ಕೃಷ್ಣ ಜನ್ಮಾಷ್ಟಮಿಯಂದು ಮಹಾಭಾರತದ ಕೃಷ್ಣ ಎಂಬ ವ್ಯಕ್ತಿತ್ವದ ಸುತ್ತ………..
ವಿಜಯ ದರ್ಪಣ ನ್ಯೂಸ್….
ಕೃಷ್ಣ ಜನ್ಮಾಷ್ಟಮಿಯಂದು ಮಹಾಭಾರತದ ಕೃಷ್ಣ ಎಂಬ ವ್ಯಕ್ತಿತ್ವದ ಸುತ್ತ………..
ಎಂತಹ ಅತ್ಯುದ್ಬುತ ಪಾತ್ರವದು,
ಸಾಹಿತ್ಯಿಕವಾಗಿ ಇರಬಹುದು, ವ್ಯಾವಹಾರಿಕವಾಗಿ ಇರಬಹುದು, ಕಾಲ್ಪನಿಕವಾಗಿ ಇರಬಹುದು ಅಥವಾ ವ್ಯಕ್ತಿತ್ವದ ದೃಷ್ಟಿಯಿಂದ ಇರಬಹುದು. ಸರಿಸುಮಾರು ಪರಿಪೂರ್ಣ ಎಂಬ ಅಭಿಪ್ರಾಯ ಮೂಡಿಸುವ ಪಾತ್ರವದು…….
ಅರಿಷಡ್ವರ್ಗಗಳು, ನವ ರಸಗಳು, ಅರವತ್ನಾಲಕ್ಕು ವಿದ್ಯೆಗಳು ಸೇರಿ ಎಲ್ಲಾ ರೀತಿಯ ಅನುಭವಗಳು ಅದರಲ್ಲಿ ಅಡಕವಾಗಿದೆ ಬಹುತೇಕ ಸಕಲಕಲಾವಲ್ಲಬ……..
ಹೇಗೆ ಅದೊಂದು ಅದ್ಬುತ ಪಾತ್ರವೋ, ಶಕ್ತಿಶಾಲಿಯೋ ಹಾಗೆಯೇ ಕೃಷ್ಣನ ಪ್ರತಿ ನಡೆಯನ್ನು ಅಷ್ಟೇ ತೀಕ್ಷ್ಣವಾಗಿ ಪ್ರಶ್ನಿಸುತ್ತಾ ಸಾಗಬಹುದು. ಕೆಲವುಗಳಿಗೆ ನಿರ್ದಿಷ್ಟ – ಖಚಿತ ಉತ್ತರ, ಮತ್ತೆ ಕೆಲವು ವೇಳೆ ಪಲಾಯನ ವಾದ, ಇನ್ನೊಮ್ಮೆ ಜನ್ಮಾಂತರಗಳಲ್ಲಿ ಅಡಗುವುದು, ಮಗದೊಮ್ಮೆ ಆ ಕ್ಷಣದ ಸತ್ಯ, ಮತ್ತೊಮ್ಮೆ ಗೊಂದಲದ ಸಮರ್ಥನೆ, ನಾನೇ ಸರಿ ಎಂಬ ಹಠ, ಸ್ವಲ್ಪ ವಾಸ್ತವವಾದಿ, ಹೆಚ್ಚು ದುರಹಂಕಾರಿ, ಅಪಾರ ತಂತ್ರಗಳು ಹಾಗೆಯೇ ಉದಾರಿ, ತ್ಯಾಗಿ ಇನ್ನೂ ಎಲ್ಲಾ ಭಾವಗಳ ಸಂಗಮ ಈ ಕೃಷ್ಣ…..
