ಘಾಟಿ ಸುಬ್ರಮಣ್ಯ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
ವಿಜಯ ದರ್ಪಣ ನ್ಯೂಸ್….
ಡಿ.25 ರಂದು ಘಾಟಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ
ಘಾಟಿ ಸುಬ್ರಮಣ್ಯ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಡಿ.03:-
ದೊಡ್ಡಬಳ್ಳಾಪುರದ ತಾಲ್ಲೂಕಿನ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವವು ಡಿಸೆಂಬರ್ 10 ರಿಂದ ಪ್ರಾರಂಭವಾಗಲಿದ್ದು ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಘಾಟಿ ಸುಬ್ರಹ್ಮಣ್ಯ ದೇವಾಲಯದ ಜಾತ್ರೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಿಸೆಂಬರ್ 10 ರಿಂದ 18 ರವರೆಗೆ ರಾಸುಗಳ ಜಾತ್ರೆ ನಡೆಯಲಿದೆ. 25 ರಂದು ಬ್ರಹ್ಮರಥೋತ್ಸವ ಜರುಗಲಿದೆ. ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಅಧಿಕಾರಿಗಳು ಶ್ರಮ ವಹಿಸಬೇಕು ಎಂದರು.
ರಾಸುಗಳ ಜಾತ್ರೆಯು 10 ರಂದು ಆರಂಭವಾಗಲಿದ್ದು ವಿವಿಧ ಭಾಗಗಳಿಂದ ಸಾಕಷ್ಟು ರೈತರು, ಜಾನುವಾರುಗಳು ಆಗಮಿಸಲಿವೆ. ರಾಸುಗಳಿಗೆ ಕುಡಿಯುವ ನೀರು, ಮೇವು, ಲಸಿಕೆ, ಶೆಡ್ ಗಳಿಗೆ ಸಮರ್ಪಕ ವಿದ್ಯುತ್ ಸಂಪರ್ಕ, ರೈತರಿಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸಿ ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಬ್ರಹ್ಮ ರಥೋತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಸೂಚನಾ ಫಲಕ ಅಳವಡಿಸುವ ಮೂಲಕ ವಾಹನ ದಟ್ಟಣೆ ಆಗದಂತೆ ಕ್ರಮ ವಹಿಸಬೇಕು. ಬ್ರಹ್ಮ ರಥೋತ್ಸವ ದಿನ ಹೆಚ್ಚುವರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಿ. ಸಾರ್ವಜನಿಕರು ಪಾರ್ಕಿಂಗ್ ಸ್ಥಳದಿಂದ ದೇವಾಲಯಕ್ಕೆ ತೆರಳಲು ಹಾಗೂ ಮರಳಲು ಉಚಿತ ವಾಹನ ವ್ಯವಸ್ಥೆ ಮಾಡಿ ಎಂದರು.

ಸಾರ್ವಜನಿಕರಿಗೆ ಉಚಿತ ಊಟದ ವ್ಯವಸ್ಥೆ, ಕುಡಿಯುವ ನೀರನ್ನು ವ್ಯವಸ್ಥಿತವಾಗಿ ಪೂರೈಸಿ ಹಾಗೂ ಹೆಚ್ಚುವರಿಯಾಗಿ ತಾತ್ಕಾಲಿಕ ಶೌಚಾಲಯಗಳನ್ನು ಒದಗಿಸಿ ಎಂದು
ಘಾಟಿ ದೇವಾಲಯದ ಅಧಿಕಾರಿಗಳಿಗೆ ಸೂಚಿಸಿದರು.
