ಪರೀಕ್ಷೆಯಲ್ಲಿ ಸಾಧನೆ ಮಾಡುವ ಮೂಲಕ ನಿಮ್ಮ ತಂದೆ ತಾಯಿಗಳ, ಸಮಾಜದ ಮಹತ್ವದ ಆಸ್ತಿ ಆಗಬೇಕು

ವಿಜಯ ದರ್ಪಣ ನ್ಯೂಸ್….

ಪರೀಕ್ಷೆಯಲ್ಲಿ ಸಾಧನೆ ಮಾಡುವ ಮೂಲಕ ನಿಮ್ಮ ತಂದೆ ತಾಯಿಗಳ, ಸಮಾಜದ ಮಹತ್ವದ ಆಸ್ತಿ ಆಗಬೇಕು

ಮಾಸ್ತಿ : ಮಾಸ್ತಿಯವರು ತಮ್ಮ ಸಾಹಿತ್ಯ ಸಾಧನೆಯಿಂದ, ಮಾಸ್ತಿ ಕನ್ನಡದ ಆಸ್ತಿಯಾಗಿದ್ದಾರೆ. ಅದೇ ರೀತಿ ನೀವು ಪರೀಕ್ಷೆಯಲ್ಲಿ ಸಾಧನೆ ಮಾಡುವ ಮೂಲಕ ನಿಮ್ಮ ತಂದೆ ತಾಯಿಗಳ, ಸಮಾಜದ ಮಹತ್ವದ ಆಸ್ತಿ ಆಗಬೇಕು ಎಂದು ಶ್ರೀ ನಾರಾಯಣ ಗುರು ಸೇವಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಮಾಸ್ತಿ ಟಿ.ಸಿ. ರಮೇಶ್ ನುಡಿದರು.

ಮಾಸ್ತಿಯಲ್ಲಿರುವ ಕೆ.ಪಿ.ಎಸ್. ಶಾಲೆಯ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುನೀತ ಪುಸ್ತಕ ಯೋಜನೆಯ ಪ್ರಶ್ನೋತ್ತರ ಕೋಶವನ್ನು ವಿತರಿಸುತ್ತ ಅವರು ಮಾತನಾಡುತ್ತಿದ್ದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ತಮ್ಮ ಸಾಹಿತ್ಯ ಸಾಧನೆಯ ಮೂಲಕ ಜ್ಞಾನಪೀಠವಲ್ಲದೆ ಮಾಸ್ತಿ ಕನ್ನಡದ ಆಸ್ತಿ ಎಂಬ ಹೆಸರನ್ನು ಮಾಡಿದ್ದಾರೆ. ಅದೇ ರೀತಿ ಮಾಸ್ತಿಯಲ್ಲಿ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ಈ ತಾಲೂಕಿನ ಜಿಲ್ಲೆಯ ರಾಜ್ಯದ ಆಸ್ತಿಯಾಗಬೇಕು.
ಆ ನಿಟ್ಟಿನಲ್ಲಿ ಪರೀಕ್ಷಾ ಸಮಯದಲ್ಲಿ ಶ್ರದ್ಧೆಯಿಂದ ಓದಬೇಕು ಎಂದು ಅವರು ಕರೆಯಿತ್ತರು.

ಕೆಪಿಎಸ್ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಕ್ರಂಪಾಷರವರು ಮಾತನಾಡಿ ನಾವು ಓದುವಾಗ ನಮಗೆ ಈ ತರಹದ ಸಹಕಾರಗಳು ಇರಲಿಲ್ಲ. ಈಗ ಅನೇಕ ದಾನಿಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ತಮ್ಮದೇ ಕೊಡುಗೆಯನ್ನು ನೀಡುತ್ತಿದ್ದಾರೆ, ಅದು ನಮ್ಮ ಹೆಮ್ಮೆ ನಮ್ಮ ಶಾಲೆಯ ಮಕ್ಕಳು ಹೆಚ್ಚು ವಿದ್ಯಾವಂತರಾಗಬೇಕು ಎಂಬುದು ನಮ್ಮೆಲ್ಲರ ಆಶಯ, ಆ ನಿಟ್ಟಿನಲ್ಲಿ ಪೋಷಕರ ಜೊತೆಗೆ ಅಧ್ಯಾಪಕರು ಮತ್ತು ನಮ್ಮ ಸಮಿತಿ ಶ್ರಮಿಸುತ್ತಿದೆ, ನೀವು ಹೆಚ್ಚು ವಿದ್ಯಾವಂತರಾಗುವ ಮೂಲಕ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ನಾರಾಯಣಗುರು ಸೇವಾ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುನಿಲಕ್ಷ್ಮಮ್ಮ, ಖಜಾಂಚಿ ಮಾಲೂರು ವಿಜಿ, ಪ್ರಾಂಶುಪಾಲ ರಾಮಣ್ಣ ಮತ್ತು ಇತರ ಸಿಬ್ಬಂದಿ ವರ್ಗ ಮುಂತಾದವರು ಭಾಗವಹಿಸಿದ್ದರು.