ವಿಜಯ ದರ್ಪಣ ನ್ಯೂಸ್…..
ಗ್ರಾಮ ಪಂಚಾಯತಿಗಳಲ್ಲಿ ಆಡಳಿತ ಅಧಿಕಾರಿಗಳನ್ನು ಹಿಂಪಡೆದು ಹಾಲಿ ಸದಸ್ಯರನ್ನೇ ಮುಂದುವರೆಸುವಂತೆ ಆಗ್ರಹಿಸಿ ಮೈಸೂರು ಜಿಲ್ಲೆ ಗ್ರಾಮ ಪಂಚಾಯಿತಿಗಳ ಒಕ್ಕೂಟದ ಪ್ರತಿಭಟನೆ

ಮೈಸೂರು: ತಾಂಡವಪುರ ಜನವರಿ 23 ಗ್ರಾಮ ಪಂಚಾಯಿತಿಗಳಲ್ಲಿ ಹಾಲಿ ಇರುವ ಆಡಳಿತ ಮಂಡಳಿಯನ್ನೇ ಮುಂದುವರೆಸಿ ಆಡಳಿತಾಧಿಕಾರಿ ನೇಮಕ ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮೈಸೂರು ಜಿಲ್ಲಾಮಹಾ ಒಕ್ಕೂಟದಿಂದ ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಗ್ರಾಮ ಪಂಚಾಯಿತಿಗಳು ತಳ ಹಂತದ ಗ್ರಾಮಗಳ ಆಡಳಿತ ಕೇಂದ್ರವಾಗಿವೆ. ಸಂವಿಧಾನದ ಆಶಯ ಜಾರಿಗೊಳಿಸುವಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಹಿಂದುಳಿದ ವರ್ಗ, ಶೋಷಿತ ಸಮುದಾಯಗಳು ಹಾಗೂ ಮಹಿಳೆಯರು ರಾಜಕೀಯ ಅಧಿಕಾರ ಬಳಸುವ ಅವಕಾಶ ನೀಡಿದೆ. ಈಗಾಗಲೇ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಸಕಾಲಕ್ಕೆ ಚುನಾವಣೆ ನಡೆಯದೆ ೫,೦೦೦ಕ್ಕೂ ಹೆಚ್ಚು ಗ್ರಾಮೀಣ ನಾಯಕತ್ವದ ಅವಕಾಶವನ್ನು ಕಸಿದು ಅಧಿಕಾರಶಾಯಿಗಳ ಮುಖಾಂತರ ಆಡಳಿತ ನಡೆಸಲಾಗುತ್ತಿದೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಎರಡು ವರ್ಷಗಳ ಕಾಲ ನಿರಂತರವಾಗಿ ಜೀವ ಭಯವಿದ್ದರೂ ಜನರ ಕಷ್ಟಗಳಿಗೆ ಸ್ಪಂದಿಸಿದ ಇತಿಹಾಸ ಇರುವುದರಿಂದ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ೧ ಲಕ್ಷಕ್ಕೂ ಹೆಚ್ಚು ಗ್ರಾಮೀಣ ನಾಯಕತ್ವದ ಪ್ರತಿಭೆಗಳನ್ನು ಉಳಿಸುವ ಅತ್ಯಮೂಲ್ಯ ಜವಾಬ್ದಾರಿ ರಾಜ್ಯ ವಿಧಾನ ಸಭೆಯ ಮೇಲಿದೆ. ಕ್ಷೇತ್ರವಿಂಗಡಣೆ ಹೊಸ ಹೊಸ ಆಲೋಚನೆಗಳು ಚುನಾವಣೆಯನ್ನು ಮುಂದಕ್ಕೆ ಹಾಕುವ ಅನಿವಾರ್ಯತೆಯನ್ನು ಸರ್ಕಾರದಲ್ಲಿ ತಂದೊಡ್ಡಬಹುದು. ಹಾಗಾಗಿ ಆಡಳಿತಾಧಿಕಾರಿ ನೇಮಕ ಮಾಡುವ ಪ್ರಸ್ತಾವ ಕೈ ಬಿಟ್ಟು, ಗ್ರಾಮ ಪಂಚಾಯಿತಿ ಸದಸ್ಯರ ಆಡಳಿತಾವಧಿ ಮುಗಿದ ನಂತರ ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯಿತಿ ಚುನಾವಣೆಯ ಅಧಿಸೂಚನೆ ಹೊರಡಿಸುವವರೆಗೆ ಹಾಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಸದಸ್ಯರ ಆಡಳಿತ ಮಂಡಳಿಯನ್ನು ಯಥಾವತ್ ಮುಂದುವರಿಸಬೇಕೆಂದರು.
ಜೆ.ಹೆಚ್.ಪಟೇಲ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಆಡಳಿತಾವಧಿ ಮುಕ್ತಾಯವಾಗಿದ್ದರೂ 15 ತಿಂಗಳುಗಳ ಕಾಲ ಹಾಲಿ ಸಮಿತಿಯನ್ನೇ ಮುಂದುವರಿಸಿದ ಉದಾಹರಣೆ ಇದೆ. ಹೀಗಾಗಿ ಈ ಅಂಶವನ್ನು ಪರಿಗಣಿಸಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಯದುನಾಡು ನಾಗರಾಜು, ಪ್ರಧಾನ ಕಾರ್ಯದರ್ಶಿ ಎಡತೊರೆ ಮಹೇಶ್, ರಾಜು ಹುಣಸೂರು, ನಿಶಾಂತ್, ನಂದಕುಮಾರ್, ಸುತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ಚಿಮರಳ್ಳಿ ರಂಗಸ್ವಾಮಿ ರಾಮೇಗೌಡ, ರವಿಚಂದ್ರ, ನಟರಾಜು, ಚಂದ್ರಶೇಖರ್, ದ್ರಾಕ್ಷಾಯಿಣಿ, ಬೃಂದಾ ಕೃಷ್ಣೇಗೌಡ, ಸೌಮ್ಯ ಸೇರದಂತೆ ಜಿಲ್ಲೆಯಅನೇಕ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.







