ಇದೇ ಶಾಂತವೇರಿ ಗೋಪಾಲಗೌಡರು ಸುಮಾರು ಆರವತ್ತರ ದಶಕದಲ್ಲಿ ಜನರಿಗೆ ಹಣ ಕೊಡುವುದು ಇರಲಿ, ಜನರಿಂದಲೇ ಚುನಾವಣಾ ಖರ್ಚಿಗೆ, ಹಣ ಪಡೆದು‌ ಶಾಸಕರಾಗಿ ಆಯ್ಕೆಯಾದವರು. ಬಹುಶಃ ” ಒಂದು ನೋಟು ಒಂದು ಓಟು ” ಎಂಬ ಘೋಷವಾಕ್ಯ ಇರಬೇಕು ಎಂದು ಓದಿದ ನೆನಪು. ರೈತ ಚಳವಳಿಗಾರರಾದ ಶ್ರೀಯುತ ನಂಜುಡಸ್ವಾಮಿ ಅವರು ಸಹ ಅವರ ಚುನಾವಣಾ ಸಮಯದಲ್ಲಿ ಓಟು – ನೋಟು ಪ್ರಚಾರದಲ್ಲಿ ತೊಡಗಿದ್ದರು. ಜನರು ಸಹ ಇದನ್ನು ಬೆಂಬಲಿಸಿದ್ದಾರೆ ಎಂದರೆ ‌ಆಗಿನ ಒಳ್ಳೆಯ ಮನಸ್ಥಿತಿಯ ಬಗ್ಗೆ ಹೆಮ್ಮೆ ಮೂಡುತ್ತದೆ….

ಬಡತನದ ದಿನಗಳಲ್ಲಿಯೇ ಜನ ಪ್ರಾಮಾಣಿಕರನ್ನು‌ ಆರಿಸಿದ ಉದಾಹರಣೆ ಇರುವಾಗ ಈಗ‌ ಬಹುಸಂಖ್ಯಾತ ಜನರ ಬಳಿ ಊಟ, ಬಟ್ಟೆ, ವಸತಿಗೆ‌ ಅಷ್ಟೋ ಇಷ್ಟೋ‌ ಅನುಕೂಲ ಇರುವಾಗ ತಮ್ಮ ಮತವನ್ನು ಮಾರಿಕೊಳ್ಳುವವರೇ ಹೆಚ್ಚಾಗಿ ಕಾಣುತ್ತಿರುವಾಗ ಏನನ್ನಬೇಕು ಇವರಿಗೆ….

ಶಾಂತವೇರಿ ಗೋಪಾಲಗೌಡರ ನೆನಪು ಒಂದು ಸಂಭ್ರಮ ಮತ್ತು ‌ಸ್ಪೂರ್ತಿಯೂ ಹೌದು. ಹಾಗೆಯೇ ಇಂದಿನ ಚುನಾವಣಾ ರಾಜಕೀಯ ಗಮನಿಸಿದಾಗ ವಿಷಾದನೀಯವೂ ಹೌದು. ಅಷ್ಟೊಂದು ಕಲುಷಿತ ವಾತಾವರಣದಲ್ಲಿ ನಾವಿದ್ದೇವೆ.

ಇದಕ್ಕೆ ನಾವೆಲ್ಲರೂ ನೇರ ಹೊಣೆ. ಆದರೆ ಇದನ್ನು ಸರಿಪಡಿಸಲಾಗದಷ್ಟು ಕೆಟ್ಟಿದೆ ಎಂಬ ನಿರಾಸೆ ಬೇಡ.‌ ಮಧ್ಯ ವಯಸ್ಸಿನ ಜವಾಬ್ದಾರಿಯುತ ನಾಗರಿಕರು ಸ್ವಲ್ಪ ಮಟ್ಟಿಗೆ ಸಮರ್ಪಣಾ ಮನೋಭಾವದಿಂದ ಪ್ರಯತ್ನಿಸಿದರು ಸಾಕು. ವ್ಯವಸ್ಥೆ ಸಾಕಷ್ಟು ಸುಧಾರಿಸುತ್ತದೆ. ತಾಳ್ಮೆ – ಪ್ರಬುದ್ಧತೆ – ಪ್ರೀತಿ ಮತ್ತು ವಿಶಾಲ ಮನಸ್ಸುಗಳೆಂಬ ಅಸ್ತ್ರಗಳನ್ನು ಉಪಯೋಗಿಸಿ ಇದನ್ನು ‌ಸಾಧಿಸುವ ಎಲ್ಲಾ ಸಾಧ್ಯತೆ ಇದೆ.

