ವಿಜಯ ದರ್ಪಣ ನ್ಯೂಸ್…..
ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹವಾಮಾನ ಬದಲಾವಣೆ ಕುರಿತು ಕಾರ್ಯಗಾರ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಜೂ.30
ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಸರ್ಕಾರದ ವಿವಿಧ ಇಲಾಖೆಗಳು, ಸ್ಥಳೀಯ ಸ್ವರಾಜ್ಯ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ನಾಗರಿಕ ಸಮಾಜ ಸಂಘಟನೆಗಳು ಹಾಗೂ ಸಾರ್ವಜನಿಕರು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಾಸಂತಿ ಅಮರ್ ಅವರು ತಿಳಿಸಿದರು.
ಇಂದು ಜಿಲ್ಲಾಡಳಿತ ಭವನದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ), ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ರವರ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ಹವಾಮಾನ ಬದಲಾವಣೆ ಕಾರ್ಯತಂತ್ರಗಳನ್ನು ಮುಖ್ಯ ವಾಹಿನಿಗೆ ತರಲು ಹವಾಮಾನ ಬದಲಾವಣೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಮೂಹಿಕ ಪ್ರಯತ್ನಗಳು ಮತ್ತು ಸುಸ್ಥಿರ ಅಭಿವೃದ್ಧಿ ಕ್ರಮಗಳ ಮೂಲಕ ಹವಾಮಾನ-ಸ್ಥಿತಿಸ್ಥಾಪಕ (Climate Resilient) ಸಮುದಾಯಗಳನ್ನು ನಿರ್ಮಿಸಿ, ಭವಿಷ್ಯದ ಪೀಳಿಗೆಗಳಿಗೆ ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯವನ್ನು ಒದಗಿಸಬಹುದು.”ಭಾರತದ ಸಂವಿಧಾನವು ಸುಸ್ಥಿರ ಅಭಿವೃದ್ಧಿಯ ಕೇಂದ್ರಬಿಂದುವಾಗಿ ಪರಿಸರ ಸಂರಕ್ಷಣೆಗೆ ಮಹತ್ವದ ಸ್ಥಾನವನ್ನು ನೀಡಿದೆ.
ಸಂವಿಧಾನದ ಅನುಚ್ಛೇದ 48A ರಾಜ್ಯವು ಪರಿಸರವನ್ನು ಸಂರಕ್ಷಿಸಿ ಮತ್ತು ಸುಧಾರಿಸುವುದರ ಜೊತೆಗೆ ಅರಣ್ಯಗಳು ಹಾಗೂ ವನ್ಯಜೀವಿಗಳನ್ನು ರಕ್ಷಿಸಬೇಕೆಂದು ನಿರ್ದೇಶಿಸುತ್ತದೆ. ಅನುಚ್ಛೇದ 51A(g) ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿ ಅರಣ್ಯಗಳು, ಕೆರೆಗಳು, ನದಿಗಳು ಮತ್ತು ವನ್ಯಜೀವಿಗಳನ್ನು ಒಳಗೊಂಡ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಿ ಮತ್ತು ಸುಧಾರಿಸುವ ಜವಾಬ್ದಾರಿಯನ್ನು ವಿಧಿಸಿದೆ ಎಂದರು.
ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ಕ್ರಿಯಾ ಯೋಜನೆ (KSAPCC) ರಾಜ್ಯದ ಸುಸ್ಥಿರ ಅಭಿವೃದ್ಧಿಗೆ ಅತ್ಯಂತ ಮಹತ್ವದ ಮಾರ್ಗಸೂಚಿಯಾಗಿದೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು ಸರ್ಕಾರ, ಸ್ಥಳೀಯ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸಾರ್ವಜನಿಕರು ಒಗಟ್ಟಿನಿಂದ ಕಾರ್ಯನಿರ್ವಹಿಸಬೇಕು.
