ವಿಜಯ ದರ್ಪಣ ನ್ಯೂಸ್…..
ತಂತ್ರಜ್ಞಾನ ರಾಷ್ಟ್ರದ ಪ್ರಗತಿಯ ಶಕ್ತಿ
==============

ಇಡೀ ವಿಶ್ವವನ್ನೇ ಸಂಕುಚಿತಗೊಳಿಸಿ ಒಂದೇ ವೇದಿಕೆಯನ್ನಾಗಿ ಮಾಡಿರುವುದೇ ತಂತ್ರಜ್ಞಾನ.
ಇಂದಿನ ತಾಂತ್ರಿಕ ಯುಗದಲ್ಲಿ ಕಣ್ಮುಚ್ಚಿ ಬಿಡುವಷ್ಟರಲ್ಲಿ ಉಹೆಗಳಾಚೆ ಪವಾಡಗಳೇ ನೆಡೆದಿರುತ್ತವೆ ಎನ್ನಬಹುದು. ಹಾಗಾಗಿ ಈ ಆಧುನಿಕ ಯುಗವು ವಿಜ್ಞಾನ ಮತ್ತು ತಂತ್ರಜ್ಞಾನಗಳ ವೇಗದ ಬೆಳವಣಿಗೆಯಿಂದ ರೂಪುಗೊಂಡಿರುವ ಯುಗವಾಗಿದೆ. ಅಲ್ಲದೆ
ಇಂದಿನ ಜಾಗತಿಕ ಸ್ಪರ್ಧಾತ್ಮಕ ಪರಿಸರದಲ್ಲಿ ರಾಷ್ಟ್ರಗಳ ಸಾಮರ್ಥ್ಯವನ್ನು ನಿರ್ಧರಿಸುವ ಪ್ರಮುಖ ಅಂಶಗಳಲ್ಲಿ ತಂತ್ರಜ್ಞಾನವೇ ಮೊದಲಿನದು ಎಂದರೆ ತಪ್ಪಿಲ್ಲ.
ತಂತ್ರಜ್ಞಾನವೆಂದರೆ ವಿಜ್ಞಾನಾಧಾರಿತ ಜ್ಞಾನವನ್ನು ಪ್ರಾಯೋಗಿಕವಾಗಿ ಬಳಸುವ ವಿಧಾನವಾಗಿದೆ. ಇದು ಕೇವಲ ಯಂತ್ರೋಪಕರಣಗಳಷ್ಟೇ ಅಲ್ಲದೆ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಅಂತರಿಕ್ಷ ಸಂಶೋಧನೆ, ನ್ಯಾನೋ ತಂತ್ರಜ್ಞಾನ ಹೀಗೆ ಅನೇಕ ಕ್ಷೇತ್ರಗಳನ್ನು ಒಳಗೊಂಡಿದೆ. ತಂತ್ರಜ್ಞಾನವು ಮಾನವ ಜೀವನವನ್ನು ಸುಲಭ, ವೇಗಮಯ ಮತ್ತು ಪರಿಣಾಮಕಾರಿಯಾಗಿ ಮಾಡುತ್ತದೆ. ತಂತ್ರಜ್ಞಾನವು ಇಂದು ನಮ್ಮ ದಿನನಿತ್ಯದ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ರಾಷ್ಟ್ರದ ಅಭಿವೃದ್ಧಿಗೆ ಬಲವಾದ ಆಧಾರವಾಗಿದೆ.
ಈ ಹಿನ್ನೆಲೆಯಲ್ಲಿ ಮೇ 11ರಂದು ಆಚರಿಸಲಾಗುವ ರಾಷ್ಟ್ರೀಯ ತಂತ್ರಜ್ಞಾನ ದಿನವು ಭಾರತದ ವೈಜ್ಞಾನಿಕ ಸಾಧನೆಗಳು ಮತ್ತು ನವೀನ ಆವಿಷ್ಕಾರಗಳ ಮಹತ್ವವನ್ನು ಪ್ರತಿಪಾದಿಸುವ ವಿಶೇಷ ಸಂದರ್ಭವಾಗಿದೆ. ಈ ದಿನವು ಕೇವಲ ಭೂತಕಾಲದ ಯಶಸ್ಸುಗಳನ್ನು ಸ್ಮರಿಸುವುದಲ್ಲದೆ, ಭವಿಷ್ಯದಲಿನ ತಂತ್ರಜ್ಞಾನ ಅಭಿವೃದ್ಧಿಗೆ ಪ್ರೇರಣೆ ನೀಡುವ ದಿಕ್ಕಿನಲ್ಲಿ ಮಹತ್ವದ ಪಾತ್ರವಹಿಸುತ್ತದೆ.
