ಸಾರ್ವಜನಿಕರು ಸುಳ್ಳು ದೂರು ದಾಖಲಿಸಬಾರದು: ಉಪ ಲೋಕಾಯುಕ್ತ ಬಿ.ವೀರಪ್ಪ
ವಿಜಯ ದರ್ಪಣ ನ್ಯೂಸ್….
ಸಾರ್ವಜನಿಕರು ಸುಳ್ಳು ದೂರು ದಾಖಲಿಸಬಾರದು: ಉಪ ಲೋಕಾಯುಕ್ತ ಬಿ.ವೀರಪ್ಪ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ ಸೆ.04: ಸಾರ್ವಜನಿಕರು ಲೋಕಾಯುಕ್ತ ಹಾಗೂ ಇನ್ನಿತರೆ ನ್ಯಾಯಾಲಯಗಳಲ್ಲಿ ಸುಳ್ಳು ಕೇಸ್ ದಾಖಲಿಸಬೇಡಿ, ಸುಳ್ಳು ಕೇಸ್ ಎಂದು ಸಾಬೀತಾದರೆ ಅರ್ಜಿದಾರರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ, ಜೊತೆಗೆ ನಿಜವಾದ ಕೇಸ್ ಗಳ ವಿಲೇವಾರಿ ವಿಳಂಬವಾಗುತ್ತದೆ ಎಂದು ಉಪಲೋಕಾಯುಕ್ತ ನ್ಯಾ. ಬಿ ವೀರಪ್ಪ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಸಂಸ್ಥೆಯಲ್ಲಿ ಬಾಕಿ ಇರುವ ದೇವನಹಳ್ಳಿ ತಾಲ್ಲೂಕಿನ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯಾದ್ಯಂತ ಲೋಕಾಯುಕ್ತದಲ್ಲಿ 25 ಸಾವಿರ ಪ್ರಕರಣಗಳು ಬಾಕಿ ಇವೆ. ಈ ಪ್ರಕರಣಗಳ ಇತ್ಯರ್ಥ ಮಾಡಲು ಕ್ರಮವಹಿಸಲಾಗಿದೆ. ಇದರಲ್ಲಿ ಸುಮಾರು 10 ಸಾವಿರ ಸುಳ್ಳು ಕೇಸ್‌ಗಳು ಇವೆ. ಯಾವುದೇ ಕೇಸ್ ಬಂದರೂ ಅದನ್ನು ಕ್ರಮ ಬದ್ದವಾಗಿ ವಿಲೇವಾರಿ ಮಾಡಬೇಕು. ಸುಳ್ಳು ಪ್ರಕರಣಗಳಿಂದ ಉಳಿದ ಪ್ರಕರಣಗಳನ್ನು ಕೂಡ ಇತ್ಯರ್ಥ ಮಾಡುವುದು ಸವಾಲಿನ ಕೆಲಸವಾಗುತ್ತಿದೆ. ಇದರಿಂದ ಯಾವ ಪ್ರಕರಣಗಳಲ್ಲಿ ಸತ್ಯತೆ ಇದೆಯೋ ಅಂತಹ ಪ್ರಕರಣಗಳನ್ನು ಮಾತ್ರ ದಾಖಲಿಸಬೇಕು. ಇಲ್ಲವಾದಲ್ಲಿ ಸುಳ್ಳು ಕೇಸ್ ಹಾಕಿದ ಅರ್ಜಿದಾರರಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಬಹುದು ಎಂದರು.
