ವಿಜಯ ದರ್ಪಣ ನ್ಯೂಸ್……
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ18ನೇ ವರ್ಷಾಚರಣೆ ಸಂಭ್ರಮದಲ್ಲಿ
ವಿಶೇಷ ಅಂಚೆ ಲಕೋಟೆ ಹಾಗೂ ಅಂಚೆ ಕಾರ್ಡುಗಳು ಬಿಡುಗಡೆ

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಇಂಡಿಯಾ ಪೋಸ್ಟ್ ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 18 ವರ್ಷಗಳನ್ನು ಗುರುತಿಸುವ ಸಲುವಾಗಿ ವಿಶೇಷ ಅಂಚೆ ಕವರ್ ಮತ್ತು ಸ್ಮರಣಾರ್ಥ ಚಿತ್ರ ಪೋಸ್ಟ್‌ಕಾರ್ಡ್‌ಗಳೊಂದಿಗೆ ಶಾಶ್ವತ ಚಿತ್ರ ರದ್ದತಿ (ಪಿಪಿಸಿ) ಅನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮಾರಾರ್, ಬೆಂಗಳೂರು ಪ್ರಧಾನ ಕಚೇರಿ ಪ್ರದೇಶದ ಅಂಚೆ ಸೇವೆಗಳ ನಿರ್ದೇಶಕಿ ವಿ. ತಾರಾ ಮತ್ತು ಬೆಂಗಳೂರು ಪೂರ್ವ ವಿಭಾಗದ ಅಂಚೆ ಕಚೇರಿಗಳ ಹಿರಿಯ ಅಧೀಕ್ಷಕ ಕೆ. ರಂಜಿತ್ ಕುಮಾರ್ ಅನಾವರಣಗೊಳಿಸಿದರು.

2008ರಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಆರಂಭವಾದ ದೇಶದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ನಗರವನ್ನು ಜಾಗತಿಕ ಮಟ್ಟದಲ್ಲಿ ಸಂಪರ್ಕಿಸುವ ಪ್ರಮುಖ ಕೇಂದ್ರವಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ಈ ವಿಶೇಷ ಗೌರವ ನೀಡಲಾಗಿದೆ.

ವಿಮಾನ ನಿಲ್ದಾಣದ ಅಂಚೆ ಕಚೇರಿಯಲ್ಲಿ ಬಳಸಲಾಗುವ ಶಾಶ್ವತ ಚಿತ್ರಾತ್ಮಕ ರದ್ದತಿ ಮೊಹರಿನಲ್ಲಿ ನಾಡಪ್ರಭು ಕೆಂಪೇಗೌಡರ ಚಿತ್ರಣದೊಂದಿಗೆ ವಿಮಾನ ನಿಲ್ದಾಣದ ವಿನ್ಯಾಸ ಅಳವಡಿಸಲಾಗಿದೆ. ಇದು ನಗರದ ಐತಿಹಾಸಿಕ ಪರಂಪರೆ ಮತ್ತು ಆಧುನಿಕ ಜಾಗತಿಕ ಗುರುತಿನ ಸಂಕೇತವಾಗಿ ಮೂಡಿ ಬಂದಿದೆ.

ವಿಶೇಷ ಅಂಚೆ ಲಕೋಟೆ ಹಾಗೂ ಸ್ಮರಣಾರ್ಥ ಅಂಚೆ ಕಾರ್ಡ್‌ಗಳು ಪ್ರಯಾಣಿಕರು ಮತ್ತು ಅಂಚೆ ಚೀಟಿ ಸಂಗ್ರಹಾಸಕ್ತರಿಗೆ ವಿಶೇಷ ಸ್ಮರಣಿಕೆಯಾಗಲಿದೆ. ವಿಮಾನ ನಿಲ್ದಾಣದ ‘ಫಿಲ್ಸ್ ಲೈಕ್ ಬಿಎಲ್‌ಆರ್’ ಅಭಿಯಾನದ ಭಾಗವಾಗಿದೆ.

