ವಿಜಯ ದರ್ಪಣ ನ್ಯೂಸ್…..
ತಾಯಿಯ ಮಮತೆ ಮಾನವೀಯತೆಯ ಮೊದಲ ಪಾಠ.

ಮಾನವ ಸಮಾಜದ ಅಸ್ತಿತ್ವ ಮೌಲ್ಯಗಳ ಮೇಲೆ ನಿಂತಿದೆ. ಅಂತಹ ಮೌಲ್ಯಗಳನ್ನು ಗರ್ಭದಿಂದಲೇ ಬಿತ್ತನೆ ಮಾಡುವ ಮೊದಲ ವ್ಯಕ್ತಿಯೇ ‘ತಾಯಿ’. ತಾಯಿಯ ಅಸ್ತಿತ್ವವಿಲ್ಲದೆ ಯಾವ ವ್ಯಕ್ತಿಯೂ, ಯಾವ ಸಮಾಜವೂ ಸಂಪೂರ್ಣವಾಗಲು ಸಾಧ್ಯವಿಲ್ಲ. ಹಾಗಾಗಿ ಸೃಷ್ಟಿಯೊಳಗೆ ಮಾತೃತ್ವ ಎನ್ನುವುದೊಂದು ಅದ್ಭುತ ಸೃಷ್ಠಿ, ಮಾತೇ ಸಕಲ ಜೀವಿಗಳಿಗೂ ಜೀವದಾತೆ, ಸಕಲ ಮಕ್ಕಳಿಗೂ ಸುಖದಾತೆ!
ಮಾತೃತ್ವ ಎನ್ನುವ ಪದವೇ ನವಿರಾದ ನೆಮ್ಮದಿಯ ಕಡಲು ಇಂಥ ಪವಿತ್ರವಾದ ಮಾತೃತ್ವವನ್ನು ಗೌರವಿಸಲು ಮತ್ತು ಅವಳ ಸೇವೆ, ಮಮತೆ, ಪ್ರೀತಿ ಮತ್ತು ಕಾಳಜಿಯನ್ನು ಸ್ಮರಿಸಲು ಪ್ರತೀ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವಾಗಿ ಆಚರಿಸುವ ಮೂಲಕ ಈ ಒಂದು ದಿನವನ್ನು ಜಗತ್ತಿನ ಎಲ್ಲಾ ತಾಯಂದಿರಿಗಾಗಿ ಮಿಸಲಾಗಿಡಲಾಗಿದೆ.
ಆದರೆ ತಾಯಂದಿರ ದಿನವೆಂಬುದು ಕೇವಲ ಒಂದು ಆಚರಣೆ ಅಲ್ಲ ಅದು ಮಾನವೀಯತೆ, ತ್ಯಾಗ, ಮಮತೆ, ಕಾಳಜಿ ಮತ್ತು ಪ್ರೀತಿಯೆಂಬ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಒಂದು ಸಾಮಾಜಿಕ ಹಾಗೂ ಸಾಂಸ್ಕೃತಿಕ ಗೌರವವೆನ್ನಬಹುದು. ಮಾನವ ಜೀವನದಲ್ಲಿ ಅತ್ಯಂತ ಪವಿತ್ರವಾದ ಸಂಬಂಧವೆಂದರೆ ಅದು ‘ತಾಯಿ’ ಯದ್ದು. ಪ್ರಪಂಚದ ಯಾವುದೇ ಭಾಷೆಯಲ್ಲೂ “ಅಮ್ಮ” ಎಂಬ ಪದ ಕೇಳಿದಾಗ ಮನಸ್ಸಿಗೆ ಏನೋ ಒಂದು ಸಮಾಧಾನ, ಸಲಿಗೆ, ಒಲವು, ಭದ್ರತೆ ಮತ್ತು ನಿರ್ಭಯತೆಯ ಭಾವನೆ ಮೂಡುತ್ತದೆ.
