ಬಳ್ಳಿ ಆಲೂಗಡ್ಡೆಯನ್ನು ಬೆಳೆದು ಯಶಸ್ಸು ಕಂಡಿರುವ ಅಪ್ಪೇಗೌಡನಹಳ್ಳಿ ರೈತ ತ್ಯಾಗರಾಜ್

ವಿಜಯ ದರ್ಪಣ ನ್ಯೂಸ್…

ಬಳ್ಳಿ ಆಲೂಗಡ್ಡೆಯನ್ನು ಬೆಳೆದು ಯಶಸ್ಸು ಕಂಡಿರುವ ಅಪ್ಪೇಗೌಡನಹಳ್ಳಿ ರೈತ ತ್ಯಾಗರಾಜ್

ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ : ತಾಲ್ಲೂಕಿನ ಅಪ್ಪೇಗೌಡನಹಳ್ಳಿ ರೈತ ಎ.ಎಂ.ತ್ಯಾಗರಾಜ್, ಬಳ್ಳಿ ಆಲೂಗಡ್ಡೆಗಳನ್ನು ಕಳೆದ ನಾಲ್ಕು ವರ್ಷಗಳಿಂದ ಬೆಳೆಯುತ್ತಿದ್ದು, ಇದರ ಗಡ್ಡೆಗಳನ್ನು ರಾಜ್ಯ, ಹೊರ ರಾಜ್ಯಗಳ ರೈತರಿಗೆ ಮತ್ತು ಆನ್ ಲೈನ್ ಮೂಲಕ ಆರ್ಡರ್ ಮಾಡಿದವರಿಗೂ  ಕೂಡ ನೀಡುತ್ತಾ ಬಂದಿದ್ದಾರೆ.

ಇವರು ಬೆಳೆಯುವ ಬಳ್ಳಿ ಆಲೂಗಡ್ಡೆ ಬಗ್ಗೆ ದೂರದ ಅಮೆರಿಕಯಲ್ಲಿ ನೆಲೆಸಿದ್ದವರೂ ಇದೀಗ ಆಕರ್ಷಿತರಾಗಿದ್ದಾರೆ. ಅಮೆರಿಕದಲ್ಲಿ ಸುಮಾರು 45 ವರ್ಷಗಳಿಂದ ನೆಲೆಸಿರುವ ಕೃಷಿ ವಿಜ್ಞಾನಿ ರಾಘವರೆಡ್ಡಿ, ರೈತ ಎ.ಎಂ.ತ್ಯಾಗರಾಜ್ ಬೆಳೆದ ಬಳ್ಳಿ ಆಲೂಗಡ್ಡೆ ವಿಚಾರವನ್ನು “ಯೂ ಟ್ಯೂಬ್” ಜಾಲತಾಣದ ವಿಡಿಯೊದಲ್ಲಿ ನೋಡಿ ಎ.ಎಂ.ತ್ಯಾಗರಾಜ್ ಅವರ ತೋಟಕ್ಕೆ ಬಂದಿದ್ದರು.

ಬಳ್ಳಿ ಆಲೂಗಡ್ಡೆ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ ಇದನ್ನು ಔಷಧೀಯ ಕಣಜವೆಂದು ಆದಿವಾಸಿಗಳು ಬಳಸುತ್ತಿದ್ದರು ರೈತ ತ್ಯಾಗರಾಜ್‌ ಬೆಳೆದಿರುವ ಬಳ್ಳಿ ಆಲೂಗಡ್ಡೆ ಬಗ್ಗೆ ವಿಡಿಯೊವನ್ನು ಅಮೆರಿಕದಲ್ಲಿದ್ದಾಗ ನೋಡಿ, ವಿಳಾಸ ಗುರುತು ಹಾಕಿಕೊಂಡಿದ್ದೆ ಇದೀಗ ಇವರ ತೋಟಕ್ಕೆ ಭೇಟಿ ನೀಡಿ ಗಡ್ಡೆಗಳನ್ನು ತೆಗೆದುಕೊಂಡು ಹೋಗುತ್ತಿರುವೆ ಎಂದು ಕೃಷಿ ವಿಜ್ಞಾನಿ ರಾಘವರೆಡ್ಡಿ ತಿಳಿಸಿದರು.

ನಾನು ಜಿ.ಕೆ.ವಿ.ಕೆಯಲ್ಲಿ ಕೃಷಿ ವಿಜ್ಞಾನದಲ್ಲಿ ಎಂ.ಎಸ್ಸಿ ಪದವಿ ಪಡೆದು ಅಮೆರಿಕದ ಸಿಯಾಟಲ್ ನಲ್ಲಿ 45 ವರ್ಷಗಳಿಂದ ನೆಲೆಸಿದ್ದು ,ಇದೀಗ ಹೊಸಕೋಟೆ ಬಳಿಯ ದೇವನಗುಂದಿ ಹೊಸಹಳ್ಳಿಯಲ್ಲಿ ಜಮೀನು ಮಾಡಿದ್ದು, ಬರಸಹಿಷ್ಣು ಹಣ್ಣಿನ ಮರಗಳು ಹಾಗೂ ಸಸ್ಯಗಳನ್ನು ಬೆಳೆಸುತ್ತಿದ್ದೇನೆ. ಮೂರು ವರ್ಷಗಳು ಮಾತ್ರ ಆರೈಕೆ ಮಾಡಿ, ಹಣ್ಣಿನ ಅರಣ್ಯವನ್ನು ರೂಪಿಸುವ ಉದ್ದೇಶವನ್ನು ಹೊಂದಿದ್ದೇನೆ, ಈಗ ಬಳ್ಳಿ ಆಲೂಗಡ್ಡೆ ಕೂಡ ಹೊಸ ಸೇರ್ಪಡೆಯಾಗಲಿದೆ, ಅಮೆರಿಕಾಗೂ ಒಂದೆರಡು ಗಡ್ಡೆ ತೆಗೆದುಕೊಂಡು ಹೋಗುವೆ ಎಂದ ಅವರು ವರ್ಷಕ್ಕೊಮ್ಮೆ ಅಮೆರಿಕದಿಂದ ಭಾರತಕ್ಕೆ ಬರುತ್ತಿರುತ್ತೇನೆ. ನಾನಿಲ್ಲದಿದ್ದಾಗ ಜಮೀನನ್ನು ನೋಡಿಕೊಳ್ಳಲು ಒಬ್ಬರನ್ನು ನೇಮಿಸಿದ್ದೇನೆ ಎಂದು ಅವರು ತಮ್ಮ ಅನಿಸಿಕೆಯನ್ನು ವಿವರಿಸಿದರು.

ರೈತ ಅಪ್ಪೇಗೌಡನಹಳ್ಳಿ ಎಂ.ತ್ಯಾಗರಾಜ್ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ಹೂಸ ತಳಿಗಳನ್ನು ಆರಿಸಿಕೊಂಡು ಆಸಕ್ತಿ ವಹಿಸಿ ನೂತನ ತಂತ್ರಜ್ಞಾನ ಅಳವಡಿಸುವ ಮೂಲಕ ಕೃಷಿ ಮಾಡವತ್ತ ರೈತರು ಮನಸ್ಸು ಮಾಡಿದಲ್ಲಿ ಹೆಚ್ಚು ಆದಾಯ ಗಳಿಸಲು ಸಾಧ್ಯವಾಗಲಿದೆ ಎಂದು ಮನವಿ ಮಾಡಿದರು.