ಕುಷ್ಠರೋಗ ಮುಕ್ತ ಸಮಾಜ ನಿರ್ಮಾಣ ಗುರಿ: ಡಿಸಿ ಎಬಿ ಬಸವರಾಜು
ವಿಜಯ ದರ್ಪಣ ನ್ಯೂಸ್………
ಜನವರಿ 30 ರಿಂದ ಫೆಬ್ರವರಿ 13 ರವರೆಗೆ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ
ಕುಷ್ಠರೋಗ ಮುಕ್ತ ಸಮಾಜ ನಿರ್ಮಾಣ ಗುರಿ: ಡಿಸಿ ಎಬಿ ಬಸವರಾಜು

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಜ.28:
ಕುಷ್ಠರೋಗದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಕುಷ್ಠರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಅಣಿಯಾಗಬೇಕು ಎಂದು ಜಿಲ್ಲಾಧಿಕಾರಿ ಎಬಿ ಬಸವರಾಜು ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಹಮ್ಮಿಕೊಂಡಿರುವ ಸ್ಪರ್ಶ್ ಕುಷ್ಠ ರೋಗ ಅರಿವು ಆಂದೋಲನ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ‘ತಾರತಮ್ಯವನ್ನು ಕೊನೆಗೊಳಿಸುವುದು, ಘನತೆಯನ್ನು ಕಾಪಾಡುವುದು’ ಎಂಬ ಘೋಷಣೆಯೊಂದಿಗೆ ಈ ವರ್ಷ ಜಿಲ್ಲೆಯಲ್ಲಿ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಜನವರಿ 30 ರಿಂದ ಫೆಬ್ರವರಿ 13 ವರೆಗೆ ಹಮ್ಮಿಕೊಳ್ಳಲಾಗಿದೆ.
ಕುಷ್ಟರೋಗವು ಸಾಂಕ್ರಾಮಿಕ ರೋಗವಾಗಿದ್ದು ಸಾರ್ವಜನಿಕರು ಇದಕ್ಕೆ ಭಯಪಡುವ ಅಗತ್ಯವಿಲ್ಲ ಈ ಜಾಗೃತಿ ಅಭಿಯಾನದ ಸಂದರ್ಭದಲ್ಲಿ ಶಾಲಾ ಮಕ್ಕಳ ತಪಾಸಣೆ, ಉಪ ಕೇಂದ್ರ ಮೂಲಕ ಗ್ರಾಮದಲ್ಲಿ ಜಾಗೃತಿ ಜಾತ ಆಯೋಜಿಸುವುದಲ್ಲದೆ ಕುಷ್ಟರೋಗ ನಿರ್ಮೂಲನೆ ಕುರಿತು ಎಲ್ಲರಿಗೂ ಪ್ರತಿಜ್ಞಾವಿಧಿ ಭೋದಿಸಲಾಗುವುದು ಎಂದರು.
ಬಾಧಿತ ರೋಗಿಗಳಿಗೆ ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿದೆಯೇ? ಅಥವಾ ಸೌಲಭ್ಯ ವಂಚಿತರು ಇನ್ನು ಇದ್ದಾರಾ! ಇದ್ದರೆ ಯಾಕೆ ಅವರಿಗೆ ಇನ್ನೂ ಸರ್ಕಾರಿ ಸೌಲಭ್ಯ ಸಿಕ್ಕಿಲ್ಲ, ಯಾವ ಇಲಾಖೆಯಲ್ಲಿ ಅವರಿಗೆ ಯಾವ ಸೌಲಭ್ಯ ಇದೆ ಎಂಬುದರ ಬಗ್ಗೆ ಕುಲಂಕುಂಶವಾಗಿ ಮಾಹಿತಿ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಆರೋಗ್ಯ ಇಲಾಖೆಯು ಇತರೆ ಸಂಬಂಧಪಟ್ಟ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲೆಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ, ಶಾಲಾ ಕಾಲೇಜು ಶಿಕ್ಷಕರಿಗೆ, ಶಾಲಾ ಕಾಲೇಜು, ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಕುಷ್ಠರೋಗದ ಬಗ್ಗೆ ಅರಿವು ಮೂಡಿಸಿ, ಕುಷ್ಠರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಪಾತ್ರ ಮುಖ್ಯವಾದದ್ದು ಎಂದರು.
