ಶಾಲಾ- ಕಾಲೇಜು ಆವರಣದಲ್ಲಿ ತಂಬಾಕು ನಿಷೇಧ ಸೂಚನಾ ಫಲಕ ಕಡ್ಡಾಯ: ಜಿಲ್ಲಾಧಿಕಾರಿ ಎ.ಬಿ ಬಸವರಾಜು

ವಿಜಯ ದರ್ಪಣ ನ್ಯೂಸ್…..

ರೇಬೀಸ್ ರೋಗದ ಬಗ್ಗೆ ಅರಿವು ಮೂಡಿಸಿ

ಶಾಲಾ- ಕಾಲೇಜು ಆವರಣದಲ್ಲಿ ತಂಬಾಕು ನಿಷೇಧ ಸೂಚನಾ ಫಲಕ ಕಡ್ಡಾಯ: ಜಿಲ್ಲಾಧಿಕಾರಿ ಎ.ಬಿ ಬಸವರಾಜು

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೆಪ್ಟೆಂಬರ್ 11 : ಶಾಲಾ-ಕಾಲೇಜು ಸೇರಿದಂತೆ ಜಿಲ್ಲೆಯ ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ತಂಬಾಕು ನಿಷೇಧ ಕುರಿತ ಸೂಚನಾ ಫಲಕ ಕಡ್ಡಾಯವಾಗಿ ಅಳವಡಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆ ಮತ್ತು ಜಿಲ್ಲಾ ಕಣ್ಗಾವಲು ಸಮಿತಿ ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸುವುದು ಹಾಗೂ ಮಕ್ಕಳ ಆರೋಗ್ಯ ಮತ್ತು ಉಜ್ವಲ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ತಂಬಾಕು ನಿಯಂತ್ರಣ ಮತ್ತು ಜಾಗೃತಿ ಮುಖ್ಯವಾಗಿರುತ್ತದೆ.

ಜಿಲ್ಲೆಯಲ್ಲಿರುವ ಎಲ್ಲಾ ಶಾಲಾ/ ಕಾಲೇಜು/ ವಿಶ್ವವಿದ್ಯಾಲಯಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸಲು ಹಾಗೂ COTPA Sec 6bಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಸುತ್ತ 100 ಗಜ ಅಂತರದಲ್ಲಿ ತಂಬಾಕು ವ್ಯಾಪಾರ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅಂಗಡಿ ಮಾಲೀಕರುಗಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರತ್ಯೇಕವಾದ ಪರವಾನಗಿಯನ್ನು ಪಡೆಯಬೇಕು. ಎಲ್ಲಾ ಪರವಾನಗಿ ಹೊಂದಿರುವ ತಂಬಾಕು ಮಾರಾಟ ಅಂಗಡಿ ಮುಂಗಟ್ಟುಗಳು ತಂಬಾಕು ನಿಷೇಧ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿರಬೇಕು.

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮಾರಾಟ ಮಾಡುವಂತಿಲ್ಲ. ಬೀಡಿ, ಸಿಗರೇಟು ಗುಟ್ಕಾವನ್ನು ಮಕ್ಕಳಿಗೆ ಮಾರಾಟ ಮಾಡಬಾರದೆಂಬ ನಿಯಮಗಳಿದ್ದರೂ ವ್ಯಾಪಾರಿಗಳು ಪಾಲಿಸುತ್ತಿಲ್ಲ.

ನಿಷೇಧಿತ ಸ್ಥಳಗಳಲ್ಲಿ ತಂಬಾಕು ಮಾರಾಟ ಮತ್ತು ಸೇವನೆ ಹಾಗೂ ತಂಬಾಕು ಮಾರಾಟ ಪರವಾನಗಿ ಇಲ್ಲದೇ ಮಾರಾಟ ಮಾಡಿದವರಿಗೆ ದಂಡ ವಿಧಿಸಲಾಗಿತ್ತದೆ ಜೊತೆಗೆ ಶಿಕ್ಷೆಗೆ ಗುರಿಯಾಗಬಹುದು ಎಂದು ಹೇಳಿದರು.

