ವಿಜಯ ದರ್ಪಣ ನ್ಯೂಸ್….
ಒಳಮೀಸಲಾತಿ ಜಾರಿ- ಸರ್ಕಾರದ ಐತಿಹಾಸಿಕ ತೀರ್ಮಾನ
ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧ
ಭೋವಿ ಜನಾಂಗದವರು ಶಿಕ್ಷಣಕ್ಕೆ ಒತ್ತು ನೀಡಬೇಕು- ಮುಖ್ಯಮಂತ್ರಿ ಸಿದ್ದರಾಮಯ್ಯ

ತಾಂಡವಪುರ ಮೇ 06: ಆರ್ಥಿಕ ಹಾಗೂ ಸಾಮಾಜಿಕ ಶಕ್ತಿಗಾಗಿ ಶಿಕ್ಷಣ ಅಗತ್ಯವಾಗಿದ್ದು, ಭೋವಿ ಜನಾಂಗದವರು ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹೇಳಿದರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತದ ವತಿಯಿಂದ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಸಿದ್ದರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡುತ್ತಾ
ಉತ್ಪಾದಿಸಿದ ಸಂಪತ್ತಿನ ಸಮಾನ ಹಂಚಿಕೆ
ಶ್ರೀ ಸಿದ್ದರಾಮೇಶ್ವರ ಜಯಂತಿಯ ಶುಭ ಕೋರಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಸಮಸಮಾಜ ನಿರ್ಮಿಸುವ ಸಂಕಲ್ಪವನ್ನು ಸರ್ಕಾರ ಹೊಂದಿದೆ. ಉತ್ಪಾದಿಸಿದ ಸಂಪತ್ತು ಸಮಾನವಾಗಿ ಹಂಚಿಕೆಯಾಗಿಬೇಕು ಎಂದರು.
ರಾಜ್ಯದ ಸರ್ವರಿಗೂ ಸಮಪಾಲು, ಸಮಬಾಳು ಸಿಗಬೇಕೆಂಬುದೇ ಸರ್ಕಾರದ ಉದ್ದೇಶ. ಸಿದ್ದರಾಮೇಶ್ವವರೂ ಸೇರಿದಂತೆ ಸಂತಮಹಾಶಯರು, ಸಮಾಜದಲ್ಲಿ ಜಾತಿವರ್ಗಗಳ ವ್ಯವಸ್ಥೆಗಳು ತೊಲಗಬೇಕು ಎಂದು ಬಯಸಿದ್ದರು. ಬಸವಾದಿ ಶರಣರು 12 ನೇ ಶತಮಾನದಲ್ಲಿ ಸಮಾನತೆಯ ಸಿದ್ಧಾಂತವನ್ನು ಬೋಧಿಸಿದ್ದರು. ಶೋಷಣೆಗೊಳಗಾದ ಹಾಗೂ ಅವಕಾಶವಂಚಿತ ಸಮುದಾಯಗಳು ಸಂಘಟಿತರಾಗುವ ಸಮ್ಮೇಳನಗಳು ಉತ್ತಮ ಕಾರ್ಯಗಳಾಗಿವೆ ಎಂದರು.
ನಾನು ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿರಿಸಿದ್ದೇನೆ
ಬಸವಜಯಂತಿಯಂದು ನಾನು 2013 ಮೇ 13 ರಂದು ನಾನು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದೆ. ಬಸವಣ್ಣನವರು ಬೋಧಿಸಿದಂತೆ ನಾನು ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿರಿಸಿದ್ದೇನೆ. ರಾಜಕೀಯ ಸ್ವಾತಂತ್ರ್ಯವು, ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯದ ತಳಹದಿಯ ಮೇಲೆ ನಿಂತಿದೆ. ಶಿಕ್ಷಣ ಪಡೆದಾಗ ಮಾತ್ರ ಸಾಮಾಜಿಕ ಆರ್ಥಿಕ ಶಕ್ತಿ ದೊರಕಲು ಸಾಧ್ಯ ಎಂದರು.
ಗ್ಯಾರಂಟಿ ಯೋಜನೆಗಳು ಮಹಿಳಾಸಮೂಹಕ್ಕೆ ವರದಾನ :
ಆರ್ಥಿಕವಾಗಿ ಶಕ್ತಿಯಿಲ್ಲದವರಿಗೆ ಗ್ಯಾರಂಟಿ ಯೋಜನೆಗಳನ್ನು ಸಮಾನವಾಗಿ ನೀಡಲಾಗಿದೆ. ಮಹಿಳೆಯರಿಗೆ ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ತಾರತಮ್ಯವಿಲ್ಲದೇ ನೀಡಲಾಗುತ್ತಿದೆ. ನಮ್ಮ ಸರ್ಕಾರ ಭೋವಿ ನಿಗಮವೂ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳ ಸಾಲವನ್ನು ಮನ್ನಾ ಮಾಡಲಾಗಿದೆ. ಪರಿಶಿಷ್ಟ ಜಾತಿಯ ಸಮುದಾಯಗಳಲ್ಲಿನ ಅಸಮಾನತೆ ಹೋಗಲಾಡಿಸಲು ಐತಿಹಾಸಿಕ ಒಳ ಮೀಸಲಾತಿಯನ್ನು ಜಾರಿಗೊಳಿಸಿದೆ ಎಡಗೈಗೆ 5.25%, ಬಲಗೈಗೆ 5.25%, ಹಾಗೂ ಇತರ ಉಪಜಾತಿಗಳಿಗೆ 4.5% ಹಂಚಿಕೆ ಮಾಡಲಾಗಿದೆ ಎಂದರು.
ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧ
ಈಗ ಜಾತಿ ಸಮೀಕ್ಷೆ ನಡೆಯುತ್ತಿದ್ದು, ಜಾತಿ ಸಮೀಕ್ಷೆ ವರದಿ ಬಂದ ನಂತರ ಚರ್ಚೆ ಮಾಡೋಣ ಎಂದರು. ನಮ್ಮ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಯಾರಿಗೂ ಅನ್ಯಾಯವಾಗಬಾರದು, ನೂರಕ್ಕೆ ನೂರು ಅಲ್ಲದಿದ್ದರೂ 99% ನ್ಯಾಯ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಅವಕಾಶಗಳಿಂದ ಯಾರೂ ವಂಚಿತರಾಗಬಾರದು
ಸಮುದಾಯದವರು ಇಟ್ಟಿರುವ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆ ನೀಡಿದ ಮುಖ್ಯಮಂತ್ರಿಗಳು ಸಮುದಾಯದವರಿಗೆ ಕುಲಪತಿ, ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಏಳು ಕೋಟಿ ಜನರಿಗೂ ನ್ಯಾಯ ಸಿಗಬೇಕು ಹಾಗೂ ಯಾರೂ ಅವಕಾಶಗಳಿಂದ ವಂಚಿತರಾಗಬಾರದು ಎಂದರು.
ಸಂವಿಧಾನ ರಚನೆಯಾದ ನಂತರ ಸಮಾನತೆಯನ್ನು ಸಾಧಿಸುವತ್ತ ದೇಶ ಸಾಗಿದ್ದು, ಸಂವಿಧಾನ ಹೇಳುವಂತೆಯೇ ನಡೆದುಕೊಳ್ಳುತ್ತೇವೆ ಎಂದರು.
ಸಹಿಷ್ಣುತೆಯನ್ನು ರೂಡಿಸಿಕೊಳ್ಳಬೇಕು
ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವ ಸಂವಿಧಾನದ ಮೂಲ ತತ್ವಗಳು. ಜಡತ್ವದಿಂದ ಕೂಡಿರುವ ಜಾತಿ ವ್ಯವಸ್ಥೆಯನ್ನು ಸುಧಾರಿಸಬೇಕಿದೆ. ಎಲ್ಲಾ ಜಾತಿಗಳನ್ನು ಪ್ರೀತಿಸಿ, ಅವರೂ ನಮ್ಮನ್ನು ಪ್ರೀತಿಸುವಂತೆ ಮಾಡಬೇಕು ಹಾಗೂ ಸಹಿಷ್ಣುತೆಯನ್ನು ರೂಡಿಸಿಕೊಳ್ಳಬೇಕು. ಉತ್ಪಾದನೆಯಲ್ಲಿ ಎಲ್ಲರೂ ಭಾಗವಹಿ ಉತ್ಪನ್ನವನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಸಿದ್ಧರಾಮೇಶ್ವರರು ನಮಗೆ ಬೋಧಿಸಿದ್ದರು. ಅವರು ನಡೆದ ಹಾದಿಯಲ್ಲಿಯೇ ನಮ್ಮ ಸರ್ಕಾರವೂ ನಡೆಯುತ್ತಿದೆ ಎಂದರು.
ಸಮಾರಂಭದಲ್ಲಿ ಬೋವಿ ಗುರುಪೀಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶಿವರಾಜ್ .ಎಸ್.ತಂಗಡಗಿ, ಪಶುಸಂಗೋಪನೆ ಸಚಿವ ಕೆ ವೆಂಕಟೇಶ್, ಶಾಸಕರಾದ ಕೆ ಹರೀಶ್ ಗೌಡ, ಅನಿಲ್ ಚಿಕ್ಕಮಾಧು, ವಿಧಾನ ಪರಿಷತ್ ಸದಸ್ಯ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ, ಎಂ ರಾಮಯ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಪ್ರಭಾಕರ್ ಡಾ.ತಿಮ್ಮಯ್ಯ, ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎನ್.ರಂಗಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್, ನಿರ್ದೇಶಕ ಮಂಜುನಾಥ್ ಸ್ವಾಮಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರಿಗೆ 2025-26ನೇ ಸಾಲಿನ ಕಾಯಕಯೋಗಿ ಸಿದ್ದರಾಮೇಶ್ವರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿದ್ದರಾಮೇಶ್ವರರ ಕುರಿತು ಬರೆದಿರುವ ‘ಸಿದ್ದರಾಮ ಬೆಳ್ಳಿ ಕಿರಣ’ ಪುಸ್ತಕವನ್ನು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.