ಅಧಿಕಾರಿಗಳಿಗೆ ಸರ್ಕಾರಿ ಸೇವೆ ಸಿಗುವುದು ಸಾರ್ವಜನಿಕರ ಸೇವೆಗೆ ಒಂದು ಉತ್ತಮ ವೇದಿಕೆ, ಸಾರ್ವಜನಿಕರ ಕೆಲಸಗಳನ್ನು ಅನಗತ್ಯವಾಗಿ ವಿಳಂಬ ಮಾಡದೇ ತ್ವರಿತವಾಗಿ ಮುಗಿಸಬೇಕು. ಅಧಿಕಾರಿವನ್ನು ದುರುಪಯೋಗ ಪಡಿಸಿಕೊಳ್ಳದೆ ಪ್ರಾಮಾಣಿಕವಾಗಿ ಕಾನೂನು ಅಡಿಯಲ್ಲಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮರಂಗ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ ಎಂಬ ಮಾತುಗಳು ಜನರಿಂದ ಕೇಳಿಬರುತ್ತಿದೆ. ಅಧಿಕಾರಿಗಳು ಇದನ್ನು ಸರಿಪಡಿಸಬೇಕು. ಅಧಿಕಾರದ ಜತೆಗೆ ಸಂಸ್ಕಾರ ಕೂಡ ಇರಬೇಕು. ಅನ್ಯಾಯ, ಆಕ್ರಮದಿಂದ ಮಾಡಿದ ಆಸ್ತಿಯಿಂದ ನೆಮ್ಮದಿಯಾಗಿರಲು ಸಾಧ್ಯವಿಲ್ಲ ಎಂದರು.
ಬೆದರಿಕೆ, ಹೆದರಿಕೆಗಳಿಗೆ ಬಗ್ಗಲ್ಲ
ಕೆಲವೆಡೆ ಲೋಕಾಯುಕ್ತ ದಾಳಿ ನಡೆಸಿದ ಸಂದರ್ಭದಲ್ಲಿ ಬೆದರಿಕೆ ಹಾಕುವ ಕೆಲಸವಾಗುತ್ತದೆ. ಆದರೆ ಯಾರ ಬೆದರಿಕೆಗೂ ಬಗ್ಗಲ್ಲ. ನ್ಯಾಯಯುತವಾಗಿ ಎಲ್ಲವನ್ನೂ ವಿಚಾರಣೆ ನಡೆಸಲಾಗುತ್ತದೆ ಎಂದರು.
ವಿಐ, ಆರ್ ಐ ಗಳ ಮಾಹಿತಿ ನೀಡಲು ಸೂಚನೆ
ಕೆಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುವ ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರ ಕುಟುಂಬ ವಿವರ, ಆಸ್ತಿ ವಿವರ, ಅವಲಂಬಿತ ಸದಸ್ಯರ ವಿವರವನ್ನು ಒಳಗೊಂಡ ಸಂಪೂರ್ಣ ಮಾಹಿತಿಯನ್ನು ಒಂದು ತಿಂಗಳ ಒಳಗಾಗಿ ವರದಿ ನೀಡಿ ಎಂದು ಉಪವಿಭಾಗಾಧಿಕಾರಿಗೆ ಸೂಚಿಸಿದರು.
ಮಾಜಿ ಸೈನಿಕನಿಗೆ ಸೂಕ್ತ ನ್ಯಾಯ ಒದಗಿಸಲು ಸೂಚನೆ
ದೇವನಹಳ್ಳಿ ತಾಲ್ಲೂಕಿನ ಹಾರೋಹಳ್ಳಿ ಗ್ರಾಮದ ಮಾಜಿ ಸೈನಿಕನ ಎರಡು ಎಕರೆ ಜಮೀನಿಗೆ ಬಗರ್ ಹುಕುಂ ಸಾಗುವಳಿ ಚೀಟಿ ವಿತರಿಸಲು ವಿಳಂಬವಾಗುತ್ತಿದೆ. ಈ ಪ್ರಕರಣದಲ್ಲಿ ಆ ಜಮೀನಿನ ಮೇಲೆ ಮಾಲಿಕರು ಪೋಸಿಶನ್ ನಲ್ಲಿ ಇದಾರ ಇಲ್ಲವಾ ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಲಾ ಭೂಮಿ ಒತ್ತುವರಿ ತೆರವಿಗೆ 2 ತಿಂಗಳ ಗಡುವು
