ಪ್ರೀತಿ ಪ್ರೇಮ ಪ್ರಣಯ ಮತ್ತು ನಮ್ಮ ಆತ್ಮಸಾಕ್ಷಿ……

ವಿಜಯ ದರ್ಪಣ ನ್ಯೂಸ್

ಪ್ರೀತಿ ಪ್ರೇಮ ಪ್ರಣಯ ಮತ್ತು ನಮ್ಮ ಆತ್ಮಸಾಕ್ಷಿ……

ಫೆಬ್ರವರಿ 14: ವ್ಯಾಲೆಂಟೈನ್ ಳ ಪ್ರೇಮ ಪತ್ರದ ಉತ್ಕಟ ಪ್ರೀತಿಯ ನವಿರು ಭಾವನೆಗಳು ಉಕ್ಕಿ ಹರಿಯುವ ದಿನದಂದು ಇಲ್ಲೊಬ್ಬ ನತದೃಷ್ಟ ಹೆಣ್ಣಿನ ಬದುಕಿನ ಕಥೆಗೂ ಸ್ವಲ್ಪ ಕಿವಿಗೊಡಿ……

ಪ್ರೀತಿ ಪ್ರೇಮ ಪ್ರಣಯ ಜೀವನದ ಅದ್ಬುತ ಸಾರ ಎಂಬುದು ನಿಜ. ಆದರೆ ಅದು ಕೆಲವರ ಪಾಲಿಗೆ ಮಾರಕವೂ ಆಗಬಹುದು. ನಮ್ಮ ನಡುವಿನ ಹೆಣ್ಣೊಬ್ಬಳ ಅನುಭವ ಆಕೆಯ ಮಾತಿನಲ್ಲಿಯೇ ಕೇಳಿ….

ನಿಮ್ಮೊಳಗೂ ಒಂದು ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿ ಜಾಗೃತವಾಗಲಿ. ಏಕೆಂದರೆ ಹೆಣ್ಣು ನಮ್ಮೆಲ್ಲರ ತಾಯಿ ಸಹ ಎಂಬುದನ್ನು ನೆನಪಿಸುತ್ತಾ….

ಕನಿಷ್ಠ ಇನ್ನು ಮುಂದಾದರು ನಮ್ಮ ನಡವಳಿಕೆಯಲ್ಲಿ ‌ಸಣ್ಣ ಬದಲಾವಣೆ ಆಗಲಿ ಮತ್ತು ಅದು ಹೆಚ್ಚು ನಾಗರಿಕ ಮತ್ತು ಮಾನವೀಯವಾಗಿರಲಿ ಎಂದು ಆಶಿಸುತ್ತಾ…..

ನಾನು ನಳಿನಿ,………

ನನ್ನ ಬದುಕಿನ ಪ್ರಾರಂಭದಲ್ಲಿ ನನಗೆ ನೆನಪಿರುವ ಧ್ವನಿಯೇ, ಮನೆಯ ಹೊರಗಡೆ ಊರ ಜನರ ಕೂಗಾಟದ ಜೊತೆ ನಮ್ಮಪ್ಪನ ಕರ್ಕಶ ಅಳುವಿನ ಧ್ವನಿ.

ಆಗ ನನಗಿನ್ನು 5 ವರ್ಷ. ಬೆಳಗ್ಗೆ ಇನ್ನೂ ನಿದ್ರೆಯಲ್ಲಿದ್ದೆ. ಈ ಅಳು ಕೇಳಿ ಎಚ್ಚರವಾಗಿ ಗುಡಿಸಿಲಿನಿಂದ ಹೊರ ಬಂದಾಗ ನಾನು ನೋಡಿದ ದೃಶ್ಯ, ನಾಲಿಗೆ ಹೊರಚಾಚಿ ಮರದ ಕೊಂಬೆಗೆ ಸೀರೆಯಿಂದ ನೇಣು ಹಾಕಿಕೊಂಡಿದ್ದ ಅಮ್ಮನ ದೇಹ.

ನನಗೇನೂ ಅರ್ಥವಾಗಲಿಲ್ಲ. ಜನರೆಲ್ಲಾ ಸೇರಿ ಅಪ್ಪನನ್ನು ಹೊಡೆಯುತ್ತಿದ್ದರು. ಸ್ವಲ್ಪ ಹೊತ್ತಿಗೆ ಪೋಲೀಸರು ಬಂದು ಅಪ್ಪನನ್ನು ಎಳೆದುಕೊಂಡು ಹೋದರು. ಅಮ್ಮನ ದೇಹವನ್ನು ಆಸ್ಪತ್ರೆಗೆ ಸಾಗಿಸಿ ಮತ್ತೆ ತಂದು ಮಣ್ಣಿನ ಒಳಗೆ ಮುಚ್ಚಿದರು. ಯಾರೋ ನನ್ನ ಕ್ಯೆಯಲ್ಲಿಯೂ ಮಣ್ಣಾಕಿಸಿದರು. ನನಗೆ ಅಳುಕೂಡ ಬರಲಿಲ್ಲ.

