ಬಾಲ್ಯ ವಿವಾಹ ತಡೆವುದು ಸಾಮೂಹಿಕ ನಾಗರಿಕ ಪ್ರತಿಯೊಬ್ಬರ ಜವಾಬ್ದಾರಿ: ಲಕ್ಷ್ಮೀಕಾಂತ್ ರೆಡ್ಡಿ
ವಿಜಯ ದರ್ಪಣ ನ್ಯೂಸ್…..
ಬಾಲ್ಯ ವಿವಾಹ ತಡೆವುದು ಸಾಮೂಹಿಕ ನಾಗರಿಕ ಪ್ರತಿಯೊಬ್ಬರ ಜವಾಬ್ದಾರಿ: ಲಕ್ಷ್ಮೀಕಾಂತ್ ರೆಡ್ಡಿ

ತಾಂಡವಪುರ ಫೆಬ್ರವರಿ 11: ಇವತ್ತಿನ ನಾಗರಿಕತೆಯಲ್ಲಿ ಬಾಲ್ಯ ವಿವಾಹವನ್ನು ತಡೆಗಟ್ಟುವ ಜವಾಬ್ದಾರಿ ಸಾಮೂಹಿಕ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಮೈಸೂರು ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ್ ರೆಡ್ಡಿ ರವರುಹೇಳಿದರು.
ಬಾಳಷ್ಟು ಇಲಾಖೆ ಅಧಿಕಾರಿಗಳಲ್ಲಿ ಅದರಲ್ಲೂ ಶಿಕ್ಷಣ, ಆರೋಗ್ಯ ವಿಭಾಗ ಸೇರಿ ಎಲ್ಲರಲ್ಲೂ ಇರುವ ತಪ್ಪು ತಿಳುವಳಿಕೆ ಏನೆಂದರೆ, ಬಾಲ್ಯ ವಿವಾಹವು ಕೇವಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗಕ್ಕೆ ಸಂಬoಧಿಸಿದೆ ಎಂದು ಭಾವಿಸಿದ್ದಾರೆ. ಆದರೆ ಬಾಲ್ಯ ವಿವಾಹ ನಿರ್ಮೂಲನೆ ಕೆಲಸ ಕೇವಲ ಒಂದು ವಿಭಾಗದ ಜವಾಬ್ದಾರಿಯಲ್ಲ ಇದೊಂದು ಸಾಮೂಹಿಕ ಹಾಗೂ ಎಲ್ಲಾ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಹೇಳಿದರು.
ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಬಾಲ್ಯ ವಿವಾಹ ಮುಕ್ತ ಜಿಲ್ಲೆ ಕಾರ್ಯಗಾರದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮೈಸೂರು ಶೈಕ್ಷಣಿಕವಾಗಿ ಮುಂದುವರೆದ ಜಿಲ್ಲೆಯಾಗಿದ್ದರು. 2024 ರಲ್ಲಿ 224 ಬಾಲ್ಯ ವಿವಾಹವನ್ನು ತಾವೆಲ್ಲರೂ ಸೇರಿ ತಡೆದಿದ್ದೀರಿ, ಆದರೂ ಸಹ 56 ಬಾಲ್ಯ ವಿವಾಹ ಅದರಲ್ಲೂ ಹೆಣ್ಣು ಮಕ್ಕಳಿಗೆ ನಡೆದಿರುತ್ತದೆ. ಕಳೆದ(2025) ವರ್ಷದಲ್ಲೂ ಕೂಡ 268 ಬಾಲ್ಯ ವಿವಾಹವನ್ನು ತಡೆದಿದ್ದರು, 24 ಬಾಲ್ಯ ವಿವಾಹಗಳು ನಡೆದಿವೆ. ನಾವು ಬಾಲ್ಯ ವಿವಾಹವನ್ನು ಶೂನ್ಯ ಪ್ರಮಾಣಕ್ಕೆ ತರಲು ಎಷ್ಟೇ ಪ್ರಯತ್ನಿಸಿದರು ಇನ್ನು ವಿವಾಹಗಳು ನಡೆಯುತ್ತಿರುವುದು ನಮ್ಮೆಲ್ಲರ ವೈಫಲ್ಯವೆಂದರೆ ತಪ್ಪಾಗಲಾರದು ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪಿ.ಡಿ.ಓ ಗಳಿಗೆ ಅಥವಾ ಆರೋಗ್ಯ ವಿಭಾಗದ ಸಿಬ್ಬಂದಿಗಳಿಗೆ ಒಂದು ಗ್ರಾಮದಲ್ಲಿ ನಡೆಯುವ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ಬಂದೇ ಬರುತ್ತದೆ ಆದರು ಅಂತಹ ವಿವಾಹಗಳನ್ನು ತಡೆಗಟ್ಟುವುದರಲ್ಲಿ ಅಥವಾ ಖಂಡಿಸುವುದರಲ್ಲಿ ನಾವು ವಿಫಲರಾಗಿದ್ದೇವೆ. ಹಾಗಾಗಿ ಇವತ್ತಿನ ಕಾರ್ಯಗಾರದಲ್ಲಿ ಮುಖ್ಯವಾಗಿ ತಮ್ಮೆಲ್ಲರಿಗೂ ತಿಳಿಸುವುದೇನೆಂದರೆ 2026 ರಲ್ಲಿ ಬಾಲ್ಯ ವಿವಾಹವನ್ನು ತಡೆಯಲು ಮೈಸೂರು ಜಿಲ್ಲೆಯಲ್ಲಿ ಒಂದು ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ. ಇದರಿಂದ ತಾವು ಎಲ್ಲೇ ಬಾಲ್ಯ ವಿವಾಹಗಳು ನಡೆಯುವ ಪ್ರಯತ್ನವನ್ನು ವಿಫಲ ಮಾಡಿ ಮೈಸೂರು ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶೆ ಹಾಗು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಉಷಾರಾಣಿ ಮಾತನಾಡಿ ಮಕ್ಕಳ ಮೇಲೆ ನಡೆಯುವ ಎಲ್ಲಾ ದೌರ್ಜನ್ಯಗಳು ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವ ಒಂದು ಗಂಭೀರ ಸಾಮಾಜಿಕ ಸಮಸ್ಯೆಯಾಗಿದೆ. ಹಾಗೂ ಮಕ್ಕಳ ಶಿಕ್ಷಣ, ಆಟ, ವಿಶ್ರಾಂತಿ ಹಾಗೂ ಆರೋಗ್ಯದ ಹಕ್ಕುಗಳನ್ನು ಕಸಿದುಕೊಂಡು ಅವರ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಕೆ.ಅಮರ್ನಾಥ್ ಮಾತನಾಡಿ ಪ್ರತಿದಿನವೂ ಬಾಲ್ಯ ವಿವಾಹ, ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರದ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ದಾಖಲಿಸಲಾಗುತ್ತದೆ. ಆದರೂ ನಮಗೆ ಈ ವಿಷಯದ ಬಗ್ಗೆ ಅರಿವಿಲ್ಲದಂತೆ ಇರುತ್ತೇವೆ ಅಥವಾ ಆ ವಿಷಯಗಳು ತಿಳಿದಿದ್ದರು ತಿಳಿಯದ ಹಾಗೆ ಇರುತ್ತೇವೆ ಎಂದು ಹೇಳಿದರು.
ತಮ್ಮಲ್ಲಿ ಯಾವುದೇ ರೀತಿಯ ಸಾರ್ವಜನಿಕವಾಗಿ ದೌರ್ಜನ್ಯಗಳು ಕಂಡುಬoದರು ಮೊದಲು ದೂರನ್ನು ನೀಡಿ. ನೇರವಾಗಿ ಸಂಪರ್ಕಿಸಲು ಸಾದ್ಯವಾಗದಿದ್ದಲ್ಲಿ ಪೊಲೀಸರ ಸಹಾಯವಾಣಿ 112 , ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ಅಥವಾ ಜಿಲ್ಲಾ ಸಹಾಯವಾಣಿ 15100 ಗೆ ಕರೆ ಮಾಡಬಹುದು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಬಾಲ್ಯ ವಿವಾಹವನ್ನು ತಡೆದು ದೂರು ದಾಖಲಿಸಿದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೆ ಸನ್ಮಾನವನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಸ್. ಮಂಜು, ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸಿಫ್, ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್, ಮಕ್ಕಳ ಸಂರಕ್ಷಣೆ ವಿಷಯ ತಜ್ಞ ಹಾಗೂ ಯುನಿಫ್ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಕೆ.ರಾಘವೇಂದ್ರ ಭಟ್, ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ ಸಿ.ವಿ. ಸ್ನೇಹ, ಅಪರ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ಉಪ ಪೊಲೀಸ್ ಆಯುಕ್ತ ಹಾಗೂ ಅಪರಾಧ ಮತ್ತು ಸಂಚಾರಿ ವಿಭಾಗದ ಕೆ.ಎಸ್ ಸುಂದರ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಿ.ಬಸವರಾಜು ಉಪಸ್ಥಿತರಿದ್ದರು
