ಇಂಡಿಗೋ ಅವ್ಯವಸ್ಥೆ….. ನಾವೂ ಜವಾಬ್ದಾರರು……
ವಿಜಯ ದರ್ಪಣ ನ್ಯೂಸ್…
ಇಂಡಿಗೋ ಅವ್ಯವಸ್ಥೆ…..
ನಾವೂ ಜವಾಬ್ದಾರರು……

ವೇಗ, ಸ್ಪರ್ಧೆ, ಶೀಘ್ರ ಫಲಿತಾಂಶದ ನಿರೀಕ್ಷೆ, ದುರಾಸೆ, ತಾಳ್ಮೆ ಇಲ್ಲದಿರುವುದು, ವಿವೇಚನೆ ಮತ್ತು ಪ್ರಬುದ್ಧತೆ ಕಳೆದುಕೊಂಡಿರುವುದು, ಉದಾಸೀನತೆ, ಸ್ವಾರ್ಥ, ಸಮಗ್ರ ಚಿಂತನೆಯ ಕೊರತೆ, ಆಡಳಿತಗಾರರ ಅವಾಸ್ತವಿಕ ನಿರ್ಧಾರಗಳು, ಭದ್ರತೆಯ ಬಗೆಗಿನ ಆತಂಕ ಈ ಎಲ್ಲವುಗಳ ಒಟ್ಟು ಮೊತ್ತವೇ ವಿಮಾನಯಾನ ಸಂಸ್ಥೆ ಇಂಡಿಗೋ ಅವಾಂತರ……
ಈ ರೀತಿಯ ಅವಾಂತರಗಳು ದಿಢೀರ್ ಎಂದು ಉದ್ಭವವಾದಂತೆ ಮೇಲ್ನೋಟಕ್ಕೆ ಅನಿಸಿದರೂ ಇದರ ಹಿಂದೆ ತುಂಬಾ ಕಾಲದಿಂದ ಬೆಳೆದು ಬಂದ ಅಧಿಕಾರಿಗಳ ಮಾನಸಿಕ ಸ್ಥಿತಿ, ಆಡಳಿತ ಅವ್ಯವಸ್ಥೆ ಮತ್ತು ನಾಗರಿಕ ಪ್ರಜ್ಞೆಯ ಕೊರತೆಯಿಂದ ಉಂಟಾದ ಉದಾಸೀನತೆ ಎಲ್ಲವೂ ಕಾರಣವಾಗಿರುತ್ತದೆ.
ಈ ತಕ್ಷಣಕ್ಕೆ ಪ್ರಯಾಣಿಕರಿಗೆ ಆದ ಅನೇಕ ರೀತಿಯ ತೊಂದರೆಗಳು, ಅವರು ಪ್ರಯಾಣಿಸಲು ಇದ್ದ ಬಹಳ ಮಹತ್ವದ ಕಾರಣಗಳು, ಅದನ್ನು ತಲುಪಲಾಗದ ಅಸಹಾಯಕತೆ, ಕೋಪ, ಆಕ್ರೋಶ, ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ ಮತ್ತು ಬೇಜವಾಬ್ದಾರಿತನ ಇವುಗಳನ್ನೇ ಇಡೀ ದೇಶದಾದ್ಯಂತ ಚರ್ಚಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ, ಮಾಧ್ಯಮಗಳಲ್ಲೂ ಇದೇ ಮುಖ್ಯ ವಿಷಯ.
ಭಾರತದ ವಿಮಾನಯಾನ ಕ್ಷೇತ್ರ ಹಾಗೋ ಹೀಗೋ ಶ್ರೀಮಂತರ ಪ್ರಯಾಣದ ಮಾಧ್ಯಮವಾಗಿಯೇ ಮುಂದುವರಿಯುತ್ತಿದ್ದ ಕಾಲದಲ್ಲಿ ಕ್ಯಾಪ್ಟನ್ ಗೋಪಿನಾಥ್ ಅವರ ಏರ್ ಡೆಕ್ಕನ್ ಎಂಬ ವಿಮಾನಯಾನ ಸಂಸ್ಥೆ ಪ್ರಾರಂಭವಾಗಿ ಈ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ಕಾರಣವಾಯಿತು. ವಿಮಾನ ಪ್ರಯಾಣದ ಬೆಲೆಯಲ್ಲಿ ಸ್ಪರ್ಧೆ ಉಂಟಾಗಿ ಸಾಕಷ್ಟು ಏರಿಳಿತಗಳನ್ನು ಕಾಣಬೇಕಾಯಿತು. ಒಂದು ರೀತಿಯಲ್ಲಿ ವಿಮಾನ ಪ್ರಯಾಣ ಸಾಮಾನ್ಯ ಜನರಿಗೂ ಕೈಗೆಟಕುವಂತೆ ಪರಿವರ್ತನೆ ಆದರೂ ಸಹ, ಇದೇ ಕಾರಣದಿಂದ ಕೆಲವು ಹೊಸ ವಿಮಾನ ಸಂಸ್ಥೆಗಳು ಹುಟ್ಟಿದರೂ ಕೂಡ, ಇದೇ ಕಾರಣದಿಂದ ವಿಮಾನಯಾನ ಕ್ಷೇತ್ರದಲ್ಲಿ ಸಾಕಷ್ಟು ಆರ್ಥಿಕ ತೊಂದರೆಗಳು, ಏರಿಳಿತಗಳು, ಭದ್ರತಾ ಲೋಪಗಳು, ಗುಣಮಟ್ಟ ಕುಸಿತ ಸಹ ಉಂಟಾಯಿತು.