ದೇವಾಲಯದ ಸುತ್ತಮುತ್ತಲೂ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕಾಗಿ ನಗರಸಭೆಯಿಂದ ಪೌರಕಾರ್ಮಿಕರನ್ನು ಹೆಚ್ಚುವರಿಯಾಗಿ ನೇಮಿಸುವಂತೆ ಪೌರಾಯುಕ್ತರಿಗೆ ಸೂಚಿಸಿದರು. ತುರ್ತು ಆರೋಗ್ಯ ಚಿಕಿತ್ಸಾ ಕೇಂದ್ರಗಳು ಹಾಗೂ ಬೈಕ್ ಅಂಬುಲೆನ್ಸ್ ಸೇವೆ ಒದಗಿಸುವಂತೆ ಆರೊಗ್ಯಾಧಿಕಾರಿಗಳಿಗೆ ಸೂಚಿಸಿದರು. ಜಾತ್ರಾ ಮಹೋತ್ಸವದಲ್ಲಿ ಸೂಕ್ತ ಬಂದೋಬಸ್ತ್, ಭಧ್ರತೆ ವ್ಯವಸ್ಥೆ ಮಾಡಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಅನಧಿಕೃತ ಜಾಹಿರಾತು ಫಲಕ, ಫುಟ್ ಪಾತ್ ಅಂಗಡಿಗಳು ತೆರವಿಗೆ ಸೂಚನೆ
ಮಾಕಳಿ ಇಂದ ಘಾಟಿ ರಸ್ತೆಯ ವರೆಗೆ, ಕಂಟನಕುಂಟೆ ಮಾರ್ಗವಾಗಿ ಅನಧಿಕೃತವಾಗಿ ಜಾಹೀರಾತು ಫಲಕಗಳು ಅಳವಡಿಸಿರುವುದರಿಂದ ವಾಹನ ಓಡಾಟಕ್ಕೆ ತೊಂದರೆ ಆಗಲಿದ್ದು ತೆರವುಗೊಳಿಸಲು ಸೂಚಿಸಿದರು. ಜೊತೆಗೆ ದೇವಾಲಯದ ಸುತ್ತಲೂ ಫೂಟ್ ಪಾತ್ ಮೇಲಿನ ಅಂಗಡಿಗಳನ್ನು ತೆರವು ಗೊಳಿಸಿ ಅವರಿಗೆ ಪರ್ಯಾಯ ಜಾಗ ಗುರುತಿಸಿ ಅಲ್ಲಿ ಅಂಗಡಿ ಮಳಿಗೆಗಳ ಸ್ಥಾಪಿಸಲು ಅನುಮತಿ ನೀಡಿ ಎಂದರು.
ಸ್ಥಳೀಯ ಕಲಾವಿದರಿಗೆ ಆದ್ಯತೆ
ಬ್ರಹ್ಮರಥೋತ್ಸವದ ಡಿಸೆಂಬರ್ 24, 25 ರಂದು ಹಾಗೂ ರಾಸುಗಳ ಜಾತ್ರಾ ಸಮಯದಲ್ಲಿ ಒಂದು ದಿನ ಒಟ್ಟು ಮೂರು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲು ತೀರ್ಮಾನಿಸಲಾಗಿದ್ದು. ಜಿಲ್ಲೆಯ ನಾಲ್ಕು ತಾಲ್ಲೂಕಿನ ಸ್ಥಳೀಯ ಕಲಾವಿದರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದೆ. ಸ್ಥಳೀಯ ಕಲಾವಿದರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಘಾಟಿ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದರು.
ಸಭೆಯಲ್ಲಿ ಸಿಇಒ ಡಾ.ಕೆ.ಎನ್ ಅನುರಾಧ, ಎಸಿ ದುರ್ಗ ಶ್ರಿ, ಎಎಸ್ಪಿ ನಾಗರಾಜ್, ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ದಿನೇಶ್, ದೊಡ್ಡಬಳ್ಳಾಪುರ ತಹಶೀಲ್ದಾರ್ ಮಲ್ಲಪ್ಪ, ಇಒ ಮಂಜುನಾಥ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಡಿಸೆಂಬರ್ 5 ರಂದು ಮಾವು ಬೆಳೆಗಾರರಿಗೆ ವಿಚಾರ ಸಂಕಿರಣ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಗ್ರಾ.ಜಿಲ್ಲೆ. ಡಿ 4:
ಮಾವು ಬೆಳೆಯಲ್ಲಿ ಹೂವು ಬಿಡುವ ಮತ್ತು ಕಾಯಿ ಕಚ್ಚುವ ಹಂಗಾಮಿನಲ್ಲಿ ಬೆಳೆಗಾರರು ಕೈಗೊಳ್ಳಬೇಕಾಗಿರುವ ಸಸ್ಯ ಸಂರಕ್ಷಣಾ ಮತ್ತು ಪೂರಕ ಕ್ರಮಗಳ ಬಗ್ಗೆ ರೈತರಿಗೆ, ಮಾವು ಬೆಳೆಗಾರರಿಗೆ ಡಿಸೆಂಬರ್ 05 ರಂದು ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತೋಟಗಾರಿಕೆ ಇಲಾಖೆ ವತಿಯಿಂದ ವಿಚಾರ ಸಂಕಿರಣ ಕಾರ್ಯಕ್ರಮ ಆಯೋಜಿಸಿದ್ದು ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಬೆಂಡಿಗಾನಹಳ್ಳಿ ಗ್ರಾಮದ ಮಾವು ಬೆಳೆಗಾರರಾದ ಅಶ್ವಥ್ ನಾರಾಯಣಗೌಡ ರವರ ತೋಟ ಈ ಸ್ಥಳದಲ್ಲಿ ಡಿಸೆಂಬರ್ 05 ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಿಗದಿಪಡಿಸಲಾಗಿದೆ.
