--Ads--

ಹಾಡು ಹಕ್ಕಿ – ಜಾನಕಿ ಅಮ್ಮ , ಹೋಗಿ ಬನ್ನಿ!

On: July 12, 2026 3:33 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್…..

ಹಾಡು ಹಕ್ಕಿ – ಜಾನಕಿ ಅಮ್ಮ , ಹೋಗಿ ಬನ್ನಿ!

ಲೇಖನ: ಅಂಕ್ನಳ್ಳಿ ಜಯರಾಂ, ಮುಂಬಯಿ.

ಒಂದು ಕಾಲದಲ್ಲಿ  ಮೆಚ್ಚಿನ ಚಿತ್ರಗೀತೆಗಳ ನೆಚ್ಚಿನ ತಾಣವಾಗಿತ್ತು ನಮ್ಮ ‘ಆಕಾಶವಾಣಿ’. ನಮ್ಮ ಬಾಲ್ಯದ ದಿನಗಳಲ್ಲಿ ಈ ಆಕಾಶವಾಣಿ ತುಂಬಾ ಪ್ರಚಲಿತವಾಗಿತ್ತು. ಬೆಳಿಗ್ಗೆ ಮತ್ತು ಸಂಜೆ ವಾರ್ತೆ ಹಾಗೂ ಮೆಚ್ಚಿನ ಚಿತ್ರಗೀತೆಗಳಿಗೆಂದೇ ಸಮಯ ನಿಗದಿ ಮಾಡಿ ವಿವಿಧ ಬಾನುಲಿ ಕೇಂದ್ರಗಳಿಂದ ಕಾರ್ಯಕ್ರಮ ಪ್ರಸಾರ ಮಾಡುವುದು ವಾಡಿಕೆಯಾಗಿತ್ತು. ಆ ಕಾರ್ಯಕ್ರಮ ಆಲಿಸಲು ಕಾತುರದಿಂದ ಕಾಯುವುದು ಮನಸ್ಸಿಗೆ ಮುದ ನೀಡುತ್ತಿತ್ತು. ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಧ್ವನಿ ಮಾಧುರ್ಯ ತುಂಬಿ ತುಳುಕುತ್ತಿತ್ತು. ಅದರಲ್ಲೂ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ ಆಗ ತುಂಬಾ ಜನಪ್ರಿಯವಾಗಿತ್ತು. ಅದಕ್ಕಾಗಿ ಜನ ಕಾತುರದಿಂದ ಕಾಯುತ್ತಿದ್ದರು.
ಅಂತೆಯೇ ನಾವು ನಮ್ಮ ‘ಮೆಚ್ಚಿದ ಚಿತ್ರಗೀತೆ’ಗಳನ್ನು ಪ್ರಸಾರ ಮಾಡಲು ‌ಸ್ಥಳೀಯ ‘ಆಕಾಶವಾಣಿ’ ಕೇಂದ್ರಕ್ಕೆ ಪತ್ರ ಬರೆದು ಕೋರುತ್ತಿದ್ದೆವು ಮತ್ತು ಆ ಹಾಡುಗಳು ಬಾನುಲಿ ಕೇಂದ್ರದಿಂದ ಪ್ರಸಾರವಾಗಿ ಮೆಚ್ಚಿದ್ದವರ ಸಾಲಿನಲ್ಲಿ ನಮ್ಮ ಹೆಸರು ಕೂಡ ಬಂದರೆ ಆಲಿಸುವುದೇ ನಮಗಾಗ ಮಹದಾನಂದ; ರೋಮಾಂಚನ, ಹೆಮ್ಮೆ ಎಲ್ಲವೂ ಒಮ್ಮೆಲೇ ಆಗುತ್ತಿತ್ತು. ಅದರಲ್ಲೂ ತುಂಬಾ ಅನುಕೂಲಸ್ಥರ ಮನೆಯಲ್ಲಿ ಮಾತ್ರವೇ ಇದ್ದ ಈ ರೇಡಿಯೋ ಟ್ರಾನ್ಸಿಸ್ಟರುಗಳಲ್ಲಿ ಅವರು ಅತಿ ಹೆಚ್ಚು ಸೌಂಡ್ ಕೊಟ್ಟಾಗ ಮಾತ್ರವೇ ನಮಗೆ ಈ ಸುಮಧುರ ಹಾಡುಗಳನ್ನು ಕೇಳುವ ಭಾಗ್ಯ ಲಭಿಸುತ್ತಿತ್ತು.