ಏರ್ ಡೆಕ್ಕನ್ ಸಂಸ್ಥೆಯನ್ನು ವಿಜಯ್ ಮಲ್ಯ ಅವರ ಕಿಂಗ್ ಫಿಶರ್ ಸಂಸ್ಥೆ ಖರೀದಿ ಮಾಡಿತು. ಮುಂದೆ ಎರಡೂ ಸಂಸ್ಥೆಗಳು ಸಾಲದ ಸುಳಿಗೆ ಸಿಲುಕಿ ಮುಚ್ಚಿ ಹೋದವು. ಇದರ ಜೊತೆ ಏರ್ ಸಹಾರ, ಜೆಟ್ ಏರ್ ವೇಸ್ ಸಹ ಮಾರಾಟವಾದವು. ಅಂದರೆ ವಿಮಾನಯಾನ ಕ್ಷೇತ್ರದಲ್ಲಿ ಸ್ಪರ್ಧೆ ಅನಾರೋಗ್ಯಕರವಾಗಿ ವ್ಯವಸ್ಥೆ ಕುಸಿಯಿತು.
ತದನಂತರದಲ್ಲಿ ಒಂದೆರಡು ವಿಮಾನ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಸ್ಥಿರವಾಗಿ ನಿಲ್ಲುವ ಪ್ರಯತ್ನ ಮಾಡಿದವು. ಅಂತಹ ಒಂದು ಸಂಸ್ಥೆ ಇಂಡಿಗೋ. ಅದು ಉತ್ತಮವಾಗಿಯೇ ಬೆಳೆಯಿತು. ಈ ಮಧ್ಯೆ ಸರ್ಕಾರಿ ಏರ್ ಇಂಡಿಯಾ ಟಾಟಾ ಅವರ ಪಾಲಾಯಿತು.
ಅಹ್ಮದಾಬಾದ್ ಭೀಕರ ವಿಮಾನ ದುರಂತದ ನಂತರ ಭಾರತೀಯ ವಿಮಾನ ನಿಯಂತ್ರಣ ಪ್ರಾಧಿಕಾರ ರಕ್ಷಣೆಯ ದೃಷ್ಟಿಯಿಂದ ವಿವಿಧ ರೀತಿಯ ನೀತಿ ನಿಯಮಗಳನ್ನು ಜಾರಿ ಮಾಡಿದ್ದು, ಅದು ಕಾರ್ಯರೂಪಕ್ಕೆ ಬರುವ ಹಂತದಲ್ಲಿ ಸದ್ಯಕ್ಕೆ ಭಾರತದ ದೊಡ್ಡ ವಿಮಾನಯಾನ ಕಂಪನಿಗಳಲ್ಲಿ ಒಂದಾದ ಇಂಡಿಗೋ ಸಂಸ್ಥೆ ಸ್ವಲ್ಪ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಾಗಿ ವರ್ತಿಸಿದ್ದರಿಂದ ಅದನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಲಿಲ್ಲ.
ಕಳೆದ ಒಂದು ವಾರದಿಂದ ಸುಮಾರು 2500ಕ್ಕೂ ಹೆಚ್ಚು ಟ್ರಿಪ್ ಗಳನ್ನು ಕ್ಯಾನ್ಸಲ್ ಮಾಡಲಾಯಿತು. ಅದು ಒಂದು ರೀತಿ ಅನಿವಾರ್ಯವೂ ಆಗಿತ್ತು. ಏಕೆಂದರೆ ಯಾವುದೇ ಕಂಪನಿ ಉದ್ದೇಶಪೂರ್ವಕವಾಗಿಯೇ ಇಷ್ಟು ದೊಡ್ಡ ಟ್ರಿಪ್ಗಳನ್ನು ಕ್ಯಾನ್ಸಲ್ ಮಾಡಲು ಇಷ್ಟಪಡುವುದಿಲ್ಲ. ಅಂದರೆ ಸರ್ಕಾರದ ಆದೇಶದಲ್ಲಿಯೇ ಅನುಷ್ಠಾನ ಯೋಗ್ಯವಲ್ಲದ ಅಥವಾ ಈ ಕ್ಷಣಕ್ಕೆ ಪ್ರಾಯೋಗಿಕವಲ್ಲದ ನೀತಿ ನಿಯಮಗಳನ್ನು ರೂಪಿಸಲಾಗಿದೆ ಎಂದಾಯಿತು. ಏಕೆಂದರೆ ವಿಮಾನ ರದ್ದಾದ ಕೆಲವೇ ಗಂಟೆಗಳಲ್ಲಿ ಈ ನಿಯಮವನ್ನು ಸಡಿಲಗೊಳಿಸಿ ಮುಂದಿನ ಫೆಬ್ರವರಿಯವರೆಗೂ ಮುಂದೂಡಲಾಯಿತು. ಪ್ರಯಾಣಿಕರು ಸಹ ತಾಳ್ಮೆ ಕಳೆದುಕೊಂಡರು.
ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಭಾರತದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅತ್ಯಂತ ಕ್ರಮಬದ್ಧವಾದ, ಪ್ರಾಮಾಣಿಕವಾದ, ದಕ್ಷವಾದ ಆಡಳಿತ ವ್ಯವಸ್ಥೆ ರೂಪಗೊಂಡಿದೆ ಎನ್ನುವ ಭ್ರಮೆಗೆ ಒಳಗಾಗಬಾರದು. ಇಲ್ಲಿ ಖಂಡಿತವಾಗಲೂ ಕೆಲವೇ ಕೆಲವು ಸಂಸ್ಥೆಗಳನ್ನು ಹೊರತುಪಡಿಸಿದರೆ ಇತರ ಕ್ಷೇತ್ರಗಳಲ್ಲಿ ಸದಾಕಾಲ ಅವ್ಯವಸ್ಥೆ ತಾಂಡವವಾಡುತ್ತಿರುತ್ತದೆ. ಅದು ಕೆಲವೊಮ್ಮೆ ಈ ರೀತಿಯಲ್ಲಿ ಸ್ಪೋಟಗೊಂಡಾಗ ಸಾಕಷ್ಟು ತಲ್ಲಣಗಳು ಉಂಟಾಗುತ್ತದೆ. ಇದು ಒಂದು ರೀತಿಯಲ್ಲಿ ನಿರೀಕ್ಷಿತವೇ.
ಇಂತಹ ಸಂದರ್ಭದಲ್ಲಿ ಜನರು ಸಹ ಸಾಧ್ಯವಾದಷ್ಟು ತಾಳ್ಮೆಯಿಂದ, ಪ್ರಬುದ್ಧತೆಯಿಂದ ವರ್ತಿಸಬೇಕು. ಒಂದಷ್ಟು ಕಷ್ಟ, ನಷ್ಟ, ನೋವು, ಅವ್ಯವಸ್ಥೆ ಆಗುವುದು ಸಹಜ. ಆದರೆ ನಮ್ಮ ಪ್ರತಿಕ್ರಿಯೆಗಳು ಸಹ ಸಹನೀಯವಾಗಿರಬೇಕು. ಮಾಧ್ಯಮಗಳ ಪ್ರಚೋದನೆಗೆ ಒಳಗಾಗಿ, ನಮಗಾದ ನೋವಿಗೆ ಹುಚ್ಚುಚ್ಚಾಗಿ ಪ್ರತಿಕ್ರಿಯೆ ನೀಡಬಾರದು. ಸಾಧ್ಯವಾದಷ್ಟು ವೈಯಕ್ತಿಕ ಮಟ್ಟದಲ್ಲಿಯೇ ಸಮಸ್ಯೆಗಳನ್ನು ಅನಿವಾರ್ಯತೆಯನ್ನು, ಆಕಸ್ಮಿಕಗಳನ್ನು ಸಹಿಸಿಕೊಂಡು, ಜೊತೆಗೆ ಪ್ರತಿಭಟನೆಯನ್ನೂ ದಾಖಲಿಸಬೇಕು.
ಆದರೆ ಅಷ್ಟರ ಮಟ್ಟಿಗಿನ ಪ್ರತಿಕ್ರಿಯೆಗಳು ಸರ್ಕಾರದಲ್ಲೂ, ವಿಮಾನಯಾನ ಸಂಸ್ಥೆಯಲ್ಲೂ ಆ ಸಂವೇದನೆಯ ಇರುವುದಿಲ್ಲ. ವ್ಯವಸ್ಥೆ ಹೇಗಾಗಿದೆ ಎಂದರೆ ಕೂಗಾಡಿ, ರಂಪಾಟ ಮಾಡಿ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೆಟ್ಟದಾಗಿ ವರ್ತಿಸಿದರೆ ಮಾತ್ರ ಇನ್ನೊಂದು ಕಡೆ ಪ್ರತಿಕ್ರಿಯೆ ಸಿಗುತ್ತದೆ. ಸಹಜವಾಗಿ ತಾಳ್ಮೆಯಿಂದ ಸಮಸ್ಯೆ ಬಗೆಹರಿಯಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿ ಉಂಟಾಗಿದೆ. ಇದು ದೊಡ್ಡ ದುರಂತ.
