ಬಯಲುಸೀಮೆಯ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು: ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
ವಿಜಯ ದರ್ಪಣ ನ್ಯೂಸ್…
ಬಯಲುಸೀಮೆಯ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು: ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಶಿಡ್ಲಘಟ್ಟ : ಸತತ ಬರಗಾಲದಿಂದ ತತ್ತರಿಸುತ್ತಿರುವ ಚಿಕ್ಕಬಳ್ಳಾಪುರ ,ಕೋಲಾರ ಜಿಲ್ಲೆಗಳು ಸೇರಿದಂತೆ ಬಯಲುಸೀಮೆಯ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಜಗದ್ಗುರು
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭರವಸೆ ನೀಡಿದರು.
ತಾಲ್ಲೂಕಿನ ಆನೂರು ಗ್ರಾಮದ ದೇವರಾಜ್ ಹಾಗು ಸಿಂಗವಾರ ನಾಗರಾಜ್ ಅವರ ದಾಳಿಂಬೆ ತೋಟಕ್ಕೆ ಭೇಟಿ ನೀಡಿದ್ದ ವೇಳೆ ರೈತರ ಮನವಿಗೆ ಸ್ಪಂದಿಸಿ ಅವರು ಮಾತನಾಡಿದರು.
ಕೋಲಾರ ಚಿಕ್ಕಬಳ್ಳಾಪುರ ಸೇರಿದಂತೆ ಬಯಲುಸೀಮೆಯ ರೈತರು ಅನುಭವಿಸುತ್ತಿರುವ ಸಂಕಷ್ಟದ ಕುರಿತು ಸರ್ಕಾರದ ಗಮನ ಸೆಳೆಯುವ ಜೊತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ರೈತರ ತೋಟದಲ್ಲಿ ಬಾಗವಹಿಸಿದ್ದ ರೈತರು ಹೋರಾಟಕ್ಕೆ ಮಠದ ಬೆಂಬಲ ದೊರೆತಿದ್ದು, ಈ ಭಾಗದ ರೈತರಿಗೆ ಮತ್ತು ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಮತ್ತೊಮ್ಮೆ ತಮ್ಮ ನೇತೃತ್ವದಲ್ಲಿ ಹೋರಾಟ ನಡೆಯಬೇಕು ಸರ್ಕಾರದ ಕಣ್ಣು ತೆರೆಸುವಂತಾಗಬೇಕೆಂದು ರೈತರು ಸ್ವಾಮೀಜಿ ಅವರಲ್ಲಿ ಮನವಿ ಮಾಡಿದರು.
ಈ ವೇಳೆ ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಯಲು ರೈತರು ಅನುಭವಿಸುತ್ತಿರುವ ಸಂಕಷ್ಟಗಳು ಮತ್ತು ಕೀಟಬಾಧೆಗಳು ಸರ್ಕಾರದ ನೀತಿ ಎಲ್ಲಾ ವಿಚಾರಗಳ ಬಗ್ಗೆ ಶ್ರೀಗಳವರಲ್ಲಿ ರೈತರು ಮನವರಿಕೆ ಮಾಡಿಕೊಟ್ಟರು.
ದೇಶದಲ್ಲಿ ಮಹಾರಾಷ್ಟ್ರ, ಗುಜರಾತ್ ಹಾಗು ಕರ್ನಾಟಕದಲ್ಲಿ ಹೆಚ್ಚು ದಾಳಿಂಬೆಯನ್ನು ಬೆಳೆಯಲಾಗುತ್ತಿದೆ, ರೈತರ ಪಾಲಿಗೆ ಈ ಬೆಳೆ ವರದಾನವಾಗಿದ್ದು, ಉತ್ಪಾದನೆ ಮಾಡುವ ರೈತರಿಗೆ ಇದು ಲಾಭದಾಯಕ ಬೆಳೆಯೂ ಸಹ ಆಗಿದೆ , ನಿರ್ವಹಣೆ ಮಾತ್ರ ಸೂಕ್ಷ್ಮವಾಗಿರುತ್ತದೆ ಎಂದು ರೈತರು ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಕರ್ನಾಟಕ ದಾಳಿಂಬೆ ಬೆಳೆಗಾರರ ಸಂಘದ ಉಪಾಧ್ಯಕ್ಷ ಸಿಂಗವಾರ ನಾಗರಾಜ್, ಖಜಾಂಚಿ ಮುತ್ತುಕೂರ್ ರಾಮಚಂದ್ರರೆಡ್ಡಿ, ಶಾಶ್ವತ ನೀರಾವರಿ ಸಮಿತಿ ಜಿಲ್ಲಾ ಅಧ್ಯಕ್ಷ ಆಂಜನೇಯ ರೆಡ್ಡಿ, ಉಪಾಧ್ಯಕ್ಷ ಮಳ್ಳೂರುಹರೀಶ್, ಪ್ರಗತಿಪರ ರೈತರಾದ ಸಿಂಧನೂರು ನಾಗರಾಜ್, ಆನೂರುಶ್ರೀನಿವಾಸ್, ನಾರಾಯಣಪುರ ಆನಂದ್, ಮುಖಂಡರಾದ ನಾರಾಯಣಸ್ವಾಮಿ, ಜೆ.ವಿ.ಸುರೇಶ್, ನವೀನ್,ಯಲಿಯೂರು ಲೋಕೇಶ್,ಹಾರೋಹಳ್ಳಿ ಚಂದ್ರಣ್ಣ,ಮಂಜು ಮುಂತಾದವರು ಹಾಜರಿದ್ದರು.