ಇತರ ಕೆಲವು ಧರ್ಮಗಳ ಗುರುಗಳು ಇಡೀ ಸಮಾಜದ ಶಾಂತಿ ಪ್ರಕ್ರಿಯೆ, ಧಾರ್ಮಿಕ ಆಚರಣೆ, ಒಳ್ಳೆಯ ವ್ಯಕ್ತಿತ್ವ ಮತ್ತು ಬದುಕಿನ ಸಾರ್ಥಕತೆಯ ಬಗ್ಗೆ ಪ್ರವಚನ ರೂಪದ ಭೋದನೆ ಮಾಡುತ್ತಾರೆ. ತಾವು ಕಂಡ ಸತ್ಯವನ್ನು ಬಿಚ್ಚಿಡುತ್ತಾರೆ. ಆದರೆ ಕೃಷ್ಣ ಹುಟ್ಟಿನಿಂದ ಸಾವಿನವರೆಗಿನ ಇಡೀ ಜೀವನದ ಸಾರವನ್ನು, ವಾಸ್ತವದಲ್ಲಿ ನಡೆಯುವ ಘಟನೆಗಳನ್ನು ಸಂಕೇತಿಸುತ್ತಾ, ಪರಿಹಾರ ಸೂಚಿಸುತ್ತಾ ಸಾಗುತ್ತಾರೆ. ಎಲ್ಲವೂ ಧರ್ಮದ ಉಳಿವಿಗಾಗಿ ಎಂದು ಸಮರ್ಥಿಸಿಕೊಳ್ಳುತ್ತಾರೆ ಮತ್ತು ಎಲ್ಲವನ್ನೂ ನಿಯಂತ್ರಿಸುತ್ತಾರೆ……
ಎಲ್ಲರೂ ನಿನ್ನೊಳಗೆ ನೀನು ಎಂದು ಹೇಳಿದರೆ ಕೃಷ್ಣ ನನ್ನೊಳಗೆ ನೀನು ಎಂದು ಹೇಳುತ್ತಾರೆ……
ಸನಾತನ ಧರ್ಮದಲ್ಲಿ ನಂಬಿಕೆ ಇರುವ ಬಹುತೇಕ ಎಲ್ಲರೂ ಕೃಷ್ಣರ ದೈವಿಕ ಸ್ವರೂಪದ ವ್ಯಕ್ತಿತ್ವವನ್ನು, ಆತನ ಕ್ರಿಯೆಗಳನ್ನು ಸಂಪೂರ್ಣ ಒಪ್ಪಿಕೊಳ್ಳುತ್ತಾರೆ. ಅದೇ ಜೀವನದ ಸತ್ಯ ಎಂದು ನಂಬುತ್ತಾರೆ. ಆತನೇ ಅವರಿಗೆ ಸರ್ವ ಶಕ್ತ – ಸರ್ವಾಂತರ್ಯಾಮಿ…….
ಅದೇರೀತಿ ಪ್ರಗತಿಪರ ವಾದದ, ವೈಚಾರಿಕ ಪ್ರಜ್ಞೆಯ, ಎಡಪಂಥೀಯ ಚಿಂತನೆಯ ವ್ಯಕ್ತಿತ್ವದವರು ಕೃಷ್ಣನ ಪ್ರತಿ ನಡೆಯನ್ನು ಪ್ರಶ್ನಿಸುತ್ತಾರೆ. ಆತನ ನಡೆಗಳು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು ಮತ್ತು ಸ್ವಾರ್ಥಕ್ಕಾಗಿ ಹಿಂಸೆಯನ್ನು ಪ್ರಚೋದಿಸುವ, ಕೆಳ ಮತ್ತು ಶ್ರಮಿಕ ವರ್ಗಗಳನ್ನು ಶೋಷಿಸುವ ತಂತ್ರಗಳೇ ಆತನ ಚಿಂತನೆಯಲ್ಲಿ ಅಡಗಿವೆ ಎಂದು ಹೇಳುತ್ತಾರೆ………
ಮಹಾಭಾರತವನ್ನು ರಚಿಸಿದರು ಎಂದು ಹೇಳಲಾದ ವ್ಯಾಸರು ತಮ್ಮ ಇಡೀ ಕಥನವನ್ನು ಮತ್ತು ತಮ್ಮ ಅಭಿಪ್ರಾಯಗಳನ್ನು ಹಾಗು ಅಂದಿನ ಸಾಮಾಜಿಕ ವ್ಯವಸ್ಥೆಯನ್ನು ಕೃಷ್ಣನ ಪಾತ್ರದ ಮುಖಾಂತರವೇ ಹೇಳುತ್ತಾರೆ. ಆತನೇ ಮಹಾಭಾರತ ನಿಜವಾದ ಸೂತ್ರಧಾರ. ಎಲ್ಲಾ ಕಾಲಕ್ಕೂ ಸಲ್ಲುವ ಪಾತ್ರ ಎಂದು ಹೇಳಲಾಗುತ್ತದೆಯಾದರೂ ಈಗಿನ ಕಾಲದಲ್ಲಿ ಬುದ್ದಿ ಜೀವಿಗಳ ವರ್ಗದಿಂದ ಸಾಕಷ್ಟು ಟೀಕೆಯನ್ನು ಎದುರಿಸಬೇಕಾಗಿದೆ. ಉತ್ತರವಿಲ್ಲದ ಎಷ್ಟೋ ಪ್ರಶ್ನೆಗಳು ಆತನಲ್ಲಿ ಅಡಗಿದೆ…….