1998ರ ಮೇ 11 ರಂದು ಭಾರತವು ರಾಜಸ್ಥಾನದ ಪೊಖ್ರಾನ್ ಪ್ರದೇಶದಲ್ಲಿ ಅಣು ಪರೀಕ್ಷೆಗಳನ್ನು ನಡೆಸಿತು. ‘ಪೊಖ್ರಾನ್-II’ ಎಂದು ಕರೆಯಲ್ಪಟ್ಟ ಈ ಕಾರ್ಯಾಚರಣೆ ಯಶಸ್ವಿಯಾಗಿ ಭಾರತದ ರಕ್ಷಣಾ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ತಿರುವು ತಂದಿತು. ಇದಲ್ಲದೆ ಇದೇ ದಿನ ಸ್ವದೇಶಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ “ಹಂಸ-3” ವಿಮಾನವು ಯಶಸ್ವಿಯಾಗಿ ಪರೀಕ್ಷಿಸಲ್ಪಟ್ಟಿತು. ಈ ಐತಿಹಾಸಿಕ ಘಟನೆ ದೇಶದ ತಂತ್ರಜ್ಞಾನ ಸಾಮರ್ಥ್ಯವನ್ನು ಜಗತ್ತಿನ ಮುಂದೆ ತೋರಿಸಿತು ಈ ಎರಡೂ ಸಾಧನೆಗಳ ನೆನಪಿಗಾಗಿ 1999ರಲ್ಲಿ ಭಾರತ ಸರ್ಕಾರ ಮೇ 11ರನ್ನು ರಾಷ್ಟ್ರೀಯ ತಂತ್ರಜ್ಞಾನ ದಿನವಾಗಿ ಘೋಷಿಸಿತು.
ತಂತ್ರಜ್ಞಾನವು ಇಂದು ದೇಶದ ಆರ್ಥಿಕತೆ, ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದೆ. ಡಿಜಿಟಲ್ ಇಂಡಿಯಾ, ಸ್ಟಾರ್ಟ್‌ಅಪ್ ಸಂಸ್ಕೃತಿ, ಕೃತಕ ಬುದ್ಧಿಮತ್ತೆ (AI) ಮುಂತಾದವುಗಳು ದೇಶವನ್ನು ವೇಗವಾಗಿ ಅಭಿವೃದ್ಧಿಯ ದಾರಿಗೆ ಕೊಂಡೊಯ್ಯುತ್ತಿವೆ. ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನವಿಲ್ಲದೆ ಯಾವುದೇ ಕ್ಷೇತ್ರವೂ ಪೂರ್ಣವಾಗುವುದಿಲ್ಲ ಅಷ್ಟರಮಟ್ಟಿಗೆ ತಂತ್ರಜ್ಞಾನ ಎಲ್ಲಾ ಕ್ಷೇತ್ರವನ್ನೂ
ಅವರಿಸಿಕೊಂಡಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳುವುದು ಅತ್ಯಂತ ಮುಖ್ಯ ಹಾಗೂ ಜವಾಬ್ದಾರಿಯುತವಾಗಿದೆ.
ಅತಿಯಾದರೆ ಅಮೃತವೂ ವಿಷವೆಂಬಂತೆ
ತಂತ್ರಜ್ಞಾನ ಅನೇಕ ಲಾಭಗಳನ್ನು ನೀಡಿದರೂ, ಮಿತಿಮೀರಿದ ತಂತ್ರಜ್ಞಾನದ ಉಪಯೋಗದಿಂದ ಮನುಕುಲ ಹತ್ತು ಹಲವು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ತಂತ್ರಜ್ಞಾನವು ಮಾನವ ಜೀವನವನ್ನು ಎಷ್ಟೇ ಸುಲಭಗೊಳಿಸಿದರೂ, ಅದರ ಅತಿಯಾದ ಬಳಕೆಯು ಹಲವು ದುಷ್ಪರಿಣಾಮಗಳನ್ನು ಉಂಟುಮಾಡುತ್ತಿದೆ.