ನೆನಪುಗಳ ಸಾರ್ಥಕತೆ ಅಡಗಿರುವುದು‌ ತಿಳಿವಳಿಕೆಗಳು ನಡವಳಿಕೆಗಳಾದಾಗ…….

ಏಕೆಂದರೆ ಈಗಿನ ಸಂದರ್ಭದಲ್ಲಿ,

” ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳು ಇಲ್ಲ, ಯಾರು ಶಾಶ್ವತ ಮಿತ್ರರು ಇಲ್ಲ ” ಅದೇ ರಾಜಕೀಯ…………

ಮೋಸದ ಎಂತಹ ಅಸಹ್ಯಕರ ಸಮರ್ಥನೆ……

ಧನ್ಯ ಭಾರತ ಮಾತೆಯೆ ಧನ್ಯ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಈ ರಾಜಕೀಯ ನೀತಿಗೆ ಧನ್ಯ……

ಹಿಂದಿನಿಂದಲೂ ಈ ಪರಂಪರೆ ಸ್ವಲ್ಪ ಮಟ್ಟಿಗೆ ನಡೆದುಕೊಂಡು ಬಂದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ……..

ಅಬ್ಬಾ ಅಬ್ಬಬ್ವಾ‌…….

ಗೋವಾ ಮಣಿಪುರದಂತ ಚಿಕ್ಕ ರಾಜ್ಯಗಳೇ ಇರಲಿ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಸೇರಿ ದೊಡ್ಡ ದೊಡ್ಡ ರಾಜ್ಯಗಳು ಎಲ್ಲವೂ ಅಯಾರಾಂ ಗಯಾರಂ……..

ಪ್ರಜಾಪ್ರಭುತ್ವ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಚುನಾವಣೆ ಆಧಾರಿತ ಐದು ವರ್ಷಗಳ ಜನ ಪ್ರತಿನಿಧಿಗಳ ಆಡಳಿತ ವ್ಯವಸ್ಥೆಯನ್ನು ಸಂವಿಧಾನದಲ್ಲಿ ರೂಪಿಸಲಾಗಿದೆ. 1835 ದಿನಗಳ ಸಮಯಾವಕಾಶವಿದು. ಸಾಮಾನ್ಯವಾಗಿ ತನ್ನ ತತ್ವ, ಸಿದ್ದಾಂತ, ವಿಚಾರ, ಭರವಸೆ, ನಂಬಿಕೆಗಳ ಮೇಲೆ ಒಂದು ಪಕ್ಷ ಮತ್ತು ಅದರ ಜನ ಪ್ರತಿನಿಧಿಗಳು 5 ವರ್ಷ ಆಡಳಿತ ನೀಡಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಜನ ಅದೇ ಪಕ್ಷ ಅಥವಾ ಅದರ ಕೆಲಸ ತೃಪ್ತಿಕರವಾಗಿ ಇಲ್ಲದಿದ್ದರೆ ಮತ್ತೊಂದು ಪಕ್ಷ ಅಥವಾ ಇತ್ತೀಚಿಗೆ ಕೆಲವು ಪಕ್ಷಗಳನ್ನು ಗೆಲ್ಲಿಸುತ್ತಾರೆ.‌ ಇದು‌ ಒಂದು ವ್ಯವಸ್ಥೆ.

