” ಭಾರತೀಯರಾದ ನಾವು…”
ವಿಜಯ ದರ್ಪಣ ನ್ಯೂಸ್ …..
” ಭಾರತೀಯರಾದ ನಾವು…”
ಯಾರಿಗೆ ಇಷ್ಟ ಇದೆಯೋ ಇಲ್ಲವೋ, ಒಪ್ಪಿಗೆ ಇದೆಯೋ ಇಲ್ಲವೋ, ಸಂತೋಷವೋ ಬೇಸರವೋ ಒಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಹುತೇಕ ಯುದ್ಧ ಪ್ರಾರಂಭವಾಗಿದೆ, ಇಡೀ ರಾತ್ರಿ ಬಾಂಬು, ಮೀಸೈಲುಗಳ ದಾಳಿ ನಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರುತ್ತದೆ ಏನೋ ಊಹಿಸುವುದು ಕಷ್ಟ...
ನಮ್ಮ ಕಾಲಘಟ್ಟದಲ್ಲಿ ಯುದ್ಧ ತಡೆಯಲು ನಮ್ಮಂತ ಸಾಮಾನ್ಯರಿಗೆ ಸಾಧ್ಯವಾಗಲಿಲ್ಲ. ಅದಕ್ಕೆ
ಕ್ಷಮೆಯಾಚಿಸುತ್ತಾ,
ಇಂತಹ ಸಂದರ್ಭದಲ್ಲಿ ಭಾರತೀಯ ನಾಗರಿಕರಾದ ನಮ್ಮ ಜವಾಬ್ದಾರಿ ಬಹಳ ದೊಡ್ಡದಿದೆ. ಅದನ್ನು ನಿರ್ವಹಿಸುವ ಹೊಣೆ ನಮ್ಮ ಮೇಲಿದೆ. ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವಂತೆ
” ಭಾರತೀಯರಾದ ನಾವು…..
ಈಗ ನಡೆಯುತ್ತಿರುವ
ಭಾರತ – ಪಾಕಿಸ್ತಾನ ನಡುವಿನ ಯುದ್ಧದ ಎಲ್ಲಾ ಕ್ರಿಯೆ ಪ್ರಕ್ರಿಯೆ, ಸುದ್ದಿ, ಆಗುಹೋಗುಗಳ ಬಗ್ಗೆ ಸಾಧ್ಯವಾದಷ್ಟು ಗಮನಿಸುತ್ತಿರುತ್ತೇವೆ, ಭಾರತೀಯರಾದ ಇದು ನಮ್ಮ ಕರ್ತವ್ಯ. ದೇಶದ ಸುರಕ್ಷತೆಯ ಬಗ್ಗೆ ಸದಾ ಕಾಳಜಿ ವಹಿಸುತ್ತೇವೆ…..
ಈ ಯುದ್ಧ ಕೊನೆಗೊಳ್ಳುವವರೆಗೂ ಭಾರತೀಯರಾದ ನಾವು ಅತ್ಯಂತ ಪ್ರಾಮಾಣಿಕತೆಯಿಂದ, ಆತ್ಮಸಾಕ್ಷಿಯಾಗಿ, ಭಾರತದ ಹಿತಾಸಕ್ತಿಗಾಗಿ, ರಕ್ಷಣೆಗಾಗಿ, ಕಾಯಾ ವಾಚಾ ಮನಸಾ ಭಾರತದ ಪರವಾಗಿ ನಿಲ್ಲುತ್ತೇವೆ. ಯಾವುದೇ ರೀತಿಯ ಜಾತಿ, ಧರ್ಮ, ಭಾಷೆ, ಪಕ್ಷ, ಪ್ರದೇಶ, ವರ್ಗ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಈ ಯುದ್ಧದ ಸಂದರ್ಭದಲ್ಲಿ ವ್ಯಕ್ತಪಡಿಸುವುದಿಲ್ಲ.
ಈ ದೇಶ ಈ ಸಂದರ್ಭದಲ್ಲಿ ನಮ್ಮಿಂದ ಬಯಸುವ ಪ್ರಜಾಪ್ರಭುತ್ವೀಯವಾದ ಮತ್ತು ಮಾನವೀಯವಾದ ಯಾವುದೇ ತ್ಯಾಗ ಅಥವಾ ನಾವು ವಹಿಸಬೇಕಾದ ಪಾತ್ರವನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಲು ಸಿದ್ಧರಿದ್ದೇವೆ ಎಂದು ಪ್ರತಿಜ್ಞೆ ಕೈಗೊಳ್ಳುತ್ತೇವೆ…..