ಅಲ್ಪ-ಸ್ವಲ್ಪ ಹೊಲ-ಮನೆ ಇದ್ದರೂ, ಆರ್ಥಿಕ ಸಂಪನ್ಮೂಲಗಳ ಕೊರತೆಯ ಜೊತೆಗೆ ಅಜ್ಞಾನ, ಅಂಧಕಾರ, ಅನಕ್ಷರತೆ ಮನೆಮಾಡಿದ್ದರಿಂದ ನಮ್ಮೂರಿನಲ್ಲಿ ಆಗ ಶಾಲೆ ಕಲಿತವರು ತುಂಬಾ ವಿರಳವಾಗಿದ್ದರು. ಆದರೂ ನಮ್ಮ ಕುಟುಂಬದಲ್ಲಿ ನಮ್ಮ ತಂದೆ ಆಗಲೇ ಅದ್ಹೇಗೋ ಎಲ್.ಎಸ್(ಲೋಯರ್ ಸೆಕೆಂಡರಿ) ಮುಗಿಸಿದ್ದರು. ಅವರಿಗೆ ಉತ್ತಮ ಉದ್ಯೋಗ ಕೂಡ ಲಭಿಸುತ್ತಿತ್ತು. ಆದರೆ ಕೃಷಿ ಬಿಟ್ಟು ಹೋಗಲು ಅವರು ತಯಾರಿರಲಿಲ್ಲ. ಇವರ ತಂದೆ ಅಂದರೆ ನಮ್ಮ ತಾತ ‘ತೋಟಿತನ’ದ ಕೆಲಸ ಕೂಡ ಮಾಡುತ್ತಿದ್ದರಿಂದ ಅವರಿಗೆ ನೆರವಾಗಿ ಬೇಸಾಯಕ್ಕೆ ಹೆಗಲು ಕೊಡುವುದು ಆಗ ಹಿರಿಯ ಮಗನಾದ ನಮ್ಮಪ್ಪನ ಜವಾಬ್ದಾರಿಯೂ ಆಗಿತ್ತು. ಓರ್ವ ಅಕ್ಕ ಹಾಗೂ ಆರು ಜನ ತಂಗಿಯರು ಮತ್ತು ಇಬ್ಬರು ತಮ್ಮಂದಿರೂ ಇದ್ದಿದ್ದರಿಂದ ಹೊಲ-ಮನೆ ಕೆಲಸದಲ್ಲಿ ತಂದೆಗೆ ನೆರವಾಗಿ ಎತ್ತು-ಗಾಡಿ, ನೆಗಿಲು-ನೊಗದ ಸಹವಾಸದಲ್ಲೇ ಬದುಕು ಕಟ್ಟಿಕೊಂಡಿದ್ದರು. ನಮ್ಮ ಹಿರಿಯ ಚಿಕ್ಕಪ್ಪ ಆರ್.ರಾಮಯ್ಯ ನಮ್ಮಪ್ಪನ ಒತ್ತಾಸೆಯಿಂದ ಕಲಿತು ಪಶುವೈದ್ಯರಾಗಿದ್ದರು. ಅವರ ಆಸರೆಯ ಫಲವಾಗಿ ಮತ್ತೊಬ್ಬ ಚಿಕ್ಕಪ್ಪ ಕೃಷಿ ಪದವಿ ಪಡೆದು ಕೃಷಿ ಅಧಿಕಾರಿಯಾಗಿದ್ದರು. ಇವರ ಆಸರೆ ಪ್ರೀತಿ ಮಮತೆಯ ಫಲವಾಗಿ ನಮ್ಮ ತಂದೆಯ‌ ಕೊನಯ ತಂಗಿ, ತಾತನ ಕೊನೆ ಮಗಳು ನನ್ನ ಮುದ್ದಿನ ಅತ್ತೆ ಆರ್.ಜಯಮ್ಮ ಕೂಡ ಪದವಿ ಪಡೆದು ಪೋಸ್ಟ್ ಆಫೀಸಲ್ಲಿ ಉದ್ಯೋಗ ಪಡೆದು ನಮ್ಮೆಲ್ಲರ ಪಾಲಿಗೆ ‘ಸಾವಿತ್ರಿಬಾಯಿ’ಯಾಗಿ ಬಿಟ್ಟರು. ಆನಂತರ ನಮ್ಮ ಕುಟುಂಬ ಸ್ವಲ್ಪಮಟ್ಟಿಗೆ ಸುಧಾರಣೆ ಕಾಣಲು ಪ್ರಾರಂಭವಾಯಿತು. ಅಂದರೆ ಆ ಕಾಲದಲ್ಲಿ ಈ ರೇಡಿಯೋದಲ್ಲಿ  ಹಾಡು ಕೇಳುವುದೂ ನಮ್ಮಂಥ ಹಳ್ಳಿಗಾಡಿನವರಿಗೆ ಅದೆಷ್ಟು ಕಷ್ಟಸಾಧ್ಯವಾಗಿತ್ತು ಎಂಬುದನ್ನು ತಿಳಿಸಲು ಇಷ್ಟೆಲ್ಲಾ ಕಥೆ ಹೇಳಬೇಕಾಯಿತು. ಆ ಮಾತು ಆಗಿರಲಿ.