ವಿಷಯ ತಜ್ಞರಾದ ನಿವೃತ್ತ ಅಪರ ನಿರ್ದೇಶಕರು ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾ. ಹಿತ್ತಲಮನಿ ರವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮಾವು ಬೆಳೆಗೆ ಸಂಬಂಧಿಸಿದಂತೆ ಹಲವು ಮಾಹಿತಿ ಹಂಚಿಕೊಳ್ಳಲಿದ್ದಾರೆ. ಜಿಲ್ಲೆಯ ಎಲ್ಲಾ ತಾಲ್ಲೂಕಿನ ಮಾವು ಬೆಳೆಗಾರರು, ರೈತರು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ತೋಟಗಾರಿಕೆ ಇಲಾಖೆಯ ಜಂಟಿನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಎಡ್ ವಿದ್ಯಾರ್ಥಿಗಳಿಂದ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ . ಡಿ 4:
2025-26ನೇ ಸಾಲಿನಲ್ಲಿ ಬಿ.ಎಡ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ಮೂಲಕ ಡಿಸೆಂಬರ್ 31 ರೊಳಗೆ ಅರ್ಜಿ ಸಲ್ಲಿಸಬಹುದು.
ಗ್ರಾಮೀಣ ಮತ್ತು ನಗರ ವಿಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಿ ಕಲಿಕಾ ಮತ್ತು ಭೋಧನಾ ಸಾಮಾಗ್ರಿಗಳನ್ನು ಖರೀದಿಸಲು ಆರ್ಥಿಕ ಸಹಾಯ ಮಾಡುವ ಹಿತ ದೃಷ್ಟಿಯಿಂದ National Council for Teacher Education ನಿಂದ ಮಾನ್ಯತೆ ಪಡೆದಿರುವ ಕೋರ್ಸ್ಗಳ ಸರ್ಕಾರಿ/ಅರೆ ಸರ್ಕಾರಿ/ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ ದಾಖಲಾತಿ ಹೊಂದಿ ಬಿ.ಎಡ್ ಕೋರ್ಸ್ ನಲ್ಲಿ ವ್ಯಾಸಂಗ ಮಾಡುತ್ತಿರಬೇಕು. ವಿದ್ಯಾರ್ಥಿಯು ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್.ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದವರಾಗಿರಬೇಕು. ವಿದ್ಯಾರ್ಥಿಗಳು ಕರ್ನಾಟಕ ರಾಜ್ಯಕ್ಕೆ ಸೇರಿದವರಾಗಿರಬೇಕು. ಕೋರ್ಸ್ಗಳ ಅವಧಿಗೆ ತಕ್ಕಂತೆ ಪ್ರತಿ ವರ್ಷ ರೂ.25,000/- ಸಾವಿರದಂತೆ (ಗರಿಷ್ಠ 2 ವರ್ಷ) ಅನುದಾನವನ್ನು ನೀಡಲಾಗುವುದು. ಅಲ್ಪಸಂಖ್ಯಾತರ ಅಭ್ಯರ್ಥಿಗಳ ಪೋಷಕರ ವಾರ್ಷಿಕ ಗರಿಷ್ಠ ವರಮಾನ ರೂ.6.00 ಲಕ್ಷಕ್ಕೆ ಮೀರಿರಬಾರದು. ವಿದ್ಯಾರ್ಥಿಗಳನ್ನು ಅರ್ಹತಾ ಪರೀಕ್ಷೆ/ಹಿಂದಿನ ಸಾಲಿನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ಸಹಾಯವಾಣಿಗೆ ಸಂಖ್ಯೆ:8277799990 ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