ರಾತ್ರಿಯಾಗುತ್ತಿದ್ದಂತೆ ಹಸಿವಾಯಿತು. ಭಯವೂ ಆಯಿತು. ಆಗ ಅಮ್ಮ ನೆನಪಾದಳು. ಜೋರಾಗಿ ಅಳಲಾರಂಬಿಸಿದೆ. ನನ್ನ ಅಳು ಕೇಳಿ ಪಕ್ಕದ ಮನೆಯವರು ಅವರ ಮನೆಗೆ ಕರೆದುಕೊಂಡು ಹೋಗಿ ಊಟ ಕೊಟ್ಟರು. ರಾತ್ರಿ ಅಲ್ಲೇ ಮಲಗಿದೆ. ಬೆಳಗ್ಗೆ ಊರ ಜನರೆಲ್ಲಾ ಸೇರಿ ನಾನು ಪಕ್ಕದವರ ಮನೆಯಲ್ಲಿಯೇ ಜೀತಕ್ಕಿರಬೇಕೆಂದು ತೀರ್ಮಾನಿಸಿದರು. ಅದೇ ಕ್ಷೇಮ ಎಂಬುದು ಅವರ ಸಹಾನುಭೂತಿ.

5 ವರ್ಷಕ್ಕೇ ಕಸ ಹೊಡೆಯುವ, ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ ಕೆಲಸ ಪ್ರಾರಂಭವಾಯಿತು.
ಹೀಗೆ ಮೂರು ವರ್ಷ ಕಳೆಯಿತು.

ಇತ್ತೀಚೆಗೆ ನಾನು ರಾತ್ರಿ ಎಲ್ಲಾ ಕೆಲಸವಾದ ಮೇಲೆ ನನ್ನ ಗುಡಿಸಲಿಗೆ ಹೋಗಿ ಮಲಗುತ್ತಿದ್ದೆ. ಒಂದು ದಿನ ಅದೇ ಪಕ್ಕದ ಮನೆಯ ಕುಡುಕ ಪೋಲಿ ಮಗ ಏಕಾಏಕಿ ಗುಡಿಸಲಿಗೆ ನುಗ್ಗಿ ನಾನು ಮಿಸುಕಾಡಲು ಬಿಡದೆ ಬಾಯಿ ಮುಚ್ಚಿ, ಮಚ್ಚಿನಿಂದ ಹೆದರಿಸಿ ಅಸಭ್ಯವಾಗಿ ವರ್ತಿಸಿದ. ಗಿಡುಗನ ಕೈಗೆ ಸಿಕ್ಕ ಕೋಳಿಮರಿಯಾದೆ. ಆಗ ನಾನನುಭವಿಸಿದ ನೋವು ಹಿಂಸೆ ಕೇಳುವ ಕುತೂಹಲ ನಿಮಗಿದ್ದರೂ ಅದನ್ನು ನೆನಪಿಸಿಕೊಂಡು ಹೇಳುವ ಧೈರ್ಯ ನನಗಿಲ್ಲ.

ಮುಂದಿನ ಎರಡು ವರ್ಷ ಪ್ರತಿರಾತ್ರಿಯೂ ಇದೇ ನನ್ನ ಕರ್ಮವಾಯಿತು. ಅವನು ಹೆದರಿಸಿದ ಮಚ್ಚು, ಆ ಭಯ , ಅಭ್ಯಾಸವಾಗಿ ನನ್ನ ಬಾಯಿ ಮುಚ್ಚಿಸಿತು. ಹೇಗೋ ದಿನ ಕಳೆದೆ.

ಆಗ ನನಗೆ 10 ವರ್ಷ,
ಒಂದು ದಿನ ನನ್ನ ಸಂಬಂಧಿಕರೊಬ್ಬರು ಬಂದು ನಿಮ್ಮಪ್ಪ ಜ್ಯೆಲಿನಲ್ಲಿದ್ದಾನೆ ಯಾರಾದರೂ ಲಾಯರ್ ಗೆ 5000 ಕೊಟ್ಟರೆ ಬಿಡಿಸಿಕೊಂಡು ಬರಬಹುದು ಎಂದರು. ಅಪ್ಪನನ್ನು ನೆನೆದು ದು:ಖ ಉಮ್ಮಳಿಸಿತು. ಈ ನರಕಯಾತನೆ ಕಡಿಮೆಯಾಗಲು ಅಪ್ಪ ಇರಬೇಕು ಎನಿಸಿತು. ಆದರೆ 5000 ?

