ಸವಲತ್ತುಗಳನ್ನು ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯಬೇಕು: ಮ .ಸುರೇಶ್ ಬಾಬು
ವಿಜಯ ದರ್ಪಣ ನ್ಯೂಸ್…..
ಸವಲತ್ತುಗಳನ್ನು ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯಬೇಕು: ಮ .ಸುರೇಶ್ ಬಾಬು
ಶಿಡ್ಲಘಟ್ಟ : ಸರ್ಕಾರವು ಸಾಕಷ್ಟು ಸವಲತ್ತು ಅವಕಾಶಗಳನ್ನು ಕಲ್ಪಿಸುತ್ತಿದೆ ಸಂಘ ಸಂಸ್ಥೆಗಳೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದು ಎಲ್ಲಾ ಅವಕಾಶ, ಸೌಲಭ್ಯಗಳನ್ನೂ ಬಳಸಿಕೊಂಡು ಉನ್ನತ ದರ್ಜೆಯ ಸಿಕ್ಷಣವನ್ನು ಪಡೆಯಬೇಕು ಎಂದು ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಸುರೇಶ್‌ಬಾಬು ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತು, ಸಾಕ್ಷಿಮುರುಗನ್ ಸೇವಾ ಸಮಿತಿ, ಬಂಗಲೆ ಕುಟುಂಬದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ನೋಟ್‌ಪುಸ್ತಕಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಗುರುಗಳ ಬಲದಿಂದ ಶಿಷ್ಯನು ಜ್ಞಾನವೆಂಬ ಅಮೃತ, ಆತ್ಮವಿದ್ಯೆಯನ್ನು ಗಳಿಸಲು ಸಾಧ್ಯ ಗುರು ಹಿರಿಯರ ಬಗೆಗಿನ ಗೌರವದಿಂದ ಶ್ರೇಯೋಮಾರ್ಗಿಗಳೆಲ್ಲರೂ ಬದುಕಿನ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಸ್ವ-ಅದ್ಯಯನ ಸಾಧಕನ ಶ್ರದ್ಧಾಪೂರ್ಣ ಹೃದಯದಿಂದ ಕಲಿಕೆಯು ಔನತ್ಯದ ಮಟ್ಟಕ್ಕೇರುತ್ತದೆ ಶಾಲಾ ಶಿಕ್ಷಣವು ಜ್ಞಾನ ಪ್ರವಾಹಕ್ಕೆ ಬಳಸುವ ಉತ್ತಮ ಮಾಧ್ಯಮವಾಗಬೇಕು ಶರಣರು ನೀಡಿದ ವಚನಗಳಲ್ಲಿ ಬದುಕಿನ ಮೌಲ್ಯಗಳಿವೆ ಎಂದರು.
ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ೧೨ ನೇ ಶತಮಾನದಲ್ಲಿ ನಡೆದ ಸಾಮಾಜಿಕ ಅಧ್ಯಾತ್ಮೋ ಕ್ರಾಂತಿಯು ಜಗತ್ತಿನಲ್ಲಿ ಮಾದರಿಯಾದುದು ವಿದ್ಯಾರ್ಥಿದಿಸೆಯಿಂದಲೇ ಮಕ್ಕಳು ವಚನಗಳನ್ನು ಓದಿ ಅರ್ಥೈಸಿಕೊಳ್ಳಬೇಕು, ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರಬೇಕು ಎಂದರು.
ಮುಖ್ಯಶಿಕ್ಷಕ ಶಿವಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ವಿದ್ಯಾರ್ಥಿಗಳಿಗೆ ವಚನಗಾಯನ ನಡೆಸಿ ಬಹುಮಾನ ಹಾಗು ಉಚಿತ ನೋಟ್‌ಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕ ಎಂ.ಶಿವಕುಮಾರ್,ನವೀನ್ , ಶ್ರೀನಿವಾಸ್ ಮುಂತಾದವರು ಹಾಜರಿದ್ದರು.