ನಗರಸಭೆ ಪೌರಾಯುಕ್ತರ ವರ್ಗಾವಣೆಗೆ ಸದಸ್ಯರ ನಿರ್ಧಾರ

 ವಿಜಯ ದರ್ಪಣ ನ್ಯೂಸ್ 

ಮಡಿಕೇರಿ ಜನವರಿ: ನಗರಸಭೆಯ ಚುನಾಯಿತ ಜನಪ್ರತಿನಿಧಿಗಳು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಪೌರಾಯುಕ್ತರ ವರ್ಗಾವಣೆಗೆ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಈ ಬಗ್ಗೆ ತುರ್ತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ
ಪೌರಾಯುಕ್ತ ವರ್ಗಾವಣೆಯ ಶಿಫಾರಸ್ಸಿಗೆ ಕೈ ಎತ್ತುವುದರ ಮೂಲಕ ಆಡಳಿತ ಮತ್ತು ವಿಪಕ್ಷ ಸದಸ್ಯರು ಸಹಮತ ವ್ಯಕ್ತಪಡಿಸಿದರು.

ತುರ್ತು ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್ ಸೇರಿದಂತೆ ಸರ್ವ ಸದಸ್ಯರು ಭಾಗಿಯಾಗಿದ್ದರು. ನಗರಸಭೆಯಲ್ಲಿ ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಈ ಹಿಂದೆ ಸ್ಥಾಯಿ ಸಮಿತಿಯ ಅಧ್ಯಕ್ಷರು ಆರೋಪಿಸಿದ್ದರು. ಪೌರಾಯಕ್ತರೊಂದಿಗೆ ಮಾತಿಗೆ ಮಾತು ಬೆಳೆದಿತ್ತು. ಪೌರಾಯಕ್ತರ ಬೆಂಬಲವಾಗಿ ನಗರಸಭೆ ಸಿಬ್ಬಂದಿಗಳು ಮೌನ ಪ್ರತಿಭಟನೆಯನ್ನು ಕೂಡ ನಡೆಸಿದರು. ಪೌರಾಯಕ್ತರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೂ ಮನವಿ ಅರ್ಪಿಸಲಾಗಿತ್ತು.

ಕ್ಷೇತ್ರದ ಶಾಸಕರು ಮಧ್ಯಪ್ರವೇಶಿಸಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲವನ್ನು ತಪ್ಪಿಸುವಂತೆ ಆಗ್ರಹಿಸಲಾಗಿತ್ತು. ಶಾಸಕರು ಕೂಡ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಸಾರ್ವಜನಿಕರ ಕೆಲಸ ವಿಳಂಬವಾಗಿ ನಗರಸಭೆಯ ಸದಸ್ಯರ ಮೇಲೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು..

ಈ ಎಲ್ಲ ಹಿನ್ನೆಲೆಯಲ್ಲಿ ಇಂದು ನಡೆದ ತುರ್ತು ಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರು ಎಲ್ಲರೂ ಸೇರಿ ಒಮ್ಮತದ ತೀರ್ಮಾನದಂತೆ ಕೈ ಎತ್ತುವ ಮೂಲಕ ಪೌರಾಯಕ್ತರ ಬದಲಾವಣೆಗೆ ಆಗ್ರಹಿಸಿದ್ದಾರೆ.