ರಾತ್ರಿ ಬಂದ ಆ ಕುಡುಕನ ಬಳಿ ಹಣ ಕೇಳಿದೆ. ಆತ ನಿನ್ನ ಯೋಗ್ಯತೆ ಸಾವಿರವೂ ಇಲ್ಲ ಎಂದು ಹೀಯಾಳಿಸಿದ. ಕೊನೆಗೆ ಯೋಚಿಸಿ ಧೈರ್ಯದಿಂದ ನೀನು ಹಣಕೊಡದಿದ್ದರೆ ಎಲ್ಲರಿಗೂ ನೀನು ಇಷ್ಟು ದಿನ ನನ್ನನ್ನು ಉಪಯೋಗಿಸಿಕೊಂಡಿರುವುದನ್ನು ಹೇಳಿ ಪೋಲೀಸ್ ಕಂಪ್ಲೇಂಟ್ ಕೊಡುವುದಾಗಿ ಹೆದರಿಸಿದೆ. ಆತ ಭಯ ಪಟ್ಟು ಒಂದು ವಾರದಲ್ಲಿ 4000 ಕೊಟ್ಟ. ಉಳಿದ 1000 ಬೇರೆಯವರಿಂದ ಪಡೆದು ಸಂಬಂಧಿಕರಿಗೆ ಕೊಟ್ಟೆ.

ಹಣ ಕೊಟ್ಟ ಒಂದು ತಿಂಗಳ ನಂತರ ಅಪ್ಪನನ್ನು ಕರೆದುಕೊಂಡು ಬಂದರು. ಕೃಶವಾಗಿದ್ದ ಅಪ್ಪನನ್ನು ನೋಡಿ ತಬ್ಬಿಕೊಂಡು ಗೋಳಾಡಿದೆ. ಆದರೂ ಅಪ್ಪನೇನು ಅಳಲಿಲ್ಲ. ಅಮ್ಮನ ಸಾವಿಗೆ ತಾನು ಕಾರಣನಲ್ಲವೆಂದೇ ಹೇಳುತ್ತಿದ್ದ. ಹೀಗೆ ಇನ್ನೂ 4 ವರ್ಷ ಕಳೆಯಿತು.

ನನಗಾಗ 14 ವರ್ಷ,
ಅಪ್ಪ ಏನೂ ಕೆಲಸ ಮಾಡದೆ ಮನೆಯಲ್ಲಿ ನಾನು ತರುವ ಊಟ ಮಾಡಿ ಸುಮ್ಮನೆ ಇರುತ್ತಿದ್ದ. ಆದರೆ ಈಗ ಆ ಕುಡುಕ ಸೇರಿ ಇತರರ ಕಾಟ ಅಷ್ಟಾಗಿ ಇರಲಿಲ್ಲ. ಒಂದು ದಿನ ರಾತ್ರಿ ಅಪ್ಪ ಇದ್ದಕ್ಕಿದ್ದಂತೆ ಹೇಳಿದ, ನಾಳೆ ನಿನ್ನ ಮದುವೆ. ರಾಜಾಸ್ಥಾನದ ಮಾರ್ವಾಡಿಗಳು ಬಂದು ತಾಳಿ ಕಟ್ಟಿ ನಿನ್ನನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಾರೆ. ನೀನಿನ್ನು ಶ್ರೀಮಂತರ ಮನೆಯ ಮಹಾರಾಣಿ.

ನನಗೆ ತಲೆ ಸುತ್ತಿ ಬಂತು. ಇದೇನು ನಾನವರನ್ನು ನೋಡಿಯೂ ಇಲ್ಲ, ಅವರೂ ನನ್ನನ್ನು ನೋಡಿಲ್ಲ. ದಿಢೀರ್ ಮದುವೆ. ಇಲ್ಲ ಸಾಧ್ಯವಿಲ್ಲ. ಬೆಳಗ್ಗೆ ಅವರು ಬಂದಾಗ ಗಲಾಟೆ ಮಾಡೋಣ ಊರಿನವರಿಗೆಲ್ಲಾ ಹೇಳೋಣ ಎಂದು ನಿರ್ಧರಿಸಿ ಮಲಗಿದೆ.

ಆದರೆ ಬೆಳಗಿನ 5 ಕ್ಕೇ ಬಂದ ಐದು ಜನ ಕಿರಾತಕರು ನನ್ನ ಕ್ಯೆಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಾರಿನ ಸೀಟಿನ ಕೆಳಗೆ ಹಾಕಿ ನನ್ನಪ್ಪನಿಗೆ ಎಷ್ಟೋ ದುಡ್ಡು ಕೊಟ್ಟು ಹೊರಟರು. ಮಿಸುಕಾಡಲು ಆಗದೆ ಅತ್ತು ಅತ್ತು ಹಾಗೇ ನಿದ್ದೆ ಹೋಗಿದ್ದೆ.

ಎಷ್ಟೋ ಹೊತ್ತಿನ ನಂತರ ಎಚ್ಚರವಾದಾಗ ಬಾಯಿಗೆ ಕಟ್ಟಿದ್ದ ಬಟ್ಟೆ ಬಿಚ್ಚಿದರು. ಅಷ್ಟರಲ್ಲಾಗಲೇ ಕಷ್ಟಗಳು ಬದುಕಿನ ಪಾಠ ಶುರು ಮಾಡಿದ್ದವು. ನನ್ನ ಬುದ್ಧಿ ಉಪಯೋಗಿಸಿ ಅವರನ್ನು ಕೇಳಿದೆ, ಒಪ್ಪಸಿದೆ. ನಾನು ಅಮಾಯಕಿ ಆದರೆ ದುಷ್ಟೆಯಲ್ಲ. ಅವರು ಹೇಳಿದಂತೆ ಕೇಳಿ ಎಲ್ಲಾ ಕೆಲಸಗಳಗೂ ಸಹಕರಿಸುತ್ತೇನೆ ಎಂದು ಕನ್ನಡ ಮಿಶ್ರಿತ ಹಿಂದಿಯಲ್ಲಿ ನಂಬಿಸಿದೆ.

ಸಂಜೆಯ ನಂತರ ಕ್ಯೆಕಾಲು ಬಿಚ್ಚಿ ತಿನ್ನಲು ಬಿಸ್ಕತ್ ಮತ್ತು ನೀರು ಕೊಟ್ಟರು. ಮತ್ತೆ ರಾತ್ರಿಯೆಲ್ಲಾ ಪ್ರಯಾಣಿಸಿ ರಾಜಾಸ್ಥಾನದ ಒಂದು ಹಳ್ಳಿ ತಲುಪಿದೆವು. ಅಲ್ಲಿಂದ ನರಕದ ಮತ್ತೊಂದು ಬಾಗಿಲು ತೆರೆಯಿತು.

ಆ ಮನೆಯ ನಾಲ್ಕು ಜನ ಅಣ್ಣ ತಮ್ಮಂದಿರ ಕಾಮುಕತೆ ತೀರಿಸುವ ಯಂತ್ರವಾದೆ. ಬೆಳಗಿನಿಂದ ಮನೆಕೆಲಸ, ರಾತ್ರಿಯಲ್ಲಿ ಆ ದಢಿಯರ ಸೇವೆ. ಬಲೂನಿನಂತಿದ್ದ ಅವರುಗಳು 4 ವರ್ಷ ಅಂದರೆ ಸುಮಾರು 1460 ದಿನ ನನ್ನನ್ನು ಭೋಗಿಸಿದರು. ಎಂಥಾ ಅನಾರೋಗ್ಯಕರ ಸ್ಥಿತಿಯಲ್ಲಿಯೂ ಅವರಿಗೆ ಎದುರಾಡಲಿಲ್ಲ. ನನ್ನದು ನಾಯಿ ನಿಷ್ಠೆಯಾಗಿತ್ತು. ಅವರ ಮನೆಯ ನಾಯಿ ನನಗಿಂತಲೂ ಉತ್ತಮ ಸ್ಥಿತಿಯಲ್ಲಿತ್ತು.

ಇದು ಸುಳ್ಳಲ್ಲ, ಎಷ್ಟೋ ಬಾರಿ ನನ್ನ ಸ್ಥಿತಿ ಅರ್ಥಮಾಡಿಕೊಂಡ ಆ ನಾಯಿಗಳೂ ಘೀಳಿಡುತ್ತಿದ್ದವು ಅಥವಾ ನನಗೆ ಹಾಗನಿಸುತ್ತಿತ್ತು.

ನನಗಾಗ 18 ವರ್ಷ,
ಇದ್ದಕ್ಕಿದ್ದಂತೆ ಒಂದು ದಿನ ನನ್ನನ್ನು ಒಬ್ಬ ನರಪೇತಲ ಬ್ರೋಕರ್ ಗೆ ರೀ ಸೇಲ್ ರೀತಿ ಮಾರಿದರು. ಆತ ಎಷ್ಟೋ ದುಡ್ಡಿಗೆ ನನ್ನನ್ನು ಖರೀದಿಸಿದ. ನಾನೇನು ಪ್ರತಿಭಟಿಸಲಿಲ್ಲ. ಹೆಣ ಹೊರುವವರಿಗೆ ಹಿಂದಾದರೇನು ಮುಂದಾದರೇನು. ಆತ ನನ್ನನ್ನು ಸುಮಾರು 40 ಕಿಲೋಮೀಟರ್ ದೂರದ ಊರಿಗೆ ನಡೆಸಿಕೊಂಡು ಬರಿಗಾಲಲ್ಲಿ ಕರೆದುಕೊಂಡು ಬಂದ. ನಾನು ಚಾಕಚಕ್ಯತೆ ಉಪಯೋಗಿಸಿ ಆತನನ್ನು ಅತ್ಯಂತ ಪ್ರೀತಿಯಿಂದ, ಆತ್ಮೀಯತೆಯಿಂದ ಮಾತನಾಡಿಸಿದೆ.

ಆತನ ಮನೆ ನನ್ನಂತೆ ಇನ್ನೂ 10 ನತದೃಷ್ಟರಿದ್ದ ಗೃಹ. ನಾನು ಬಹುಬೇಗ ಆ ವ್ಯವಸ್ಥೆಗೆ ಹೊಂದಿಕೊಂಡೆ. ಆ ಹತ್ತೂ ಜನರ ಪಾಲಿಗೆ 18 ರ ವಯಸ್ಸಿನ ನಾನು ತಾಯಿಯಾದೆ. ಆ ವೇಶ್ಯಾ ಗೃಹವನ್ನು ಚೆನ್ನಾಗಿ ನಡೆಸಿದೆ. ಆ ನತದೃಷ್ಟರನ್ನು ಸಮಾಧಾನಿಸಿ ಅವರಿಗೆ ಸಾಂತ್ವಾನ ಹೇಳಿ, ಆತ್ಮವಿಶ್ವಾಸ ತುಂಬಿದೆ.

