ವಿಜಯ ದರ್ಪಣ ನ್ಯೂಸ್…
ಆಗ್ನೆಯ ಪದವೀಧರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಕೆ.ಎಂ.ಸುರೇಶ್ ಅವರ ಪರವಾಗಿ ಪ್ರಚಾರ ಚಟುವಟಿಕೆಗಳು ಚುರುಕುಗೊಂಡಿವೆ : ಸೀಕಲ್ ರಾಮಚಂದ್ರಗೌಡ

ಶಿಡ್ಲಘಟ್ಟ : ಕಳೆದ ಎರಡು-ಮೂರು ದಶಕಗಳಿಂದ ಬಿಜೆಪಿಯಲ್ಲಿ ಸಕ್ರಿಯರಾಗಿರುವ ಕೆ.ಎಂ.ಸುರೇಶ್ ಅವರು ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ ,ವಿದ್ಯಾದಾನ ಮತ್ತು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಆಯ್ಕೆಯಾದರೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರ ಗೌಡ ತಿಳಿಸಿದರು.
ನಗರದ ಬಿಜೆಪಿ ಸೇವಾಸೌಧದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಈ ಬಾರಿ ಮತದಾರರ ಸಂಖ್ಯೆ ಎರಡು ಲಕ್ಷದವರೆಗೆ ತಲುಪುವ ನಿರೀಕ್ಷೆಯಿದೆ ಐದು ಜಿಲ್ಲೆಗಳಲ್ಲಿಯೂ ಪಕ್ಷದ ವತಿಯಿಂದ ಪ್ರಚಾರಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಆಗ್ನೆಯ ಪದವೀಧರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರ ಪರವಾಗಿ ಜಿಲ್ಲೆಯಲ್ಲಿ ಪ್ರಚಾರ ಚಟುವಟಿಕೆಗಳು ಚುರುಕುಗೊಂಡಿವೆ
ಎಂದು ಹೇಳಿದರು.
ಎನ್.ಡಿ.ಎ.ಅಭ್ಯರ್ಥಿ ಕೆ.ಎಂ. ಸುರೇಶ್ ಮಾತನಾಡಿ,
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ಮುಂದಿನ ಯುಗಾದಿಯೊಳಗೆ 5 ಜಿಲ್ಲಾ ಕೇಂದ್ರಗಳಲ್ಲಿ ಸೋಮೇಶ್ವರ ಪ್ರತಿಷ್ಠಾನದ ವತಿಯಿಂದ 5 ಉಚಿತ ಇ-ಗ್ರಂಥಾಲಯಗಳನ್ನು ಆರಂಭಿಸುವ ಉದ್ದೇಶವಿದೆ ಉದ್ಯೋಗಾಕಾಂಕ್ಷಿಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲು ಯೋಜಿಸಲಾಗಿದೆ ಎಂದರು.
ಮಾರ್ಚ್ 10ರಂದು ಎನ್.ಡಿ.ಎ. ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟ ಸೇರಿದಂತೆ ಕ್ಷೇತ್ರದ ವಿವಿಧೆಡೆ ಪ್ರವಾಸ ಕೈಗೊಂಡಿದ್ದೇನೆ. ಶಾಲೆ-ಕಾಲೇಜುಗಳಿಗೆ ಭೇಟಿ ನೀಡಿ ಪದವೀಧರರು ಮತ್ತು ಶಿಕ್ಷಕರ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ ಎಂದು ನುಡಿದರು.
ಪದವೀಧರರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸಲಾಗುವುದು ಅರ್ಹ ಪದವೀಧರರಿಗೆ ಉದ್ಯೋಗ ಮತ್ತು ಇತರ ಸೌಲಭ್ಯಗಳ ವಿಚಾರದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲಾಗುವುದು ಎಂದು ಭರವಸೆ ನೀಡಿದ ಅವರು ,
ಈ ಚುನಾವಣೆಯ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ದಿಕ್ಕೂಚಿಯಾಗಲಿದೆ ಎಂದು ಹೇಳಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಮರ್ಪಕ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎರಡೂ ಜಿಲ್ಲೆಗಳಲ್ಲಿನ ಬರ ಪರಿಸ್ಥಿತಿಯ ಕುರಿತು ರಾಜ್ಯ ಸರ್ಕಾರ ಸಮಗ್ರ ಅಧ್ಯಯನ ನಡೆಸಿ, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ತಕ್ಷಣ ಪರಿಹಾರ ಘೋಷಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರ ಗೌಡ ಒತ್ತಾಯಿಸಿದರು.
ಕೃಷಿ ಮತ್ತು ತೋಟಗಾರಿಕೆಯನ್ನೇ ಅವಲಂಬಿಸಿರುವ ಈ ಜಿಲ್ಲೆಗಳ ರೈತರು ಮಳೆ ಕೊರತೆಯಿಂದ ಕಂಗಾಲಾಗಿದ್ದಾರೆ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ಸಮಸ್ಯೆಯೂ ಎದುರಾಗುವ ಸಾಧ್ಯತೆಯಿದೆ , ಅಧಿಕಾರಿಗಳಿಂದ ವಾಸ್ತವ ವರದಿ ಪಡೆದು, ಬರಪೀಡಿತ ಪ್ರದೇಶಗಳಿಗೆ ಅಗತ್ಯ ನೆರವು ಕಲ್ಪಿಸಬೇಕು ,ಬರ ಅಧ್ಯಯನ ನಡೆಸಿ, ರೈತರಿಗೆ ತಕ್ಷಣ ಪರಿಹಾರ ನೀಡಿ ಎಂದು ಹೇಳಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ರಾಜ್ಯ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿಲ್ಲ ಹೀಗಾಗಿ, ಈ ಭಾಗದ ರೈತರ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಸಮರ್ಪಕವಾಗಿ ತಲುಪುತ್ತಿಲ್ಲ ಸರ್ಕಾರವು ರಾಜಕೀಯ ಭೇದ ಮರೆತು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ, ನಿಕಟಪೂರ್ವ ಅಧ್ಯಕ್ಷ ಕೆ.ಸುರೇಂದ್ರ ಗೌಡ, ನಗರ ಮಂಡಲ ಅಧ್ಯಕ್ಷ ದೇವರಾಜ್,ನಿಕಟಪೂರ್ವ ಅದ್ಯಕ್ಷ ನರೇಶ್, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನರ್ಮದಾ ರೆಡ್ಡಿ, ನಗರ ಘಟಕದ ಮಹಿಳಾ ಮೋರ್ಚಾ ಅಧ್ಯಕ್ಷೆ ತ್ರಿವೇಣಿ, ಪ್ರಧಾನ ಕಾರ್ಯದರ್ಶಿ ಮಂಜುಳಾ, ಜಯಂತಿಗ್ರಾಮ ನಾರಾಯಣಸ್ವಾಮಿ ,
ರಾಮಕೃಷ್ಣಪ್ಪ, ಪಲ್ಲಿಚರ್ಲು ಸೋಮಣ್ಣ,ರಂಜಿತ್, ಸಂಜೀವಪ್ಪ,ಪುರುಷೋತ್ತಮ್, ಸುಬ್ರಮಣಿ ಮುಂತಾದವರು ಹಾಜರಿದ್ದರು.








