ಇಂಡಿಯನ್ ಆಯಿಲ್ ಸ್ಕೈ ಟ್ಯಾಂಕಿಂಗ್ ನಲ್ಲಿ ಬೆಂಕಿ ಅನಾಹುತ : ಅಣುಕು ಪ್ರದರ್ಶನ

 

ವಿಜಯ ದರ್ಪಣ ನ್ಯೂಸ್, ದೇವನಹಳ್ಳಿ 
ಬೆಂಗಳೂರು ಗ್ರಾ  ಜಿಲ್ಲೆ .ಜುಲೈ  01

ದೇವನಹಳ್ಳಿ ವ್ಯಾಪ್ತಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರವಿರುವ ಇಂಡಿಯನ್ ಆಯಿಲ್ ಸ್ಕೈ ಟ್ಯಾಂಕಿಂಗ್ ಪ್ರೈವೇಟ್ ಲಿಮಿಟೆಡ್‌ನ ಅನಿಲ ಸಂಗ್ರಹಾಗಾರದಲ್ಲಿ ಅನಿಲವನ್ನು ಪೈಪ್ ಲೈನ್ ಮೂಲಕ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಅನಿಲವು ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಇಡೀ ಪ್ರದೇಶವೇ ಹೊಗೆಯಿಂದ ತುಂಬಿಹೋಯಿತು! ತಕ್ಷಣವೇ ಸಂಬಂಧಿಸಿದ ಕಾರ್ಮಿಕರು ಸಂವಹನ ಕೇಂದ್ರಕ್ಕೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದರು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ವೈದ್ಯಾಧಿಕಾರಿಗಳು, ಅನಿಲ ಸೋರಿಕೆ ತಪಾಸಣಾ ಸಿಬ್ಬಂದಿಯನ್ನು ಕೂಡಲೇ ಸ್ಥಳಕ್ಕೆ ಬರುವಂತೆ ತಿಳಿಸಿದರು.

ಎಲ್ಲಾ ಪ್ರಮುಖ ರಸ್ತೆಗಳನ್ನು ಬಂದ್‌ ಮಾಡಿ ವಾಹನಗಳ ಮತ್ತು ಜನರ ಓಡಾಟವನ್ನು ನಿರ್ಬಂಧಿಸಿ ಅಪಾಯದ ಮುನ್ನೆಚ್ಚರಿಕೆಯ ಕ್ರಮವಾಗಿ ಸೈರನ್ ಮೊಳಗಿಸಲಾಯಿತು. ಸುತ್ತಮುತ್ತಲಿನ ಜನರಿಗೆ ಅಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಅರಿವಿರಲಿಲ್ಲ.

ತಕ್ಷಣ ಅಗ್ನಿಶಾಮಕ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ ಪೈಪುಗಳ ಮೂಲಕ ರಭಸವಾಗಿ ನೀರನ್ನು ಹರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಹೆಚ್ಚಿನ ಯಾವುದೇ ಅವಘಡಗಳು ಸಂಭವಿಸದಂತೆ ಸನ್ನಿವೇಶವನ್ನು ತಹಬಂದಿಗೆ ತಂದರು, ಈ ಅವಘಡದಲ್ಲಿ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು , ವೈದ್ಯಕೀಯ ಸಿಬ್ಬಂದಿ ಅವರಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿರುವುದಿಲ್ಲ!

ಇದು ನೈಜ ಘಟನೆಯಲ್ಲ ಬದಲಿಗೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಎನ್ ಶಿವಶಂಕರ್ ಅವರ ಅಧ್ಯಕ್ಷತೆ ಮತ್ತು ಮಾರ್ಗದರ್ಶನದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ನಡೆದ ಅಣಕು ಪ್ರದರ್ಶನವಾಗಿತ್ತು.