ಸ್ಮಾರ್ಟ್‌ಫೋನ್, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯು ಮನುಷ್ಯರ ಅಮೂಲ್ಯ ಸಯಮಯವನು ಕಸಿಯುವುದರೊಟ್ಟಿಗೆ ಆರೋಗ್ಯವನ್ನು ಕಸಿಯುತ್ತಿದ್ದು ಆತಂಕ, ಒತ್ತಡ, ಏಕಾಂಗಿ ಭಾವನೆಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ಯುವಜನರಲ್ಲಿ ಡಿಜಿಟಲ್ ಅಡಿಕ್ಷನ್ ಒಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಅಲ್ಲದೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮಬೀರುವುದರೊಟ್ಟಿಗೆ ದೈಹಿಕ ಆರೋಗ್ಯದ ಸಮಸ್ಯೆಗಳು ಕಾಡುತ್ತಿವೆ.
ಅತಿಯಾದ ಫೋನ್ ಬಳಕೆಯಿಂದ ಶಿಸ್ತು ಬದ್ದ ಜೀವನ ಕಣ್ಮರೆಯಾಗುತ್ತಿದ್ದು ಊಟ, ತಿಂಡಿ, ನಿದ್ರೆ ಸೇರಿ ದಿನನಿತ್ಯದ ಚಟುವಟಿಕೆಗಳು ಏರುಪೇರಾಗುತ್ತಿವೆ ಇದರಿಂದ ಮಾನಸಿಕ ಆರೋಗ್ಯ, ಕಣ್ಣಿನ ಆರೋಗ್ಯ ಸೇರಿ ತಲೆನೋವು, ನಿದ್ರಾಹೀನತೆ ಮತ್ತು ಶಾರೀರಿಕ ಚಟುವಟಿಕೆ ಕಡಿಮೆಯಾಗುತ್ತಿದ್ದು ದೇಹದ ಸಾಮಾನ್ಯ ಆರೋಗ್ಯ ಕುಂಠಿತವಾಗುತ್ತದೆ.
ಇನ್ನು ಸಾಮಾಜಿಕ ಸಂಬಂಧಗಳ ಕೊರತೆ ಹೆಚ್ಚುತ್ತಿದ್ದು ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ನೈಜ ಮಾನವ ಸಂಬಂಧಗಳು ಕಡಿಮೆ ಆಗುತ್ತಿವೆ ಕುಟುಂಬದ ಜೊತೆ ಸಮಯ ಕಳೆಯುವ ಬದಲು ಮೊಬೈಲ್ ಲೋಕದೊಳಗೆ ಮುಳುಗುವುದು ಸಾಮಾನ್ಯವಾಗುತ್ತಿದೆ.
ಇನ್ನು ಪರಿಸರದ ಮೇಲೆಯು ದುಷ್ಪರಿಣಾಮ ಬೀರುತಿದ್ದು, ಪ್ಲಾಸ್ಟಿಕ್ ಇಲೆಕ್ಟ್ರಾನಿಕ್ ಕಸದ (E-waste) ಪ್ರಮಾಣ ಹೆಚ್ಚುತ್ತಿರುವುದು ಪರಿಸರಕ್ಕೆ ಅಪಾಯಕಾರಿಯಾಗಿ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ.
ಅಲ್ಲದೆ ಸೈಬರ್ ಅಪರಾಧಗಳ ಹೆಚ್ಚಳ
ಹ್ಯಾಕಿಂಗ್, ಆನ್‌ಲೈನ್ ಮೋಸ, ಡೇಟಾ ಕಳವು ಮುಂತಾದ ಸೈಬರ್ ಅಪರಾಧಗಳು ದಿನೇದಿನೇ ಹೆಚ್ಚುತ್ತಿದ್ದು, ಇದು ವ್ಯಕ್ತಿಗಳ ಮತ್ತು ಸಂಸ್ಥೆಗಳ ಸುರಕ್ಷತೆಗೆ ಧಕ್ಕೆಯನ್ನು ಉಂಟುಮಾಡುತ್ತಿದೆ ಎನ್ನಬಹುದು. ಸರಳ ಸಾಮಾನ್ಯವಾಗಿ ನೆಡೆಯುತ್ತಿದ್ದ ಬದುಕು ಇಂದು ಆತಂಕ ಸೃಷ್ಟಿಸುತ್ತಿದ್ದು ಪ್ರತಿಕ್ಷಣವೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆವನ್ನು ತಂದೊಡ್ಡುತ್ತಿದೆ. ಜೊತೆಗೆ ಉದ್ಯೋಗದ ಮೇಲೆ ಪರಿಣಾಮ ಬೀರುತಿದ್ದು ಆಟೊಮೇಷನ್ ಮತ್ತು ಕೃತಕ ಬುದ್ಧಿಮತ್ತೆ (AI) ಬಳಕೆಯಿಂದ ಕೆಲವು ಸಾಂಪ್ರದಾಯಿಕ ಉದ್ಯೋಗಗಳು ಕಡಿಮೆಯಾಗುತ್ತಿವೆ. ಇದರಿಂದ ದಿನದಿಂದ ದಿನಕ್ಕೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ಗೌಪ್ಯತೆ (Privacy) ಸಮಸ್ಯೆಗಳು ಹೆಚ್ಚುತ್ತಿದ್ದು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ವೈಯಕ್ತಿಕ ಮಾಹಿತಿಯ ದುರುಪಯೋಗ ಹೆಚ್ಚುತ್ತಿದೆ. ಇದರಿಂದ ವ್ಯಕ್ತಿಯ ಗೌಪ್ಯತೆಗೆ ಧಕ್ಕೆಯಾಗುತ್ತದೆ.
