ವಿಜಯ ದರ್ಪಣ ನ್ಯೂಸ್…..
ಶಿಡ್ಲಘಟ್ಟ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಕಾಮಗಾರಿ ಪೂರ್ಣ: ಆಯುಕ್ತೆ ಸಿ.ಟಿ. ಶಿಲ್ಪಾ ನಾಗ್

ಶಿಡ್ಲಘಟ್ಟ : ರಾಜ್ಯದಲ್ಲಿ ರೇಷ್ಮೆ ಬೆಳೆಗಾರರಿಗೆ ಆಧುನಿಕ ಮತ್ತು ಸುಧಾರಿತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಎರಡು ಪ್ರಮುಖ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆಗಳನ್ನು ನಿರ್ಮಿಸಲಾಗುತ್ತಿದೆ. ಅವುಗಳಲ್ಲಿ ಒಂದು ಶಿಡ್ಲಘಟ್ಟದಲ್ಲಿ ನಿರ್ಮಾಣವಾಗುತ್ತಿದ್ದು, ಮತ್ತೊಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದು ರಾಜ್ಯ ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತೆ ಹಾಗೂ ರೇಷ್ಮೆ ನಿರ್ದೇಶಕಿ ಸಿ.ಟಿ.ಶಿಲ್ಪಾ ನಾಗ್ ತಿಳಿಸಿದರು.
ನಗರದ ಸಮೀಪದ ಹನುಮಂತಪುರ ಬಳಿಯ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮೂಲ ಯೋಜನೆಯ ಪ್ರಕಾರ ಈ ಕಾಮಗಾರಿಯನ್ನು 36 ತಿಂಗಳಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿತ್ತು, ಆದರೆ ಕಾಮಗಾರಿಯನ್ನು ವೇಗಗೊಳಿಸಿ 24 ರಿಂದ 26 ತಿಂಗಳೊಳಗೆ ಪೂರ್ಣಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಕಾಮಗಾರಿಯನ್ನು ನಿಗಧಿತ ಅವಧಿಗೆ ಮೋದಲೇ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದ್ದು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ಈ ಎರಡೂ ಮಾರುಕಟ್ಟೆಗಳು ತಲಾ ಸುಮಾರು 200 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಹತ್ವದ ಯೋಜನೆಗಳಾಗಿವೆ ಎಂದು ಅವರು
ಪ್ರಸ್ತುತ ಶಿಡ್ಲಘಟ್ಟದ ರೇಷ್ಮೆಗೂಡು ಮಾರುಕಟ್ಟೆಯ ಸಾಮರ್ಥ್ಯ ಸುಮಾರು 50 ಟನ್ ಮಾತ್ರವಿದ್ದು, ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಮಾರುಕಟ್ಟೆಯನ್ನು 120 ಟನ್ ಸಾಮರ್ಥ್ಯ ಹೊಂದುವಂತೆ ವಿನ್ಯಾಸಗೊಳಿಸಲಾಗುತ್ತಿದೆ ಇದರಿಂದ ಹೆಚ್ಚಿನ ಪ್ರಮಾಣದ ರೇಷ್ಮೆಗೂಡುಗಳ ವಹಿವಾಟು ಸುಗಮವಾಗಿ ನಡೆಯಲು ಸಾಧ್ಯವಾಗಲಿದೆ ಎಂದು ಅವರು ವಿವರಿಸಿದರು.
ಇದರೊಂದಿಗೆ ಭಾರತದಲ್ಲೇ ಮೊದಲ ಬಾರಿಗೆ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಆಟೋಮೇಟೆಡ್ ಕನ್ವೇಯರ್ ಸಿಸ್ಟಮ್ ಅಳವಡಿಸಲಾಗುತ್ತಿದ್ದು, ಇದರ ಮೂಲಕ ರೇಷ್ಮೆಗೂಡುಗಳ ಸಾಗಣೆ ಹಾಗೂ ಹರಾಜು ಪ್ರಕ್ರಿಯೆ ಹೆಚ್ಚು ವೇಗವಾಗಿ ಮತ್ತು ಪಾರದರ್ಶಕವಾಗಿ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪ್ರಭು ಜಿ.ಮಾತನಾಡಿ ಇಲ್ಲಿ ನಿರ್ಮಾಣವಾಗುತ್ತಿರುವ ಹೈಟೆಕ್ ರೇಷ್ಮೆಗೂಡು
ಮಾರುಕಟ್ಟೆ ಮುಂದಿನ ದಿನಗಳಲ್ಲಿ ದೇಶದ ಮಟ್ಟದಲ್ಲಿ ಮಾದರಿಯಾಗುವಂತಹ ಕೇಂದ್ರವಾಗಿ ಬೆಳೆಯಲಿದೆ ಎಂದು ನುಡಿದರು.