unconditional ಆಗಿ ಪ್ರೀತಿ ಮಾಡುವ ಜಗತ್ತಿನ ಏಕೈಕ ಜೀವ ಎಂದರೆ ಅದು ತಾಯಿ ಮಾತ್ರ. ಅದಕ್ಕಾಗಿಯೇ ಆ ಪವಿತ್ರ ಪ್ರೀತಿಗೆ ಯಾವ ಮೌಲ್ಯಯುತ ವಸ್ತುವೂ ಸಮನಾಗುವುದಿಲ್ಲ. ತಾಯಿ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಮೂಲ ಶಕ್ತಿ, ತನ್ನ ಸಂತೋಷವನ್ನು ತ್ಯಜಿಸಿ ಮಕ್ಕಳ ಭವಿಷ್ಯಕ್ಕಾಗಿ ಬದುಕುವ ತ್ಯಾಗಮೂರ್ತಿ. ಭೂಮಿಯ ಮೇಲೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ನಿಸ್ವಾರ್ಥವಾಗಿ ಸಿಗುವ ಪ್ರೀತಿಯೇ ತಾಯಿ ಪ್ರೀತಿ. ತಾಯಿಯ ಮಮತೆ ಎಂದರೆ ಕೇವಲ ಭಾವನಾತ್ಮಕ ಸಂಬಂಧವಲ್ಲ, ಅದು ಮಾನವೀಯತೆಯ ಮೂಲತತ್ವವಾಗಿದೆ.
ಜೀವನದ ಮೊದಲ ಪಾಠಶಾಲೆ ತಾಯಿಯ ಮಡಿಲು. ತಾಯಿ ಎಂದರೆ ಕೇವಲ ಜನ್ಮ ನೀಡುವವಳು ಅಲ್ಲ, ಅವಳು ಮಕ್ಕಳ ಜೀವನದ ಮೊದಲ ಗುರು, ಮಾರ್ಗದರ್ಶಕಿ ಮತ್ತು ಸ್ನೇಹಿತೆ, ತಾಯಿಯ ಮಡಿಲಲ್ಲಿ ಬೆಳೆದ ಮಗುವಿಗೆ ಪ್ರಪಂಚದ ಎಲ್ಲ ಕಷ್ಟಗಳನ್ನು, ಎದುರಿಸುವ ಶಕ್ತಿ ಮತ್ತು ಬದುಕನ್ನು ಎದುರಿಸುವ ಶಕ್ತಿ ದೊರಕುತ್ತದೆ. ಕಾರಣ ಪ್ರತೀ ತಾಯಿ ತನ್ನ ಮಕ್ಕಳಲ್ಲಿ ಕಷ್ಟ ಸುಖದ ಜೊತೆ ಧೈರ್ಯವನ್ನು ತುಂಬುತ್ತಾಳೆ, ಸಮಾಜದಲ್ಲಿ ಗೌರವವಾಗಿ ಬದುಕಲು ಬೇಕಾದ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ತುಂಬುವ ಮೂಲ ಶಕ್ತಿಯೇ ಅವಳು.
ತಾಯಿಯ ಜೀವನ ಮೌನವಾಗಿ ಮಾಡುವ ಒಂದು ತ್ಯಾಗದ ಕಥೆ. ಕಾರಣ ಅವಳು ತನ್ನ ಆಸೆ ಕನಸು, ಗುರಿಗಳನ್ನು ಕತ್ತಲಲ್ಲಿ ಬದಿಗಿಟ್ಟು ಮಕ್ಕಳ ಕನಸುಗಳಿಗೆ ಬಣ್ಣ ತುಂಬುವವಳು. ತನ್ನ ನೋವನ್ನು ಮರೆಮಾಚಿ ಮನೆಯವರ ಮುಖದಲ್ಲಿ ನಗು ಮೂಡಿಸುವವಳು. ಒಬ್ಬ ತಾಯಿ ತನ್ನ ಮಗುವಿನ ಭವಿಷ್ಯಕ್ಕಾಗಿ, ಭದ್ರತೆಗಾಗಿ ಯಾವುದೇ ಕಷ್ಟ ಬಂದರೂ ಹಿಂದೆ ಸರಿಯುವುದಿಲ್ಲ. ತನ್ನ ಹಸಿವಿನ ಹೊಟ್ಟೆನ್ನು ಕಟ್ಟಿ ಮಕ್ಕಳ ಹೊಟ್ಟೆ ತುಂಬಿಸುವವಳು ತಾಯಿ ಹಾಗಾಗಿಯೇ ತಾಯಿಯನ್ನು ಹೊಟ್ಟೆ ಬಟ್ಟೆ ಕಟ್ಟಿ ಮಕಳನ್ನು ಸಾಕುವಳು ಎನ್ನುವುದು. ಅವಳ ನಿದ್ರೆಯಿಲ್ಲದ ರಾತ್ರಿಗಳು, ಆತಂಕದಿಂದ ಕಳೆಯುವ ಕ್ಷಣಗಳು, ಮೌನವಾಗಿ ಸುರಿಸುವ ಕಣ್ಣೀರು, ಇವೆಲ್ಲವೂ ಮಾತಿನಲ್ಲಿ ವಿವರಿಸಲಾಗದ ಮಮತೆಯ ರೂಪಗಳು. ತಾಯಿಯ ತ್ಯಾಗಕ್ಕೆ ಯಾವುದೇ ಅಳತೆ ಇಲ್ಲ, ಏಕೆಂದರೆ ಅದು ಪ್ರೀತಿಯಿಂದ ಹುಟ್ಟಿದ ನಿರಂತರ ಸೇವೆ. ಅದಕ್ಕಾಗಿಯೇ ಭಾರತೀಯ ಸಾಹಿತ್ಯ, ಸಂಸ್ಕೃತಿ ಮತ್ತು ಪುರಾಣಗಳಲ್ಲಿ ತಾಯಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ಸಾಹಿತ್ಯದಲ್ಲಿ ತಾಯಿಯ ಮಮತೆಯನ್ನು ಅನೇಕ ರೀತಿಯಲ್ಲಿ ವರ್ಣಿಸಿದ್ದಾರೆ. ತಾಯಿ ಎಂದರೆ ಭೂಮಿಯಂತೆ ಸಹನಶೀಲತೆ, ನದಿಯಂತೆ ನಿರಂತರ ಹರಿವು, ದೀಪದಂತೆ ದಾರಿತೋರಿಸುವ ಬೆಳಕು,ಮಕ್ಕಳ ಮೊದಲ ಗುರು, ಹೀಗೆ. ಅದರಲ್ಲೂ ಭಾರತೀಯ ಸಂಸ್ಕೃತಿಯಲ್ಲಿ “ಮಾತೃ ದೇವೋ ಭವ” ಎಂಬ ಮಾತೇ ತಾಯಿಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ. ಇದು ತಾಯಿಯನ್ನು ದೇವರ ಸಮಾನ ಸ್ಥಾನದಲ್ಲಿ ಕಾಣುವ ನಮ್ಮ ಸಂಸ್ಕಾರ ಮತ್ತು ಭವ್ಯ ಪರಂಪರೆಯ ಸಂಕೇತವಾಗಿದೆ.
