ಹಿಂದು – ಮುಸ್ಲಿಂ ಎಂಬ ಜ್ವಾಲಾಮುಖಿ……..

ವಿಜಯ ದರ್ಪಣ ನ್ಯೂಸ್…..

ಹಿಂದು – ಮುಸ್ಲಿಂ ಎಂಬ ಜ್ವಾಲಾಮುಖಿ……..

ಚುನಾವಣೆ ಗೆಲ್ಲಲು ವಿವಿಧ ರಾಜಕೀಯ ಪಕ್ಷಗಳು ಮಾಡುತ್ತಿರುವ ತಂತ್ರಗಾರಿಕೆ ದೇಶದ ಮತ್ತೊಂದು ವಿಭಜನೆಗೆ ಕಾರಣವಾಗಬಾರದಲ್ಲವೇ……

ಈ ದೇಶ ತನ್ನೊಡಲೊಳಗೆ ಸದಾ ಒಂದು ಜ್ವಾಲಾಮುಖಿಯನ್ನು ಇಟ್ಟುಕೊಂಡಿದೆ. ಅದು ಯಾವಾಗ ಸಿಡಿದು ಅಗ್ನಿ ಪರ್ವತವಾಗಿ ರೂಪಾಂತರವಾಗಿ ಎಲ್ಲ ಕಡೆಯೂ ಚೆಲ್ಲಾಡುತ್ತದೆ ಎಂಬ ಆತಂಕ ಮನದ ಮೂಲೆಯಲ್ಲಿ ಕಾಡುತ್ತಲೇ ಇರುತ್ತದೆ. ಆ ಜ್ವಾಲಾಮುಖಿಯ ಹೆಸರು ಹಿಂದು ಮುಸ್ಲಿಂ……

ಹೌದು, ಈ ದೇಶ ಯಾವಾಗ ಬೇಕಾದರೂ ಆ ಕೋಮುದಳ್ಳುರಿಗೆ ಬಲಿಯಾಗಬಹುದು ಅಥವಾ ವಿಭಜನೆಯಾಗಬಹುದು. ಏಕೆಂದರೆ ಈ ವಿಷಯ ತಂತಿ ಮೇಲಿನ ನಡಿಗೆಯಂತೆ. ಇಲ್ಲಿಯವರೆಗೆ ಹೇಗೋ ಸಮಾಧಾನಕರವಾಗಿ ಸಣ್ಣಪುಟ್ಟ ಘಟನೆಗಳಲ್ಲಿಯೇ ಪರಿಹಾರವಾಗಿ ಮುಂದೆ ಹೋಗುತ್ತಿದೆ…..

ಆದರೆ ಈ ಚುನಾವಣೆಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಈ ವಿಷಯವನ್ನು ಹೆಚ್ಚು ಹೆಚ್ಚು ಮುನ್ನಲೆಗೆ ತರುತ್ತಿದ್ದಾರೆ. ಅವರಿಗೆ ಈ ಸಂದರ್ಭದಲ್ಲಿ ಚುನಾವಣೆ ಎನ್ನುವ ತಂತ್ರಗಾರಿಕೆ ಮತ್ತು ಮತಗಳ ಕ್ರೂಢೀಕರಣದ ಅವಶ್ಯಕತೆ ಕಾಣಿಸಿರಬಹುದು. ಹಾಗೆಯೇ ಅದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ನಾಯಕರು ಸಹ ಈ ಚುನಾವಣೆ ಗೆಲ್ಲಲು ಇನ್ನೊಂದು ರೀತಿಯ ಹೇಳಿಕೆಗಳನ್ನು ಕೊಡುತ್ತಾ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿದ್ದಾರೆ……

ಅಂತಿಮವಾಗಿ ಚುನಾವಣೆಯಲ್ಲಿ ಯಾರೋ ಒಬ್ಬರು ಗೆಲ್ಲಬಹುದು, ಆದರೆ ಅವರು ಮಾಡಿ ಹೋದ ಅನಾಹುತಗಳು ದೀರ್ಘಕಾಲ ಉಳಿಯಬಹುದು ಅಥವಾ ಅಪಾಯಕಾರಿಯಾಗಿ ಈ ದೇಶದಲ್ಲಿ ಕೋಮುದಳ್ಳುರಿ ನಡೆಯಬಹುದು ಅಥವಾ ವಿಭಜನೆಯ ಕೂಗುಗಳು ಮತ್ತಷ್ಟು ತೀವ್ರತೆ ಪಡೆಯಬಹುದು……