ಈಗ ವಿಮಾನಯಾನ ಕ್ಷೇತ್ರದಲ್ಲಿ ಈ ರೀತಿಯ ಅವ್ಯವಸ್ಥೆ ಉಂಟಾಗಿದೆ. ಮುಂದೆ ಇನ್ನೂ ಬೇರೆ ಬೇರೆ ಕ್ಷೇತ್ರಗಳಲ್ಲಿ, ಬೇರೆ ಬೇರೆ ರೂಪದಲ್ಲಿ ಇದೇ ರೀತಿಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಮಾಡಲು ಪ್ರತಿಯೊಬ್ಬ ಪ್ರಜೆಯೂ ಪ್ರಯತ್ನಿಸಬೇಕು. ಈಗ ನೋಡಿ ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವವರು ಇರುವುದರಲ್ಲಿ ವಿದ್ಯಾವಂತ ಮತ್ತು ಶ್ರೀಮಂತ ವರ್ಗ. ಅವರು, ಅವರಿಗೆ ತೊಂದರೆಯಾದಾಗ ದೊಡ್ಡಮಟ್ಟದ ಪ್ರತಿಭಟನೆ ಮಾಡುತ್ತಾರೆ. ಆದರೆ ವ್ಯವಸ್ಥೆಯಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರ, ಕೊಲೆ, ವಂಚನೆ, ಭ್ರಷ್ಟಾಚಾರ, ಆಡಳಿತ ಅವ್ಯವಸ್ಥೆಯ ಬಗ್ಗೆ ಒಮ್ಮೆಯೂ ದ್ವನಿ ಎತ್ತುವುದಿಲ್ಲ. ಇದು ಈ ವ್ಯವಸ್ಥೆಯ ಮತ್ತೊಂದು ಮುಖ.
ಆದ್ದರಿಂದ ದುರ್ಘಟನೆಗಳು ನಡೆದ ಮೇಲೆ ಪ್ರತಿಭಟಿಸುವುದಕ್ಕಿಂತ ಮುಂಜಾಗ್ರತೆವಹಿಸಿ ಈ ವ್ಯವಸ್ಥೆಯ ಅನ್ಯಾಯಗಳನ್ನು ಪ್ರಶ್ನಿಸಬೇಕಾದದ್ದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಯಾರೋ ಕೆಲವರು ಮಾತ್ರ ಪ್ರತಿಭಟನೆ ಗುತ್ತಿಗೆ ಪಡೆದಂತೆ ವರ್ತಿಸುವುದಕ್ಕಿಂತ ಪ್ರತಿಯೊಬ್ಬ ನಾಗರೀಕರು ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದರೆ, ಮುಂದಿನ ದಿನಗಳು ಸಹನೀಯವಾಗಬಹುದು.
ಕೇವಲ ವಿಮಾನಯಾನ ಮಾತ್ರವಲ್ಲ, ಪ್ರತಿ ವಿಷಯದ ಬಗ್ಗೆಯೂ ಅಂದರೆ ನೀರು, ಆಹಾರ, ಗಾಳಿ, ಮೌಲ್ಯಗಳ ಬಗ್ಗೆ ಇಡೀ ಸಮಾಜ ಸದಾ ಜಾಗೃತವಾಗಿದ್ದರೆ ಮಾತ್ರ ವ್ಯವಸ್ಥೆ ಸುಧಾರಣೆಯಾಗುತ್ತದೆ. ಇಲ್ಲದಿದ್ದರೆ ಒಂದಲ್ಲ ಒಂದು ಕ್ಷೇತ್ರದಲ್ಲಿ ಈ ಅವ್ಯವಸ್ಥೆಗಳು ನಡೆಯುತ್ತಲೇ ಇರುತ್ತದೆ, ಜನರ ಕಷ್ಟ ಹೀಗೆ ಮುಂದುವರೆಯುತ್ತಲೇ ಇರುತ್ತದೆ. ಅಸಹಾಯಕತೆಯಿಂದ ನೋಡುತ್ತಾ ಮೂಕರೋದನೆ ಅನುಭವಿಸುವುದು ಮಾತ್ರ ನಮ್ಮ ಪಾಲಿಗೆ ಉಳಿಯುತ್ತದೆ. ದಯವಿಟ್ಟು ಯೋಚಿಸಿ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451….
9844013068……
