ವಿಜಯ ದರ್ಪಣ ನ್ಯೂಸ್……
ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತರ ಪ್ರತಿಭಟನೆ

ತಾಂಡವಪುರ ಜೂನ್ 11 ವಿದ್ಯುತ್ ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ನಂಜನಗೂಡಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು
ನಂಜನಗೂಡಿನ ಮೈಸೂರು ರಸ್ತೆಯಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವಿಭಾಗಿಯ ಕಛೇರಿಯ ಮುಂಭಾಗದಲ್ಲಿ ಜಮಾಯಿಸಿದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್. ವಿದ್ಯಾಸಾಗರ್ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರು ಅಂದೇ ಜನಸೇವಾ ಚುಟುವಟಿಕೆಗಳ ಸಂಸ್ಥೆಯಾದ ವಿದ್ಯುಚ್ಛಕ್ತಿ, ನೀರು ಹಾಗೂ ಲೋಕೋಪಯೋಗಿ, ಸಾರ್ವಜನಿಕ ಸರ್ಕಾರಿ ಸಂಸ್ಥೆಗಳು ಸರ್ಕಾರದ ಹಿಡಿತದಲ್ಲಿಯೇ ನಿರ್ವಹಿಸಬೇಕು. ಯಾವ ಕಾರಣಕ್ಕೂ ಲಾಭಗಳಿಕೆ ದೃಷ್ಟಿಯ ಖಾಸಗೀ ಸಂಸ್ಥೆಗಳಿಗೆ ನೀಡಬಾರದು ಎಂದು ಹೇಳಿದ್ದಾರೆ.
ಜನವಿರೋಧಿ ನೀತಿಯಾಗಿರುವುದರಿಂದ ತಾವು ದಯವಿಟ್ಟು ಟಾಟ ಪವರ್ ಕಂಪನಿ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸದೆ ರಾಜ್ಯದ ಗ್ರಾಹಕ ವರ್ಗದ ಹಿತದೃಷ್ಟಿಯಿಂದ ತಿರಸ್ಕರಿಸಬೇಕು. ರಾಜ್ಯದ
15 ಜಿಲ್ಲೆಗಳ ವಿದ್ಯುತ್ ಸರಬರಾಜು ಘಟಕಗಳನ್ನು ಮಾರಾಟ ಮಾಡಲು ಹೊರಟಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ಲಕ್ಷಾಂತರ ರೈತರ ಪಂಪ್ ಸೆಟ್ ಮತ್ತು ಹಳ್ಳಿಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಖಾಸಗೀಕರಣ ಮಾಡಿದರೆ ಹಣ ಖರೀದಿಸಿ, ಲಾಭ ಮಾಡಿಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ವಿದ್ಯುತ್ ಮಾರಾಟ ಮಾಡಲು ಬಿಡುವುದಿಲ್ಲ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದರು.
ಬಳಿಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು ಮಾತನಾಡಿ, ದೇಶದಲ್ಲಿ ಯುವಕರು ಕೆಲಸ ಇಲ್ಲದೆ ಕೂತಿದ್ದಾರೆ. ಈಗಾಗಲೇ ಉದ್ಯೋಗಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ವಿದ್ಯುತ್ ಖಾಸಗೀಕರಣ ಮಾಡಿದರೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧ್ಯಕ್ಷ ಸಿಂಧುವಳ್ಳಿ ಸತೀಶ್ ರಾವ್ ಮಾತನಾಡಿ, ಕೂಡಲೇ ವಿದ್ಯುತ್ ಖಾಸಗೀಕರಣವನ್ನು ಕೈ ಬಿಡಬೇಕು. ಇದರಿಂದ ಚೆಸ್ಕಾಂ ಅಧಿಕಾರಿಗಳಿಗೂ ತೊಂದರೆ ಆಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಉಳಿದಿವೆ. ಹುದ್ದೆಗಳನ್ನು ಭರ್ತಿ ಮಾಡುವ ಬದಲು ಕಾಲಹರಣ ಮಾಡುತ್ತಿದ್ದಾರೆ.
ಪರಿಜ್ಞಾನವಿಲ್ಲದ ಯುವಕರು ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದಾರೆ. ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಸಂಸ್ಥೆಗಳನ್ನು ಖಾಸಗೀಕರಣ ಮಾಡಬಾರದು ಮತ್ತು ಲಾಭಕ್ಕಾಗಿ ಬಳಸಬಾರದು ಎಂದು ಬಾಬಾ ಸಾಹೇಬರು ಹೇಳಿದ್ದಾರೆ.
ಖಾಸಗಿಕರಣಕ್ಕೆ ಕೈ ಹಾಕಿರುವ ಸರ್ಕಾರವನ್ನು ಮೂಲೆಗುಂಪು ಮಾಡಲು ನಾವು ಸಿದ್ಧರಿದ್ದೇವೆ. ಎಲ್ಲಾ ಇಲಾಖೆಗಳನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಅಧಿಕಾರಿಗಳು ಕೂಡ ಈ ಬಗ್ಗೆ ಯೋಚಿಸಿ ಸಂಘಟನೆಗಳ ಜೊತೆ ಕೈಜೋಡಿಸಬೇಕು.
ಕಾರ್ಪೊರೇಟರ್ ಗಳಿಗೆ ಮಾರಾಟ ಮಾಡುತ್ತಿರುವುದು ನಡೆಯುತ್ತಿದೆ. ಇದಕ್ಕೆ ಜನಪ್ರತಿನಿಧಿಗಳು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಅವರಿಗೆ ಚುನಾವಣೆಯ ಸಂದರ್ಭದಲ್ಲಿ ಅವರು ಹಣಕಾಸಿನ ವ್ಯವಸ್ಥೆ ಮಾಡಲು ಬೇಕಾಗಿದ್ದಾರೆ. ವಿದ್ಯುತ್ ಖಾಸಗೀಕರಣ ಮಾಡಿದರೆ ಕೆಲಸ ಮಾಡುವ ಅಧಿಕಾರಿಗಳು ಖಾಸಗಿ ಸಂಸ್ಥೆಯಲ್ಲಿ ದುಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಚೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅನಿಲ್ ಕುಮಾರ್ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್, ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು, ಜಿಲ್ಲಾಧ್ಯಕ್ಷ ಸಿಂಧುವಳ್ಳಿ ಸತೀಶ್ ರಾವ್, ತಾಲ್ಲೂಕು ಅಧ್ಯಕ್ಷ ಸೂರಹಳ್ಳಿ ಮಹದೇವ ನಾಯಕ, ಪಟ್ಟಣ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ನಂಜುಂಡ, ಸಿಂಧುವಳ್ಳಿ ಮಹದೇವ ನಾಯಕ, ಪ್ರಧಾನ ಕಾರ್ಯದರ್ಶಿ ದೇವರಾಜ್, ರವಿಚಂದ್ರ, ಹಳ್ಳಿ ದಿಡ್ಡಿ ರವಿ, ಮಂಜು, ಪ್ರಕಾಶ್, ಮನು, ವೆಂಕಟೇಶ್, ಮಂಜುನಾಥ್ ಸೇರಿದಂತೆ ರೈತರು ಹಾಜರಿದ್ದರು.