ಈ ಸಂದರ್ಭದಲ್ಲಿ ಮಾಧ್ಯಮಗಳಲ್ಲೇ ಆಗಲಿ, ಸಾಮಾಜಿಕ ಜಾಲತಾಣಗಳಲ್ಲೇ ಆಗಲಿ, ಪತ್ರಿಕೆಗಳಲ್ಲೇ ಆಗಲಿ ಬರುವ ಅಧಿಕೃತ ಸುದ್ದಿಗಳನ್ನು ಹೊರತುಪಡಿಸಿ ಗಾಳಿ ಮಾತುಗಳನ್ನು ನಂಬುವುದಿಲ್ಲ. ಯಾವುದೇ ರೀತಿಯ ಪ್ರಚೋದನೆಗೂ ಒಳಗಾಗುವುದಿಲ್ಲ. ಭಾರತ ಸರ್ಕಾರದ ಅಧಿಕೃತ ಪತ್ರಿಕಾಗೋಷ್ಠಿಯ ಸುದ್ದಿಗಳನ್ನು ನಂಬುತ್ತೇವೆ, ಜೊತೆಗೆ ಎಲ್ಲ ಸಂದರ್ಭದಲ್ಲೂ ಆಂತರಿಕ ಸಂಯಮವನ್ನು ಪಾಲಿಸುತ್ತೇವೆ, ನಮ್ಮ ವಿವೇಚನೆ ಬಳಸುತ್ತೇವೆ…..
ಅತಿ ಮುಖ್ಯವಾಗಿ ಈಗಿನ ಸಂದರ್ಭದಲ್ಲಿ ಸಿನಿಕರಾಗದೆ, ಭಯಪಡದೆ, ಸಹಜವಾಗಿ ಕೌಟುಂಬಿಕ ಮತ್ತು ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತೇವೆ. ಕಾಳಸಂತೆಕೋರರಿಗೆ, ಕಪ್ಪು ಹಣದ ಖದೀಮರಿಗೆ, ಭ್ರಷ್ಟರಿಗೆ, ಪರಿಸ್ಥಿತಿಯ ಲಾಭ ಪಡೆಯುವ ಸ್ವಾರ್ಥಿಗಳಿಗೆ ಜೀವ ಭಯದಿಂದ ಭಯದಿಂದಾಗಿ ಯಾವುದೇ ಅವಕಾಶ ಕಲ್ಪಿಸುವುದಿಲ್ಲ. ಅನಾವಶ್ಯಕವಾಗಿ ಯಾವುದೇ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಡುವುದಿಲ್ಲ……
ಕನಿಷ್ಠ, ಯುದ್ಧ ಮುಗಿಯುವವರಿಗಾದರೂ ಅಧಿಕಾರಸ್ಥ ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ವಕೀಲರು, ಪೊಲೀಸರು, ಶಿಕ್ಷಕರು, ಮಠಾಧೀಶರು, ಉದ್ಯಮಿಗಳು, ವ್ಯಾಪಾರಸ್ಥರು, ಸಾಮಾಜಿಕ ಹೋರಾಟಗಾರರು ಎಷ್ಟು ಸಾಧ್ಯವೋ ಅಷ್ಟು ಪ್ರಾಮಾಣಿಕತೆಯಿಂದ, ಇಡೀ ದೇಶ ನಮ್ಮ ಕುಟುಂಬ ಎನ್ನುವ ಭಾವನೆಯಿಂದ ಕಾರ್ಯನಿರ್ವಹಿಸಲು ಪ್ರಯತ್ನಿಸಬೇಕು. ಯಾವುದೇ ಅನಾವಶ್ಯಕ ಸಂಘರ್ಷಗಳಿಗೆ ಎಡೆ ಮಾಡಿಕೊಡಬಾರದು. ಜನರಲ್ಲಿ ಶಾಂತಿ, ಸಂಯಮ, ಸಾಮರಸ್ಯ ಸೌಹಾರ್ದತೆ ಕಾಪಾಡಲು ಈ ವಿದ್ಯಾವಂತ ವರ್ಗ ಕಾರ್ಯ ನಿರ್ವಹಿಸಬೇಕು…….