ಆದರೆ ಈಗ ಈ 5 ವರ್ಷಗಳಲ್ಲೇ ಜನಪ್ರತಿನಿಧಿಗಳು ಮಾಡಬಾರದ ಸಂವಿಧಾನ ವಿರೋಧಿ ಕೆಲಸ, ಆಡಬಾರದ, ಮಾನವೀಯತೆಗೆ ವಿರುದ್ಧವಾದ ಆಟ ಆಡಲು ಶುರು ಮಾಡಿದ್ದಾರೆ. ಇದನ್ನು ಎಷ್ಟು ಸೂಕ್ಷ್ಮವಾಗಿ ಮಾಡುತ್ತಾರೆಂದರೆ ಕಾನೂನಿನ ಒಳಗೆ ನುಗ್ಗಿ ಅದನ್ನೇ ಗುರಾಣಿಯಾಗಿಸಿ ಕೆಲವು ಕಡೆ, ಮತ್ತೆ ಕೆಲವು ಕಡೆ ಜನರ ಮತಗಳನ್ನೇ ನೇರವಾಗಿ ಪಡೆದು ಸಾರ್ವಜನಿಕರ ಅರಿವಿಗೆ ಬಾರದಂತೆ ಬೆನ್ನಿಗೆ ಚೂರಿ ಹಾಕುತ್ತಾರೆ.

ಮತ್ತೆ ದೇವರು, ಧರ್ಮದ ಹೆಸರಿನಲ್ಲಿ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಸ್ವೀಕರಿಸುವುದು ಮತ್ತೆ ಭ್ರಷ್ಟಾಚಾರಕ್ಕೆ ಕೈ ಹಾಕುವುದು.

ಎಂತಾ ಮೋಸ. ಒಂದೆರಡು ವರ್ಷ ಒಂದು ಪಕ್ಷದ ಸಿದ್ದಾಂತಗಳನ್ನು ಬಾಯಿಗೆ ಬಂದಂತೆ ತೆಗಳುವುದು ಮತ್ತೆರಡು ವರ್ಷ ಅದರ ಪಾದಗಳಿಗೆ ನಮಸ್ಕರಿಸುವುದು.

ನೀವು ಕಾಂಗ್ರೆಸ್ ನವರೇ ಆಗಿರಿ, ಬಿಜೆಪಿ, ಜೆಡಿಎಸ್, ಶಿವಸೇನೆ, ಜೆಡಿಯು ಆಗಿರಿ, ಹಿಂದುತ್ವ, ಲೋಹಿಯಾ, ಅಂಬೇಡ್ಕರ್ ವಾದಿಯೇ ಆಗಿರಿ ಅಧಿಕಾರಕ್ಕಾಗಿ ಸೈದ್ಧಾಂತಿಕ ಸಮರ್ಥನೆ ಮಾಡಿ ಈ‌ ರೀತಿಯ ದ್ರೋಹ ಮಾಡುವುದು ಅಕ್ಷಮ್ಯ ಅಪರಾಧ.

ನನ್ನ ಪ್ರಕಾರ ಈ ರೀತಿಯ ನಮಕ್ ಹರಾಮ್ ಗಳು ಮತ್ತು ಅವರಿಗೆ ಮತ್ತೆ ಮತ್ತೆ ಓಟು ಹಾಕುವವರು ಭಾರತದ ಸ್ವಾತಂತ್ರ್ಯ ದಿನದಂದು, ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣಕ್ಕೆ ಅನರ್ಹರು.

ಸಂವಿಧಾನ ಮತ್ತು ಧರ್ಮ ಇರುವುದು ತಪ್ಪುಗಳು ಆಗದಂತೆ ತಡೆಯಲು. ಒಳ್ಳೆಯ ಮನಸ್ಸು ಮತ್ತು ಜ್ಞಾನ ಇರುವವರಿಗೆ ಕಾನೂನು ಬೇಕಿಲ್ಲ, ಧರ್ಮವೂ ಬೇಕಿಲ್ಲ. ಏಕೆಂದರೆ ನಿಜ ನಾಗರಿಕ ಮನುಷ್ಯ ಅರಿವಿನಿಂದ ಬದುಕುತ್ತಾನೆ. ಆ ಅರಿವಿನಲ್ಲೇ ಕಾನೂನು, ಧರ್ಮ ಎಲ್ಲವೂ ಅಡಗಿರುತ್ತದೆ. ಮೋಸಗಾರರು, ವಂಚಕರಿಗೆ ಅವರನ್ನು ‌ಭಯ ಪಡಿಸಲು ಮತ್ತು ಶಿಕ್ಷಿಸಲು ಮಾತ್ರ ಕಾನೂನು, ಧರ್ಮ ಬೇಕಾಗುತ್ತದೆ. ಆ ಕಾನೂನು ಮತ್ತು ‌ಧರ್ಮಗಳನ್ನೇ ಅನಾಚಾರಕ್ಕೆ ಹೊದಿಕೆ ಮಾಡಿಕೊಳ್ಳುವ ಇವರನ್ನು ಏನೆಂದು ಕರೆಯುವುದು…..