96 ದಾಳಿಗಳು, 41920 ದಂಡ ವಸೂಲಿ
ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ಕೋಟ್ಪಾ-2003 ಕಾಯ್ದೆ ಅನ್ವಯ ಏಪ್ರಿಲ್ 2025 ರಿಂದ ಆಗಸ್ಟ್ ವರೆಗೆ ಜಿಲ್ಲೆಯಾದ್ಯಂತ ವಿವಿಧ ಅಂಗಡಿ ಮುಂಗಟ್ಟುಗಳ ಮೇಲೆ 96 ದಾಳಿಯನ್ನು ನಡೆಸಿದ್ದು, ನಿಯಮಗಳ ಉಲ್ಲಂಘನೆ ಮಾಡಿದವರ ವಿರುದ್ಧ ಸೆಕ್ಷನ್ 4 ರ ಅಡಿಯಲ್ಲಿ 334 ಪ್ರಕರಣಗಳನ್ನು ದಾಖಲಿಸಿ 41920 ರೂಪಾಯಿ ದಂಡವನ್ನು ಸಂಗ್ರಹಿಸಲಾಗಿದೆ.

ರೇಬೀಸ್ ರೋಗಕ್ಕೆ ಒಬ್ಬರು ಬಲಿ
ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯ ಗ್ರಾಮದಲ್ಲಿ ಕಳೆದ ವರ್ಷ 62 ವರ್ಷ ವಯಸ್ಸಿನ ಮಹಿಳೆಗೆ ನಾಯಿ ಕಚ್ಚಿದ್ದು ಒಮ್ಮೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಂತರ ಚಿಕಿತ್ಸೆ ಪಡೆಯದೇ ಇದ್ದರಿಂದ ರೇಬೀಸ್ ರೋಗ ಆವರಿಸಿಕೊಂಡು ಸೆಪ್ಟೆಂಬರ್ 03, 2025 ರಂದು ಮೃತರಾಗಿದ್ದಾರೆ. ಒಮ್ಮೆ ರೇಬೀಸ್ ರೋಗ ಮನುಷ್ಯನ ದೇಹದಲ್ಲಿ ತೀವ್ರಗೊಂಡರೆ ವಾಸಿಯಾಗುವುದು ಕಷ್ಟಕರ. ಹಾಗಾಗಿ ಸಾರ್ವಜನಿಕರು ನಾಯಿ ಕಡಿತದಿಂದ ನಿರ್ಲಕ್ಷ್ಯ ವಹಿಸಿದೆ ತಕ್ಷಣವೇ ಹತ್ತಿರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

ಜನವರಿ ಮಾಹೆಯಿಂದ ಆಗಸ್ಟ್ ರವರೆಗೆ 6005 ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಹೆಚ್ಚಾಗಿದೆ. ನಾಯಿ ಕಡಿತದ ಬಗ್ಗೆ ಜಾಗೃತಿ ಮೂಡಿಸಬೇಕು ಜೊತೆಗೆ ಆಸ್ಪತ್ರೆಗೆಗಳಲ್ಲಿ ಲಸಿಕೆ ಲಭ್ಯತೆ ಬಗ್ಗೆ ಆಗಿಂದಾಗ್ಗೆ ಖಚಿತ ಪಡಿಸಿಕೊಳ್ಳಿ ಎಂದರು.

ಪ್ರಸಕ್ತ ಸಾಲಿನ ಜನವರಿಯಿಂದ ಇಲ್ಲಿಯವರೆಗೆ 111 ಹಾವು ಕಡಿತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ನೆಲಮಂಗಲ ತಾಲ್ಲೂಕಿನ ಹಸಿರುವಳ್ಳಿ ಗ್ರಾಮದಲ್ಲಿ ಮೇ ತಿಂಗಳ 21 ರಂದು 5 ವರ್ಷದ ಮಗು ಹಾವು ಕಡಿತದಿಂದ ಸಾವನ್ನಪ್ಪಿದೆ. ಕಾರಣ ಮಗು ಮನೆಯ ಹೊರಗಡೆ ಬೆಳಗಿನ ಜಾವ ಆಟವಾಡುವಾಗ ಹಾವು ಕಚ್ಚಿರುವುದು ಗೊತ್ತಾಗಿದೆ. ತಕ್ಷಣ ಮನೆಯಲ್ಲಿ ಪೋಷಕರಿಗೆ ನನಗೆ ಏನೋ ಹುಳ ಕೈಗೆ ಕಚ್ಚಿದೆ ಎಂದು ಮಗು ಹೇಳಿದೆ. ಆದರೆ ಪೋಷಕರು ನಿರ್ಲಕ್ಷ್ಯ ತೋರಿದ್ದು ಮಗುವಿನ ಆರೋಗ್ಯದಲ್ಲಿ ಏರುಪೇರಾದಾಗ ಮಧ್ಯಾಹ್ನ 01 ಗಂಟೆಯ ನಂತರ ಆಸ್ಪತ್ರೆಗೆ ಕರೆದೊಕಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.