ಶಿಡ್ಲಘಟ್ಟ ನಗರವು ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವುದರಿಂದ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯು ಕೈಗಾರಿಕೆಗಳ ಬೆಳವಣಿಗೆಗೆ ಉತ್ತಮ ಅವಕಾಶ ಹೊಂದಿರುವುದರಿಂದ ಇಲ್ಲಿ ನಿರ್ಮಾಣವಾಗುತ್ತಿರುವ ಈ ಮಾರುಕಟ್ಟೆ ಭವಿಷ್ಯದಲ್ಲಿ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದರು.
ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿಗಳ ಆಶಯದಂತೆ ಈ ಮಾರುಕಟ್ಟೆ ರಾಷ್ಟ್ರಕ್ಕೆ ಮಾದರಿಯಾಗುವಂತೆ ರೂಪುಗೊಳ್ಳಬೇಕು ಎಂಬ ಉದ್ದೇಶದಿಂದ ಕಾಮಗಾರಿಗಳು ನಡೆಯುತ್ತಿವೆ. ಯೋಜನೆಯಲ್ಲಿ ಯಾವುದೇ ಕೊರತೆಗಳಿದ್ದರೆ ಅವುಗಳನ್ನು ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ ಎಂದರು.
ಜಿಲ್ಲಾಡಳಿತದ ವತಿಯಿಂದ ಇಲಾಖೆಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಿದ್ಧತೆ ಇದೆ ಜಮೀನುಗಳ ಅವಶ್ಯಕತೆ ಸೇರಿದಂತೆ ಬೇರೆ ಯಾವುದೇ ಪೂರಕ ವ್ಯವಸ್ಥೆಗಳ ಅಗತ್ಯವಿದ್ದರೂ ಜಿಲ್ಲಾಡಳಿತ ಸಹಕಾರ ನೀಡಲಿದೆ ,ಈಗಾಗಲೇ ಕಾಮಗಾರಿಗಳು ಗುಣಮಟ್ಟದಿಂದ ಹಾಗೂ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಣ್ಣಪುಟ್ಟ ಒತ್ತುವರಿಗಳನ್ನು ಕೂಡ ತೆರವುಗೊಳಿಸಲಾಗಿದೆ ಎಂದು ಹೇಳಿದರು.
ಗ್ರಾಮಸ್ಥರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸ್ಮಶಾನ ಭೂಮಿಯ ಅವಶ್ಯಕತೆ ಇದ್ದರೆ ಹೆಚ್ಚುವರಿ ಸ್ಮಶಾನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ,ಈಗಿರುವ ಸಮಾಧಿಗಳನ್ನು ಉಳಿಸಿಕೊಂಡು ಗ್ರಾಮಸ್ಥರ ಅಭಿಪ್ರಾಯ ಮತ್ತು ಅಗತ್ಯಗಳನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಸಿ.ಇ.ಒ. ಡಾ.ವೈ.ನವೀನ್ ಭಟ್, ತಹಶೀಲ್ದಾರ್ ಗಗನಸಿಂಧು, ರೇಷ್ಮೆ ಜಂಟಿ ನಿರ್ದೇಶಕ ವೈ.ಟಿ.ತಿಮ್ಮಯ್ಯ, ಜಂಟಿ ನಿರ್ದೇಶಕ ಕೆ.ಎನ್.ರವಿ, ರೇಷ್ಮೆ ಉಪ ನಿರ್ದೇಶಕರಾದ ಮಾರಪ್ಪ ಬೀರಲದಿನ್ನೆ, ಉಮೇಶ್, ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ರಂಗಪ್ಪ, ರೇಷ್ಮೆ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ,ಮದನ್ ಗೋಪಾಲ್ ರೆಡ್ಡಿ, ಜಯಶಂಕರ್, ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಾಥರೆಡ್ಡಿ ,
ಸ್ಥಳೀಯ ಆಡಳಿತಾಧಿಕಾರಿಗಳು, ರೇಷ್ಮೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.