ಹೀಗೆ ಮತ್ತೂ 5 ವರ್ಷ ಕಳೆಯಿತು, ಆ ನರಪೇತಲ ಒಂದು ದಿನ ಇದ್ದಕ್ಕಿದ್ದಂತೆ ರಕ್ತ ಕಾರುತ್ತಾ ಸತ್ತ. ಅವನ ಅಂತಿಮ ಕ್ರಿಯೆಗಳನ್ನು ನಾವೇ ನಡೆಸಿದೆವು. ಮುಂದೆ ಮೂರೇ ತಿಂಗಳಲ್ಲಿ ಎಲ್ಲರ ಮನ ಒಲಿಸಿ ಒಟ್ಟಾಗಿ ಅಲ್ಲಿಂದ ಮುಂಬೈಗೆ ಬಂದೆವು.

ಅಲ್ಲಿನ ಪ್ರಖ್ಯಾತ ಕೆಂಪು ದೀಪದ ಏರಿಯಾದಲ್ಲಿ ಒಂದು ಬಾಡಿಗೆ ಮನೆ ಹಿಡಿದು ನಮ್ಮ ವೃತ್ತಿ ಆರಂಭಿಸಿದೆವು. ನನ್ನ ಅನುಭವ, ಚಾಕಚಕ್ಯತೆ, ಮೃದುತ್ವದಿಂದ ವ್ಯವಹಾರ ಚೆನ್ನಾಗಿ ನಡೆಯಿತು. ನಮ್ಮ ಸಂಖ್ಯೆ 50 ನ್ನೂ ದಾಟಿತು.

ಈಗ ನನ್ನ ವಯಸ್ಸು 38 ,
ಮುಂಬೈ ಕೆಂಪು ದೀಪದ ಪ್ರಖ್ಯಾತ ಘರ್ ವಾಲಿ ನಳಿನ ಮೇಡಮ್ ನಾನೇ. ನನಗೆ ಕಾರಿದೆ, ಬಂಗಲೆಯಿದೆ, ಆಳು ಕಾಳು ಇದ್ದಾರೆ. ರೌಡಿ, ಪೋಲೀಸ್, ರಾಜಕಾರಣಿಗಳ ಲಿಂಕ್‌ ಇದೆ. ನಾನು ಹುಟ್ಟಿದ ಊರಿನಲ್ಲಿ ದೊಡ್ಡ ಹೆಸರಿದೆ. ಅಲ್ಲಿ ನಾನೇ ಮುಂದೆ ನಿಂತು ಹಣ ಖರ್ಚು ಮಾಡಿ ಯಲ್ಲಮ್ಮನ ದೇವಸ್ಥಾನ ಕಟ್ಟಿಸಿದ್ದೇನೆ. ಊರಿನ ಜನ ಕಳೆದ ಬೇಸಿಗೆಯಲ್ಲಿ ನನ್ನನ್ನು ಸನ್ಮಾನಿಸಿದರು ಕೂಡ.

ನನಗೆ ಕೆಂಪು ದೀಪದ ಜೀವನ ಶ್ಯೆಲಿಯ ಬಗ್ಗೆ ನಿಮಗೆ ಹೇಳಬೇಕೆನಿಸುತ್ತದೆ. ಆದರೆ ಈ ಮಹಾನ್ ಸುಸಂಸ್ಕೃತ ದೇಶದಲ್ಲಿ ಹೆಣ್ಣು ಪೂಜನೀಯಳು, ಮಾತಾ ಸ್ವರೂಪಿಯೂ ಆಗಿರುವುದರಿಂದ ಮತ್ತು ಹೆಣ್ಣಿನ ಅಂಗಗಳು ಅಶ್ಲೀಲ, ಅಸಭ್ಯ , ಅಸಹ್ಯ ಎಂದು ಭಾವಿಸಿರುವುದರಿಂದಲೂ ನಿಮಗೆ, ನಿಮ್ಮ ಆತ್ಮವಂಚಕ ಮನಸ್ಸುಗಳಿಗೆ ಮುಜುಗರವಾಗದಿರಲೆಂದು ನಾನಿಲ್ಲಿ ಹೇಳುತ್ತಿಲ್ಲ. ಆದರೂ ಅನಿವಾರ್ಯವಾಗಿ ಒಂದು ಹೆಣ್ಣಿನ ಒಂದು ರಾತ್ರಿಯ ಯಾತನೆ ನಿಮಗಾಗಿ. ಕ್ಷಮೆ ಇರಲಿ….