ಏಕೆಂದರೆ ಈಗಿನ ಸಾಮಾಜಿಕ ಸಮೂಹ ಸಂಪರ್ಕ ಜಾಲಗಳ ಸಂದರ್ಭದಲ್ಲಿ ಚುನಾವಣಾ ಭಾಷಣಗಳು ಕೇವಲ ಕೆಲವೇ ಸ್ಥಳಗಳಿಗೆ ಸೀಮಿತವಾಗಿರುವುದಿಲ್ಲ. ಅದು ಇಡೀ ದೇಶದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಚರ್ಚೆಯ ವಿಷಯವಾಗುತ್ತದೆ. ಮೊದಲಿನಂತೆ ಕೇವಲ ಕೆಲವೇ ಕೆಲವು ಸಂಬಂಧಪಟ್ಟವರು ಮಾತ್ರ ಇದನ್ನು ಚರ್ಚಿಸುವುದಿಲ್ಲ. ಇಡೀ ದೇಶದ ಬಹುತೇಕ ಜನಸಂಖ್ಯೆ ಈ ಬಗ್ಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತದೆ…….

ಸಹಜವಾಗಿಯೇ ಇದು ಜನರ ಮನಸ್ಸಿನಲ್ಲಿ ಆಳವಾಗಿ ಇಳಿದು ದ್ವೇಷ, ಅಸೂಯೆಗಳು ಮತ್ತಷ್ಟು ಕಿಚ್ಚು ಹಬ್ಬಿಸುತ್ತದೆ. ಒಂದು ದೇಶ ನಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇವಲ ರಾಜಕೀಯ ಮತ್ತು ರಾಜಕಾರಣಿಗಳಿಂದ ಮಾತ್ರ ಎಂಬ ಭ್ರಮೆ ಮತ್ತು ತಪ್ಪು ಕಲ್ಪನೆ ಸೃಷ್ಟಿಯಾಗಿದೆ ರಾಜಕೀಯ ಒಂದು ಅಂಶ ಮಾತ್ರ. ಅದನ್ನು ಹೊರತುಪಡಿಸಿಯೂ ಸಾಮಾನ್ಯ ಜನ ದೇಶವನ್ನು ತಮಗರಿವಿಲ್ಲದೆ, ಅಧಿಕಾರವಿಲ್ಲದೆ ಮುನ್ನಡೆಸುತ್ತಿರುತ್ತಾರೆ. ಆದರೆ ಮುಖ್ಯ ವಾಹಿನಿಯಲ್ಲಿ ಚರ್ಚೆಯಾಗುವುದು ರಾಜಕಾರಣಿಗಳ ಭಾಷಣದ ತುಣುಕುಗಳು ಮಾತ್ರ……

ಚುನಾವಣೆಯನ್ನು ಹೊರತುಪಡಿಸಿ, ಭಾರತೀಯ ಸಂವಿಧಾನ ಮತ್ತು ಮೌಲ್ಯಗಳ ದೃಷ್ಟಿಯಿಂದ ಮಾತನಾಡುವುದಾದರೆ ನರೇಂದ್ರ ಮೋದಿಯವರು ಸಹ ಚುನಾವಣಾ ಭಾಷಣದ ಮಿತಿಯನ್ನು ಮೀರಿ ಏಕವ್ಯಕ್ತಿಯಾಗಿ ಯಾಕೋ ಅತಿರೇಕದ ಭಾಷಣಗಳಿಗೆ ಮೀಸಲಾಗಿದ್ದಾರೆ. ಪ್ರಾರಂಭದಲ್ಲಿ ದೇಶದ ಅಭಿವೃದ್ಧಿಯ ವಿಷಯವನ್ನೇ ಮುಖ್ಯವಾಗಿ ಪ್ರಸ್ತಾಪಿಸುತ್ತಿದ್ದ ಅವರು ಇತ್ತೀಚೆಗೆ ಹಿಂದೂ ಮುಸ್ಲಿಮರ ಬಗ್ಗೆ ಹೆಚ್ಚು ಮಾತನಾಡಲು ತೊಡಗಿದ್ದಾರೆ…..

ಎರಡೂ ಕಡೆಯ ಮೂಲಭೂತವಾದಿಗಳಿಗೆ ಇದು ಪ್ರಚೋದನಾತ್ಮಕವಾಗಿರುತ್ತದೆ, ಹಾಗೆಯೇ ಕಾಂಗ್ರೆಸ್ಸಿನ ಕೆಲವು ನಾಯಕರು ಸಹ, ರಾಹುಲ್ ಗಾಂಧಿಯವರನ್ನು ಸೇರಿ ಮತ್ತಷ್ಟು ಉಗ್ರವಾಗಿ ಅದಕ್ಕೆ ಪ್ರತಿಕ್ರಿಯೆ ನೀಡತೊಡಗಿದ್ದಾರೆ. ಕೊನೆಗೆ ಇದು ಎಲ್ಲಿ ಹೋಗಿ ನಿಲ್ಲಬಹುದು ಯೋಚಿಸಿ ನೋಡಿ. ನಿಮ್ಮ ಯೋಚನಾ ಶಕ್ತಿಯು ಸಹ ಎರಡರ ನಡುವೆಯೇ ಇರಬಾರದು. ಒಬ್ಬ ಪ್ರಬುದ್ಧ ನಾಗರೀಕರಾಗಿ ನಿಜವಾಗಲೂ ಯೋಚಿಸ ಬೇಕಾಗಿರುವುದು ಭಾರತದ ಸಂಪೂರ್ಣ, ಸಮಗ್ರ ಹಿತಾಸಕ್ತಿಯ ದೃಷ್ಟಿಯಿಂದಲೇ ಹೊರತು ಯಾವುದೋ ಜಾತಿ ಧರ್ಮ ವ್ಯಕ್ತಿ ಪಕ್ಷದ ಸಂಕುಚಿತ ಮನೋಭಾವದಿಂದಲ್ಲ……

