ಈಗ ರಾಜ್ಯದಲ್ಲಿ, ಪಕ್ಷಾಂತರಿಗಳಿಗೆ ಪರ್ವಕಾಲ, ರೈತರಿಗೆ ಬರಗಾಲ, ರಾಜ್ಯಕ್ಕೆ ಕಷ್ಟದ ಕಾಲ, ಸಾಮಾನ್ಯ ಜನರಿಗೆ ಮಾತ್ರ ಚಳಿಗಾಲ……..

ವಿಜಯ ದರ್ಪಣ ನ್ಯೂಸ್

ಬೆಂಗಳೂರು ಗ್ರಾಮಾಂತರ ಜಿಲ್ಲೆ ನವೆಂಬರ್ 18

ಈಗ ರಾಜ್ಯದಲ್ಲಿ,

ಪಕ್ಷಾಂತರಿಗಳಿಗೆ ಪರ್ವಕಾಲ,
ರೈತರಿಗೆ ಬರಗಾಲ,
ರಾಜ್ಯಕ್ಕೆ ಕಷ್ಟದ ಕಾಲ,
ಸಾಮಾನ್ಯ ಜನರಿಗೆ ಮಾತ್ರ ಚಳಿಗಾಲ……..

ಕರ್ನಾಟಕದ ಚುನಾವಣೆ ನಡೆದು ಮತದಾನವಾಗಿ ಫಲಿತಾಂಶ ಪ್ರಕಟವಾಗಿ ಆಡಳಿತ ವ್ಯವಸ್ಥೆ ಜಾರಿಗೆ ಬಂದು ಸುಮಾರು 6 ತಿಂಗಳು ಕಳೆಯಿತು. ಅಲ್ಲಿಂದ ಇಲ್ಲಿಯವರೆಗೆ ಮೂರು ಪಕ್ಷಗಳ ದೊಡ್ಡ ನಾಯಕರ ಹೇಳಿಕೆಗಳನ್ನು ಕ್ರೋಡೀಕರಿಸಿ ಹೇಳುವುದಾದರೆ, ಅವರ ಮಾತುಗಳಲ್ಲಿ ಶೇಕಡಾ 90% ಕೆಟ್ಟ ರಾಜಕೀಯದ ಅಂಶಗಳೇ ಇರುತ್ತವೆ. ಅವರ ನಡವಳಿಕೆಗಳಲ್ಲಿ ಮಾತ್ರ ಶೇಕಡಾ100% ಅಧಿಕಾರ ಮತ್ತು ಪಕ್ಷಾಂತರದ ಬಗ್ಗೆಯೇ ಇರುತ್ತದೆ. ಇದೇ ಸದ್ಯದ ಜನಪ್ರಿಯ ರಾಜಕಾರಣ…….

ಬಹುತೇಕ ಹಾಲಿ ಶಾಸಕರು, ಮಾಜಿ ಶಾಸಕರು ಮತ್ತು ಭಾವಿ ಶಾಸಕರ ಈ ಕ್ಷಣದ ಯೋಚನೆ ನಾವು ಯಾವ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡರೆ ನಮ್ಮ ಭವಿಷ್ಯ ಉತ್ತಮವಾಗಿರುತ್ತದೆ ಎಂಬುದೇ ಆಗಿರುತ್ತದೆ. ಅದಕ್ಕಾಗಿ ದಲ್ಲಾಳಿಗಳ ದೊಡ್ಡ ದಂಡೇ ಸಿದ್ದವಾಗಿದೆ. ಯಾರನ್ನು ಯಾವ ಪಕ್ಷಕ್ಕೆ ಸೆಳೆಯಬೇಕು, ಅದರಿಂದ ಆಗುವ ಲಾಭವೇನು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಪ್ರತಿದಿನ ಒಬ್ಬರಲ್ಲ ಒಬ್ಬರು ಪಕ್ಷಾಂತರ ಮಾಡುವ ಸುದ್ದಿಗಳು ಪ್ರಕಟವಾಗುತ್ತಲೇ ಇವೆ….

ನಾಚಿಕೆ, ಸಂಕೋಚ, ಆತ್ಮವಂಚನೆಯ ಭಾವ ಎಂಬುದು ಯಾರಲ್ಲಿಯೂ ಕಾಣುತ್ತಿಲ್ಲ. ಎಲ್ಲಾ ಸಹಜವೆಂಬಂತೆ ನಡೆಯುತ್ತಿದೆ.‌ ಪ್ರಜಾಪ್ರಭುತ್ವ ಇದಕ್ಕೆ ಸಂಪೂರ್ಣ ಅನುಮತಿ ನೀಡಿದೆ. ಮತದಾರರು ಸಹ ಯಾವುದೇ ಪ್ರತಿರೋಧ ಯಾವ ಸಂದರ್ಭದಲ್ಲೂ ಒಡ್ಡುವುದಿಲ್ಲ. ಅಡೆತಡೆಯೇ ಇಲ್ಲದ ಸೊಂಪಾದ ಹೊಲಕ್ಕೆ ಗೂಳಿ ನುಗ್ಗಿದಂತೆ ಸ್ವೇಚ್ಚಾಚಾರ ಬಹಿರಂಗವಾಗಿ ನಡೆಯುತ್ತಿದೆ…….

