500 ದಿನ ಪೂರೈಸಿದ ಭೂಸ್ವಾಧೀನ ವಿರೋಧಿ ಹೋರಾಟ.

ವಿಜಯ ದರ್ಪಣ ನ್ಯೂಸ್ 

ದೇವನಹಳ್ಳಿ ಬೆಂಗಳೂರು ಗ್ರಾ ಜಿಲ್ಲೆ . ಆಗಸ್ಟ್ 14

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಒಂದು ಸಾವಿರದ ಏಳುನೂರ ಎಪ್ಪತ್ತೇಳು ಎಕರೆ ಕೃಷಿ ಭೂಮಿಗಾಗಿ ಸತತ 500 ದಿನಗಳಿಂದ ಭೂಸ್ವಾಧೀನ ವಿರೋಧಿ ಸಮಿತಿ ಹೋರಾಟಕ್ಕೆ ಇಂದಿಗೂ ಕವಡೆ ಕಾಸಿನ ಕಿಮ್ಮತ್ತು ಸಿಗದಂತಾಗಿದೆ

ದೆಹಲಿಯಲ್ಲಿ ಕೃಷಿ ಕಾಯಿದೆ ವಾಪಸ್ ಪಡೆಯಲು ಅಲ್ಲಿನ ರೈತರು 450 ದಿನಗಳ ಹೋರಾಟ ಮಾಡಿ ಯಶ ಕಂಡಿದ್ದರು. ಆದರೆ, 500 ದಿನಗಳಿಂದ ಹೋರಾಟ ನಡೆಸುತ್ತಿರುವ ಚನ್ನರಾಯಪಟ್ಟಣ ಭಾಗದ ರೈತರ ಗೋಳು ಇದುವರೆಗೂ ಕೇಳುವವರೇ ಇಲ್ಲವಾಗಿದ್ದಾರೆ.

ಹೋರಾಟ ಪ್ರಾರಂಭವಾದ ನಂತರ ಮೂವರು ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಎರಡು ಸರ್ಕಾರ ಬದಲಾವಣೆಯಾದರೂ ರೈತರ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.

ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಹೋರಾಟನಿರತ ರೈತರ ಮೇಲೆ ಲಾಠಿ ಜಾರ್ಚ್‌ ನಡೆದಿತ್ತು.

ಆಗಿನ ಬಿಜೆಪಿ ಸರ್ಕಾರದ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌, ರೈತರ ಹೋರಾಟ ಹತ್ತಿಕ್ಕಲು ಖುದ್ದು ಆಸಕ್ತಿ ವಹಿಸಿದ್ದ ಆರೋಪ ಆ ಸಂದರ್ಭದಲ್ಲಿ ಎದುರಾಗಿತ್ತು.

ಒಟ್ಟು 71 ರೈತ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದ್ದ ಸರ್ಕಾರ ಅದನ್ನು ಹಿಂಪಡೆಯುವ ಗೋಜಿಗೆ ಹೋಗಿಲ್ಲ. ಅದರೆ, ಕಳೆದ ಗುರುವಾರ ಸಚಿವ ಸಂಪುಟದಲ್ಲಿ ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದು ಮಾಡಲಾಗಿದೆ. ಆದರೆ, ಸರ್ಕಾರಕ್ಕೆ ಬೆಂಗಳೂರಿಗೆ ನಿತ್ಯ ತರಕಾರಿ, ಹಣ್ಣು, ಹೂವು ಸರಬರಾಜು ಮಾಡುವ ಚನ್ನರಾಯಪಟ್ಟಣದ ರೈತರು ನೆನಪಾಗದೆ ಇರುವುದು ಬೇಸರದ ಸಂಗತಿ ಎನ್ನುತ್ತಾರೆ ಹೋರಾಟಗಾರರು.

ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನ್‌ ದಾಸ್‌, ಗೋಪಾಲಗೌಡ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಕಾನೂನಿನಲ್ಲಿ ಇರುವ ಅವಕಾಶ ಕುರಿತು ರೈತರಲ್ಲಿ ಭರವಸೆ ಮೂಡಿಸಿದ್ದರು. ಭೂಸ್ವಾಧೀನದಿಂದ ಕೃಷಿ ಭೂಮಿ ಉಳಿವಿಗಾಗಿ ಕಿರು ಹೊತ್ತಿಗೆ ಬಿಡುಗಡೆಗೊಳಿಸಿದ್ದರು.

ದೇವನಹಳ್ಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಳೀಯರಿಗೆ ವರದಾನವೂ ಹೌದು, ಶಾಪವೂ ಹೌದು. ಮೊದಲ ಹಂತದಲ್ಲಿ ಸರ್ಕಾರದಿಂದ ಪರಿಹಾರ ಹಣ ಪಡೆಯಲು ಅನೇಕ ರೈತರಿಂದ ಇಂದಿಗೂ ಸಾಧ್ಯವಾಗಿಲ್ಲ. ಅಧಿಕಾರಿಗಳು, ದಲ್ಲಾಳಿಗಳ ಶೋಷಣೆಯಿಂದ ನಲುಗಿ ಹೋಗಿದ್ದಾರೆ.

ರೈತರ ಹಿತ ಮರೆತ ಜನಪ್ರತಿನಿಧಿಗಳು

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೆಲ ರಾಜಕೀಯ ಪ್ರತಿನಿಧಿಗಳು ಸುಳ್ಳು ಭರವಸೆ ನೀಡಿ ಗೆದ್ದವರು ಅನ್ನದಾತರನ್ನು ಸಂಪೂರ್ಣ ಮರೆತಿದ್ದಾರೆ. ರಾಜಕೀಯ ಅಧಿಕಾರದ ಲಾಲಾಸೆಗೆ ರೈತರ ಹೋರಾಟವನ್ನೇ ಬಲಿ ನೀಡಲಾಗಿದೆ. ಸಚಿವ ಕೆ.ಎಚ್‌.ಮುನಿಯಪ್ಪ ರೈತರ ಹಿತ ಕಾಪಾಡುವಲ್ಲಿ ಆಸಕ್ತಿ ತೋರದೆ ವಾರಾಂತ್ಯಕ್ಕೆ ಮಾತ್ರವೇ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದು ಕೂಡ ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಜಿಲ್ಲಾಧಿಕಾರಿ ನಡೆ ಸ್ಪಷ್ಟಗೊಳಿಸಲಿ

ಚನ್ನರಾಯಪಟ್ಟಣದ 1777 ಎಕರೆ ಭೂಮಿ ಸ್ವಾಧೀನಕ್ಕೆ ನೋಟಿಫಿಕೇಷನ್‌ ಹೊರಡಿಸುವಾಗ ಆಗಿನ ಕೆಐಎಡಿಬಿ ಸಿಒಒ ಆಗಿದ್ದ ಡಾ.ಶಿವಶಂಕರ ಇಂದು ಜಿಲ್ಲಾಧಿಕಾರಿ ಆಗಿದ್ದಾರೆ. ಹೋರಾಟನಿರತ ರೈತರು ಭೇಟಿಯಾದಾಗ ಇನ್ನೊಮ್ಮೆ ಸ್ವಾಧೀನ ಪ್ರಕ್ರಿಯೆ ಕುರಿತು ಸರ್ವೆ ಮಾಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಒಂದು ವೇದಿಕೆಯಲ್ಲಿ ಉದ್ಯಮಿಗಳ ಪರ ಮಾತನಾಡಿ ಮತ್ತೊಂದು ವೇದಿಕೆಯಲ್ಲಿ ರೈತರ ಪರ ಮಾತನಾಡುತ್ತಿರುವ ಜಿಲ್ಲಾಧಿಕಾರಿ ನಡೆ ಸ್ಪಷ್ಟಗೊಳಿಬೇಕೆಂಬುದು ಹೋರಾಟನಿರತರ ಒಕ್ಕೊರಲಿನ ಆಗ್ರಹವಾಗಿದೆ.