ಸಾರ್ವಜನಿಕರಿಗೆ ಆಗಿಂದಾಗ್ಗೆ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಿ ಆಗಿಂದಾಗ್ಗೆ ಜಾಗೃತಿ ಮೂಡಿಸಿ, ಸಾರ್ವಜನಿಕರು ಕೂಡ ನಾಯಿ, ಹಾವು ಕಡಿತದ ಬಗ್ಗೆ ನಿರ್ಲಕ್ಷ್ಯ ತೋರದೇ ತಕ್ಷಣವೇ ಆಸ್ಪತ್ರೆಗೆ ಹೋಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ॥ ಲಕ್ಕಾ ಕೃಷ್ಣಾ ರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ॥ ಹೇಮಾವತಿ ಎ.ವಿ, ಆರ್.ಸಿ.ಹೆಚ್ ಆದ ಡಾ॥ ಸಿಮಾ, ಡಾ॥ ವಿದ್ಯಾರಾಣಿ ಹಾಗೂ ಡಿವೈಎಸ್ಪಿ ರವಿ, ಜಿಲ್ಲಾ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು

ಮಾದಕ ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ: ಸಿಇಒ ಡಾ.ಕೆ.ಎನ್.ಅನುರಾಧ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್, 11 : ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಸಮಯದಲ್ಲಿ ಯುವಕರು ಹೆಚ್ಚಾಗಿ ಮಾದಕ ವಸ್ತುಗಳ ಗುಲಾಮರಾಗುತ್ತಿದ್ದಾರೆ, ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಮಾದಕ ವಸ್ತು ಮುಕ್ತ ಜಿಲ್ಲೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ಎನ್ ಅನುರಾಧ ಅವರು ಹೇಳಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಮಾದಕ ಮುಕ್ತ ಕರ್ನಾಟಕ ಅಭಿಯಾನದಡಿ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಶಾ ಮುಕ್ತ ಕರ್ನಾಟಕ ಅಭಿಯಾನದಡಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ಮಾದಕ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವುದು ನಮ್ಮ ಧ್ಯೇಯ. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಗೆ ಇಬ್ಬರು ಮಾಸ್ಟರ್ ತರಬೇತಿಗಳು ಇರುತ್ತಾರೆ, ಅವರು ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾದಕ ವಸ್ತು ನಿರ್ಮೂಲನೆಗೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾರೆ.

ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಬಳಸುವುದು ಕೂಡ ಒಂದು ಚಟವಾಗಿದ್ದು, ಮೊಬೈಲ್ ಇಲ್ಲದೆ ಜೀವಿಸುವುದು ಕಷ್ಟಕರವಾಗಿದೆ. ಮನುಷ್ಯನ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು ಹಾಗೂ ಹವ್ಯಾಸಗಳು ಸಹ ಮಾರಕ ಎಂದು ಹೇಳಿದರು.

ನಶಾ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಮನೋಚೈತನ್ಯ ಶಿಬಿರವನ್ನು ಹಮ್ಮಿಕೊಳ್ಳುಲಾಗುವುದು. ಜೊತೆಗೆ ಸಾರ್ವಜನಿಕರು ಮಾದಕ ವಸ್ತುಗಳ ಬಳಕೆಯನ್ನು ನಿಯಂತ್ರಿಸಲು ಜೊತೆಯಾಗಬೇಕು. ಮಾದಕ ವಸ್ತುಗಳ ಬಳಕೆ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದರು.