ಸರ್ಕಾರಿ ಶಾಲೆಯ ಕಾಂಪೋಂಡ್ ಕೆಡವುದರೊಂದಿಗೆ ಶಾಲಾ ಜಮೀನು ಒತ್ತುವರಿ ತೆರವುಗೊಳಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ದ ಗರಂ ಆದ ಉಪ ಲೋಕಾಯುಕ್ತರು, ಎಲ್ಲವನ್ನೂ ನೋಡಿಕೊಂಡು ಸುಮ್ಮ ನಿರುವ ಎಸ್.ಡಿ.ಎಂ.ಸಿ ಸಮಿತಿ, ಡಿಡಿಪಿಐ, ಬಿಇಒ ಹಾಗೂ ಶಾಲಾ ಮುಖ್ಯೋಪಾಧ್ಯಾಯ ರ ವಿರುದ್ದ ಪ್ರಕರಣ ದಾಖಲಿಸಿ ಹಾಗೂ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ 2 ತಿಂಗಳೊಳಗಾಗಿ ಶಾಲಾ ಜಾಗವನ್ನು ಒತ್ತುವರಿ ತೆರವುಗೊಳಿಸಿ ಹದ್ದುಬಸ್ತು ಮಾಡಲು ದೇವನಹಳ್ಳಿ ತಹಶೀಲ್ದಾರರಿಗೆ ಸೂಚಿಸಿದರು.
ಮಾಲೀಕನ ಅರಿವಿಗೆಬಾರದಂತೆ ಆರ್ ಟಿ ಒ ದಿಂದ ವಾಹನ ಹಸ್ತಾಂತರ
ಮಾಲೀಕರಿಂದ ದ್ವಿಚಕ್ರ ವಾಹನ ಕೊಂಡೊಯ್ದಿದ್ದ ವ್ಯಕ್ತಿ ತನ್ನ ಹೆಸರಿಗೆ ವಾಹನ ನೊಂದಾಯಿಸಿಕೊಳ್ಳಲು ದೇವನಹಳ್ಳಿ ಆರ್ ಟಿಒ ಕಛೇರಿ ಹೇಗೆ ಸಹಕರಿಸಿತು ಎಂದು ಆಶ್ಚರ್ಯ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು, ವಾಹನ ಮಾಲೀಕರ ಸಹಿ ಹಾಗೂ ಆಧಾರ್ ಕಾರ್ಡ್ ಪಡೆಯದೇ ಹೇಗೆ ನೊಂದಣಿ ಮಾಡಿದಿರಿ ತಕ್ಷಣ ಆರ್ ಟಿ ಓ ವಿರುದ್ದ ದೂರು ದಾಖಲಿಸಿ ಎಂದರು. ಎಂದಾಗ ಆರ್.ಟಿ.ಓ ಅಧಿಕಾರಿಗಳು ವಾಪಸ್ ಮೂಲ ಮಾಲೀಕರಿಗೆ ದಾಖಲೆ ವರ್ಗಾಯಿಸಲಾಗುವುದೆಂದರು.
ಅಕ್ರಮ ಖಾತೆ ವರ್ಗಾವಣೆ, ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಭೂ ಒತ್ತುವರಿ, ಜಮೀನು ಸರ್ವೇ ಕಾರ್ಯ, ಸರ್ಕಾರಿ ರಸ್ತೆ, ಸ್ಮಶಾನ ಒತ್ತುವರಿ ಸೇರಿದಂತೆ ವಿವಿಧ ಪ್ರಕರಣಗಳ ವಿಚಾರಣೆ, ವಿಲೇವಾರಿ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಪಂ ಸಿಇಒ ಡಾ.ಕೆ.ಎನ್ ಅನುರಾಧ, ಎಸ್ಪಿ ಸಿ.ಕೆ ಬಾಬ, ಲೋಕಾಯುಕ್ತ ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಉಪ ನಿಬಂಧಕ ಅರವಿಂದ್ ಎನ್.ವಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಶ್ರೀ ಶೈಲ್ ಭೀಮಸೇನ ಬಗಾಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ದೂರುದಾರರು ಹಾಜರಿದ್ದರು.