ವಿಜಯ ದರ್ಪಣ ನ್ಯೂಸ್….
ಕಾರ್ಮಿಕ ಸಂಘಟನೆಯ ನಾಯಕರು ವಿಧಾನಸಭೆಲ್ಲಿರಬೇಕು: ಡಾ.ಲಕ್ಷ್ಮಿವೆಂಕಟೇಶ್

ತಾಂಡವಪುರ ಮೈಸೂರು ಜಿಲ್ಲೆ : ಯಾವುದೇ ರಾಜ್ಯವಾಗಲಿ ಕಾರ್ಮಿಕ ಸಂಘಟನೆಯ ನಾಯಕರೊಬ್ಬರು ವಿಧಾನ ಸಭೆಯಲ್ಲಿ ಇರಬೇಕು ಎಂದು ಕರ್ನಾಟಕ ರಾಜ್ಯ ಐಎನ್‌ಟಿಯುಸಿ ಡಾ.ಲಕ್ಷ್ಮಿ ವೆಂಕಟೇಶ್ ಅಭಿಪ್ರಾಯ ಪಟ್ಟರು.
ಮೈಸೂರಿನ ಕೆಎಸ್ ಒಯು ಘಟಿಕೋತ್ಸವ ಭವನದಲ್ಲಿ ಟಿವಿಎಸ್ ಮೋಟಾರ್ ಕಂಪನಿ ಉದ್ಯೋಗಿಗಳ ಸಂಘದ 25 ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕ, ತಮಿಳುನಾಡು ಹೀಗೆ ಯಾವುದೇ ರಾಜ್ಯವಾಗಲಿ ಯೂನಿಯನ್ ನಾಯಕರೊಬ್ಬರು ವಿಧಾನಸಭೆಯಲ್ಲಿರಬೇಕೆಂಬುದು ನಮ್ಮ ಒತ್ತಾಯವಾಗಿದೆ. ಈ ದೃಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷರಾದ ಕುಪ್ಪೇಸ್ವಾಮಿ ಅವರಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡುವಂತೆ ಒತ್ತಡ ಹೇರಲಾಗಿದೆ. ನೀವೆಲ್ಲರೂ ಒಗ್ಗಟ್ಟಿನಿಂದ ಅವರ ಕನಸು ನನಸು ಮಾಡಬೇಕಿದೆ ಎಂದು ಹೇಳಿದರು.
ಕಾರ್ಮಿಕರಿಗೆ ಹೆಚ್ಚಿನ ಲಾಭ ನೀಡುವ ಟಿವಿಎಸ್ ಸಂಸ್ಥೆ ಕಾರ್ಯ ಶ್ಲಾಘನೀಯ. ಅದರಲ್ಲೂ ಟಿವಿಎಸ್ ಕಂಪನಿಯ ಕಾರ್ಮಿಕರು ಒಗ್ಗಾಟ್ಟಾಗಿ ಯಾವುದೇ ತೊಂದರೆ, ಗಲಾಟೆಗೆ ಅವಕಾಶ ನೀಡದೇ ಶಿಸ್ತುಬದ್ಧವಾಗಿ ನಡೆಯುತ್ತಿದ್ದೀರಿ. ಸಂಸ್ಥೆಯೂ ಅಷ್ಟೇ ಕಾರ್ಮಿಕರ ಪರವಾಗಿ ನಡೆಯುವ ಮೂಲಕ ಮಾದರಿಯಾಗಿದೆ. ಇಂತಹ ಬೆಳವಣಿಗೆ ಎಲ್ಲಾ ಸಂಸ್ಥೆಗಳಲ್ಲಿಯೂ ಆಗಬೇಕಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಟಿವಿಎಸ್ ಮೋಟಾರ್ ಕಂಪನಿ ಉದ್ಯೋಗಿಗಳ ಸಂಘದ ಅಧ್ಯಕ್ಷ ಆರ್.ಕುಪ್ಪಸ್ವಾಮಿ ಮಾತನಾಡಿ, ೪೮ ದಿನ ಪೂರ್ಣಗೊಳಿಸಿದ ಕಾರ್ಮಿಕರನ್ನು ಖಾಯಂ ಮಾಡಬೇಕೆಂಬುದು ಕಾನೂನಿನಲ್ಲಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದಲೇ ಯಾವುದೇ ಕಾನೂನು ಪಾಲನೆ ಆಗುತ್ತಿಲ್ಲ. ಸರ್ಕಾರಗಳಲ್ಲೇ ನೌಕರಿ ಕಾಯಂ ಮಾಡುವ ಕೆಲಸ ಮಾಡುತ್ತಿಲ್ಲ. ಇನ್ನೂ ಖಾಸಗಿ ಸಂಸ್ಥೆಗಳಲ್ಲಿ ಕಾಯಂ ಬಗ್ಗೆ ಪ್ರಶ್ನೆ ಮಾಡುವ ದೈರ್ಯ ಕಾರ್ಮಿಕರಿಗೆ ಇಲ್ಲವಾಗಿದೆ. ಇಂತಹ ಸ್ಥಿತಿಯಲ್ಲಿ ಕೇಂದ್ರ ಕಾರ್ಮಿಕ ಕಾಯಿದೆ ತಿದ್ದುಪಡಿ ಮಾಡಿರುವುದು ಕಾರ್ಮಿಕರಿಗೆ ವಿರುದ್ಧವಾಗಿದೆ. ಎಲ್ಲವೂ ಮಾಲೀಕರ ಪರವಾಗಿದೆ ಎಂದು ಹೇಳಿದರು.