ಇಷ್ಟೆಲ್ಲ ಸವಾಲುಗಳು ಮತ್ತು ದುಷ್ಪರಿಣಾಮಗಳ ನಡುವೆಯೂ ನಾವು ಒಳ್ಳೆಯ ಉದ್ದೇಶಕ್ಕಾಗಿ ತಂತ್ರಜ್ಞಾನವನ್ನು ಜವಾಬ್ದಾರಿಯಿಂದ ಹಾಗೂ ವಿವೇಕಪೂರ್ಣವಾಗಿ ಸದುಪಯೋಗಪಡಿಸಿ ಕೊಂಡಾಗ ಮಾತ್ರ ಅಭಿವೃದ್ಧಿಗೆ ನಿಜವಾದ ಸಾರ್ಥಕತೆ ದೊರೆಯುತ್ತದೆ. ಕಾರಣ ತಂತ್ರಜ್ಞಾನವು ಮಾನವನಿಂದ ನಿರ್ಮಿತವಾದ ಸಾಧನವೇ ಹೊರತು, ಮಾನವನ ಅಸ್ತಿತ್ವವನ್ನು ನಿಯಂತ್ರಿಸುವ ಶಕ್ತಿಯಲ್ಲ. ನಾವು ಹೇಳಿದಂತೆ ಅದು ಕೇಳಬೇಕೆ ಹೊರತು, ಅದರ ಹಿಡಿತಕ್ಕೆ ನಾವು ಒಳಗಾಗಬಾರದು. ಅದು ಮನುಷ್ಯನ
ಜ್ಞಾನದಿಂದ ಹುಟ್ಟಿರುವ ನಮ್ಮ ನಿಯಂತ್ರಣದಲ್ಲಿ ಇರುವ ಸಾಧನ. ಅದೇ ನಮ್ಮನ್ನು ನಿಯಂತ್ರಿಸುವುದಾದರೆ ನಮ್ಮ ಜುಟ್ಟನ್ನು ನಾವೇ ಅದರ ಕೈಗೆ ಕೊಟ್ಟು ಅಡಿಸಿಕೊಂಡ ಹಾಗೆ ಆಗುತ್ತದೆ. ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ ನಮ್ಮಲ್ಲಿರುವ ಜ್ಞಾನ ಮತ್ತು ಯೋಚನಾ ಶಕ್ತಿಯನ್ನೇ ಕುಗ್ಗಿಸುತ್ತದೆ ಅದ್ದರಿಂದ ತಂತ್ರಜ್ಞಾನದ ಹಿಡಿತಕ್ಕೆ ಸಂಪೂರ್ಣವಾಗಿ ಒಳಪಡುವ ಮೂರ್ಖತನದಿಂದ ಹೊರಬಂದು,
ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ ಹಿತಮಿತವಾಗಿ ಬಳಸಿಕೊಳ್ಳುವುದು ಅಗತ್ಯವಾಗಿದೆ. ತಂತ್ರಜ್ಞಾನ ನಮ್ಮ ಬದುಕನ್ನು ನಿಯಂತ್ರಿಸುವುದಕ್ಕಿಂತ, ನಮ್ಮ ಬದುಕನ್ನು ಸುಧಾರಿಸುವ ಮುಖ್ಯ ಸಾಧನವಾಗಬೇಕು.

ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಕೇವಲ ಮನರಂಜನೆ ಅಥವಾ ಅವಲಂಬನೆಯ ಸಾಧನವಾಗಿ ನೋಡುವುದಕ್ಕಿಂತ, ಜ್ಞಾನ, ಸಂಶೋಧನೆ, ಶಿಕ್ಷಣ ಮತ್ತು ಸಮಾಜದ ಅಭಿವೃದ್ಧಿಗೆ ಪೂರಕವಾದ ಶಕ್ತಿಯಾಗಿ ಬಳಸಿಕೊಳ್ಳಬೇಕಾಗಿದೆ. ವಿಶೇಷವಾಗಿ ಯುವಜನತೆ ತಂತ್ರಜ್ಞಾನವನ್ನು ಸೃಜನಾತ್ಮಕ ಚಿಂತನೆ, ನವೀನ ಆವಿಷ್ಕಾರಗಳು ಹಾಗೂ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ4 ಬಳಸಿದಾಗ ಅದರ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ.
ಇಂದಿನ ಪೀಳಿಗೆಗೆ ತಂತ್ರಜ್ಞಾನವು ಅನಿವಾರ್ಯವಾದರೂ, ಅದರ ಬಳಕೆಯಲ್ಲಿ ಮಿತಿ ಮತ್ತು ನೈತಿಕತೆ ಅಗತ್ಯವಾಗಿದೆ. ತಂತ್ರಜ್ಞಾನ ಮನುಷ್ಯನ ಸಮಯವನ್ನು ಉಳಿಸಬೇಕು, ಚಿಂತನೆಗೆ ಹೊಸ ದಿಕ್ಕು ನೀಡಬೇಕು ಮತ್ತು ಜೀವನಮಟ್ಟವನ್ನು ಸುಧಾರಿಸಬೇಕು. ಆದರೆ, ಅದು ಮಾನವ ಸಂಬಂಧಗಳನ್ನು ದೂರ ಮಾಡುವ ಅಥವಾ ಮಾನಸಿಕವಾಗಿ ಅವಲಂಬಿತನನ್ನಾಗಿಸುವ ಮಟ್ಟಕ್ಕೆ ತಲುಪಬಾರದು. ತಂತ್ರಜ್ಞಾನದ
ಜವಾಬ್ದಾರಿಯುತ ಬಳಕೆ ಮತ್ತು ವೈಜ್ಞಾನಿಕ ಮನೋಭಾವ ಹಾಗೂ ಮಾನವೀಯ ಮೌಲ್ಯಗಳ ಸಮನ್ವಯದ ಮೂಲಕವೇ ತಂತ್ರಜ್ಞಾನ ನಿಜವಾದ ಅಭಿವೃದ್ಧಿಯ ಸಾಧನವಾಗುತ್ತದೆ.
ತಂತ್ರಜ್ಞಾನ ದಿನದ ಆಚರಣೆಯ ನಮ್ಮ ಸಾಧನೆಗಳನ್ನು ನೆನಪಿಸಿಕೊಳ್ಳುವ ಹಾಗೂ ಭವಿಷ್ಯದ ಗುರಿಗಳನ್ನು ರೂಪಿಸುವ ದಿನವಾಗಬೇಕು ಹಾಗಾಗಿ ತಂತ್ರಜ್ಞಾನವನ್ನು ಮಾನವೀಯ ಮೌಲ್ಯಗಳೊಂದಿಗೆ ಬಳಸಿದಾಗ ಮಾತ್ರ ನಿಜವಾದ ಪ್ರಗತಿ ಸಾಧ್ಯ.
ತಂತ್ರಜ್ಞಾನ ನಮ್ಮ ಸೇವಕನಾಗಿರಬೇಕು,
ನಮ್ಮ ನಿಯಂತ್ರಿಸುವ ಯಜಮಾನ ಆಗಬಾರದು!
ತಂತ್ರಜ್ಞಾನ ಕೈಯಲ್ಲಿರಲಿ,
ಜೀವನದ ನಿಯಂತ್ರಣ
ಮನಸ್ಸಿನಲ್ಲಿರಲಿ!

ಗೀತಾಂಜಲಿ ಎನ್ ಎಮ್
ಸೋಮವಾರಪೇಟೆ.✍️🌹