ಅಬಕಾರಿ ಇಲಾಖೆಯ ಡಿವೈಎಸ್ಪಿ ಧರಣಿ ಕುಮಾರ್ ಅವರು ಮಾತನಾಡಿ, ಮಾದಕ ವಸ್ತುಗಳು ವ್ಯಕ್ತಿಯ ದೇಹ ಮತ್ತು ಮೆದುಳನ್ನು ನಿರ್ವಹಿಸುವುದರಿಂದ ಆತ ಯಾರಿಗೆ ಏನು ಬೇಕಾದರು ಮಾಡಬಹುದು. ಯುವ ಸಮೂಹದವರು ಮೋಜಿಗಾಗಿ ಬಳಸಲು ಶುರು ಮಾಡುತ್ತಾರೆ, ಅದು ಕೊನೆಗೆ ಅವರ ಜೀವನದ ಅಂತ್ಯಕ್ಕೆ ಕೊಂಡೊಯ್ಯುತ್ತದೆ. ಮಾದಕ ವಸ್ತುಗಳಿಗಾಗಿ ಕಳ್ಳತನ, ಸುಲಿಗೆ ಮತ್ತು ಅಪರಾಧಗಳನ್ನು ಮಾಡುತ್ತಾರೆ.

ಮಾದಕ ವಸ್ತುಗಳ ಸೇವನೆಯಿಂದ ದೇಶದಲ್ಲಿ ಪ್ರತಿ ವರ್ಷ 33 ಲಕ್ಷ ಜನರು ಸಾಯುತ್ತಿದ್ದಾರೆ. ಎನ್.ಡಿ.ಪಿ.ಎಸ್ ಕಾಯ್ದೆ 1985 ರ ಪ್ರಕಾರ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಬೆಳೆಯುವುದು, ಮಾರಾಟ ಮಾಡುವುದು, ಖರೀದಿ ಮಾಡುವುದು, ಸಾಗಣೆ ಮಾಡುವುದು, ಸೇವನೆ ಮಾಡುವುದು ಮತ್ತು ಸಂಗ್ರಹಣೆ ಮಾಡುವುದು ನಿಷೇಧ ಎಂದು ಹೇಳುತ್ತದೆ. ಈ ರೀತಿ ಕಂಡುಬಂದರೆ ಗರಿಷ್ಠ 20 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷ ದಂಡ ವಿಧಿಸಲಾಗುತ್ತದೆ. ಹಾಗಾಗಿ ಸಾರ್ವಜನಿಕರು ಈ ರೀತಿಯ ಮಾದಕ ಮುಕ್ತ ಸಮಾಜವನ್ನು ನಿರ್ಮಿಸಲು ಜಾಗೃತಿ ಮೂಡಿಸುವ ಸಲುವಾಗಿ ನಮ್ಮೊಂದಿಗೆ ಸಹಕರಿಸಬೇಕು.

ಮಾನಸಿಕ ರೋಗ ತಜ್ಞ ಡಾ.ಗಿರೀಶ್ ಅವರು ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ನರ ಮಂಡಲ, ನರಕೋಶ, ಹೃದಯ, ಮೂತ್ರ ಪಿಂಡ, ಶ್ವಾಸಕೋಶ, ಕ್ಯಾನ್ಸರ್ ಗೆ ಸಂಬಂದಿಸಿದ ಕಾಯಿಲೆಗಳು ಉಲ್ಬಣವಾಗುತ್ತದೆ. ಹಾಗೇ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ, ಕೈ ಕಾಲು ನಡುಗುವುದು, ಮೂರ್ಛೆ ಹೋಗುವುದು, ಅತಿರೇಕದ ಚಟುವಟಿಕೆ, ತೂಕದಲ್ಲಿ ಏರಿಳಿತ, ನಿದ್ದೆಯಲ್ಲಿ ಏರುಪೇರು ಹಾಗೂ ಪ್ರಜ್ಞೆಯಿಲ್ಲದ ರೀತಿ ವರ್ತಿಸುವುದು ಹೀಗೆ ಹಲವಾರು ದುಷ್ಪರಿಣಾಮಗಳಿಗೆ ಒಳಗಾಗುತ್ತಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಮುಖ್ಯ ಯೋಜನಾಧಿಕಾರಿ ಕೆ.ಕೆ.ರಾಮಕೃಷ್ಣಯ್ಯ, ಯೋಜನಾ ನಿರ್ದೇಶಕರು ವಿಠ್ಠಲ್ ಕಾವ್ಳೆ, ಅಬಕಾರಿ ಇಲಾಖೆಯ ಸಿಬ್ಬಂದಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎನ್.ಆರ್.ಎಲ್.ಎಂ ನ ಸ್ವಯಂ ಸೇವಾ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.