ಇದೇ ವೇಳೆ ಕೆಲವು ಕಾನೂನುಗಳಿಂದಾಗಿ ಕಾರ್ಮಿಕರಿಗೆ ಸೌಲಭ್ಯಗಳು ಸಿಗುತ್ತಿವೆ. ಈ ನಿಟ್ಟಿನಲ್ಲಿ ಟಿವಿಎಸ್ ಕಂಪನಿ ಕಾರ್ಮಿಕರ ಪರವಾಗಿ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಇದರ ಪರಿಣಾಮವಾಗಿ ೨೫ವರ್ಷಗಳನ್ನು ಕಾರ್ಮಿಕರ ಸಂಘ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರ ಸಂಭ್ರಮದಲ್ಲಿ ನಾವಿದ್ದೇವೆ. ಇದಕ್ಕೆ ಕಾರ್ಮಿಕರ ಒಗ್ಗಟ್ಟಿನ ಪರಿಶ್ರಮವೇ ಕಾರಣ ಎಂದರು.
ಇದೇ ವೇಳೆ ಸಾಧಕ ಕಾರ್ಮಿಕ, ನೂತನ ಪದಾಧಿಕಾರಿಗಳು ಹಾಗೂ ಸಾಧಕ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು. ಅಲ್ಲದೆ ಅಂಗಾಂಗ ದಾನ ಮಾಡಿದ ಕಾರ್ಮಿಕನ ಕುಟುಂಬಕ್ಕೆ ೨ಲಕ್ಷ ರೂ. ಪರಿಹಾರದ ಚೆಕ್ ಅನ್ನು ಸಂಘದಿಂದ ವಿತರಿಸಲಾಯಿತು. ತೋಟಗಾರಿಕೆ ವಿಭಾಗದಿಂದ ಶಿವಕುಮಾರ್, ಮ್ಯಾರಥಾನ್ ವಿಭಾಗದಿಂದ ಎಂ.ಎಸ್.ಶಿವಣ್ಣ, ಬುಕ್ ಆಫ್ ರೆಕಾರ್ಡ್ ವಿಭಾಗದಿಂದ ಎಂ.ನಾಗರಾಜು ಅವರನ್ನು ಸನ್ಮಾನಿಸಲಾಯಿತು.
ಐಎನ್‌ಟಿಯುಸಿ ಮಾಜಿ ಅಧ್ಯಕ್ಷ ಎಂ.ಎನ್.ಅಡ್ಯಂತಾಯ, ಟಿವಿಎಸ್ ಕಂಪನಿ ಸಿಇಒ ಡಾ.ಕೆ.ಎನ್.ರಾಧಾಕೃಷ್ಣನ್, ಮೈಸೂರು ಘಟಕದ ಉಪಾಧ್ಯಕ್ಷ ಎಸ್.ಅರುಣ್ ಕುಮಾರ್, ಖಜಾಂಚಿ ಎಂ.ಮಹದೇವಸ್ವಾಮಿ, ಯೂನಿಯನ್ ಕಾರ್ಯದರ್ಶಿ ಎನ್.ರಾಜಶೇಖರ್, ಸಹಕಾರ್ಯದರ್ಶಿ ಬಸಪ್ಪ ಹಾಗೂ ಸಂಘಟನೆಯ ಮುಖಂಡರುಗಳು ಹಾಜರಿದ್ದರು