ಈ ಯುದ್ಧದ ಸಂದರ್ಭದಲ್ಲಿ ಸಾಮಾನ್ಯ ನಾಗರಿಕರಾದ ಪ್ರತಿಯೊಬ್ಬರು ಎಂದಿಗಿಂತ ಹೆಚ್ಚಾಗಿ ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ಹೆಚ್ಚು ಪ್ರಜ್ಞಾಪೂರ್ವಕವಾಗಿ ನಿರ್ವಹಿಸಬೇಕು. ಅಂದರೆ ಟ್ರಾಫಿಕ್ ಗಳಲ್ಲಿ, ಸಾರ್ವಜನಿಕ ಸಮಾರಂಭಗಳಲ್ಲಿ, ಮನರಂಜನಾ ಕೇಂದ್ರಗಳಲ್ಲಿ, ಮಾರುಕಟ್ಟೆಗಳಲ್ಲಿ, ಆಸ್ಪತ್ರೆ, ಶಾಲಾ ಕಾಲೇಜುಗಳಲ್ಲಿ,
ಜನನಿಬಿಡ ಪ್ರದೇಶಗಳಲ್ಲಿ, ಪಾರ್ಕು, ಕ್ರೀಡಾಂಗಣಗಳಲ್ಲಿ ಯಾವುದೇ ರೀತಿಯ ಅನಾವಶ್ಯಕ ಗಲಭೆಗಳಲ್ಲಿ ತೊಡಗದೆ, ಪೊಲೀಸರ ಮೇಲೆ ಹೆಚ್ಚು ಒತ್ತಡ ನೀಡದೆ, ಒಂದಷ್ಟು ನಾಗರೀಕವಾಗಿ, ತಾಳ್ಮೆಯಿಂದ, ನಮ್ಮ ಮೇಲೆಯೇ ಸ್ವಯಂ ನಿಯಂತ್ರಣ ಹೇರಿಕೊಂಡು ಸಭ್ಯವಾಗಿ ಕಾರ್ಯನಿರ್ವಹಿಸಬೇಕು….
ಈ ಸಮಯದಲ್ಲಿ ಆರ್ಥಿಕವಾಗಿ ಯಾವುದೇ ರೀತಿಯ ದುಂದು ವೆಚ್ಚ ಮಾಡದೆ ಇರುವುದರಲ್ಲಿ ಸಹಜವಾಗಿ ಬದುಕಬೇಕು. ವಾರಾಂತ್ಯದ ಪಾರ್ಟಿಗಳು, ಅನಾವಶ್ಯಕ ಪ್ರದರ್ಶನ ಮನೋಭಾವದ ಸಮಾರಂಭಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು, ಸಹಜ ಜೀವನ ಕ್ರಮಕ್ಕೆ ಹೆಚ್ಚು ಒತ್ತು ನೀಡಬೇಕು. ಏಕೆಂದರೆ ಯುದ್ಧದಲ್ಲಿ ಸೈನಿಕರು ನಮ್ಮ ರಕ್ಷಣೆಗಾಗಿ ಜೀವದ ಹಂಗು ತೊರೆದು ಹೋರಾಡುವಾಗ ನಾವು ಅದಕ್ಕೆ ಸಂಬಂಧವಿಲ್ಲದಂತೆ ವೈಯಕ್ತಿಕವಾಗಿ ಸಂಭ್ರಮಿಸುವುದು ಒಳ್ಳೆಯ ಲಕ್ಷಣವಲ್ಲ….
ಈ ಸಂದರ್ಭದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಆದಷ್ಟು ಹಿತಮಿತವಾಗಿ ಬಳಸಬೇಕು. ಮುಖ್ಯವಾಗಿ ಪೆಟ್ರೋಲ್, ಡೀಸೆಲ್, ವಿದ್ಯುತ್, ನೀರು ಮುಂತಾದವುಗಳನ್ನು ಸ್ವಲ್ಪಮಟ್ಟಿಗೆ ನಿಗ್ರಹಿಸಿಕೊಳ್ಳಬೇಕು. ಇದರಿಂದ ದೇಶದ ಮೇಲೆ ಬೀಳುವ ಆರ್ಥಿಕ ಒತ್ತಡ ಕಡಿಮೆಯಾಗಬಹುದು…..
