ವಿಜಯ ದರ್ಪಣ ನ್ಯೂಸ್….
ನೇರಳೆ ಹಣ್ಣು ಕೀಳಲು ಹೋಗಿದ್ದ ಯುವಕ ಜಾರಿ ಬಿದ್ದು ಸಾವು: ಶವವಿಟ್ಟು ಪರಿಹಾರಕ್ಕಾಗಿ ಕುಟುಂಬಸ್ಥರ ಪ್ರತಿಭಟನೆ.

ವಿಜಯಪುರ ,ದೇವನಹಳ್ಳಿ ತಾಲ್ಲೂಕು : ವಿಜಯಪುರ ಹಾಲು ಶಿಥಲೀಕರಣ ಘಟಕದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ, ನರಸಿಂಹಮೂರ್ತಿ ಎಂಬಾತ, ಶಿಥಲೀಕರಣದ ಆವರಣದಲ್ಲಿರುವ ನೇರಳೆ ಮರದಲ್ಲಿ ಹಣ್ಣು ಕೀಳಲು ಹೋಗಿದ್ದಾಗ ಜಾರಿ ಕೆಳಗೆ ಬಿದ್ದು, ಮೃತಪಟ್ಟಿದ್ದು, ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಮೃತದೇಹವನ್ನು ಬಮೂಲ್ ಶಿಥಲೀಕರಣ ಕೇಂದ್ರದ ಮುಂಭಾಗದಲ್ಲಿಟ್ಟು, ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಹೋಬಳಿಯ ಪುರ ಗ್ರಾಮದ ನರಸಿಂಹಮೂರ್ತಿ ಮೃತಪಟ್ಟಿರುವವರು, ಮೂರು ದಿನಗಳ ಹಿಂದೆ, ಹಾಲಿನ ವಾಹನ ಚಾಲನೆ ಮಾಡಿಕೊಂಡು ಬಂದು, ಶಿಥಲೀಕರಣದೊಳಗೆ ಬಿಟ್ಟು, ಇಲ್ಲಿನ ಉದ್ಯೋಗಿಯೊಬ್ಬರ ಅಪೇಕ್ಷೆ ಮೇರೆಗೆ ನೇರಳೆ ಹಣ್ಣು ಕೀಳಲು ಮರ ಹತ್ತಿದ್ದು, ಆಯತಪ್ಪಿ ಬಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮತಪಟ್ಟಿದ್ದಾನೆ. ಆತನಿಗೆ ಹೆಂಡತಿ, ಇಬ್ಬರು ಸಣ್ಣ ಮಕ್ಕಳಿದ್ದಾರೆ. ಅವರನ್ನು ಸಾಕಿ ಸಲಹುವವರು ಯಾರು? ಅವರ ಭವಿಷ್ಯ ರೂಪಿಸುವವರು ಯಾರು? ಮೃತನು, ಚಾಲನೆ ಮಾಡುತ್ತಿದ್ದ ವಾಹನದ ಮಾಲೀಕನಿಗೆ ಕರೆ ಮಾಡಿದರೆ, ಕರೆ ಸ್ವೀಕರಿಸುತ್ತಿಲ್ಲ. ಮೃತಪಟ್ಟಿದ್ದರೂ ನೋಡಲು ಬಂದಿಲ್ಲ. ಶಿಥಲೀಕರಣ ಘಟಕದವರು, ಒಳಗೆ ಮರ ಹತ್ತಲು ಅವಕಾಶ ಕೊಟ್ಟಿದ್ದೇಕೆ? ವಾಹನದಿಂದ ಹಾಲು ಇಳಿಸಿಕೊಂಡ ನಂತರ, ಅಲ್ಲಿಂದ ಹೊರಗೆ ಕಳುಹಿಸಬೇಕಾಗಿತ್ತು, ವಾಹನವನ್ನು ಒಳಗೆ ಇಟ್ಟುಕೊಂಡಿದ್ದೇಕೆ? ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಬಂದ ವಿಜಯಪುರ ಪೊಲೀಸ್ ಇನ್ ಸ್ಪೆಕ್ಟರ್ ಲಕ್ಷ್ಮೀನಾರಾಯಣ ಅವರು, ಯುವಕನ ಮರಣ ದುಃಖಕರವಾದದ್ದು, ಅವರ ಅನುಮಸ್ಥಿತಿಯನ್ನು ಯಾರೂ ತುಂಬಲು ಸಾಧ್ಯವಿಲ್ಲ, ಮೃತದೇಹವನ್ನು ಶಿಥಲೀಕರಣದ ಘಟಕದ ಮುಂದೆ ಇಟ್ಟು, ಪ್ರತಿಭಟನೆ ಮಾಡುವುದರಿಂದ ಮೃತನ ಕುಟುಂಬಕ್ಕೆ ನ್ಯಾಯಸಿಗುವುದಿಲ್ಲ. ಅವರ ಮೃತದೇಹವನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸಿ, ನಂತರ ಕುಳಿತುಕೊಂಡು ಮಾತನಾಡಿ, ಪತ್ನಿ ಮತ್ತು ಮಕ್ಕಳಿಗೆ ನ್ಯಾಯ ಒದಗಿಸುವ ಕೆಲಸ ಮಾಡೋಣ ಎಂದು ಮನವೊಲಿಸಿ, ವಾಹನದ ಮಾಲೀಕನನ್ನು ಕರೆಯಿಸಿ, ಮೃತನ ಕುಟುಂಬಕ್ಕೆ ಪರಿಹಾರ ಕೊಡುವ ಭರವಸೆಯ ನಂತರ, ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ತೆಗೆದುಕೊಂಡು ಹೋದರು.