ಇಂದಿನ ವೇಗದ ಜೀವನಶೈಲಿಯಲ್ಲಿ ಕುಟುಂಬ ಸಂಬಂಧಗಳು ನಿಧಾನವಾಗಿ ದೂರಾಗುತ್ತಿರುವ ಸಂದರ್ಭದಲ್ಲಿ ತಾಯಂದಿರ ದಿನವು ಸಂಬಂಧಗಳ ಪುನಃಸ್ಮರಣೆಗಾಗಿ ಒಂದು ಮುಖ್ಯ ಸಂದರ್ಭವಾಗಿದೆ. ಮಹಿಳೆಯರ ನಿರಂತರ ಹಾಗು ಮೌಲ್ಯಯುತ ಶ್ರಮವನ್ನು ಗುರುತಿಸುವುದು, ತಾಯಿಯ ತ್ಯಾಗವನ್ನು ಸಾರ್ವಜನಿಕವಾಗಿ ಗೌರವಿಸುವುದು ಕುಟುಂಬ ವ್ಯವಸ್ಥೆಯ ಮಹತ್ವವನ್ನು ಅರಿವು ಮಾಡಿಸುವುದು, ಇವುಗಳ ಮೂಲಕ ಈ ದಿನವು ಕೇವಲ ಭಾವನೆಗಿಂತಲೂ ಒಂದು ಸಾಮಾಜಿಕ ಜಾಗೃತಿ ಮೂಡಿಸುವ ಸಾಧನವಾಗಿದೆ.

ಇಂದಿನ ಆಧುನಿಕ ಸಮಾಜದಲ್ಲಿ ತಾಯಿಯ ಸವಾಲುಗಳು ಅವಳ ಸಹನೆಗೇ ಸವಾಲು ಹಾಕುವಂತಿವೆ. ಕಾರಣ ಇಂದಿನ ದುಭಾರಿ ಜೀವನವನ್ನು ನಿರ್ವಹಿಸಲು ಮಹಿಳೆಯರು ಹೊರಗೆ ದುಡಿಯಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ, ಹಾಗಾಗಿ ತಾಯಿಯಾದವಳು ಮನೆ, ಮಕ್ಕಳ ಜವಾಬ್ದಾರಿಯ ಜೊತೆಗೆ ವೃತ್ತಿ ಜೀವನವನ್ನೂ ಸಮರ್ಥವಾಗಿ ನಿರ್ವಹಿಸಬೇಕಾಗಿದೆ. ಆದರೂ ಅವೆಲ್ಲವನ್ನೂ ಸಮರ್ಥವಾಗಿ ನಿರ್ವಹಿಸುವ ಆ ತಾಯಿಯ ಶ್ರಮಕ್ಕೆ, ತ್ಯಾಗಕ್ಕೆ ತಕ್ಕ ಮಾನ್ಯತೆ ಅನೇಕ ಸಂದರ್ಭಗಳಲ್ಲಿ ಸಿಗುವುದೇ ಇಲ್ಲ ಎನ್ನುವುದು ನಿಜಕ್ಕೂ ವಿಪರ್ಯಾಸ.
ಉದ್ಯೋಗ ಮತ್ತು ಕುಟುಂಬದ ನಡುವಿನ ಸಮತೋಲನ, ವೈಯಕ್ತಿಕ ಕನಸುಗಳ ತ್ಯಾಗ,ಮಾನಸಿಕ ಒತ್ತಡ, ಸಮಾಜದ ನಿರೀಕ್ಷೆಗಳು ಇಂತಹ ಅನೇಕ ಸವಾಲುಗಳನ್ನು ಎದುರಿಸಿ ತನ್ನ ಬೇಕು ಬೇಡಗಳ ಜೊತೆಗೆ ಮಕ್ಕಳಿಗಾಗಿ ಬದುಕುವುದು ಅಷ್ಟು ಸುಲಭ ಸಾದ್ಯವಲ್ಲ. ತನಗೆಷ್ಟೇ ನೋವಿದ್ದರು ಮಕ್ಕಳೆದುರಿಗೆ ತೋರಿಸದೆ ನಗುವಿನ ಮುಖವಾಡ ಹಾಕಿಕೊಂಡು ಸಂಸಾರವನ್ನು ಸರಿದೂಗಿಸುವ ತಾಯಿ ತನ್ನ ಕುಟುಂಬಕ್ಕೆ ಶಕ್ತಿಯಾಗಿ ನಿಂತಿರುತ್ತಾಳೆ. ಆದ್ದರಿಂದ ತಾಯಂದಿರ ದಿನವು ಕೇವಲ ಅಭಿನಂದನೆಯ ದಿನವಾಗಿ ಮಾತ್ರವಲ್ಲ, ತಾಯಿಯ ಶ್ರಮ ಮತ್ತು ಹಕ್ಕುಗಳನ್ನು ಗೌರವಿಸುವ ದಿನವಾಗಬೇಕು.