ಕೃಷಿ ಅಧಿಕಾರಿಯಾದ ನಮ್ಮ ಚಿಕ್ಕಪ್ಪ ಆರ್.ಲಕ್ಷಣ್ ಅವರು ತಮ್ಮ ಮೊದಲ ಸಂಬಳದಲ್ಲಿ  ಆಗ ತುಂಬಾ ಪ್ರಸಿದ್ದವಾಗಿದ್ದ  BUSH ರೇಡಿಯೋವನ್ನು ಮನೆಗೆ ತಂದಿದ್ದರು. ಆಗ ಅದನ್ನು ನೋಡಲು ನೆರೆ-ಹೊರೆಯವರೆಲ್ಲಾ ಬಂದಿದ್ದರು. ಅಲ್ಲಿಂದ ನಮಗೆ ಈ ಸುಮಧುರ ‘ಮೆಚ್ಚಿನ ಚಿತ್ರಗೀತೆ’ಗಳನ್ನು ಕೇಳಿ ಆನಂದಿಸುವ ಯೋಗ ಬಂತು. ಆ ನೆನಪುಗಳು ನಮ್ಮ ಮನಃಪಟಲದಿಂದ ಎಂದಿಗೂ ಮಾಸಲಾರವು!
ನಮ್ಮ ಊರು ಅಂಕನಹಳ್ಳಿಯಿಂದ ಕೇವಲ ಐವತ್ತು ಕಿಲೋಮೀಟರ್ ಅಂತರದಲ್ಲಿ  ಬೆಂಗಳೂರು ಬಾನುಲಿ ಕೇಂದ್ರ ಇದ್ದುದರಿಂದ ನಿರಾಯಾಸವಾಗಿ ಕಾರ್ಯಕ್ರಮ ಬಿತ್ತರಗೊಳ್ಳುತ್ತಿದ್ದವು. ಆದರೆ ಆಗ ಮನೆಯಲ್ಲಿ ವಿದ್ಯುತ್ ಸೌಲಭ್ಯ ಇರಲಿಲ್ಲವಾದ್ದರಿಂದ ಬ್ಯಾಟರಿ ಸೆಲ್ಸಗಳಿಂದಲೇ ಬೆಳಿಗ್ಗೆ ಮತ್ತು ಸಂಜೆ ನಮ್ಮ ಮನೆಯ ರೇಡಿಯೋ ಮಾತಾಡುತ್ತಿತ್ತು; ಬೆಳಗಿನ ಸುಪ್ರಭಾತ, ಅರಳಿಕಟ್ಟೆಯ ಕೃಷಿ ಕಾರ್ಯಕ್ರಮ, ಕೃಷಿ, ಹವಾಮಾನ ವರದಿ, ವಾರ್ತೆಗಳು, ಷೇರು ಪೇಟೆ ಧಾರಣೆ, ಬಾನುಲಿ ನಾಟಕ, ಚರ್ಚೆಗಳು, ಉದ್ಯೋಗ ವಾರ್ತೆ ಇನ್ನೂ ಮುಂತಾದುವುಗಳನ್ನು ಆಗಾಗ ನಾವು ಕೇಳುವಂತಾಯಿತು. ಆದರೂ ಮೆಚ್ಚಿನ ಚಿತ್ರಗೀತೆಗೇ ಎಲ್ಲರ ಮೊದಲ ಸ್ಥಾನವಿತ್ತು.
ಮೆಚ್ಚಿನ ಚಿತ್ರಗೀತೆಗಳೆಂದರೆ ಯಾರಿಗೆ ತಾನೆ ಇಷ್ಟವಿರುವುದಿಲ್ಲ! ಅವುಗಳನ್ನು ಅಕ್ಕಪಕ್ಕದ ಮನೆಯವರೂ ಕೇಳಿ ಆನಂದಪಡುತ್ತಿದ್ದರು. ರೇಡಿಯೋ ಧ್ವನಿ ಹೆಚ್ಚಿಸಲು ಕೂಡ ಆಗಾಗ ಒತ್ತಾಯಿಸುತ್ತಿದ್ದರು. ಯಾಕೆಂದರೆ ಅಂದಿನ ಹಾಡುಗಳ ಅರ್ಥಪೂರ್ಣ ಸಾಹಿತ್ಯ, ಅಮೋಘ ಸಂಗೀತ, ಅದ್ಭುತ ಗಾಯನ ಎಲ್ಲವೂ ಎಲ್ಲ  ವಯೋಮಾನದವರಿಗೂ ಹಿತವಾಗಿ ಸಂತಸ ತರುತ್ತಿದ್ದವು. ಅದರಲ್ಲೂ  ಚಲನಚಿತ್ರಗಳ ಜೀವಾಳವಾಗಿದ್ದ ಈ ಹಿನ್ನೆಲೆ ಹಾಡುಗಳು ತುಂಬಾ ಜನಪ್ರಿಯತೆ ಗಳಿಸಿದ್ದವು; ಈಗಲು ಗಳಿಸಿವೆ. ಅಷ್ಟೇ ಅಲ್ಲ, ಆಗಾಗ ನಾಲಿಗೆಯ ಮೇಲೂ ನಲಿದಾಡುತ್ತವೆ. ಅದಕ್ಕೆ ಪ್ರಮುಖ ಕಾರಣ ಹಿನ್ನೆಲೆ ಗಾಯಕರು.
ಬಲು ಹಿಂದಿನಿಂದಲೂ ಮೇರು ವ್ಯಕ್ತಿತ್ವದ ಹಲವು ಕಂಚಿನ ಕಂಠದ ಸುಮಧುರ ಹಿನ್ನೆಲೆ ಗಾಯಕರು ಆಗಿಹೋಗಿದ್ದಾರೆ. ಅಂದಿನಿಂದ ಇಂದಿನವರೆಗೂ ಸಾವಿರಾರು ಸುಮಧುರ ಹಾಡುಗಳನ್ನು ಹಾಡಿದ ಅಂಥ ಮಧುರ ‘ಗಾನಕೋಗಿಲೆ’ಗಳಲ್ಲಿ  ಮೇರು ಪರ್ವತ ಎಂದರೆ ಅದು ನಮ್ಮ ದಕ್ಷಿಣ ಭಾರತದ ‘ಎಸ್.ಜಾನಕಿ’ ಅಮ್ಮನವರು ಎಂದರೆ ಅತಿಶಯೋಕ್ತಿಯಾಗಲಾರದು! ಯಾಕೆಂದರೆ ಆಗ ಯಾವುದೇ ಹಾಡುಗಳು ರೇಡಿಯೋದಲ್ಲಿ  ಪ್ರಸಾರವಾದರೂ ಹಾಡಿರುವವರು  ‘ಪಿ.ಬಿ.ಶ್ರೀನಿವಾಸ್-ಎಸ್.ಜಾನಕಿ’ ಇಲ್ಲವೇ ‘ಎಸ್.ಪಿ.ಬಾಲಸುಬ್ರಮಣ್ಯಂ-ಎಸ್.ಜಾನಕಿ’ ಈ ಜೋಡಿಯ ಹೆಸರೇ ಪ್ರಮುಖವಾಗಿ ಕೇಳಿ ಬರುತ್ತಿತ್ತು. ಅದರ ಜೊತೆಗೆ ಅವರೊಬ್ಬರೇ ಹಾಡಿದ ಸಾವಿರಾರು ಸೋಲೋ ಹಾಡುಗಳು ಮೆಚ್ಚಿನ ಚಿತ್ರಗೀತೆಗಳ ಪ್ರಸಾರ ಪಟ್ಟಿಯಲ್ಲಿ ಇರುತ್ತಿದ್ದವು. ಮಗುವಿನ ಮೆಲುದನಿಯಿಂದ ವೃದ್ಧಾಪ್ಯದ ತೊದಲುನುಡಿ ತನಕ ಎಲ್ಲಾ ವಯೋಮಾನದ ಎಂಥದ್ದೇ ಹಾಡು ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸಿ ಜನಮನದಲ್ಲಿ ಅವು ನೆಲೆಯೂರುವಂತೆ ಮಾಡಿಬಿಡುತ್ತಿದ್ದರು. ತಮ್ಮ ಮೂರನೇ ವಯಸ್ಸಿನಲ್ಲಿ ಆರಂಭಿಸಿದ ಗಾಯನ ಕಾಯಕವನ್ನು ತಾವು ಕೊನೆಯುಸಿರೆಳೆಯುವ ನೆನ್ನೆಯವರೆಗೂ ಸುಮಾರು ನಲವತ್ತೆಂಟು ಸಾವಿರಕ್ಕೂ ಅಧಿಕ ಹಾಡುಗಳನ್ನು