ವೈಯುಕ್ತಿಕ ಮಟ್ಟದಲ್ಲಿ ಕೃಷ್ಣ ಅರ್ಥವಾಗಬೇಕಾದರೆ ಕೇವಲ ಮಹಾಭಾರತ ಮತ್ತು ಭಗವದ್ಗೀತೆ ಓದಿದರೆ ಅಥವಾ ಶ್ಲೋಕಗಳನ್ನು ಬಾಯಿ ಪಾಠ ಮಾಡಿದರೆ ಅಥವಾ ಪ್ರವಚನಗಳನ್ನು ಕೇಳಿದರೆ ಅಥವಾ ಆತನ ಜೀವನ ಚರಿತ್ರೆ ಆಧಾರಿತ ನಾಟಕ, ಟಿವಿ, ಧಾರಾವಾಹಿ, ಸಿನಿಮಾ ನೋಡಿದರೆ ಅಥವಾ ಆತನನ್ನು ದೇವರೆಂದು ಭಕ್ತಿಯಿಂದ ಪೂಜಿಸಿದರೆ ಮಾತ್ರ ಸಾಕಾಗುವುದಿಲ್ಲ. ನಮ್ಮ ಬದುಕಿನ ಅನುಭವದೊಳಗೆ ಆತನನ್ನು ಸಮೀಕರಿಸಿಕೊಂಡಾಗ, ಭಾರತದ ಸಾಮಾಜಿಕ ಮತ್ತು ರಾಜಕೀಯ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡಾಗ, ಮಹತ್ವದ ಸಂದರ್ಭದಲ್ಲಿ ನಮ್ಮ ನಡೆಗಳ ಜೊತೆ ಆತನ ತಂತ್ರಗಳನ್ನು ಪ್ರಾಯೋಗಿಕತೆಗೆ ಅಳವಡಿಸಿದಾಗ ಮಾತ್ರ ಕೃಷ್ಣರ ನಿಜ ರೂಪದ ಪರಿಚಯವಾಗಲು ಸಾಧ್ಯ…….
ವೇದವ್ಯಾಸರೆಂಬ ವಿಶ್ವ ಶ್ರೇಷ್ಠ ಸಾಹಿತಿ ಮಹಾಭಾರತ ಎಂಬ ಬೃಹತ್ ಗ್ರಂಥವನ್ನು ಸೃಷ್ಟಿಸುವಾಗ ಅನೇಕ ಪಾತ್ರಗಳು, ಬಹಳಷ್ಟು ಘಟನೆಗಳು, ವಿಚಿತ್ರ, ವಿಶಿಷ್ಟ, ವಿಸ್ಮಯ, ವಿಶೇಷ, ವಿಪರ್ಯಾಸ, ವಿವೇಚನೆ, ವ್ಯಂಗ್ಯ, ವೈಪರೀತ್ಯ, ವಿಭಿನ್ನ, ವೈವಿಧ್ಯಮಯ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ…….
ಬಹುಶಃ ಅದಕ್ಕೆ ಎಲ್ಲಾ ರೀತಿಯ ಉತ್ತರ ನೀಡಲು ಸೃಷ್ಟಿಸಿದ ಅತ್ಯಮೋಘ ವರ್ಣರಂಜಿತ ಬುದ್ದಿವಂತ ಅತಿಮಾನುಷ ದೈವೀ ಶಕ್ತಿಯ ಪಾತ್ರವೇ ಶ್ರೀಕೃಷ್ಣ……
ಪಾಂಡವರೆಂಬ ಒಳ್ಳೆಯ ಗುಣಗಳ ಪ್ರತಿನಿಧಿಗಳು, ಕೌರವರೆಂಬ ಹಠಮಾರಿಗಳು ಮತ್ತು ಕೆಲವು ಕೆಟ್ಟ ಹಾಗೂ ದ್ವೇಷಮಯ ಸ್ವಭಾವದ ದಾಯಾದಿಗಳು, ಕರ್ಣನೆಂಬ ತ್ಯಾಗಜೀವಿ, ದುಷ್ಯಾಸನನೆಂಬ ದುಷ್ಟ, ದ್ರೋಣನೆಂಬ ಗುರು, ಭೀಷ್ಮನೆಂಬ ಹಿರಿಯಜ್ಜ, ವಿಧುರನೆಂಬ ಸಮನ್ವಯಿ, ಬಕಾಸುರನೆಂಬ ತಿಂಡಿಪೋತ, ಕೀಚಕನೆಂಬ ಸ್ತ್ರೀಮೋಹಿ, ಧೃತರಾಷ್ಟ್ರನೆಂಬ ಪುತ್ರವ್ಯಾಮೋಹಿ,
