ವಿಜಯ ದರ್ಪಣ ನ್ಯೂಸ್….
ಮಾತನಾಡುವ ಮುನ್ನ ಎಚ್ಚರಿಕೆ ಇರಲಿ ದುರಹಂಕಾರ ಬೇಡ :ನಿಖಿಲ್ ಕುಮಾರಸ್ವಾಮಿ

ಚನ್ನರಾಯಪಟ್ಟಣ: ದುಡ್ಡಿನ ಮದ ತಲೆಗೆ ಏರಿದ್ದು, ಜಾಸ್ತಿ ಮಾತನಾಡದೆ ತಲೆ ತಗ್ಗಿಸಿ ಜನರಿಗೆ ಗೌರವದಿಂದ ದುಡಿಯೋ ಕೆಲಸ ಮಾಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕೇವಲ 17 ಸ್ಥಾನ ಪಡೆದು ಕಡಿಮೆ ಸಂಖ್ಯೆಗೆ ಇಳಿದಿದೆ ಎಂದು ತುಮಕೂರು ಸಮಾವೇಶದಲ್ಲಿ ಡಿಸಿಎಂ ಮಾತನಾಡಿದ್ದಾರೆ. ಅವರು ನಮ್ಮ ಬಗ್ಗೆ ಚಿಂತೆ ಮಾಡೋದು ಬೇಡ. ನಿಖಿಲ್ ಕುಮಾರಸ್ವಾಮಿ ಸ್ಟೇಟಸ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರು ಒಂದು ಅರಿಯಲಿ, ಡಿಸಿಎಂ ಆಗಿರುವ ಸ್ಟೇಟಸ್ ನಾಡಿನ ಜನರ ಭಿಕ್ಷೆ. ಅದನ್ನು ಕಣ್ಣಿಗೆ ಒತ್ತಿಕೊಂಡು ದುರಹಂಕಾರ ಮಾಡದೆ ಅಧಿಕಾರ ಮಾಡಲಿ ಎಂದು ಕುಟುಕಿದರು.
ನಿಖಿಲ್ ಕುಮಾರಸ್ವಾಮಿ ಏನು ಎಂದು ಜನ ತೋರಿಸಿಕೊಡ್ತಾರೆ. ಈ ಬಗ್ಗೆ ಮಿಸ್ಟರ್ ಶಿವಕುಮಾರ್ ಅವರು ತಲೆಕೆಡಿಸಿಕೊಳ್ಳೋದು ಬೇಡ. ಇಷ್ಟು ಲಘುವಾಗಿ ಮಾತನಾಡುವುದು ಬೇಡ. ಸಿಎಂ, ಡಿಸಿಎಂ ಕುರ್ಚಿ ಕಿತ್ತಾಟ, ಬಡಿದಾಟ, ರಂಪಾಟ ಆಗಿ ಜನರು ನಗುವ ಪರಿಸ್ಥಿತಿ ಬಂದಿದೆ. ಡಿಕೆಶಿ ಅವರ ಸಹೋದರ ದುಡಿದಿದ್ದೀನಿ, ದುಡಿದಿದ್ದೀನಿ ಅಂತಾರಲ್ಲ, ದೆಹಲಿಗೆ ಹೋಗಿ ಕೂಲಿ ತಗೊಂಡು ಬರಲಿ ಎಂದು ಲೇವಡಿ ಮಾಡಿದರು.
ನಿಖಿಲ್ ಕುಮಾರಸ್ವಾಮಿ ಬಗ್ಗೆ ಚರ್ಚೆ ಬೇಡ, 2028ಕ್ಕೆ ಇದೇ ಡಿ.ಕೆ. ಶಿವಕುಮಾರ್ ಮಾಜಿ ಆಗ್ತಾರೆ. ಯಾರಿಗೂ ಅಧಿಕಾರ ಶಾಶ್ವತ ಅಲ್ಲ, ಮಾತಾಡುವ ಮುನ್ನ ಎಚ್ಚರಿಕೆ ಇರಲಿ ಎಂದರು. ಬಿಡದಿ ಅಭಿವೃದ್ಧಿ ಪ್ರಾಜೆಕ್ಟ್ ವಿಚಾರವಾಗಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ ನಿಖಿಲ್ ಕುಮಾರಸ್ವಾಮಿ, ಬಿಡದಿ ಬಳಿ ಜಿಬಿಐಟಿ ಪ್ರಾಜೆಕ್ಟ್ ಮಾಡೋಕೆ ಹೊರಟಿದ್ದಾರೆ. ಕುಮಾರಣ್ಣ, ದೇವೇಗೌಡರು ಸುದ್ದಿಗೋಷ್ಠಿ ಮಾಡಿದ ಮೇಲೆ ಒಳಗೆ ತಳಮಳ ಶುರುವಾಗಿದೆ. ಹಾಗಾಗಿ ಇವತ್ತು ರೈತ ಮುಖಂಡರೊಂದಿ ಗೆ ಸಭೆ ನಡೆಸಿದ್ದಾರೆ. ಆದರೆ ಅವರೆಲ್ಲಾ ರೈತರಲ್ಲ ಎಂದು ಆರೋಪಿಸಿದರು.





