ಆ ನೆನಪು…….
ವಿಜಯ ದರ್ಪಣ ನ್ಯೂಸ್….
ಆ ನೆನಪು…….
ನೆನಪಿನ ರಣಹದ್ದೊಂದು
ಬಸವಳಿದ ಹೃದಯವನ್ನು
ಮತ್ತೆ ಮತ್ತೆ ಕುಕ್ಕುತ್ತಲಿದೆ,
ಮುಂಜಾವಿನ ಅರೆ ನಿದ್ದೆಯ ಮಂಪರಿನಲ್ಲಿ,
ಶೌಚದ ಐಕಾಂತದಲ್ಲಿ,
ಬೆಳಗಿನ ವಾಯು ವಿಹಾರದಲ್ಲಿ,
ಉಪಹಾರದ ಎಲೆಯಲ್ಲಿ,
ಚೂಪಾದ ಉದ್ದನೆಯ ಕೊಕ್ಕಿನಲ್ಲಿ ಕುಟುಕುತ್ತಾ ಮನಸ್ಸು ಹಿಂಡುತ್ತಿದೆ,
ಸೂಜಿ ಮಲ್ಲಿಗೆಯ ಚೆಲುವಿನ,
ಸಾಸಿವೆಯಷ್ಟು ಸಣ್ಣದಾದ,
ಬೆಣ್ಣೆಯಷ್ಟು ಮೃದುವಾದ,
ಹೃದಯಯನ್ನು ನೆನಪೆಂಬ ರಣಹದ್ದು ಗಟ್ಟಿಯಾದ ತೀಕ್ಷ್ಣವಾದ ಕೊಕ್ಕಿನಿಂದ ಇರಿಯುತ್ತಿದೆ,
ಘಾಸಿಗೊಂಡ ಹೃದಯವೆಂದು ಪಾಪ ಅದಕ್ಕೇನು ಗೊತ್ತು.
ಬಗೆದು ತಿನ್ನುವುದು ಅದರ ಸಹಜ ಧರ್ಮ,
ಇಡೀ ದಿನದ ಕೆಲಸದಲ್ಲಿ,
ಇಳಿ ಸಂಜೆಯ ನೋಟದಲ್ಲಿ,
ಹಾಸಿಗೆಯ ಅನಾಥ ಪ್ರಜ್ಞೆಯಲ್ಲಿ,
ಚುಚ್ಚುತ್ತಿದೆ ನೆನಪಿನ ರಣಹದ್ದು,
ಹೇಳಲಾಗದು,
ಹೇಳದಿರಲಾಗದು,
ಸಹಿಸಲಾಗದು,
ಎದುರಿಸಲಾಗದ,
ಅಮಾಯಕ ಅಸಹಾಯಕ ಹೃದಯವದು,
ವಿರಹದ ವೇದನೆಯೋ,
ಪ್ರೀತಿಯ ವಂಚನೆಯೋ,
ನಂಬಿಕೆಯ ದ್ರೋಹವೋ,
ಆಂತರ್ಯದ ಬೇಗುದಿಯೋ,
ಒಡಲಾಳದ ಸಂಕಟವೋ,
ನೆನಪಿನ ರಣಹದ್ದಾಗಿ ಮತ್ತೆ ಮತ್ತೆ ಕುಕ್ಕುತ್ತಲಿದೆ.
ಹೊರಬರದ ದಾರಿ ಕಾಣದೆ,
ಒಳಗಿರುವ ಜಾಗ ಅರಿಯದೆ,
ಸಂಕಟದಿಂದ ವಿಲ ವಿಲನೆ ಒದ್ದಾಡುತ್ತಾ,
ಕೆಲವೊಮ್ಮೆ ಕಣ್ಣೀರಾಗಿ,
ಒಮ್ಮೊಮ್ಮೆ ಆಕ್ರೋಶವಾಗಿ,
ಆಗೊಮ್ಮೆ ಸಮಾಧಾನವಾಗಿ
ಮತ್ತೊಮ್ಮೆ ಹುಚ್ಚುಚ್ಚಾಗಿ,
ಅಕ್ಷರ ರೂಪದಲ್ಲಿ ನಿಮ್ಮ ಮುಂದೆ ಹರಿದಾಡುತ್ತಿದೆ.
ನೆನಪಿನ ರಣಹದ್ದನ್ನು ಓಡಿಸಲಾಗದೆ ,
ನೋವನ್ನು ಅನುಭವಿಸುತ್ತಾ,
ನಿಮ್ಮೊಂದಿಗೆ ಸದಾ ಹಂಚಿಕೊಳ್ಳುತ್ತಿರುವ,
ಅನಾಥ – ಅಜ್ಞಾತ,
ಹೃದಯ – ಮನಸ್ಸನ್ನು
ದಯವಿಟ್ಟು ಕ್ಷಮಿಸಿ.
ತುತ್ತು ಅನ್ನ ತಿನ್ನುವಾಗ ನಿನ್ನ ನೆನಪಾಗುತ್ತದೆ,
ಗುಟುಕು ನೀರು ಕುಡಿಯುವಾಗ ನಿನ್ನ ನೆನಪಾಗುತ್ತದೆ,
ಪ್ರತಿ ಉಸಿರಾಟದಲ್ಲೂ ನಿನ್ನ ನೆನಪಾಗುತ್ತದೆ,
ಬೆಳಕು ಹರಿಯುವಾಗ ನಿನ್ನ ನೆನಪಾಗುತ್ತದೆ,
ಕತ್ತಲು ಕವಿದಾಗಲೂ ನಿನ್ನ ನೆನಪಾಗುತ್ತದೆ,
ಪ್ರತಿ ಮಾತಿನಲ್ಲೂ ನಿನ್ನ ನೆನಪಾಗುತ್ತದೆ,
ಮೌನದಲ್ಲೂ ನಿನ್ನ ನೆನಪಾಗುತ್ತದೆ,
ಧ್ಯಾನದಲ್ಲೂ ನಿನ್ನದೇ ನೆನಪು,
ಹಾಡುವಾಗಲೂ ನಿನ್ನದೇ ನೆನಪು,
ಓದುವಾಗಲೂ ನಿನ್ನದೇ ನೆನಪು,
ಬರೆಯುವಾಗಲೂ ನಿನ್ನದೇ ನೆನಪು,
ಮನಸಿನಲ್ಲಿಯೂ ನಿನ್ನದೇ ನೆನಪು,
ಕನಸಿನಲ್ಲೂ ನಿನ್ನದೇ ನೆನಪು,
ನಗಲೂ ಕೂಡ ನಿನ್ನ ನೆನಪೇ ಕಾರಣ,
ಅಳಲೂ ಕೂಡ ನಿನ್ನ ನೆನಪೇ ಕಾರಣ,
ಅದಕ್ಕೆ,
ನಿನ್ನ ನೆನಪನ್ನು ನೆನಪಿನಿಂದಲೇ ಅಳಿಸಿಹಾಕಬೇಕಿದೆ,
ನಿನ್ನ ನೆನಪನ್ನು ನೆನಪಿನಿಂದಲೇ ಕೊಲ್ಲಬೇಕಿದೆ,
ನಿನ್ನ ನೆನಪನ್ನು ನೆನಪಿನ ಮನಃ ಪಟಲದಿಂದ ನಾಶ ಮಾಡಬೇಕಿದೆ,
ನಿನ್ನ ನೆನಪೇ ನನ್ನ ಯಶಸ್ಸಿನ ನೆಪವಾಗಬೇಕಿದೆ,
ಆ ನೆನಪೇ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451……
9844013068……