ಉಸಿರಾಡಿದ ಮಹಾತಾಯಿ ಅವರಾಗಿದ್ದರು. ಅವರ ನಡೆ-ನುಡಿ, ಆಚಾರ-ವಿಚಾರ, ಶ್ರಮ-ಶ್ರದ್ಧೆ ಎಲ್ಲವೂ ಮಾದರಿಯಾಗಿತ್ತು. ಅವರು ತಮಗೆ ಅನಾಯಾಸವಾಗಿ ಬಂದಿದ್ದ ಪದ್ಮಭೂಷಣ ಪ್ರಶಸ್ತಿಯನ್ನೂ ತುಂಬಾ ನಯವಾಗಿ ತಿರಸ್ಕರಿಸಿದ್ದರು ಎನ್ನುವ ವಿಚಾರ ತಿಳಿದು ಅವರ ಮೇಲಿನ ಗೌರವ ಇನ್ನಷ್ಟು ಹೆಚ್ಚಿತು. ಮಾತೃಭಾಷೆ ತೆಲುಗು ಆಗಿದ್ದರೂ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ಹಾಡಿ ಸೈ ಎನಿಸಿಕೊಂಡ ೮೮ರ ಹರೆಯದ ಈ ‘ಹಾಡು ಹಕ್ಕಿ ಜಾನಕಿ ಅಮ್ಮ’ ನೆನ್ನೆ ನಮ್ಮ ಮೈಸೂರಿನಲ್ಲಿ  ಅಸ್ತಂಗತರಾದ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ದುಃಖವಾಯಿತು. ಆದರೂ ಈ ಜನ್ಮ ಶಾಶ್ವತವಲ್ಲ ಅಲ್ಲವೇ?! ಎಲ್ಲರೂ ಒಂದು ದಿನ ಹೋಗಲೇಬೇಕು. ಇರುವಷ್ಟು ದಿನ ಒಳಿತು ಮಾಡಿ ಬದುಕೋಣ. ಯಾರಿಗೂ ಹೊರೆಯಾಗದೆ, ಯಾರನ್ನೂ ನೋಯಿಸದೆ ಇರುವಷ್ಟು ಕಾಲ ಸರಳ, ಸಂತೃಪ್ತ ಜೀವನ ನಡೆಸೋಣ; ಈ ಜಾನಕಿ ಅಮ್ಮನಂತೆ! ಏನಂತೀರಿ?!
ಓ ಜಾನಕಿ ಅಮ್ಮ. ನಿಮ್ಮ ‘ಗಾನಧಾರೆ’ಯಲ್ಲಿ  ಮಿಂದೆದ್ದವರು ಕೋಟ್ಯಾಂತರ ಜನ! ನೀವೇ ಹಾಡಿದ ‘ಯುಗ ಯುಗಾದಿ ಕಳೆದರೂ…’, ‘ಗಜಮುಖನೆ ಗಣಪತಿಯೇ….’, ‘ಕರೆದರು ಕೇಳದೇ….’, ‘ನಗುನಗುತಾ ನೀಬರುವೆ….’ ಮುಂತಾದ ಇನಿದನಿಯ ಸಾವಿರಾರು ಹಾಡುಗಳು ಅಂದಿಗೂ, ಇಂದಿಗೂ, ಎಂದೆಂದಿಗೂ ಚಿರಸ್ಥಾಯಿಯಾಗಿ ಲೋಕ ಬೆಳಗುತ್ತಿರುತ್ತವೆ. ‘ಗಗನವು ಎಲ್ಲೋ, ಭೂಮಿಯು ಎಲ್ಲೋ, ಒಂದು ಅರಿಯೇ ನಾ…!’ ಎಂದು ಹಾರಿ ಹೋಗಿದ್ದೀರಿ. ಹೋಗಿ ಬನ್ನಿ , ಅನಂತ ವಂದನೆಗಳು; ಜಾನಕಿ ಅಮ್ಮ!!

ಅಂಕ್ನಳ್ಳಿ ಜಯರಾಂ, ಮುಂಬಯಿ.

WhatsApp

Join Now

Telegram

Join Now

Instagram

Join Now