ವಿಜಯ ದರ್ಪಣ ನ್ಯೂಸ್….
ಶಾಲಾ ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ವ್ಯಸನಕ್ಕೆ
ಬಲಿಯಾಗಿ ತಮ್ಮ ಅಮೂಲ್ಯ ಜೀವನ ಹಾಳುಮಾಡಿಕೊಳ್ಳಬೇಡಿ : ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ಶಾಲಾ-ಕಾಲೇಜು ಹಂತದಿಂದಲೇ ಮಕ್ಕಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಪೋಷಕರು ಮತ್ತು ಶಿಕ್ಷಕರು ಈ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು
ಶಾಸಕ ಬಿ.ಎನ್.ರವಿಕುಮಾರ್ ಮನವಿ ಮಾಡಿದರು.
ತಾಲ್ಲೂಕು ಆಡಳಿತ , ಪೊಲೀಸ್ ಇಲಾಖೆ, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನೆಹರೂ ಕ್ರೀಡಾಂಗಣದಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆಯ ಸಮಗ್ರ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆ ಮಾದಕ ವ್ಯಸನದ ಸುಳಿಗೆ ಸಿಲುಕುತ್ತಿರುವುದು ಸಮಾಜಕ್ಕೆ ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.
ಕ್ರೀಡೆ ಮತ್ತು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಯುವಜನರನ್ನು ಮಾದಕ ವ್ಯಸನದಿಂದ ದೂರವಿರಿಸಬಹುದು ಎಂದರು.
ತಹಶಿಲ್ದಾರ್ ಗಗನಸಿಂಧು ಮಾತನಾಡಿ ,ಪಿಡುಗು ನಿಯಂತ್ರಣಕ್ಕೆ ಆಡಳಿತ ಎಲ್ಲಾ ಕ್ರಮ ಕೈಗೊಳ್ಳಲಿದ್ದು, ಜನಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದರು.
ಮಾದಕ ವಸ್ತುಗಳ ಮಾರಾಟ ಅಥವಾ ಬಳಕೆ ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರುವಂತೆ ಸಾರ್ವಜನಿಕರಿಗೆ ಮನವಿ ಅವರು ಮಾಡಿದರು.

ಈ ವೇಳೆ ವಿದ್ಯಾರ್ಥಿಗಳು, ಯುವಜನರು ಮತ್ತು ಸಾರ್ವಜನಿಕರಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ಅಭಿಯಾನದ ಅಂಗವಾಗಿ ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು ,ಪೊಲೀಸರು ಮತ್ತು ನಗರದ ವಿವಿಧ ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು, ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು,
ಕಾರ್ಯಕ್ರಮದ ನಂತರ ಎಲ್ಲಾ ವಿಭಾಗಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎ.ಎಸ್.ಪಿ ಜಗನ್ನಾಥರೈ, ಸರ್ಕಲ್ ಇನ್ಸ್‌ಪೆಕ್ಟರ್ ಆನಂದ್ ಕುಮಾರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಸುನಿಲ್ ಕುಮಾರ್, ವೇಣುಗೋಪಾಲ್, ನಾಗರಾಜ್, ಶಾಮಣ್ಣ ಹಾಗು ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.










