ವಿಜಯ ದರ್ಪಣ ನ್ಯೂಸ್…..
ಮಣ್ಣಿನ ಮಗ ರೈತ

ಮಣ್ಣಿನ ಮಡಿಲಲಿ ಮೊಳಕೆಯೊಡೆದ ಬೀಜವು
ಮನುಜನ ಬಾಳಿಗೆ* *ಅನ್ನವಾಗಿ ಬರುವುದಯ್ಯ
ಬೆವರ ಹನಿಯಲಿ ಬದುಕನು ಬೆಳೆಸುವ
ಭೂಮಿಯ ಪುತ್ರನೇ ನೀ ರೈತನಯ್ಯ
ಉದಯದ ರವಿಯು ಮೂಡುವ ಮುನ್ನವೇ ಎದ್ದು
ಕತ್ತಲ ಕವಿದ ದಾರಿಯಲಿ ಹೆಜ್ಜೆಯನಿಟ್ಟು*ಯ
ನೇಗಿಲ ಹಿಡಿದು ನೆಲದ ಎದೆಯನು ಸೀಳಿ
ಹೊಸ ಜೀವವ ಬಿತ್ತುವೆ ಓ ಕೃಷಿಕನೇ!
ಮಳೆ ಬಂದಾಗ ನಿನ್ನ ಮನವು ಮುದಗೊಳ್ಳುವುದು
ಮೋಡ ಕರಗಿದಾಗ ಕಣ್ಣೀರು ಸುರಿಯುವುದು
ಒಮ್ಮೆ ಬೆಳೆ ನಗುವುದು* *ನಿನ್ನ ತುಟಿಯಲಿ ನಗು
ಒಮ್ಮೆ ಬೆಳೆ ಒಣಗುವುದು ಹೃದಯದಲಿ ದುಃಖ.
ಕೈಯಲಿ ಗಟ್ಟಿಯಾದ ಗೆರೆಗಳೆಷ್ಟೋ
ಕಣ್ಣಲಿ ಕನಸುಗಳ ಕಿರಣಗಳೆಷ್ಟೋ
ನಿನ್ನ ಬೆವರೇ ನಮ್ಮ ಬಟ್ಟಲಿನ ಅನ್ನ
ನಿನ್ನ ಶ್ರಮವೇ ನಮ್ಮ ಬದುಕಿನ ಧನ*
ಹಸಿರ ಹೊಲದ ನಡುವೆ ಗಾಳಿಯು ಬೀಸಿದಾಗ*
ಬೆಳೆಯ ತೆನೆಗಳು ತಲೆಯನು ಬಾಗಿದಾಗ*
ಅದು ಕೇವಲ ಹೊಲವಲ್ಲ ನಿನ್ನ ವಿಜಯಗಾಥೆ
ಅದು ಕೇವಲ ಬೆಳೆವಲ್ಲ ನಿನ್ನ ಪ್ರೇಮದ ಕಾವ್ಯ
ಬರಗಾಲ ಬಂದರೆ ಆಕಾಶವನು ನೋಡುವೆ
ಮಳೆಗಾಗಿ ಮೌನದ ಪ್ರಾರ್ಥನೆ ಮಾಡುವೆ
ಮೋಡದ ಒಂದು ಹನಿಯಲಿ ಸಾಗರವ ಕಾಣುವೆ
ಮಣ್ಣಿನ ಒಂದು ಮುಷ್ಟಿಯಲಿ ಭವಿಷ್ಯವ ಬಿತ್ತುವೆ
ಮಾರುಕಟ್ಟೆಯಲಿ ಬೆಲೆಯು ಕುಸಿದರೂ
ನಿನ್ನ ಪರಿಶ್ರಮದ ಬೆಲೆ ಎಂದಿಗೂ ಕುಸಿಯದು*ಯ
ಜಗವೆಲ್ಲ ವ್ಯಾಪಾರವ ಲೆಕ್ಕ ಹಾಕಿದರೂ
ರೈತನ ಬೆವರಿಗೊಂದು ಬೆಲೆ ಕಟ್ಟಲಾಗದು
ನೀ ಅಳುವಾಗ ನಗರ ನಗಬಾರದು
ನೀ ಸೋಲುವಾಗ ದೇಶ ಮೌನವಾಗಬಾರದು
ರೈತನ ಕಣ್ಣೀರ ಹನಿಯೊಂದು ಬಿದ್ದರೆ
ಅದು ಮಣ್ಣಿಗಲ್ಲ ರಾಷ್ಟ್ರದ ಹೃದಯಕ್ಕಯ್ಯ
ಅನ್ನದಾತನೆಂದು ನಿನ್ನನು ಕರೆಯುವೆವು*ಯ
ಆದರೆ ನಿನ್ನ ನೋವನು ಅರಿಯದೆ ಹೋಗುವೆವು
ನಿನ್ನ ಕೈಯಿಂದ ಬಂದ ತುತ್ತನು ತಿಂದು
ನಿನ್ನ ಕೈಯ ನೋವನು ಮರೆತುಬಿಡುವೆವು
ನಿನ್ನ ಹೊಲದ ಹಸಿರು ನಮ್ಮ ಉಸಿರಾಗಲಿ
ನಿನ್ನ ಮನೆಯ ನಗು ನಮ್ಮ ಹಬ್ಬವಾಗಲಿ
ನಿನ್ನ ಮಕ್ಕಳ ಕನಸುಗಳು ಹೂವಾಗಿ ಅರಳಲಿ
ನಿನ್ನ ಬದುಕಿನ ದಾರಿಯಲಿ ಸುಖವು ಹರಿಯಲಿ
ಓ ರೈತನೇ
ನೀ ಮಣ್ಣಿನ ಮಗನಲ್ಲ* *ಮಣ್ಣಿನ ಮಹಾರಾಜ!
ನೀ ನೇಗಿಲ ಹಿಡಿದವನಲ್ಲ
ನಾಡಿನ ನಿರ್ಮಾತೃ
ನಿನ್ನ ಬೆವರ ಹನಿಯಲಿ ಅನ್ನದೇವತೆ
ನಿನ್ನ ಪರಿಶ್ರಮದಲಿ ಭಾರತಮಾತೆಯ ಭವಿಷ್ಯ
ಹೀಗಿರಲಿ ನಿನ್ನ ಹೊಲ ಸದಾ ಹಸಿರಾಗಿ
ಹೀಗಿರಲಿ ನಿನ್ನ ಮನೆ ಸದಾ ನಗೆಯಾಗಿ
ಬಿತ್ತಿದ ಬೀಜವು ಬಂಗಾರವಾಗಿ ಫಲಿಸಲಿ
ರೈತನ ಬದುಕು ರೈತನಿಗೇ ಹಬ್ಬವಾಗಲಿ
✍️ ಎಂ.ಎಂ. ದಾವೂದ್
9945375180