ಆಡಳಿತಕ್ಕಿಂತ ಹೆಚ್ಚಾಗಿ ಕೇವಲ ರಾಜಕೀಯವೇ ಮೇಲುಗೈ ಪಡೆದರೆ ಜನ ಸಾಮಾನ್ಯರ ಬದುಕು ಮತ್ತಷ್ಟು ಕುಸಿಯುತ್ತದೆ. ಅವರ ಮೂಲಭೂತ ಅವಶ್ಯಕತೆಗಳಿಗೇ ಕೊರತೆ ಉಂಟಾಗುತ್ತದೆ. ಆಗ ಖಾಸಗಿ ವ್ಯಾಪಾರಿಗಳು ಮತ್ತು ಉದ್ದಿಮೆದಾರರು ಅದರ ‌ಸಂಪೂರ್ಣ ಲಾಭ ಪಡೆದು ಜನರನ್ನು ಇನ್ನೂ ಶೋಷಿಸುತ್ತಾರೆ……

ಪಕ್ಷಾಂತರ ಮಾಡುವವರಿಗೂ,
ಅವರನ್ನು ಸೇರಿಸಿಕೊಳ್ಳುವವರಿಗೂ ಮಾನ ಮರ್ಯಾದೆ ಏನೂ ಇರುವುದಿಲ್ಲ. ಆದರೆ ಆಶ್ಚರ್ಯಕರ ವಿಷಯವೆಂದರೆ, ಈ ರೀತಿಯ ರಾಜಕಾರಣಿಗಳು ತಮ್ಮ ಕ್ಷೇತ್ರಗಳಲ್ಲಿ ಕಾಣಿಸಿಕೊಂಡರೆ ಸಾವಿರಾರು ಜನ ಅವರ ಜೊತೆ ಕಾಣಿಸಿಕೊಳ್ಳುತ್ತಾರೆ, ಅವರಿಗೆ ಜೈಕಾರ ಹಾಕುತ್ತಾರೆ, ಇನ್ನೂ ಕೆಲವರು ಅವರ ಕಾಲಿಗೆ ಬಿದ್ದು ದೀರ್ಘ ದಂಡ ನಮಸ್ಕಾರ ಹಾಕುತ್ತಾರೆ, ಅವರಿಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನ ಮಾಡುತ್ತಾರೆ…..

ಅಂದರೆ ಪ್ರಜಾಪ್ರಭುತ್ವದ ಬೆನ್ನಿಗೆ, ಹೃದಯಕ್ಕೆ ಚೂರಿ ಇರಿಯುವ, ನಂಬಿಕೆ, ವಿಶ್ವಾಸ, ಮಾನವೀಯತೆಗೆ ದ್ರೋಹ ಬಗೆಯುವ ಭ್ರಷ್ಟ – ದುಷ್ಟ ವ್ಯಕ್ತಿಗಳಿಗೆ ಸಮಾಜ ಈ ಮಟ್ಟದ ಗೌರವ ನೀಡುವುದಾದರೆ ಆ ದೇಶದ ಪ್ರಜೆಗಳ ನಾಗರಿಕ ಪ್ರಜ್ಞೆಯ ಬಗ್ಗೆಯೇ ಅನುಮಾನ ಮೂಡುವುದಿಲ್ಲವೇ…..

ನಾವುಗಳೆಲ್ಲ ಸಾಮಾನ್ಯವಾಗಿ ಬುದ್ಧಿವಂತರು, ಒಳ್ಳೆಯವರು, ಸಂಸ್ಕಾರವಂತರು ಎಂದು ಹೇಳಿಕೊಳ್ಳುತ್ತಿರುತ್ತೇವೆ. ನಮ್ಮ ಅಪ್ಪ, ಅಮ್ಮ, ಮಕ್ಕಳು ತುಂಬಾ ಪ್ರಾಮಾಣಿಕರು ಎಂದು ಭಾವಿಸಿರುತ್ತೇವೆ. ಆದರೆ ಸಾಮಾಜಿಕ ನೆಲೆಯಲ್ಲಿ ಬಹುತೇಕ ಸಮಾಜ ಕೆಟ್ಟವರಿಗೆ ಮಣೆ ಹಾಕಿ ಹೀಗೆ ಪ್ರೋತ್ಸಾಹಿಸುತ್ತಿರುತ್ತದೆ. ಇದಕ್ಕೆ ಏನೆಂದು ಹೇಳುವುದು……