ಒಂದು ವೇಳೆ ನಾವು ಒಂದು ಧರ್ಮ, ಪಕ್ಷ ಅಥವಾ ವ್ಯಕ್ತಿಯ ಸುತ್ತಲೇ ಯೋಚಿಸುವವರಾದರೆ ಖಂಡಿತವಾಗಲೂ ನಮಗೆ ಸಮಗ್ರ ಚಿತ್ರಣ ಸಿಗುವುದಿಲ್ಲ. ಜೊತೆಗೆ ಆ ಅಭಿಪ್ರಾಯ ದೇಶದ ವಿಭಜಕ ಶಕ್ತಿಗಳಿಗೆ ಪ್ರೋತ್ಸಾಹ ನೀಡಿ ಮುಂದೆಂದೋ ಹಿಂಸೆ ಮತ್ತು ವಿಭಜನೆಗೆ ಕಾರಣವಾಗಬಹುದು ಎಂಬುದನ್ನು ಮರೆಯದಿರಿ…..

ಚುನಾವಣೆಗಳು ಕೇವಲ ಒಂದು ಸ್ಪರ್ಧೆ ಮಾತ್ರ. ಸುಮಾರು 40/50 ದಿನಗಳ ಒಂದು ಪ್ರಕ್ರಿಯೆ. ಗೆಲ್ಲುವವರು, ಸೋಲುವವರು ಇಬ್ಬರೂ ನಮ್ಮವರೇ. ಸಾಮಾನ್ಯ ಜನರಿಗಾದರೆ ನಿಯಂತ್ರಿಸುವ ಒಟ್ಟು ವ್ಯವಸ್ಥೆ ಇಲ್ಲ. ಆದರೆ ಮಾಧ್ಯಮಗಳಿಗೆ ಜವಾಬ್ದಾರಿ ಇದೆ. ಅವರು ದೇಶದ ಒಟ್ಟು ಹಿತಾಸಕ್ತಿಯಿಂದ ಚರ್ಚಿಸಬೇಕಾಗುತ್ತದೆ. ವ್ಯಕ್ತಿ ಎಷ್ಟೇ ದೊಡ್ಡವನಾದರೂ ಮಿತಿಮೀರಿದ ಭಾಷಣ, ವರ್ತನೆಗಳನ್ನು ಖಂಡಿಸಬೇಕಾಗುತ್ತದೆ. ಚುನಾವಣೆ ಪ್ರಚಾರದ ದಿಕ್ಕನ್ನು ನಿರ್ಧೇಶಿಸಬೇಕಾಗುತ್ತದೆ. ಕೆಲವು ಪ್ರಚೋದನೆಕಾರಿ ಹೇಳಿಕೆಗಳನ್ನು ನಿರ್ಲಕ್ಷಿಸಬೇಕಾಗುತ್ತದೆ……

ಕೆಲವು ರಾಜಕೀಯ ಹುಚ್ಚರಂತೂ ಅತ್ಯಂತ ದುಷ್ಟತನದ ಮಾತುಗಳನ್ನು ಆಡುತ್ತಿರುವುದನ್ನು ಸಹ ಗಮನಿಸುತ್ತಿದ್ದೇವೆ. ಆದರೆ ಅಂತಹ ದುಷ್ಟರಿಗೆ ಈ ಮಾಧ್ಯಮಗಳು ಮಹತ್ವ ನೀಡಿ ಮತ್ತಷ್ಟು ವಿಷ ಬೀಜವನ್ನು ಬಿತ್ತುತ್ತಿವೆ. ಸಾಮಾನ್ಯ ಜನರಾದ ನಾವು ಅತ್ಯಂತ ವಿವೇಚನೆಯಿಂದ, ಸಂವೇದನಾಶೀಲರಾಗಿ ಮಾತನಾಡಬೇಕಾಗುತ್ತದೆ….