ಈ ತರಬೇತಿ ಕಾರ್ಯಕ್ರಮವು ಅಧಿಕಾರಿಗಳ ಸಾಮರ್ಥ್ಯವನ್ನು ವೃದ್ಧಿಸುವುದರ ಜೊತೆಗೆ ಹವಾಮಾನ ಸ್ನೇಹಿ ಅಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ನೆರವಾಗುತ್ತದೆ. ಕೃಷಿ, ನೀರು, ಅರಣ್ಯ, ಇಂಧನ, ನಗರಾಭಿವೃದ್ಧಿ ಮತ್ತು ವಿಪತ್ತು ನಿರ್ವಹಣೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಹವಾಮಾನ ಹೊಂದಾಣಿಕೆ ಮತ್ತು ಶಮನ ಕ್ರಮಗಳನ್ನು ಅಳವಡಿಸುವ ಮೂಲಕ ಕರ್ನಾಟಕವನ್ನು ಹೆಚ್ಚು ಸುರಕ್ಷಿತ, ಹಸಿರು ಮತ್ತು ಸುಸ್ಥಿರ ರಾಜ್ಯವನ್ನಾಗಿ ರೂಪಿಸಲು ಈ ಕಾರ್ಯಕ್ರಮ ಮಹತ್ವದ ಕೊಡುಗೆ ನೀಡುತ್ತದೆ ಹವಾಮಾನ ಬದಲಾವಣೆ (Climate Change) ಇಂದಿನ ಜಗತ್ತಿನ ಅತ್ಯಂತ ಗಂಭೀರ ಪರಿಸರ ಮತ್ತು ಅಭಿವೃದ್ಧಿ ಸವಾಲುಗಳಲ್ಲಿ ಒಂದಾಗಿದೆ. ಮಾನವ ಚಟುವಟಿಕೆಗಳಿಂದ ವಾತಾವರಣದಲ್ಲಿ ಹಸಿರುಮನೆ ಅನಿಲಗಳ (Greenhouse Gases) ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಭೂಮಿಯ ಸರಾಸರಿ ತಾಪಮಾನ ಏರಿಕೆಯಾಗುತ್ತಿದೆ.
ಇದರ ಪರಿಣಾಮವಾಗಿ ಮಳೆಯ ಮಾದರಿಗಳಲ್ಲಿ ಬದಲಾವಣೆ, ಬರ, ಪ್ರವಾಹ, ಚಂಡಮಾರುತ, ಭೂಕುಸಿತ, ಉಷ್ಣ ಅಲೆಗಳು ಹಾಗೂ ಜೈವಿಕ ವೈವಿಧ್ಯತೆಯ ಕುಸಿತದಂತಹ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಹೇಳಿದರು.
ಹವಾಮಾನ ಬದಲಾವಣೆ ತಡೆಗಟ್ಟಲು ಇಲಾಖಾವಾರು ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ ಹಾಗೂ ಹಸಿರು ಟೆಕ್ನಾಲಜಿ ಬಳಸಲು ಅಧಿಕಾರಿಗಳಿಗೆ ಸೂಚಿಸಿದರು. ಹವಾಮಾನ ಬದಲಾವಣೆ ಎಷ್ಟು ದುಷ್ಪರಿಣಾಮಗಳು ಬೀರುತ್ತೆ ಎಂದು ಹೊರ ದೇಶಗಳಿಂದ ತಿಳಿಯಬಹುದು. ಹವಾಮಾನ ಬದಲಾವಣೆ ಕೇವಲ ಕೇವಲ ಪ್ರಾದೇಶಿಕ ಸಮಸ್ಯೆ ಅಲ್ಲ, ಪ್ರಪಂಚದ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಎಂಪ್ರಿ ಸಂಸ್ಥೆಯ ಸಂಶೋಧನಾ ವಿಜ್ಞಾನಿ ಡಾ. ಪವಿತ್ರಾ ಪಿ. ನಾಯಕ್ ಅವರು, ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆಯ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಕಾರ್ಯಗಾರದಲ್ಲಿ ಮುಖ್ಯಯೋಜನಾಧಿಕಾರಿ ರಾಮಕೃಷ್ಣಯ್ಯ, ಯೋಜನಾ ನಿರ್ದೇಶಕರಾದ ವಿಠ್ಠಲ್ ಕಾವ್ಳೆ, ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ್, ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ರಮೇಶ್ ಜಿ.ಆರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.










