ವಿಜಯ ದರ್ಪಣ ನ್ಯೂಸ್….
ಮಸೀದಿ ಮುಂದೆ ಗಣಪನಿಗೆ ಆರತಿ: ನಾಗಮಂಗಲದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆ ಮೆರೆದ ಕ್ಷಣ

ಕಬ್ಬಿನ ಹಾಲು, ಹೂವು ನೀಡಿ ಗಣೇಶ ವಿಸರ್ಜನಾ ಮೆರವಣಿಗೆಗೆ ಮುಸ್ಲಿಂ ಬಾಂಧವರ ಆತ್ಮೀಯ ಸ್ವಾಗತ
ಮಸೀದಿಯ ಮುಂಭಾಗ ಸೌಹಾರ್ದತೆಯ ಸಂಗಮ
ನಾಗಮಂಗಲ, ಸೆ.18: ರಾಜ್ಯದಲ್ಲಿ ಸೌಹಾರ್ದತೆ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಘಟನೆ ನಡೆದಿದೆ.
ನಾಗಮಂಗಲ ಪಟ್ಟಣದ ಪ್ರಮುಖ ರಸ್ತೆಯಲ್ಲಿರುವ ಪ್ರಸಿದ್ಧ ಮಸೀದಿಯ ಮುಂಭಾಗದಿಂದ ಗಣೇಶ ಮೂರ್ತಿಯ ಭವ್ಯ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ, ಪರಸ್ಪರ ಸಹಬಾಳ್ವೆಯಿಂದ ಸಾಗಿದೆ.
ಕಳೆದ ಬಾರಿ ಇದೇ ಸ್ಥಳದಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಗಲಾಟೆ ನಡೆದಿತ್ತು. ಆದರೆ ಈ ಬಾರಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಹಳೆಯದನ್ನು ಮರೆತು ಸಹೋದರತ್ವ ಮೆರೆದಿದ್ದಾರೆ.
ಮೆರವಣಿಗೆ ಮಸೀದಿ ಮುಂಭಾಗಕ್ಕೆ ಬಂದಾಗ ಮುಸ್ಲಿಂ ಬಾಂಧವರು ಗಣಪತಿ ಮೂರ್ತಿಗೆ ಆರತಿ ಬೆಳಗಿ, ಕಬ್ಬಿನ ಹಾಲು ಮತ್ತು ಹೂವುಗಳನ್ನು ಅರ್ಪಿಸಿ ವಿಸರ್ಜನಾ ಸಮಿತಿಯವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಗಣಪತಿಯ ಎದುರು ಪ್ರಾರ್ಥನೆ ಸಲ್ಲಿಸುವ ಮೂಲಕ ಕೋಮು ಸೌಹಾರ್ದತೆಗೆ ಸಾಕ್ಷಿಯಾದರು.
ಮೆರವಣಿಗೆಯಲ್ಲಿದ್ದ ಹಿಂದೂ ಬಂಧುಗಳು ಸಹ ಮುಸ್ಲಿಂ ಬಾಂಧವರ ಈ ಪ್ರೀತಿ-ವಿಶ್ವಾಸಕ್ಕೆ ಹರ್ಷ ವ್ಯಕ್ತಪಡಿಸಿದರು. ಇಂತಹ ಘಟನೆಗಳು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಹೆಚ್ಚಿಸಲು ಸಹಕಾರಿಯಾಗಿವೆ ಎಂದು ಪಟ್ಟಣದ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.