ಒಟ್ಟು ಈ ದಿನಗಳ ಕರ್ನಾಟಕದ ರಾಜಕೀಯ ವಾತಾವರಣವನ್ನು ಗಮನಿಸಿದರೆ ಜನರ ಹಿತಾಸಕ್ತಿಗಿಂತ ತಮ್ಮ ವೈಯಕ್ತಿಕ ಲಾಭಗಳೇ ಮುಖ್ಯ ಎಂದು ಬಹುತೇಕ ರಾಜಕಾರಣಿಗಳು ವರ್ತಿಸುತ್ತಿದ್ದಾರೆ. ಅದೇರೀತಿ ಆ ರೀತಿಯ ರಾಜಕಾರಣಿಗಳೇ ಸಮಾಜದಲ್ಲಿ ಮಾನ್ಯತೆಯನ್ನು ಪಡೆಯುತ್ತಿದ್ದಾರೆ. ನಮ್ಮ ಸಮಾಜ ನಾಗರಿಕ ಮೌಲ್ಯಗಳ ದೃಷ್ಟಿಯಿಂದ ಹಿಮ್ಮುಖವಾಗಿ ಚಲಿಸುತ್ತಿದೆ…..

ಈ ರಾಜ್ಯದ ಶೇಕಡಾ 95% ಕ್ಕೂ ಹೆಚ್ಚು ಜನ ಪಂಚತಾರಾ ಹೋಟೆಲ್ ( Five Star Hotel ) ಒಳಗೆ ಪ್ರವೇಶವನ್ನೇ ಮಾಡಿಲ್ಲ. ಆದರೆ ಈ ರಾಜಕೀಯ ಪಕ್ಷಗಳ ಸಾಮಾನ್ಯ ಸಭೆಗಳು ಕೂಡ ಈ ಭವ್ಯ ಹೋಟೆಲುಗಳಲ್ಲಿ ನಡೆಯುತ್ತದೆ. ಅಷ್ಟೇ ಸಂಖ್ಯೆಯ ಸಾಮಾನ್ಯ ಜನ ವಿಮಾನದಲ್ಲಿ ಒಮ್ಮೆಯೂ ಪ್ರಯಾಣ ಮಾಡಿಲ್ಲ. ಆದರೆ ಬಹುತೇಕ ರಾಜಕಾರಣಿಗಳು ವಿಮಾನದಲ್ಲಿಯೇ ಓಡಾಡುವುದು. ಎಷ್ಟೋ ಜನ ವಿದೇಶ ಪ್ರವಾಸದ ಕನಸನ್ನೂ ಕಾಣುವುದಿಲ್ಲ. ಈ ರಾಜಕಾರಣಿಗಳು ಆಗಾಗ ವಿದೇಶಗಳಲ್ಲಿ ಮೀಟಿಂಗ್ ಸಹ ಮಾಡುತ್ತಾರೆ. ಅವರ ಮಕ್ಕಳು ವಿದೇಶಗಳಲ್ಲಿ ಓದುತ್ತಿದ್ದಾರೆ. ಕೆಲವರು ವಿದೇಶಗಳಲ್ಲಿ ವ್ಯಾಪಾರ ವಹಿವಾಟು ಸಹ ಮಾಡುತ್ತಾರೆ…..

ಯೋಚಿಸಿ ನೋಡಿ, ಬದಲಾಗ ಬೇಕಾಗಿರುವುದು ನಾವೋ ಅವರೋ, ಶೀಘ್ರದಲ್ಲೇ ಏನಾದರೂ ಬದಲಾವಣೆಗಾಗಿ ಕಾರ್ಯೋನ್ಮಖರಾಗದಿದ್ದರೆ ನಾವು ಮತ್ತಷ್ಟು ಗುಲಾಮಗಿರಿಗೆ ಜಾರುವುದು ನಿಶ್ಚಿತ. ನಮ್ಮ ಮಕ್ಕಳು ಗುಲಾಮರಾಗಿಯೇ ಹುಟ್ಟ ಬೇಕಾಗುತ್ತದೆ. ಸಂಬಳ ಮಾತ್ರ ಸಿಗುತ್ತದೆ. ಸ್ವಾತಂತ್ರ್ಯ ಇರುವುದಿಲ್ಲ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ ಎಚ್ ಕೆ,
9844013068………