ಇಂದಿನ ಯುವಜನತೆ ಅರಿಯಬೇಕಾದ ಮುಖ್ಯ ಸಂದೇಶವೆಂದರೆ, ತಾಯಿಯ ಪ್ರೀತಿ ಸದಾ ನಮ್ಮೊಂದಿಗೆ ಇರುತ್ತದೆ ಎಂದು ಅದನ್ನು ವಿಶೇಷ ಎಂದು ಪರಿಗಣಿಸದೆ ಅನೇಕ ಬಾರಿ ನಾವು ಅದರ ಮೌಲ್ಯವನ್ನು ಅರಿಯದೆ ಸಮಯ ಬಂದಾಗ ತಡವಾಗಿ ಅರಿಯುತ್ತೇವೆ. ಹಾಗಾಗಿ ತಾಯಿಯೊಂದಿಗೆ ಅದರಲ್ಲೂ ವಯಸ್ಸಾದ ತಾಯಿಯೊಂದಿಗೆ ಸಮಯ ಕಳೆಯಬೇಕು, ಅವಳ ಭಾವನೆಗಳನ್ನು ಗೌರವಿಸಬೇಕು, ಅವಳ ತ್ಯಾಗವನ್ನು ಕೃತಜ್ಞತೆಯಿಂದ ಸ್ಮರಿಸಬೇಕು, ಒಂದು ಪ್ರೀತಿಯ ಮಾತು, ಒಂದು ಸಣ್ಣ ಕಾಳಜಿ, ಒಂದು ಗೌರವಭಾವ, ಇವೇ ನಾವು ತಾಯಿಗೆ ಕೊಡುವ ನಿಜವಾದ ಉಡುಗೊರೆಗಳು.
ತಾಯಿ ಎಂದರೆ ಕೇವಲ ಒಂದು ಹುಟ್ಟಿನ ಸಂಬಂಧವಲ್ಲ, ಅದು ಜೀವನದ ಶಾಶ್ವತ ಆಶ್ರಯ, ಅವಳು ನಮ್ಮ ಮೊದಲ ಉಸಿರು, ಮೊದಲ ಪ್ರೀತಿ, ಮೊದಲ ಪಾಠಶಾಲೆ ಮತ್ತು ಮೊದಲ ಪ್ರಾರ್ಥನೆ, ತಾಯಿಯ ಮಡಿಲು ಜೀವನದ ಮೊದಲ ವಿಶ್ವವಿದ್ಯಾಲಯ ಆಕೆಯ ಮಮತೆ ಮಾನವೀಯತೆಯ ಮೊದಲ ಪಾಠ. ಹೀಗಾಗಿ ತಾಯಂದಿರ ದಿನವು ಪ್ರತಿಯೊಬ್ಬರ ಮನಸ್ಸಿನಲ್ಲಿ ಕೃತಜ್ಞತೆಯ ದೀಪ ಬೆಳಗಿಸುವ ದಿನವಾಗಬೇಕು. ತಾಯಿಯ ಪ್ರೀತಿ ಮತ್ತು ತ್ಯಾಗವನ್ನು ಗೌರವಿಸುವ ಸಮಾಜವೇ ನಿಜವಾದ ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕ.
ತಾಯಿಯ ಮಮತೆ ಎಂದರೆ ಕೇವಲ ಭಾವನಾತ್ಮಕ ಸಂಬಂಧವಲ್ಲ, ಅದು ಮಾನವೀಯತೆಯ ಪಾಠ ಹಾಗೂ ಮೂಲತತ್ವವಾಗಿದೆ.

ಗೀತಾಂಜಲಿ ಎನ್ ಎಮ್
ಸೋಮವಾರಪೇಟೆ. ✍️