ತಲೆ ಸಿಡಿಯುತ್ತಿದೆ, ಕೈ ಕಾಲುಗಳು ತುಂಬಾ ನೋಯುತ್ತಿದೆ. ಜ್ವರವಂತೂ ತನ್ನ ಮಿತಿಯನ್ನೇ ಮೀರುತ್ತಿದೆ. ದೇಹ ಸುಡುತ್ತಿರುವ ಅನುಭವವಾಗುತ್ತಿದೆ.

ತೊಡೆಯ ಸಂಧಿಯಲ್ಲಿ ಆಗಿರುವ ರಕ್ತ ಕುರ ( ಕೆಟ್ಟ ರಕ್ತ ಗಡ್ಡೆಯಂತೆ ಹೆಪ್ಪಗಟ್ಟುವುದು ) ದಲ್ಲಿ ಕೀವು ಸುರಿಯುತ್ತಿದೆ. ಜ್ವರಕ್ಕೊಂದು ಮಾತ್ರೆ, ನೋವು ಕಡಿಮೆಯಾಗಲು ಒಂದು ಮಾತ್ರೆ ತೆಗೆದುಕೊಂಡಿದ್ದೇನೆ.

ಈ ಸ್ಥಿತಿಯಲ್ಲೂ ನಾನು ನನ್ನ ಕೆಲಸ ಮಾಡಲೇಬೇಕಿದೆ. ಅದು ಅನಿವಾರ್ಯ. ಏಕೆಂದರೆ ಮಾಂಸದ ದಂಧೆ ನಡೆಸುವ ಈ ಮನೆಯಲ್ಲಿ ಅಲ್ಪಸ್ವಲ್ಪ ಇಂಗ್ಲೀಷ್ ಮಾತನಾಡುವ ಇಪ್ಪತೈದರ ಚೆಲುವೆ ನಾನೊಬ್ಬಳೆ. ಒಳ್ಳೆಯ ಮೈಕಟ್ಟು ಹೊಂದಿ ಬೆಳ್ಳಗೆ ಆಕರ್ಷಕವಾಗಿದ್ದೇನೆ.
ವಿಐಪಿ ಗಿರಾಕಿಗಳು,
ಮನೆಯ ಘರ್ ವಾಲಿ ಮತ್ತು ನನ್ನ ಜೊತೆಗಾತಿಯರು ಹೇಳುವಂತೆ ನಾನು ಸೆಕ್ಸಿ. ಈ ದಂಧೆಗೆ ನೂಕಲ್ಪಡದಿದ್ದರೆ ಸಿನಿಮಾ ನಟಿಯಾಗಿರುತ್ತಿದ್ದೆ ಎಂದು ಹೇಳುತ್ತಾರೆ.

ಈಗ ಸಮಯ ರಾತ್ರಿ 11-30.
ಶನಿವಾರ. ಈ ಏರಿಯಾದಲ್ಲಿ ಸಣ್ಣಪುಟ್ಟ ಗಲಾಟೆ ಮಾಡಿಕೊಂಡಿದ್ದು ಆಮೇಲೆ ರಿಯಲ್ ಎಸ್ಟೇಟ್ ಬ್ರೋಕರ್ ಆಗಿ ಈಗ ಕಾರ್ಪೊರೇಟರ್ ಆಗಿರುವವನೊಬ್ಬ 2/3 ತಿಂಗಳಿಗೊಮ್ಮೆ ನನ್ನನ್ನು ಬುಕ್ ಮಾಡುತ್ತಾನೆ. ನಾನೆಂದರೆ ಅವನಿಗೆ ತುಂಬಾ ಇಷ್ಟ.
ತನ್ನ ಸ್ನೇಹಿತನ ಅಪಾರ್ಟ್ಮೆಂಟ್ ಗೆ ನನ್ನನ್ನು ಕರೆಸಿಕೊಳ್ಳುತ್ತಾನೆ. ನನ್ನ ಫರ್ ವಾಲಿಗೂ ಎಲ್ಲಾ ರೀತಿಯ ರಕ್ಷಣೆ ಒದಗಿಸುತ್ತಾನೆ.

ಒಂದು ವಾರ ಮೊದಲೇ ನನ್ನನ್ನು ಬುಕ್ ಮಾಡಿದ್ದ. ಆಗ ಸ್ವಲ್ಪವೇ ಇದ್ದ ರಕ್ತ ಕುರ ಈಗ ವ್ರಣವಾಗಿದೆ. ರಕ್ತ ಕೆಟ್ಟಿರುವುದೇ ಇದಕ್ಕೆ ಕಾರಣ ಎಂದು ಹೇಳಿ ನಮ್ಮ ದಂಧೆಯ ಪರ್ಮನೆಂಟ್ ಡಾಕ್ಟರ್ ಮಾತ್ರೆ ಇಂಜೆಕ್ಷನ್ ಕೊಟ್ಟಿದ್ದಾರೆ.
ಆದರೂ ಕಡಿಮೆಯಾಗಲಿಲ್ಲ. ಹೆಪ್ಪುಗಟ್ಟಿರುವ ಆ ಜಾಗದಲ್ಲಿ ಕೆಟ್ಟ ರಕ್ತ ತೆಗೆದು ಬ್ಯಾಂಡೇಜು ಮಾಡಬೇಕಿದೆ.
ಅದು ವಾಸಿಯಾಗಲು 10/15 ದಿನ ಬೇಕಾಗುತ್ತದಂತೆ. ಈ ಬಾರಿ ಇವನನ್ನು ನಿಭಾಯಿಸಿದರೆ ಮುಂದಿನ ಬುಕಿಂಗ್ ವರೆಗೂ ಸಮಯವಿರುತ್ತದೆ. ಇವತ್ತೊಂದು ದಿನ ಹೇಗಾದರೂ ಮ್ಯಾನೇಜ್ ಮಾಡಲು ಘರ್ ವಾಲಿ ಹೇಳಿದ್ದಾಳೆ.