ಹಿಂದೂ ಮುಸ್ಲಿಂ ಎಂಬ ವಿಷಯ ತುಂಬಾ ಸಂಕೀರ್ಣ ಮತ್ತು ಅಪಾಯಕಾರಿಯಾಗಿ ಪರಿವರ್ತನೆಯಾಗಿದೆ. ಅಷ್ಟು ದೊಡ್ಡ ಒತ್ತಡದ ಸಮಯದಲ್ಲಿ ಸತ್ಯವನ್ನು ಹೊರ ಹಾಕುವುದು ತುಂಬಾ ಕಷ್ಟ. ನಿಜಕ್ಕೂ ಈ ವಿಷಯದಲ್ಲಿ ದೂರ ದೃಷ್ಟಿಯ ಸತ್ಯದ ಅನಾವರಣ ಮಾಡುವುದು ಸಾಧ್ಯವಾಗದ ಮನಸ್ಥಿತಿಯ ಸಾಮಾಜಿಕ ವ್ಯವಸ್ಥೆಯಲ್ಲಿ ನಾವಿದ್ದೇವೆ…..

ಹಿಂದೂ, ಮುಸ್ಲಿಂ, ಇಸ್ಲಾಮೀಕರಣ, ಕೇಸರೀಕರಣ ಈ ವಿಷಯಗಳು ಸಾಧಾರಣ ತಿಳುವಳಿಕೆಗೆ ನಿಲುಕುವುದಿಲ್ಲ ಎಂಬ ಅರಿವಿರಲಿ……..

ಆದರೆ ಕನಿಷ್ಠ ಆ ವಿಷಯ ಅಗ್ನಿ ಪರ್ವತವಾಗಿ ಸಿಡಿಯದಂತೆ ತಡೆಯುವ ಮಧ್ಯಮ ಮಾರ್ಗವನ್ನು ನಾವುಗಳು ಅನುಸರಿಸುವುದು ಉತ್ತಮ. ಇಲ್ಲದಿದ್ದರೆ ನಮ್ಮ ಕಣ್ಣ ಮುಂದೆಯೇ ಮತ್ತೊಂದು ಕೋಮು ಹತ್ಯಾಕಾಂಡ ಸಂಭವಿಸಿದರೆ, ಆಗ ದೇಶ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿರುವುದು ಯುಟರ್ನಾಗಿ ಮಧ್ಯಪ್ರಾಚ್ಯದ ದೇಶಗಳಂತೆ ಮತ್ತೆ ಮಧ್ಯಕಾಲೀನ ಕಾಲಕ್ಕೆ ಮರಳಬಹುದು ಎಚ್ಚರವಿರಲಿ……

ಮಾನವ ಧರ್ಮ, ಮನುಷ್ಯತ್ವದ ಆಧಾರದ ಮೇಲೆ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಂಡು ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕು. ಯಾರದೋ ರಾಜಕಾರಣಿಗಳ ಅಧಿಕಾರದ ತೆವಲಿಗೆ ಈ ದೇಶ ಬಲಿಯಾಗಬಾರದು. ಈ ಪ್ರಜಾಪ್ರಭುತ್ವ ನಾಶವಾಗಬಾರದು. ದಯವಿಟ್ಟು ತೀರಾ ಅತಿರೇಕದ ವರ್ತನೆಯನ್ನು ನಿಯಂತ್ರಿಸಿ ಕೊಳ್ಳಿ. ಮಾತಿನ ಬರದಲ್ಲಿ ಸಂವಿಧಾನದ ಮೂಲ ಆಶಯಗಳಿಗೆ ಕೊಡಲಿ ಏಟು ಹಾಕಬೇಡಿ……
*************************
ನಿನ್ನೆ ದಿನಾಂಕ 10.05.2024 ರ ಶುಕ್ರವಾರ, ಕರ್ನಾಟಕದ ಸಾಂಸ್ಕೃತಿಕ ನಾಯಕ, ಮಹಾ ಮಾನವತಾವಾದಿ ಬಸವಣ್ಣನವರ ಜನುಮದಿನದ ಪ್ರಯುಕ್ತ ಬೆಂಗಳೂರಿನ ಶಿವರಾಮ ಕಾರಂತ ನಗರದ ಬಸವ ಬಳಗದವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಸವ ತತ್ವದ ಮೌಲ್ಯಗಳು ಮತ್ತು ಅಗತ್ಯಗಳ ಕುರಿತು ಸುಧೀರ್ಘವಾಗಿ ಮಾತನಾಡಿದೆನು. ಒಂದು ಉತ್ತಮ ಸಂವಾದ ಕಾರ್ಯಕ್ರಮ ನಡೆಯಿತು. ಭಾಗವಹಿಸಿದ ಅತಿಥಿಗಳ ಸ್ಪಂದನೆ ಉತ್ತಮವಾಗಿತ್ತು…
************************
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ. 9844013068…….