ಯುದ್ಧದಲ್ಲಿ ಗೆದ್ದವನು ಸೋತ ಸೋತವನು ಸತ್ತ ಎಂಬ ಮಾತು ಚಾಲ್ತಿಯಲ್ಲಿದೆ. ಆದ್ದರಿಂದ ಯುದ್ಧದ ಬಗ್ಗೆ ತೀವ್ರವಾದ ಉನ್ಮಾದ ಅಥವಾ ವಿಜೃಂಭಣೆಯ ವಿಜಯೋತ್ಸವದ ಅವಶ್ಯಕತೆ ಇಲ್ಲ. ಶತ್ರುಗಳ ಬಗ್ಗೆ ತುಚ್ಛವಾದ ನಿಂದನೆ ಬೇಡ. ಇಂತಹ ಸನ್ನಿವೇಶದಲ್ಲಿ ಯಾರಾದರು ಸಾರ್ವಜನಿಕರು ಶಾಂತಿಯ ಪರವಾಗಿ ಧ್ವನಿಯೆತ್ತಿದರೆ ಅವರ ಆ ಹಕ್ಕನ್ನು, ಆ ಭಾವನೆಯನ್ನು ಗೌರವಿಸಬೇಕು. ಅವರನ್ನು ಶತ್ರುಗಳಂತೆ ಭಾವಿಸಿ ದ್ವೇಷಿಸಬಾರದು. ಅವರ ಅಭಿಪ್ರಾಯ ವ್ಯಕ್ತಪಡಿಸಲು ಬಿಡಬೇಕು……
ಈ ಯುದ್ಧದ ಸಂದರ್ಭದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಂದ ಆಂತರಿಕ ಸಂಘರ್ಷ ಯಾರ ನಡುವೆಯೂ ಉಂಟಾಗದಂತೆ ನೋಡಿಕೊಂಡು, ಈ ದೇಶದ ಐಕ್ಯತೆಯನ್ನು, ಸಮಗ್ರತೆಯನ್ನು, ಸಾರ್ವಭೌಮತೆಯನ್ನು ಕಾಪಾಡುತ್ತೇವೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇವೆ….
ಇದು ಈ ಕ್ಷಣದಲ್ಲಿ ನೆನಪಾದ ಕೆಲವು ಸ್ವಯಂ ನಿಯಂತ್ರಣ ಸಾಧಿಸಬಹುದಾದ ಕರ್ತವ್ಯ, ಜವಾಬ್ದಾರಿ ಮತ್ತು ನಾಗರಿಕ ಲಕ್ಷಣಗಳು. ಇದನ್ನು ಮೀರಿ ಮತ್ತಷ್ಟು ನಿಮಗೆ ನೆನಪಾದರೆ ಅವುಗಳನ್ನು ಪಾಲಿಸುತ್ತಾ, ಯುದ್ಧದ ಸಂದರ್ಭದಲ್ಲಿ ಭಾರತೀಯರ ಒಗ್ಗಟ್ಟನ್ನು ವಿಶ್ವಕ್ಕೆ ಸಾರುವ ಅವಕಾಶವನ್ನು, ಭಾರತೀಯತೆಯ ಮೌಲ್ಯಗಳನ್ನು, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯೋಣ….
ಇದಕ್ಕಾಗಿ ತುಂಬಾ ಅಧ್ಯಯನ, ಶ್ರಮ, ಹಣ, ಖರ್ಚು ಮಾಡಬೇಕಾಗಿಲ್ಲ. ನಾವು ನಿಂತ ನೆಲೆಯಲ್ಲಿಯೇ ಅತ್ಯಂತ ಸರಳವಾಗಿ, ಸಹಜವಾಗಿ ಇದನ್ನು ಮಾಡಬಹುದು. ದಯವಿಟ್ಟು ಪ್ರಯತ್ನಿಸಿ…..
” ಯುದ್ಧ ನಿಲ್ಲಲಿ, ಶಾಂತಿ ನೆಲೆಸಲಿ, ನಾವು ಮನುಜರು……”
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…….