ವಿಜಯ ದರ್ಪಣ ನ್ಯೂಸ್…..
ತಲಕಾವೇರಿಗೆ ಯಾಕೆ ಹೋಗಲಿಲ್ಲ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ?

ಮಡಿಕೇರಿ: ಭಾಗಮಂಡಲಕ್ಕೆ ಬಂದು ಭಗಂಡೇಶ್ವರನಿಗೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕೇವಲ ಕೆಲವೇ ದೂರದಲ್ಲಿರುವ ತಲಕಾವೇರಿಗೆ ಭೇಟಿ ನೀಡದೆ ಹಿಂತಿರುಗಿರುವುದು ಇದೀಗ ಕೊಡಗಿನ ಜನರಲ್ಲಿ ಗಂಭೀರ ಪ್ರಶ್ನೆ ಮೂಡಿಸಿದೆ.
ಮುಖ್ಯಮಂತ್ರಿಗಳೇ ಇದು ಕೇವಲ ಒಂದು ಪ್ರವಾಸದ ಪ್ರಶ್ನೆಯಲ್ಲ ಇದು ಕಾವೇರಿಯ ಅಸ್ತಿತ್ವ ಮತ್ತು ಗೌರವದ ಪ್ರಶ್ನೆ, ನೀರು ನೀಡುವ ತಾಯಿ ಲಕ್ಷಾಂತರ ಅಲ್ಲ ಕೋಟ್ಯಂತರ ಜೀವಿಗಳ ಬದುಕಿಗೆ ನೀರುಣಿಸುವ ತಾಯಿ. ಅಂತಹ ಕಾವೇರಿ ತಾಯಿಯ ಉಗಮಸ್ಥಳ ತಲಕಾವೇರಿ ನಿಮ್ಮ ಭೇಟಿಯ ಕಾರ್ಯಕ್ರಮದಿಂದ ಹೊರಗುಳಿದಿರುವುದಕ್ಕೆ ಕಾರಣವೇನು?
ಇಂದು ಬೆಂಗಳೂರಿನ ಜನರ ದಾಹ ನೀಗಿಸುತ್ತಿರುವ ನೀರು ಕೂಡ ಕಾವೇರಿಯದ್ದೇ ಕರ್ನಾಟಕದ ಅನೇಕ ನಗರಗಳು ಪಟ್ಟಣಗಳು ಹಾಗೂ ಕೋಟ್ಯಂತರ ಜನರ ಬದುಕಿನೊಂದಿಗೆ ಕಾವೇರಿ ನದಿ ಬೆಸೆದುಕೊಂಡಿದೆ. ಹಾಗಾದರೆ ಬೆಂಗಳೂರಿಗೆ ಕಾವೇರಿ ನೀರು ಬೇಕು ಆದರೆ ಕಾವೇರಿಯ ಉಗಮಸ್ಥಳ ತಲಕಾವೇರಿಗೆ ಭೇಟಿ ನೀಡಲು ಮಾತ್ರ ಸಮಯವಿಲ್ಲವೇ?
ಕೊಡಗಿಗೆ ಬಂದು ಮಳೆಹಾನಿ ಪರಿಶೀಲನೆ ಪರಿಹಾರದ ಭರವಸೆ ವಿಶೇಷ ಪ್ಯಾಕೇಜ್ ಬಗ್ಗೆ ಮಾತನಾಡಿರುವುದು ಒಳ್ಳೆಯ ವಿಚಾರ. ಆದರೆ ನೀರಿನ ಮೂಲವನ್ನು ನೋಡದೆ ನೀರಿನ ಸಮಸ್ಯೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವೇ?
ಮುಖ್ಯಮಂತ್ರಿಗಳೇ ತಲಕಾವೇರಿ ನಿಮ್ಮಿಂದ ಕೇವಲ ಕೆಲವೇ ಕಿಲೋಮೀಟರ್ ದೂರದಲ್ಲಿತ್ತು. ಅಲ್ಲಿಗೆ ಹೋಗಿ ಕಾವೇರಿಯ ಉಗಮಸ್ಥಳವನ್ನು ಕಣ್ಣಾರೆ ನೋಡಿ ಅದರ ಸಂರಕ್ಷಣೆಯ ಬಗ್ಗೆ ಒಂದು ಮಾತು ಹೇಳಲು ಸಾಧ್ಯವಾಗಲಿಲ್ಲವೇ? ಇದು ಕೊಡಗಿನ ಜನರ ನೇರ ಪ್ರಶ್ನೆಯಾಗಿದೆ.
ಕಾವೇರಿ ನೀರು ಬೇಕು ಎನ್ನುವ ಸರ್ಕಾರಕ್ಕೆ ಕಾವೇರಿ ಹುಟ್ಟುವ ತಲಕಾವೇರಿ ಬೇಡವೇ?ಬೆಂಗಳೂರಿನ ದಾಹ ನೀಗಿಸುವ ಕಾವೇರಿ ತಾಯಿಯ ಉಗಮಸ್ಥಳಕ್ಕೆ ಭೇಟಿ ನೀಡದೆ ಹೋದ ಕಾರಣವೇನು?, ಮುಖ್ಯಮಂತ್ರಿಯಾಗಿ ನೀವು ಇದಕ್ಕೆ ಕೊಡಗಿನ ಜನರಿಗೆ ಸ್ಪಷ್ಟ ಉತ್ತರ ನೀಡಬೇಕು.
ಕಾವೇರಿ ನೀರು ಪಡೆಯುವ ಹಕ್ಕಿನಷ್ಟೇ ಕಾವೇರಿಯ ಉಗಮಸ್ಥಳವನ್ನು ಗೌರವಿಸಿ ಸಂರಕ್ಷಿಸುವ ಜವಾಬ್ದಾರಿಯೂ ಸರ್ಕಾರಕ್ಕಿದೆ. ತಲಕಾವೇರಿಯನ್ನು ಕಡೆಗಣಿಸುವುದು ಕೇವಲ ಒಂದು ಸ್ಥಳವನ್ನು ಕಡೆಗಣಿಸುವುದಲ್ಲ ನಮ್ಮ ಬದುಕಿನ ನೀರಿನ ಮೂಲವನ್ನೇ ಕಡೆಗಣಿಸಿದಂತಾಗುತ್ತದೆ.
ಮುಖ್ಯಮಂತ್ರಿಗಳೇ ಉತ್ತರ ಕೊಡಿ ತಲಕಾವೇರಿಗೆ ಯಾಕೆ ಹೋಗಲಿಲ್ಲ?
✍️ ಎಂಎಂ ದಾವುದ್










