ವಿಜಯ ದರ್ಪಣ ನ್ಯೂಸ್…..
ಭದ್ರಕೋಟೆ ಮರಳಿ ಪಡೆಯಲು ಜೆಡಿಎಸ್ ರಣತಂತ್ರ..
ಗ್ರಾಮ ಮಟ್ಟದಲ್ಲಿ ಸಂಘಟನೆ ಬಲಪಡಿಸಲು ಹೊಸ ಮಂತ್ರ

ನೆಲಮಂಗಲ: ಕಳೆದ ಮೂರು ವರ್ಷಗಳಿಂದ ಸಂಘಟನಾ ಚಟುವಟಿಕೆಗಳಲ್ಲಿ ಹಿನ್ನಡೆ ಅನುಭವಿಸಿದ್ದ ಜಾತ್ಯಾತೀತ ಜನತಾ ದಳ (ಜೆಡಿಎಸ್) ಇದೀಗ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ 2028ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಗ್ರಾಮ ಮಟ್ಟದಿಂದ ಬೂತ್ ಮಟ್ಟದವರೆಗೆ ಪಕ್ಷದ ಸಂಘಟನೆಯನ್ನು ಬಲಪಡಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಒಂದು ಕಾಲದಲ್ಲಿ ಜೆಡಿಎಸ್ ನ ಭದ್ರಕೋಟೆಯೆಂದೇ ಗುರುತಿಸಿಕೊಂಡಿದ್ದ ನೆಲದಮಂಗಲ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿ ಅಭ್ಯರ್ಥಿ ಠೇವಣಿಯನ್ನೂ ಕಳೆದುಕೊಳ್ಳಬೇಕಾಯಿತು. ಇದರ ಬಳಿಕ ಪಕ್ಷದ ಚಟುವಟಿಕೆಗಳು ಬಹುತೇಕ ಕುಂಠಿತಗೊಂಡಿದ್ದವು. ಕಾರ್ಯಕರ್ತರಲ್ಲಿ ನಿರುತ್ಸಾಹ ಮನೆಮಾಡಿದ್ದರೆ, ಹಲವರು ನಿಷ್ಕ್ರಿಯರಾಗಿದ್ದರು. ಕೆಲವರು ಇತರೆ ರಾಜಕೀಯ ಪಕ್ಷಗಳತ್ತ ಮುಖ ಮಾಡಿದ್ದೂ ಸಂಘಟನೆಗೆ ಹಿನ್ನಡೆಯಾಗಿ ಪರಿಣಮಿಸಿತ್ತು.
ಸ್ಥಳೀಯ ಮಟ್ಟದಲ್ಲಿ ಪಕ್ಷದ ನಾಯಕರು ಜನರ ಸಮಸ್ಯೆಗಳ ಕುರಿತು ನಿರಂತರ ಹೋರಾಟ ನಡೆಸುತ್ತಿಲ್ಲ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನು ಸಮರ್ಥವಾಗಿ ಪ್ರಶ್ನಿಸುತ್ತಿಲ್ಲ ಎಂಬ ಅಸಮಾಧಾನ ಕಾರ್ಯಕರ್ತರಲ್ಲಿ ವ್ಯಕ್ತವಾಗಿತ್ತು ಇದೇ ಸಂದರ್ಭದಲ್ಲಿ 2028ರ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತೂ ಪಕ್ಷದೊಳಗೆ ಚರ್ಚೆಗಳು ಆರಂಭವಾಗಿದ್ದು, ಮಾಜಿ ಶಾಸಕ ಡಾ. ಕೆ. ಶ್ರೀನಿವಾಸ್ ಮೂರ್ತಿ ಅವರಿಗೆ ಮತ್ತೆ ಟಿಕೆಟ್ ನೀಡಬಾರದು ಎಂಬ ಮಾತುಗಳೂ ಕೆಲ ವಲಯಗಳಲ್ಲಿ ಕೇಳಿಬಂದಿದ್ದವು ಎನ್ನಲಾಗುತ್ತಿದೆ. ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ನಾಯಕತ್ವ ಮುಂದಾಗಿದೆ. ಮಾಜಿ ಶಾಸಕ ಡಾ. ಕೆ. ಶ್ರೀನಿವಾಸ್ ಮೂರ್ತಿ ಅವರು ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಘಟನೆಯನ್ನು ಪುನಶ್ವೇತನಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ. ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಂತೆ ಕ್ಷೇತ್ರದಲ್ಲಿ ಪಕ್ಷವನ್ನು ಮತ್ತೆ ಬಲಿಷ್ಠಗೊಳಿಸಲು ವಿಶೇಷ ಕಾರ್ಯಯೋಜನೆ ರೂಪಿಸಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಈಗಾಗಲೇ ಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕಾರ್ಯಕರ್ತರ ಸಭೆಗಳು, ಬೂತ್ ಸಮಿತಿ ಸಭೆಗಳು, ಜನರೊಂದಿಗೆ ಜನತಾದಳ, ಸೇರಿದಂತೆ ಜನಸಂಪರ್ಕ ಅಭಿಯಾನಗಳು ಹಾಗೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದ ಎಸ್‌ಐಆರ್ ಮತ್ತು ಬಿಎಲ್ಎ 2 ಕಾರ್ಯಾಗಾರಗಳು ನಿರಂತರವಾಗಿ ನಡೆಯುತ್ತಿವೆ. ಬೂತ್ ಮಟ್ಟದಲ್ಲಿ ಹೊಸ ತಂಡಗಳನ್ನು ರಚಿಸುವುದು, ಯುವಕರು ಮತ್ತು ಮಹಿಳೆಯರನ್ನು ಸಂಘಟನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷದ ಚಟುವಟಿಕೆಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ಕೂ ಒತ್ತು ನೀಡಲಾಗಿದೆ.
ಇದಲ್ಲದೆ, ಈ ಹಿಂದೆ ಪಕ್ಷವನ್ನು ತೊರೆದು ಇತರೆ ಪಕ್ಷಗಳಿಗೆ ಸೇರ್ಪಡೆಯಾಗಿದ್ದ ಮುಖಂಡರು ಹಾಗೂ ಕಾರ್ಯಕರ್ತರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನವೂ ವೇಗ ಪಡೆದುಕೊಂಡಿದೆ. ಪ್ರತಿ ಗ್ರಾಮದಲ್ಲೂ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಜನರ ವಿಶ್ವಾಸ ಗಳಿಸುವ ಉದ್ದೇಶದಿಂದ ನಾಯಕರು ಮನೆ-ಮನೆ ಸಂಪರ್ಕ ಅಭಿಯಾನ ನಡೆಸುತ್ತಿದ್ದಾರೆ.
ರೈತರ ಸಮಸ್ಯೆಗಳು, ಕುಡಿಯುವ ನೀರು, ರಸ್ತೆ, ಉದ್ಯೋಗ ಸೇರಿದಂತೆ ಜನಜೀವನಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ನಡುವೆ ಸಕ್ರಿಯವಾಗುವ ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.
ಸದ್ಯದಲ್ಲೇ ನಡೆಯಲಿರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ವಾರ್ಡ್ ಮತ್ತು ಬೂತ್ ಮಟ್ಟದ ಸಂಘಟನೆಗಳನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ಪ್ರತಿಯೊಂದು ಮತಗಟ್ಟೆಯಲ್ಲೂ ಕಾರ್ಯಕರ್ತರ ಜಾಲವನ್ನು ವಿಸ್ತರಿಸಿ, ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿರುವುದು ಪಕ್ಷದ ಕಾರ್ಯತಂತ್ರದ ಭಾಗವಾಗಿದೆ ಎಂದು ಮುಖಂಡರು ಹೇಳುತ್ತಿದ್ದಾರೆ.
ಒಟ್ಟಾರೆ. ಕಳೆದ ಕೆಲ ವರ್ಷಗಳಿಂದ ರಾಜಕೀಯವಾಗಿ ಮಂಕಾಗಿದ್ದ ಜೆಡಿಎಸ್ ಇದೀಗ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದು, ಭದ್ರಕೋಟೆ ಮರಳಿ ಪಡೆಯುವ ಉದ್ದೇಶದಿಂದ ಸಂಘಟನಾ ಬಲವರ್ಧನೆಗೆ ಆದ್ಯತೆ ನೀಡಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಕ್ಷೇತ್ರದ ರಾಜಕೀಯ ಸಮೀಕರಣಗಳ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದು ಕುತೂಹಲ ಮೂಡಿಸಿದೆ.