ಈ ಕುರಿತು ಮಾತನಾಡಿದ ವಿಮಾನ ನಿಲ್ದಾಣದ ಸಿಇಒ ಹರಿ ಮಾರರ್, 18 ವರ್ಷಗಳ ಪಯಣವು ಬೆಂಗಳೂರಿನ ಬೆಳವಣಿಗೆಯೊಂದಿಗೆ ಬೆಸೆದುಕೊಂಡಿದೆ. ಲಕ್ಷಾಂತರ ಪ್ರಯಾಣಿಕರಿಗೆ ಈ ವಿಮಾನ ನಿಲ್ದಾಣವೇ ನಗರದ ಮೊದಲ ಅನುಭವವಾಗಿದೆ. ಭಾರತೀಯ ಅಂಚೆ ಇಲಾಖೆ ಈ ಗೌರವವು ವಿಮಾನ ನಿಲ್ದಾಣದ ಬೆಳವಣಿಗೆಯನ್ನು ಅರ್ಥಪೂರ್ಣವಾಗಿ ಸ್ಮರಿಸುತ್ತದೆ’ ಎಂದು ಹೇಳಿದರು.

ಭಾರತೀಯ ಅಂಚೆ ಇಲಾಖೆ ವಲಯದ ಬೆಂಗಳೂರು ಕೇಂದ್ರ ಅಂಚೆ ಸೇವೆಗಳ ನಿರ್ದೇಶಕಿ ವಿ.ತಾರಾ ಮಾತನಾಡಿ, ‘ನಗರದ ಪರಂಪರೆ ಮತ್ತು ಜಾಗತಿಕ ಗುರುತಿನ ಪ್ರತೀಕವಾಗಿರುವ ವಿಮಾನ ನಿಲ್ದಾಣವನ್ನು ಗೌರವಿಸುವ ಉದ್ದೇಶದಿಂದ ಈ ಶಾಶ್ವತ ಚಿತ್ರಾತ್ಮಕ ರದ್ದತಿ ಮೊಹರನ್ನು ಬಿಡುಗಡೆ ಮಾಡಲಾಗಿದೆ. ವಿಶೇಷ ಅಂಚೆ ಲಕೋಟೆ ಮತ್ತು ಅಂಚೆ ಕಾರ್ಡ್‌ಗಳು ಪ್ರಯಾಣಿಕರು, ಸಂಗ್ರಾಹಕರು ಮತ್ತು ಬೆಂಗಳೂರಿನ ಒಂದು ತುಣುಕನ್ನು ತಮ್ಮೊಂದಿಗೆ ಕೊಂಡೊಯ್ಯುವ ಪ್ರತಿಯೊಬ್ಬರಿಗೂ ಸ್ಮರಣಾರ್ಥ ಎಂದು ತಿಳಿಸಿದರು.

ಈ ಶಾಶ್ವತ ಚಿತ್ರಾತ್ಮಕ ಅಂಚೆ ಚೀಟಿ ರದ್ದತಿ ಮೊಹರು ವಿಮಾನ ನಿಲ್ದಾಣದ ಅಂಚೆ ಕಚೇರಿಯಲ್ಲಿ ಲಭ್ಯವಿರಲಿದೆ. ವಿಶೇಷ ಅಂಚೆ ಲಕೋಟೆ ಹಾಗೂ ಅಂಚೆ ಕಾರ್ಡ್‌ಗಳು ಬೆಂಗಳೂರು ಜಿಪಿಒ ಫಿಲಾಟೆಲಿಕ್ ಬ್ಯೂರೋ ಸೇರಿದಂತೆ ರಾಜ್ಯದ ಪ್ರಮುಖ ಫಿಲಾಟೆಲಿಕ್ ಕೇಂದ್ರಗಳಲ್ಲಿ ಸಿಗಲಿದೆ.