ಅವನ ಬುಕಿಂಗ್ ಗೆ ಇಲ್ಲ ಎನ್ನಲು ನನ್ನ ಒಡತಿಗೆ ಧೈರ್ಯವಿಲ್ಲ. ಅದಕ್ಕಾಗಿ ಕ್ರೀಡಾಪಟುಗಳು ಉಪಯೋಗಿಸುವ ನೋವು ನಿವಾರಕ ಸಣ್ಣ ಬ್ಯಾಂಡೇಜನ್ನು ಆ ಜಾಗಕ್ಕೆ ಹಾಕಿ ಕಳಿಸಿದ್ದಾಳೆ. ಏನೋ ಸಣ್ಣ ಪ್ರಮಾಣದ ಗುಳ್ಳೆ ಎಂದು ಯಾಮಾರಿಸಲು ಹೇಳಿದ್ದಾಳೆ.

ಯಾವಾಗಲೂ ರಾತ್ರಿ 11 ಗಂಟೆಗೆಲ್ಲಾ ಬರುವವನು ಇವತ್ತು ಇನ್ನೂ ಬಂದಿಲ್ಲ. ಅವನು ನನ್ನನ್ನು ಬುಕ್ ಮಾಡಲು ನನ್ನ ಸೌಂದರ್ಯವೊಂದೇ ಕಾರಣವಲ್ಲ.
ನನ್ನ ದೇಹ ಸುಖಕ್ಕಿಂತ ನಾನು ಮಾಡುವ ಬಾಡಿಮಸಾಜ್ ಅವನಿಗೆ ತುಂಬಾ ಇಷ್ಟ. ಬರುವಾಗಲೇ ವಿದೇಶಿ ರಮ್ ಮತ್ತು ನಾನ್ ವೆಜ್ ಪಾರ್ಸಲ್ ತರುತ್ತಾನೆ. ಒಂದು ಪೆಗ್ ಏರುತ್ತಿರುವಂತೆ ಸಂಪೂರ್ಣ ಬೆತ್ತಲಾಗುತ್ತಾನೆ. ಪ್ಯಾರಿಸ್‌ನಿಂದ ತರಿಸಿದ ಆಲಿವ್ – ಆಲ್ಮಂಡ್ ಮುಂತಾದ ಆಯಿಲ್ ಗಳ ಮಿಶ್ರಣದ ಬಾಡಿಮಸಾಜ್ ಆಯಿಲ್ ನಿಂದ ಅವನ ಮಾಸಾಜ್ ಪ್ರಾರಂಭಿಸುತ್ತೇನೆ.

ಸುಮಾರು ಎರಡು ಗಂಟೆಯಷ್ಟು ಕಾಲ ಈ ಮಸಾಜ್ ನಡೆಯುತ್ತದೆ. ಕಾಲ ಬೆರಳ ತುದಿಯಿಂದ ನೆತ್ತಿಯವರೆಗೂ ಅತ್ಯಂತ ಶ್ರಮದಿಂದ ಮಸಾಜ್ ಮಾಡುತ್ತೇನೆ. ಮಧ್ಯೆ ಮಧ್ಯೆ ಒಂದೊಂದೆ ಸಿಪ್ ಡ್ರಿಂಕ್ಸ್ ಕುಡಿಯುತ್ತಿರುತ್ತಾನೆ. ಮಸಾಜ್ ನಂತರ ನಾನೇ ಅವನಿಗೆ ಸ್ನಾನ ಮಾಡಿಸುತ್ತೇನೆ.
ಈ ಅಪಾರ್ಟ್ಮೆಂಟ್ ನಲ್ಲಿ ಸುಸಜ್ಜಿತ ಬಾತ್ ಟಬ್ ಇದೆ.

ನಂತರ ಇಬ್ಬರೂ ಒಟ್ಟಿಗೆ ಊಟ ಮಾಡುತ್ತೇವೆ. ಆ ಕ್ಷಣದಿಂದ ನನ್ನ ಇಡೀ ದೇಹದ ಅಧಿಕಾರವನ್ನು ಅವನು ಮೃಗದಂತೆ ಆಕ್ರಮಿಸುತ್ತಾನೆ.

