ವಿಜಯ ದರ್ಪಣ ನ್ಯೂಸ್….
ಬೆಲೆ ಏರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರವೇ ಹೋರಾಟದ ಕಹಳೆ

ನೆಲಮಂಗಲ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ; ಜನವಿರೋಧಿ ನೀತಿ ಹಿಂಪಡೆಯಲು ಆಗ್ರಹ
ನೆಲಮಂಗಲ: ಕೇಂದ್ರ ಸರ್ಕಾರದ ನಿರಂತರ ಬೆಲೆ ಏರಿಕೆ ನೀತಿ ಹಾಗೂ ರಾಜ್ಯ ಸರ್ಕಾರದ ವಿದ್ಯುತ್ ಕ್ಷೇತ್ರ ಖಾಸಗೀಕರಣ ಕ್ರಮವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವತಿಯಿಂದ ಸೋಮವಾರ ನೆಲಮಂಗಲ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ಕರವೇ ತಾಲೂಕು ಅಧ್ಯಕ್ಷ ಮಂಜೇಗೌಡ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ಕ್ಷೇತ್ರದ ಖಾಸಗೀಕರಣ ಸೇರಿದಂತೆ ಜನಸಾಮಾನ್ಯರ ಮೇಲೆ ಪರಿಣಾಮ ಬೀರುವ ನೀತಿಗಳನ್ನು ಸರ್ಕಾರಗಳು ಮರುಪರಿಶೀಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನಾಕಾರರು ಮಾತನಾಡಿ, ದಿನನಿತ್ಯ ಬಳಕೆಯ ಅಕ್ಕಿ, ಬೇಳೆ, ಎಣ್ಣೆ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಜೀವನ ದುಸ್ತರವಾಗಿದೆ. ಕೂಲಿ ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳು ತಮ್ಮ ಆದಾಯದಲ್ಲಿ ಜೀವನ ನಿರ್ವಹಣೆ ಮಾಡಲು ಕಷ್ಟಪಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಕ್ರಮದಿಂದ ರೈತರು ಹಾಗೂ ಬಡ ಜನರ ಮೇಲೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆ ಇದೆ. ವಿದ್ಯುತ್ ಸೇವೆ ಜನರ ಮೂಲಭೂತ ಅಗತ್ಯವಾಗಿದ್ದು, ಅದನ್ನು ಖಾಸಗಿ ಸಂಸ್ಥೆಗಳ ಕೈಗೆ ನೀಡುವ ಬದಲು ಸರ್ಕಾರ ಜನಪರವಾಗಿ ನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ಕರವೇ ಕಾರ್ಯಕರ್ತರು ನೆಲಮಂಗಲ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಬೆಲೆ ಏರಿಕೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯುತ್ ಖಾಸಗೀಕರಣದ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಮಂಜೇಗೌಡ, “ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ರಾಜ್ಯ ಸರ್ಕಾರದ ವಿದ್ಯುತ್ ಖಾಸಗೀಕರಣ ಕ್ರಮಗಳಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡವರು, ಕೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದ ಜನರ ಸಮಸ್ಯೆಗಳನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಜನವಿರೋಧಿ ನೀತಿಗಳನ್ನು ತಕ್ಷಣ ಹಿಂಪಡೆಯದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ, ಗೌರವ ಅಧ್ಯಕ್ಷ ಜಯಣ್ಣ, ಕಾರ್ಮಿಕ ಅಧ್ಯಕ್ಷ ಗಣೇಶ್, ಲೋಕೇಶ್, ಮಂಜುನಾಥ್, ತಾಲೂಕು ಮಹಿಳಾ ಅಧ್ಯಕ್ಷೆ ಪಲ್ಲವಿ, ಉಪಾಧ್ಯಕ್ಷೆ ಜಯಲಕ್ಷ್ಮಿ, ಜ್ಯೋತಿ, ನಂದಿನಿ, ವಿನುತ, ಗೀತಾ, ಕೃಷ್ಣಮೂರ್ತಿ, ಅಪ್ರೂಜ್, ಸೂಹೆಲ್, ಮಹಮ್ಮದ್ ಕಲೀಮ್, ನಾಗರಾಜ್ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಕರವೇ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸರ್ಕಾರಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬೆಲೆ ಏರಿಕೆ ನಿಯಂತ್ರಣ ಮತ್ತು ಜನಪರ ಆಡಳಿತಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.