ಶಕುನಿ ಎಂಬ ಕುತಂತ್ರಿ, ಅಭಿಮನ್ಯು ಎಂಬ ಪರಾಕ್ರಮಿ, ದ್ರೌಪದಿ, ಕುಂತಿ, ಗಾಂಧಾರಿಯರು, ವೈಭವೋಪೇತ ಅರಮನೆ, ಜೂಜಾಟದ ಸೋಲು,
ದ್ರೌಪದಿಯ ವಸ್ತ್ರಾಪಹರಣ, ಆ ಸಂದರ್ಭದ ಹಿರಿಯರ ಅಸಹಾಯಕತೆ, ದುರ್ಯೋಧನನ ಹಠ, ವನವಾಸ, ಅಜ್ಞಾತವಾಸ, ಸಂಧಾನಗಳು, ಯುದ್ದದ ಅನಿವಾರ್ಯತೆಯ ಸೃಷ್ಟಿ, ಕಡಿಮೆ ಸಂಖ್ಯೆಯ ಪಾಂಡವರು ಮತ್ತು ಹಲವಾರು ಅಕ್ಷೋಹಿಣಿ ಸೈನದಷ್ಟು ದೊಡ್ಡ ಕೌರವ ಪಡೆ, ಆಗಿನ ಧರ್ಮ ಮತ್ತು ಋಣದ ಕಾರಣಕ್ಕಾಗಿ ಒಳ್ಳೆಯವರು ಕೂಡ ಕೌರವರ ಪರವಾಗಿ ಯುದ್ಧ ಮಾಡುವ ಅನಿವಾರ್ಯತೆ, ಅರ್ಜುನ, ಕರ್ಣ, ಭೀಷ್ಮರ ಮಾನಸಿಕ ತೊಳಲಾಟ, ಅಶ್ವಥಾಮನ ಸೇಡು, ಮೋಸ ಮತ್ತು ಮಾಯೆಯ ಯುದ್ಧ, ಕೌರವರ ಅವಸಾನ, ಯುದ್ಧ ಗೆದ್ದ ನಂತರದ ಪಾಂಡವರ ವೈರಾಗ್ಯ ಇವೆಲ್ಲವನ್ನೂ ತಾರ್ಕಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ನಿಭಾಯಿಸಲು ವ್ಯಾಸರು ಕೃಷ್ಣನೆಂಬ ಅವತಾರ ಪುರುಷನನ್ನು ತಮ್ಮ ಅದ್ಬುತ ಕಲ್ಪನೆಯಿಂದ ಸೃಷ್ಟಿಸಿದರು……..
ಕೃಷ್ಣ ಒಬ್ಬ ರಸಿಕ, ಕೃಷ್ಣ ಒಬ್ಬ ಚಾಣಾಕ್ಷ, ಕೃಷ್ಣ ಒಬ್ಬ ಮಾಯಾವಿ, ಕೃಷ್ಣ ಒಬ್ಬ ತ್ಯಾಗಿ, ಕೃಷ್ಣ ಒಬ್ಬ ಸಂಧಾನಕಾರ, ಕೃಷ್ಣ ಒಬ್ಬ ಯೋಧ, ಕೃಷ್ಣ ಒಬ್ಬ ಸಾರಥಿ, ಕೃಷ್ಣ ಒಬ್ಬ ತತ್ವಜ್ಞಾನಿ, ಕೃಷ್ಣ ಒಬ್ಬ ಮಾರ್ಗದರ್ಶಕ, ಕೃಷ್ಣ ಒಬ್ಬ ಧರ್ಮ ರಕ್ಷಕ, ಕೃಷ್ಣ ಒಬ್ಬ ದಯಾಮಯಿ, ಕೃಷ್ಣ ಸರ್ವಾಂತ್ಯಾಮಿ, ಕೃಷ್ಣ ಒಬ್ಬ ಜೀವಪರ ನಿಲುವಿನವ…….
