--Ads--

ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನ: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದೇವನಹಳ್ಳಿಯಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ.

On: June 30, 2026 3:52 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನ: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದೇವನಹಳ್ಳಿಯಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ.

ದೇವನಹಳ್ಳಿ: ಮಾಜಿ ಮುಖ್ಯಮಂತ್ರಿ ಹಾಗೂ  ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಕುಟುಂಬದ ವಿರುದ್ಧ ಮಾಧ್ಯಮಗಳ ಮುಂದೆ ನಿರಂತರವಾಗಿ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಹಾಗೂ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವದಂತಹ ಪವಿತ್ರ ಕಾರ್ಯಕ್ರಮದಲ್ಲಿ ಜನರನ್ನು ಪ್ರಚೋದಿಸಿದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ಬೇಜವಾಬ್ದಾರಿ ನಡವಳಿಕೆಯನ್ನು ಖಂಡಿಸಿ ದೇವನಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಬೃಹತ್ ಹೋರಾಟ ನಡೆಸಲಾಯಿತು.
​ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀ ನಿಸರ್ಗ ನಾರಾಯಣಸ್ವಾಮಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ವಿ. ಮಂಜುನಾಥ್ ಅವರ ನೇತೃತ್ವದಲ್ಲಿ, ಮತ್ತು ದೇವನಹಳ್ಳಿ ತಾಲೂಕು ಅಧ್ಯಕ್ಷ ಎಸ್. ಮಹೇಶ್ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗೂಡಿ ಈ ತೀವ್ರ ಪ್ರತಿಭಟನೆ ನಡೆಸಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ: ನಿಸರ್ಗ ನಾರಾಯಣಸ್ವಾಮಿ ಆಗ್ರಹ
​ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಶ್ರೀ ನಿಸರ್ಗ ನಾರಾಯಣಸ್ವಾಮಿ, “ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರಾದವರು ಇತರರ ಬಗ್ಗೆ ಮಾತನಾಡುವಾಗ ಹತ್ತು ಬಾರಿ ಯೋಚಿಸಬೇಕು. ಕುಮಾರಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಹಾಗೂ ಚಿಕ್ಕಬಳ್ಳಾಪುರದಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿದ್ದ ಜನರನ್ನು ಪ್ರಚೋದಿಸಿರುವುದು ದೊಡ್ಡ ಅಪರಾಧವಾಗಿದೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕುಮಾರಣ್ಣನವರ ಕ್ಷಮೆಯಾಚಿಸಬೇಕು,” ಎಂದು ತೀವ್ರವಾಗಿ ಆಗ್ರಹಿಸಿದರು.
ಪ್ರದೀಪ್ ಈಶ್ವರ್ ಅವರನ್ನು ಎ-1 ಆರೋಪಿ ಮಾಡಿ: ಕೆ.ವಿ. ಮಂಜುನಾಥ್ ವಾಗ್ದಾಳಿ
​ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಕೆ.ವಿ. ಮಂಜುನಾಥ್ ಮಾತನಾಡಿ, “ಶಿಕ್ಷಣ ಸಂಸ್ಥೆ ನಡೆಸುವವರೇ ಈ ರೀತಿ ನಡೆದುಕೊಂಡರೆ ಮಕ್ಕಳಿಗೆ ಯಾವ ರೀತಿಯ ವಿದ್ಯಾಭ್ಯಾಸ ನೀಡುತ್ತಾರೆ? ಕಾರ್ಯಕ್ರಮದ ಹೊರಗಡೆ ಮೀಸೆ ತಿರುಗಿಸುವುದು, ತೊಡೆ ತಟ್ಟುವುದು, ‘ನನ್ನ ಕೂದಲು ಸಹ ಕಿತ್ತುಕೊಳ್ಳಲು ಆಗುವುದಿಲ್ಲ’ ಎಂದು ಸನ್ನೆ ಮಾಡುವ ಮೂಲಕ ಅಲ್ಲಿದ್ದವರನ್ನು ಪ್ರಚೋದಿಸಿದ್ದಾರೆ. 224 ಶಾಸಕರಲ್ಲಿ ಯಾರೂ ಈ ರೀತಿ ನಡೆದುಕೊಂಡ ಉದಾಹರಣೆಯಿಲ್ಲ. ತಮ್ಮದೇ ಸ್ವಕ್ಷೇತ್ರದಲ್ಲಿ ಚಪ್ಪಲಿ ಏಟು ತಿಂದಿರುವುದು ಇದೇ ಮೊದಲು ಇರಬೇಕು. ನಾಡಪ್ರಭು ಕೆಂಪೇಗೌಡರ ಕಾರ್ಯಕ್ರಮದಲ್ಲಿ ಪ್ರಚೋದನೆ ನೀಡಿದ ಮೊದಲ ವ್ಯಕ್ತಿಯಾದ ಪ್ರದೀಪ್ ಈಶ್ವರ್ ಅವರನ್ನು ಎ-1 ಆರೋಪಿಯನ್ನಾಗಿ ಮಾಡಬೇಕು,” ಎಂದು ಆಗ್ರಹಿಸಿದರು.
​”ಚಿಕ್ಕಬಳ್ಳಾಪುರ ಜಿಲ್ಲೆಗೆ ತನ್ನದೇ ಆದ ಗೌರವವಿದೆ. ಸರ್ ಎಂ. ವಿಶ್ವೇಶ್ವರಯ್ಯ, ಕೈವಾರ ತಾತಯ್ಯನವರಂತಹ ಅನೇಕ ಗಣ್ಯರು ನೆಲೆಸಿದ್ದ ಪವಿತ್ರ ಜಿಲ್ಲೆಗೆ ಇವರಿಂದಾಗಿ ಕೆಟ್ಟ ಹೆಸರು ಬರುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.”
– ಕೆ.ವಿ. ಮಂಜುನಾಥ್, ಜಿಲ್ಲಾಧ್ಯಕ್ಷರು.
​ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ
​ಪ್ರತಿಭಟನೆಯ ನಂತರ, ಶಾಸಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಪರವಾಗಿ ತಹಸೀಲ್ದಾರ್ ರಾಜೀವ್ ಲೋಚನ ಅವರಿಗೆ ಜೆಡಿಎಸ್ ಮುಖಂಡರು ಮನವಿ ಪತ್ರ ಸಲ್ಲಿಸಿದರು.
​ಈ ಸಂದರ್ಭದಲ್ಲಿ ತಾಲೂಕಿನ ನೂರಾರು ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

WhatsApp

Join Now

Telegram

Join Now

Instagram

Join Now