ಆಹಾ ಆಹಾ……ಕೇಳಲು ಓದಲು ಊಹಿಸಿಕೊಳ್ಳಲು ರೋಮಾಂಚನವಾಗುತ್ತಿದೆಯೇಏಕೆಂದರೆ ಹೇಗಿದ್ದರೂ ನಿಮ್ಮದು ಆಧ್ಯಾತ್ಮಿಕ ಮನಸ್ಸುಗಳಲ್ಲವೇ.
ಹೆಂಡತಿ ಹೊರತುಪಡಿಸಿ ಇತರ ಎಲ್ಲಾ ಹೆಣ್ಣುಗಳು ನಿಮಗೆ ದೈವ ಸ್ವರೂಪವಲ್ಲವೇ – ಪೂಜನೀಯವಲ್ಲವೇ.

ಈ ಕ್ಷಣದ ನನ್ನ ಪರಿಸ್ಥಿತಿ ಎಷ್ಟೋ ಉತ್ತಮ. ನನ್ನ ಗೆಳತಿಯರ ಸ್ಥಿತಿ ಬೀದಿಯ ಹಂದಿ ನಾಯಿಗಳಿಗಿಂತ ಕೀಳು. ಕೀಚಕರು ಕಿತ್ತು ಕಿತ್ತು ತಿನ್ನುತ್ತಾರೆ. ಕಚ್ಚುವವನಾರೋ, ಸಿಗರೇಟಿನಿಂದ ಸುಡುವವನಾರೋ, ಮೈ ಪರಚುವವನಾರೋ ………
…ಅಬ್ಬಾ…..ಹೋಗುವಾಗ ಅವನು ಕೊಡುವ ಟಿಪ್ಸ್ ಮೇಲಷ್ಟೇ ನಮ್ಮ ಗಮನ. ಅವನಿಗೆ ಮಾತ್ರ ಯಾವ ಕುಂದುಕೊರತೆಯೂ ಆಗದಂತೆ ನೋಡಿಕೊಳ್ಳಬೇಕು. ನೆನಪಿಸಿಕೊಂಡರೆ ಮೈ ಉರಿದುಹೋಗುತ್ತದ

” ಹೊಟ್ಟೆ ಪಾಡಿಗಾಗಿ ವೇಶ್ಯಾವೃತ್ತಿಯಲ್ಲಿರುವ ಹೆಣ್ಣನ್ನು ಭೋಗಿಸುವ ಎಲ್ಲಾ ಗಂಡಸಿನ ಪ್ರತಿ ಕದಲಿಕೆಯಲ್ಲೂ ಅವನ ನೆನಪಿನಲ್ಲಿ ಅವನ ತಾಯಿ ತಂಗಿ ಅಕ್ಕ ನಿರಂತರವಾಗಿ ಪ್ರತಿ ಕ್ಷಣವೂ ನೆನಪಾಗುತ್ತಿರಲಿ ”
ಎಂದು ಶಪಿಸಬೇಕೆನಿಸುತ್ತದೆ.

ಓ ಬೂಟಿನ ಶಭ್ಧವಾಗುತ್ತಿದೆ. ಅವನು ಬಂದನೆನಿಸಿತ್ತದೆ. ಉಳಿದದ್ದನ್ನು ಮುಂದೆ ಹೇಳುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ…….

ಸೂಳೆ ಕೂಡ ತಾಯಿ, ತಂಗಿ, ಅಕ್ಕ, ಪ್ರೇಯಸಿಯೇ ನೆನಪಿಟ್ಟುಕೊಳ್ಳಿ.
ಟಿವಿಗಳಲ್ಲಿ, ಪತ್ರಿಕೆಗಳಲ್ಲಿ, ಭಾಷಣಗಳಲ್ಲಿ ಮಹಿಳಾ ಸ್ವಾತಂತ್ರ್ಯದ ಬಗ್ಗೆ, ಮಹಿಳಾ ಸ್ಥಾನಮಾನದ ಬಗ್ಗೆ, ಯಾವುದೋ ಒಂದು ಅತ್ಯಾಚಾರದ ಬಗ್ಗೆ ಚರ್ಚಿಸುವಾಗ ನಕ್ಕು ಸುಮ್ಮನಾಗುತ್ತೇನೆ.

ಆದರೆ ಮನುಷ್ಯರೇ ನೀವು ಮಾತ್ರ ಸುಮ್ಮನಾಗಬೇಡಿ. ಏಳಿ, ಎದ್ದೇಳಿ, ಎಚ್ಚರಗೊಳ್ಳಿ, ನಮ್ಮಂತಹವರಿಗಾಗಿ ಚಿಂತಿಸಿ. ನಿಮ್ಮ ಕೈಲಾಗುವ ಏನಾದರೂ ಸಹಾಯ ಮಾಡಿ.

ಹೆಣ್ಣುಗಳ ಕಣ್ಣೀರನ್ನು ಒರೆಸಿ. ಅಲ್ಲಿಯವರೆಗೂ………

ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು ಮತ್ತು ಅಭಿನಂದನೆಗಳು……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮತಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.


ವಿವೇಕಾನಂದ. ಎಚ್.ಕೆ.
9844013068……