*ಕುಷ್ಠರೋಗದ ಲಕ್ಷಣಗಳು*
ಕುಷ್ಠರೋಗವು ಮೈಕೊಬ್ಯಾಕ್ಟಿರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದೆ. ಪಾದಗಳು ಬೆರಳುಗಳ ದೌರ್ಬಲ್ಯ, ಕಣ್ಣುಮುಚ್ಚುವಲ್ಲಿ ತೊಂದರೆ ವ್ಯಕ್ತಿಯ ದೇಹದ ಮೇಲೆ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು ನೋವಿನಿಂದ ಕೂಡಿದ ಊದಿಕೊಂಡ ನರಗಳು, ವ್ಯಕ್ತಿಯ ದೇಹದ ಯಾವುದೇ ಭಾಗದಲ್ಲಿ ತಿಳಿ ಬಿಳಿ ಅಥವಾ ತಾಮ್ರವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು. ಇಂತಹ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರ ಪರೀಕ್ಷಿಸಿಕೊಳ್ಳಬೇಕು.
ಜಿಲ್ಲೆಯಲ್ಲಿ ಪ್ರಸ್ತುತ 20 ಕುಷ್ಠರೋಗ ಪ್ರಕರಣಗಳು ಚಿಕಿತ್ಸೆಯಲ್ಲಿದ್ದು, 16 ಕುಷ್ಠರೋಗ ಪ್ರಕರಣಗಳು ಚಿಕಿತ್ಸೆಯಿಂದ ಗುಣವಾಗಿದೆ ಎಂದು ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ನಾಗರಾಜು ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಕ್ಕಾ ಕೃಷ್ಣಾರೆಡ್ಡಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬೈಲಾಂಜಿನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಮುದ್ದಣ್ಣ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕಿನ ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮೀನುಗಾರಿಕೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಬೆಂ.ಗ್ರಾ.ಜಿಲ್ಲೆ, ಜ.28 : ಮೀನುಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಧರ್ತಿ ಆಭಾ ಜನ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನ (DAIGUA) ಯೋಜನೆಯಡಿ ಜೀವಂತ ಮೀನು ಮಾರಾಟ ಕೇಂದ್ರಕ್ಕೆ 2 ಗುರಿ ನೀಡಿದ್ದು, ಮೀನುಗಾರಿಕೆಯಲ್ಲಿ ತೊಡಗಿರುವ ಪರಿಶಿಷ್ಟ ಪಂಗಡದ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಗ್ರಾ.ಪಂ.ಯ ಗುಮ್ಮನಹಳ್ಳಿ, ಅಣಬೆ ಗ್ರಾ.ಪಂ.ಯ ಬೊಮ್ಮನಹಳ್ಳಿ, ದೇವನಹಳ್ಳಿ ತಾಲ್ಲೂಕಿನ ಬಿಜವರ ಗ್ರಾ.ಪಂ.ಯ ಹೊಲೇರಹಳ್ಳಿ, (ಗೊಡ್ಲುಮುದ್ದೇನಹಳ್ಳಿ ಗ್ರಾ.ಪಂ.ಯ ವೆಂಕಟೇನಹಳ್ಳಿ, ಮಂಡಿಬೆಲೆ ಗ್ರಾ.ಪಂ.ಯ ಚಿಕ್ಕತತ್ತಮಂಗಲ, ಕಾರಹಳ್ಳಿ ಗ್ರಾ.ಪಂ.ಯ ಕೆಂಪತಿಮ್ಮನಹಳ್ಳಿ, ಅಣ್ಣೇಶ್ವರ ಗ್ರಾ.ಪಂ.ಯ ಯರ್ತಿಗಾನಹಳ್ಳಿ, ಭುವನಹಳ್ಳಿ, ಬೆಟ್ಟಕೋಟೆ ಗ್ರಾ.ಪಂ.ಯ ರಾಯಸಂದ್ರ, ಯಲಿಯೂರು ಗ್ರಾ.ಪಂ.ಯ ಮಟ್ಟಬಾರ್ಲು, ಬೊಮ್ಮನಹಳ್ಳಿ, ನಲ್ಲೂರು ಗ್ರಾ.ಪಂ.ಯ ಜೊನ್ನಹಳ್ಳಿ, ಕೋರಮಂಗಲ ಗ್ರಾ.ಪಂ.ಯ ಕೊಂಡೇನಹಳ್ಳಿ, ಹೊಸಕೋಟೆ ತಾಲ್ಲೂಕಿನ ದೊಡ್ಡನಲ್ಲಾಳ ಗ್ರಾ.ಪಂ.ಯ ವಲಗೇರೆಪುರ ಈ ಗ್ರಾಮಗಳಿಗೆ ಸಂಬಂಧಿಸಿದ ಪರಿಶಿಷ್ಟ ಪಂಗಡಕ್ಕೆ ಸೇರಿದ ಮೀನುಗಾರರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು ಸಂಬಂಧಪಟ್ಟ ದಾಖಲೆಗಳೊಂದಿಗೆ ಫೆ. 06 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತ ಅರ್ಜಿದಾರರು ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಆಯಾಯ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