ಒಂದು ಸ್ಪಷ್ಟವಾಗಬೇಕಿದೆ…..

ರಾಜಕೀಯವೆಂದರೆ……..

ಮೋಸ, ವಂಚನೆ, ದ್ರೋಹ, ಮೋಹ, ಲಾಲಸೆ, ಸ್ವಾರ್ಥ ಎಲ್ಲವನ್ನೂ ಒಳಗೊಂಡ ಅಧಿಕಾರ…

ಅಥವಾ

ಸೇವೆ, ತ್ಯಾಗ, ಪ್ರಾಮಾಣಿಕತೆ, ದಕ್ಷತೆ, ಶ್ರಮ, ಮಾನವೀಯತೆ, ನಿಸ್ವಾರ್ಥ ಅರ್ಥವನ್ನೊಳಗೊಂಡ ಅತ್ಯುತ್ತಮ ಕ್ಷೇತ್ರ….

ಶಾಶ್ವತ ಶತ್ರುಗಳು ಇಲ್ಲ, ಶಾಶ್ವತ ಮಿತ್ರರು ಇಲ್ಲ ಎಂದು ಹೇಳಲು ಇದು ನಿಮ್ಮ ಖಾಸಗಿ ಬದುಕಲ್ಲ. ಶತ್ರುತ್ವ ಮಿತ್ರತ್ವ ಮುಖ್ಯವಲ್ಲ. ಇದು ಕೌಟುಂಬಿಕ ಸಂಬಂಧಗಳಲ್ಲ. ಇದು ಸಾರ್ವಜನಿಕ ಜವಾಬ್ದಾರಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಶತ್ರುತ್ವ ಅಥವಾ ಮಿತ್ರತ್ವ ಬೆಳೆಸಲು….

ಸಾಮಾನ್ಯ ಜನ ಅಥವಾ ಕಡು ಬಡವರು ಚುನಾವಣಾ ಸಮಯದಲ್ಲಿ ಎಲ್ಲೋ ಮೂರು ನಾಲ್ಕು ವರ್ಷಗಳಿಗೆ ಒಮ್ಮೆ ಚೂರು ಪಾರು ದುಡ್ಡು ಹೆಂಡ ಬಟ್ಟೆ ಪಡೆಯುವುದೇ ಮಹಾ ಅಪರಾಧ ಎಂದು ಹೇಳುವ ಮಾಧ್ಯಮಗಳು ಈ ಮೌಲ್ಯಗಳ ಮತ್ತು ಸರ್ಕಾರದ ತಿಜೋರಿಗೆ ಕನ್ನ ಹಾಕುವುದನ್ನು ಚಾಣಾಕ್ಷ ನೀತಿ ಎಂದು ಕರೆಯುವುದು ಎಷ್ಟು ಹಾಸ್ಯಾಸ್ಪದವಲ್ಲವೇ….

ನೀವು ನಿಜಕ್ಕೂ ಈ ದೇಶದ ಅಭಿವೃದ್ಧಿ ಮತ್ತು ಮೌಲ್ಯಗಳನ್ನು ಇಷ್ಟಪಡುವವರೇ ಆದರೆ ಇನ್ನು ಮೇಲೆ
” ಒಳ್ಳೆಯವರನ್ನು ಪ್ರೋತ್ಸಾಹಿಸಿ ಮತ್ತು ಕೆಟ್ಟವರನ್ನು ನಿರ್ಲಕ್ಷಿಸಿ ” ಇದು ಒಂದು ಸಂಕಲ್ಪವಾಗಲಿ.

ಇಲ್ಲದಿದ್ದರೆ ನೀವು, ನಾವು, ಸಮಾಜ ಮತ್ತು ದೇಶವೇ ಕೆಟ್ಟದಾಗುತ್ತದೆ ಎಚ್ಚರ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9844013068……
9663750451……

WhatsApp

Join Now

Telegram

Join Now

Instagram

Join Now