ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ : ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಶುಭ 

ವಿಜಯ ದರ್ಪಣ ನ್ಯೂಸ್….

ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ : ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಶುಭ

ಮಡಿಕೇರಿ: ಭಾರತೀಯರೆಲ್ಲರಿಗೂ ಧರ್ಮಗ್ರಂಥ ಸಂವಿಧಾನವಾಗಿದ್ದು, ಸಂವಿಧಾನ ಮತ್ತು ಕಾನೂನನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ತಿಳಿಸಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನುಗಳಿಗೆ ಮೂಲ ಸಂವಿಧಾನ. ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಸಹ ಸಂವಿಧಾನದ ಕೊಡುಗೆ. ಸಂವಿಧಾನದಲ್ಲಿ ಕೇವಲ ಹಕ್ಕುಗಳನ್ನು ಮಾತ್ರ ನೀಡದೆ, ಕರ್ತವ್ಯಗಳನ್ನು ನೀಡಿದ್ದು ಅದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು.

ಪ್ರತಿಯೊಬ್ಬರಿಗೂ ವಿಶೇಷ ಪ್ರತಿಭೆ ಇದ್ದು, ಅದನ್ನು ಪ್ರದರ್ಶಿಸಲು ಸಹ ಸಂವಿಧಾನ ಮೂಲ ಕಾರಣ ಎಂದರು. ಶಿಕ್ಷಣವೆಂದರೆ ಕೇವಲ ಕಲಿಕೆಯಾಗದೆ ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆ ಇದೆ ಎಂದರು.

ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಚಿನ್ ವಾಸುದೇವ್ ಅವರು ಮಾತನಾಡಿ ಸಂವಿಧಾನ ದಿನವನ್ನು ಪ್ರತಿಯೊಬ್ಬರೂ ಹಬ್ಬದಂತೆ ಆಚರಿಸಬೇಕು ಎಂದು ನುಡಿದರು.

ಭಾರತೀಯ ಸಂವಿಧಾನ ಅತ್ಯದ್ಭುತವಾದ ಸಂವಿಧಾನವಾಗಿದ್ದು, ವಿಶ್ವದಲ್ಲಿ ಮಾದರಿಯಾಗಿದೆ. ಆ ದಿಸೆಯಲ್ಲಿ ಪ್ರತಿಯೊಬ್ಬರಿಗೂ ಎಲ್ಲಾ ಅವಕಾಶಗಳನ್ನು ನೀಡಿದೆ ಮತ್ತು ಮೂಲಭೂತ ಕರ್ತವ್ಯ ಮತ್ತು ಹಕ್ಕು ನೀಡಿದೆ ಎಂದರು.

ಸಮಾಜದಲ್ಲಿ ಜ್ಞಾನದ ಕೊರತೆಯಿಂದ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಯುವ ಸಮೂಹ ಎಚ್ಚರ ಇರಬೇಕು ಎಂದು ಸಚಿನ್ ವಾಸುದೇವ್ ಅವರು ಕಿವಿಮಾತು ಹೇಳಿದರು.

ಕನ್ನಡ ಪ್ರಾಧ್ಯಾಪಕರಾದ ಪೂಜಾರ್ ಅವರು ಸಂವಿಧಾನ ಅಂಗೀಕಾರವಾದ ದಿನವಾಗಿದೆ. ಸಂವಿಧಾನ ಎಂಬುದು ಮಾತೃ ಸಮಾನವೆಂದರು. ಹಲವು ದೇಶಗಳ ಉತ್ತಮ ಅಂಶಗಳನ್ನು ಅಳವಡಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿಸಿದ ಗ್ರಂಥ ಎಂದರು.

ಪ್ರಾಂಶುಪಾಲರಾದ ಮಂದಣ್ಣ ಅವರು ಮಾತನಾಡಿ ವಿಶ್ವದಲ್ಲೇ ಅದ್ಭುತ ಮತ್ತು ದೊಡ್ಡ ಗ್ರಂಥವಾಗಿದೆ. ಅದನ್ನು ಎಲ್ಲರೂ ಪಾಲಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾಕ್ಷಾಯಿಣಿ ವಾಸುದೇವ್ ಅವರು ಮಾತನಾಡಿ ಶಿಕ್ಷಕರು ಯಾವುದೇ ವಿಚಾರದಲ್ಲಿ ಮುಗ್ಘ ಮಕ್ಕಳ ಮನಸ್ಸಿಗೆ ನೋವುಂಟಾಗದಂತೆ ಗಮನಹರಿಸಬೇಕು ಎಂದು ಸಲಹೆ ಮಾಡಿದರು.

ಹಿಂದೆ ಹಲವು ಸಮಸ್ಯೆಗಳಿಂದ ಶಿಕ್ಷಣ ಪಡೆಯುತ್ತಿದ್ದರು, ಈಗ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುತ್ತಿದ್ದು, ಇದನ್ನು ಸರಿಯಾಗಿ ಬಳಸಿಕೊಳ್ಳುವಂತಾಗಬೇಕು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂವಿಧಾನದ ಪ್ರಾಮುಖ್ಯತೆ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು, ಅದರಲ್ಲಿ ಪ್ರಥಮ ಅಜಾರಿಯಾ, ದ್ವಿತೀಯ ಅನುಷಾ, ತೃತೀಯ ಪ್ರತೀಕ್ಷಾ ಅವರು ಬಹುಮಾನ ಪಡೆದುಕೊಂಡರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಳಿನಿ ಅವರು ಸ್ವಾಗತಿಸಿದರು. ಮುಬೀನ ಅವರು ವಂದಿಸಿದರು.