ಈ ಅಣುಕು ಪ್ರದರ್ಶನದಿಂದ ಜನ ಸಾಮಾನ್ಯರು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಮೇಲಿನ ಘಟನೆಯು ಪ್ರತಿ ಆರು ತಿಂಗಳಿಗೊಮ್ಮೆ ಎಲ್ಲಾ ಕಾರ್ಖಾನೆ ಮತ್ತು ಎಲ್.ಪಿ.ಜಿ ಪ್ಲಾಂಟ್ ಗಳಲ್ಲಿ ಎಂದಿನಂತೆ ನಡೆಸುವ ತುರ್ತು ಸ್ಪಂದನ ಕಾರ್ಯದ (ERP) ಅಣುಕು ಪ್ರದರ್ಶನದ ಒಂದು ಭಾಗವಷ್ಟೇ ಆಗಿತ್ತು.

 

ಇಂತಹ ಅವಘಡಗಳು ಸಂಭವಿಸಿದಾಗ ಸಿಬ್ಬಂದಿಯು ಜಾಗೃತರಾಗಿರಲು ಸನ್ನದ್ಧರಾಗಿರುವಂತೆ ಮಾಡಲು ನಡೆಸುವ ಅಣುಕು ಪ್ರದರ್ಶನ ಕಸರತ್ತಿನಲ್ಲಿ ನಿಜವಾಗಿಯು ನಡೆಯುವ ನೈಜ ಘಟನೆಯಂತೆಯೇ ಸಂದರ್ಭವನ್ನು ಮರು ಸೃಷ್ಟಿಸಲಾಗುತ್ತದೆ. ಸಿಬ್ಬಂದಿ ಮತ್ತು ಸುತ್ತಮುತ್ತಲಿನ ಜನರು ಅವಘಡಗಳು ಸಂಭವಿಸಬಹುದಾದಂತಹ ಸಂದರ್ಭದಲ್ಲಿ, ಸುರಕ್ಷಿತ ಕ್ರಮಗಳನ್ನು ಪಾಲಿಸಿ ಸೂಕ್ತ ರಕ್ಷಣೆ ಪಡೆದುಕೊಳ್ಳುವ ಉದ್ದೇಶದಿಂದ ಜನರಿಗೆ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗುತ್ತದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಜಿಲ್ಲಾ ವಿಪತ್ತು ಪರಿಣಿತರಾದ ಎ. ಬಸವರಾಜು, ಕಾರ್ಖಾನೆಗಳ ಮತ್ತು ಬಾಯ್ಲರ್‌ಗಳ ಇಲಾಖೆಯ ಜಂಟಿ ನಿರ್ದೇಶಕರಾದ ನವನೀತ್ ಮೋಹನ್ ಮತ್ತು ಉಪ ನಿರ್ದೇಶಕರಾದ ಎಂ ಎ ಸೋಮಶೇಖರ್ ಈ ಅಣುಕು ಪ್ರದರ್ಶನ ಕಾರ್ಯಕ್ರಮದ ವೀಕ್ಷಕರಾಗಿ ಭಾಗವಹಿಸಿ, ಅಣುಕು ಪ್ರದರ್ಶನ ನಡೆಸುವ ಬಗ್ಗೆ ಹಾಗೂ ಸಿಬ್ಬಂದಿ ಸುರಕ್ಷತೆಯ ಕುರಿತು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ದೇವನಹಳ್ಳಿ ತಾಲ್ಲೂಕು ಆಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಮುಖ್ಯಸ್ಥ ನಾಗೇಶ್, ಕಾರ್ಯಾಚರಣೆ ಪ್ರಧಾನ ವ್ಯವಸ್ಥಾಪಕ ಹರಿರಾಮ್, ಸುರಕ್ಷತೆ, ಭದ್ರತೆ ಮತ್ತು ಪರಿಹಾರ ವಿಭಾಗದ ಹಿರಿಯ ಅಧಿಕಾರಿ ಶ್ರೀನಿವಾಸ್, ಈ ಅಣುಕು ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಇಂಡಿಯನ್ ಆಯಿಲ್ ಟ್ಯಾಂಕಿಂಗ್ ಸಿಇಒ, ಮತ್ತು ನಿರ್ದೇಶಕ ಟಿ ಎಸ್ ದುಪಾರೆ ಅವರ ಮೇಲ್ವಿಚಾರಣೆಯಲ್ಲಿ ಅಣುಕು ಪ್ರದರ್ಶನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.