ಹಾಗೆಯೇ,
ಕೃಷ್ಣ ಒಬ್ಬ ವಂಚಕ, ಕೃಷ್ಣ ಒಬ್ಬ ಮೋಸಗಾರ, ಕೃಷ್ಣ ಒಬ್ಬ ಸ್ತ್ರೀಲೋಲ, ಕೃಷ್ಣ ಒಬ್ಬ ಕುತಂತ್ರಿ, ಕೃಷ್ಣ ಒಬ್ಬ ಮಾಟಗಾರ, ಕೃಷ್ಣ ಒಬ್ಬ ಸ್ವಾರ್ಥಿ, ಕೃಷ್ಣ ಒಬ್ಬ ಕಪಟಿ, ಕೃಷ್ಣ ಒಬ್ಬ ಹೇಡಿ, ಕೃಷ್ಣ ಒಬ್ಬ ದಗಲ್ಬಾಜಿ………
ಹೀಗೆ ಕೃಷ್ಣರಲ್ಲಿ ಎಲ್ಲಾ ರೀತಿಯ ರಸಭಾವಗಳನ್ನು ತುಂಬಿ ಅವನನ್ನು ದೈವತ್ವಕ್ಕೇರಿಸಿ ಅವನ ಲೀಲೆಗಳಲ್ಲಿಯೇ ಮಹಾಭಾರತದ ಎಲ್ಲಾ ಅಂಶಗಳನ್ನು ನಿಯಂತ್ರಿಸಿದ ಮಹಾನ್ ಸಾಹಿತ್ಯ ರಚನೆಕಾರ ವೇದವ್ಯಾಸರು…..
ಕೃಷ್ಣರ ಹುಟ್ಟು ಸಾವುಗಳು, ಆತನ ಬಾಲ್ಯ ಲೀಲೆಗಳು, ತಾಯಿ ಮಗುವಿನ ತುಂಟಾಟ, ಯೌವ್ವನದ ಪ್ರೇಮ ಪ್ರಣಯ, ಸಾಹಸ ಮುಂತಾದ ಘಟನೆಗಳನ್ನು ಸಾಮಾನ್ಯರ ಪದಗಳ ವರ್ಣನೆಗೆ ನಿಲುಕದಷ್ಟು ಅತ್ಯದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ವ್ಯಾಸರು…..
ತನ್ನೊಳಗಿನ ಕೃಷ್ಣನಂತ ಸಕಲಾಕಲಾವಲ್ಲಭನ ವ್ಯಕ್ತಿತ್ವವನ್ನು ಭಾರತದ ಸಂಸ್ಕೃತಿಗೆ ಕೊಡುಗೆಯಾಗಿ ನೀಡಿ ಆ ಪಾತ್ರ ದೈವ ಶಕ್ತಿಯಾಗಿ ಮಾರ್ಪಟ್ಟು ಭಕ್ತಿಯೋ, ನಂಬಿಕೆಯೋ ಆಧ್ಯಾತ್ಮಿಕತೆಯೋ, ವೈಚಾರಿಕತೆಯೋ ಒಟ್ಟಿನಲ್ಲಿ ಕೋಟ್ಯಂತರ ಜನರ ಸ್ಪೂರ್ತಿಯ ಚಿಲುಮೆಯಾದ ವೇದವ್ಯಾಸರಿಗೆ ಪರೋಕ್ಷವಾಗಿ ಮತ್ತು ಕೃಷ್ಣರಿಗೆ ಜನ್ಮಾಷ್ಠಮಿಯ ಶುಭಾಶಯಗಳು…….
ವ್ಯಾಸರು ಭಗವದ್ಗೀತೆಯ ಮುಖಾಂತರ ಇಡೀ ಬದುಕಿನ ಸಾರವನ್ನು ಕೃಷ್ಣರ ಪಾತ್ರದಲ್ಲಿ ನಿರೂಪಿಸುತ್ತಾರೆ. ಅದನ್ನು ಒಪ್ಪುವುದು, ತಿರಸ್ಕರಿಸುವುದು ನಮ್ಮ ನಮ್ಮ ವಿವೇಚನೆಗೆ ಬಿಟ್ಟದ್ದು….
ಕೃಷ್ಣ ಒಂದು ಪಾತ್ರವೋ ಅಥವಾ ನಿಜ ವ್ಯಕ್ತಿಯೋ ಎಂಬುದು ಅವರವರ ಗ್ರಹಿಕೆಗೆ ಬಿಟ್ಟು ಆ ವ್ಯಕ್ತಿತ್ವ ಆಧ್ಯಾತ್ಮಿಕ ಚಿಂತನೆಗಿಂತ ವ್ಯಾವಹಾರಿಕ ಚಟುವಟಿಕೆಗಳಲ್ಲಿ ಹೆಚ್ಚು ಪ್ರಸ್ತುತ ಎಂದು ಭಾವಿಸುತ್ತಾ…….
ಸತ್ಯದ ಹುಡುಕಾಟ ನಿರಂತರ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ,
9844013068……….