--Ads--

ಅರಿವಿನ ಹಣತೆ ಹಚ್ಚೋಣ; ಅಂಬೇಡ್ಕರ್ ಆದರ್ಶದ ಬೆಳಕಿನತ್ತ ಸಾಗೋಣ!

On: April 14, 2026 12:30 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್…..

ಅರಿವಿನ ಹಣತೆ ಹಚ್ಚೋಣ; ಅಂಬೇಡ್ಕರ್ ಆದರ್ಶದ ಬೆಳಕಿನತ್ತ ಸಾಗೋಣ!

ನಾವು ಭಾವನಾತ್ಮಕವಾಗಿ ಇಂದಿಗೂ ಬಾಬಾಸಾಹೇಬರ ಪ್ರತಿಮೆ, ಫೋಟೋಗಳನ್ನು ಮಾತ್ರ ಪ್ರೀತಿಸುತ್ತಿದ್ದೇವೆ; ರಾಜಕಾರಣಿಗಳು ತೋರಿಕೆಗೆ ಮಾಡುವ ಅದ್ಧೂರಿ ಕಾರ್ಯಕ್ರಮಗಳಲ್ಲಿ  ಕುಣಿದು ಕುಪ್ಪಳಿಸಿ, ಅವರು ತೋರುವ ಹುಸಿ ಪ್ರೀತಿಗೆ ಬಲಿಯಾಗಿ, ಆ ನೀಚರನ್ನೇ ಅಂಬೇಡ್ಕರರ ಪ್ರತಿರೂಪ ಎಂದು ಭ್ರಮಿಸಿ, ಅಂಬೇಡ್ಕರರ ನಿಜ ಆಶಯಗಳನ್ನೇ ಮರೆತುಬಿಟ್ಟಿದ್ದೇವೆ; ಜಾತಿ, ಪಕ್ಷಗಳ ಬೇಲಿ ಕಟ್ಟಿಕೊಂಡು, ದ್ವೇಷಾಸೂಯೆ ಕಕ್ಕುತ್ತಾ, ಇಂದು ಅಂಬೇಡ್ಕರರನ್ನೂ ಹರಾಜಿಗಿಟ್ಟಿದ್ದೇವೆ; ಒಡೆದು ಆಳುವವರ ತೆವಲಿಗೆ ಬಲಿಯಾಗಿ ನಮ್ಮ ಮೆದುಳನ್ನೂ ಮಾರಿಬಿಟ್ಟಿದ್ದೇವೆ; ಇದು ತಪ್ಪು ! ಇನ್ನಾದರೂ ನಾವು ಅಂಬೇಡ್ಕರರನ್ನು ನಮ್ಮ ಎದೆಗೂಡಲ್ಲಿ  ಪ್ರತಿಷ್ಠಾಪಿಸಿಕೊಂಡು, ಅವರು ಕೊಟ್ಟಿರುವ ಅರಿವಿನ ಅಸ್ತ್ರವನ್ನು  ಕೈಗೆತ್ತಿಕೊಂಡು, ಅವರೇ ತೋರಿರುವ ಸ್ವಾಭಿಮಾನದ ಹಾದಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡಬೇಕು. ಆ ನಿಟ್ಟಿನಲ್ಲಿ ಅಂಬೇಡ್ಕರ್ ಆಶಯಗಳನ್ನು ಜನಮನಕ್ಕೆ ಮುಟ್ಟಿಸುತ್ತಿರುವ ಕೆಲ ಮಹನೀಯರ ಪ್ರಯತ್ನದ ಒಳನೋಟ ಇಲ್ಲಿದೆ.
ಇಂದು ಏಪ್ರಿಲ್-೧೪. ಬಾಬಾಸಾಹೇಬರ ಹುಟ್ಟುಹಬ್ಬ . ಅವರನ್ನು ನೆನಪು ಮಾಡಿಕೊಳ್ಳಲು ಅವರ ಜಯಂತಿ ಒಂದು ನಿಮಿತ್ತ ನಿಜ. ಆದರೆ ಕೇವಲ ನೆಪಮಾತ್ರಕ್ಕೆ , ಸರ್ಕಾರಿ ಸುತ್ತೋಲೆಗೆ ಸೀಮಿತವಾಗಿ ಆಷಾಢಭೂತಿ ಆಚರಣೆ ಮಾಡಿ ಕೈತೊಳೆದುಕೊಂಡರೆ ಸಾಲದು. ಅವರ ತತ್ವಾದರ್ಶಗಳನ್ನು  ಮೆಲುಕು ಹಾಕಿ ಜೀವನದಲ್ಲಿ ಅಳವಡಿಸಿಕೊಳ್ಳಲು ಪಣ ತೊಡಬೇಕು; ಯುವಕರಿಗೆ ಪ್ರೇರಣೆ ನೀಡಬೇಕು. ವಿಚಾರ ಗೋಷ್ಠಿ , ಚಿಂತನ-ಮಂಥನ ಕಾರ್ಯ ನಡೆಯಬೇಕು. ಯಾವಾಗಲೂ ತಮ್ಮ ಕರ್ತವ್ಯನಿಷ್ಠೆ ಮತ್ತು ವಿಚಾರಧಾರೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದ ಬಾಬಾಸಾಹೇಬರು   ‘ಒಂದು ದೇಶದ ಪ್ರಗತಿಯನ್ನು ಆ ದೇಶದ ಮಹಿಳೆಯರು ಸಾಧಿಸಿರುವ ಪ್ರಗತಿಯಿಂದ ಮಾತ್ರ ಅಳೆಯಲು ಸಾಧ್ಯ’ ಎಂಬುದನ್ನು ಬಲವಾಗಿ ನಂಬಿದ್ದರು. ಹಾಗೆಂದೇ ತಾವು ಈ ದೇಶದ ಪ್ರಥಮ ಕಾನೂನು ಮಂತ್ರಿಯಾಗಿದ್ದ ಸಂದರ್ಭದಲ್ಲಿ  ಮಹಿಳಾ ಶಿಕ್ಷಣ, ಸುರಕ್ಷತೆ ಮತ್ತು ಹಕ್ಕುಗಳಿಗೆ ಆಧ್ಯತೆ ನೀಡಿ ‘ಹಿಂದೂ ಕೋಡ್ ಬಿಲ್’ ಜಾರಿಗೆ ತರಲು ಹರಸಾಹಸ ಮಾಡಿದ್ದರು. ಈ ದೇಶದ ಅತ್ಯುನ್ನತ ವ್ಯಕ್ತಿಯಿಂದಿಡಿದು ಕಟ್ಟಕಡೆಯ ಮನುಷ್ಯನ ತನಕ ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ವ್ಯಕ್ತಿ ಗೌರವ ದೊರೆಯುವಂತೆ ಮಾಡಲು, ಪಟ್ಟಭದ್ರರ ನಡುವೆ ಅಂದು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ . ಅದು ಹೇಳತೀರದು. ಶಿಕ್ಷಣ, ಆರೋಗ್ಯ , ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟುಬಿಟ್ಟಿದ್ದರು. ಇಂಥ ಮಹಾನ್ ತ್ಯಾಗ ಜೀವಿಯನ್ನು  ಇಂದಿಗೂ ಒಂದು ಜಾತಿ ಮತ್ತು ಕೇರಿಗೆ ಕಟ್ಟಿ ಹಾಕುವುದು ಎಷ್ಟು ಸರಿ? ಬಾಬಾಸಾಹೇಬರ ಸಂವಿಧಾನದ ಬಲದಿಂದಲೇ ಜಿಲ್ಲಾಧಿಕಾರಿಯಂಥ ಉನ್ನತ ಹುದ್ದೆ ಪಡೆದಿರುವವರೂ ಇಂದು ಅಂಬೇಡ್ಕರ್ ಜಯಂತಿ ಎಂದರೆ ಅಸಡ್ಡೆ  ತೋರುತ್ತಿರುವುದರ ಒಳಮರ್ಮ ಏನು? ಇದು ಜಾತಿ ಶ್ರೇಷ್ಠತೆಯ ವ್ಯಸನವಲ್ಲದೆ ಇನ್ನೇನು? ಬೇಲಿಯೇ ಎದ್ದು ಹೊಲ ಮೇಯ್ದರೆ ಗತಿಯೇನು?! ನೀವೇ ಒಮ್ಮೆ ಯೋಚಿಸಿ ನೋಡಿ.
ಇಂಥ ಅರಿವುಗೇಡಿಗಳ ನಡುವೆಯೂ ಇತ್ತೀಚೆಗೆ ಕೆಲವು ಪ್ರಜ್ಞಾವಂತರು ಬಾಬಾಸಾಹೇಬರನ್ನು ಅರಿತುಕೊಂಡಿದ್ದಾರೆ; ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಹಳ್ಳಿಗಳ ಸ್ಥಿತಿ ‘ಅಪ್ಪ ಹಾಕಿದ ಆಲ’ದಂತೆ ಈಗಲೂ ಹಾಗೇ ಇದೆ. ಅಂಬೇಡ್ಕರ್ ಎಂದರೆ ಅಸ್ಪೃಶ್ಯ , ಆತನಿಗೂ ನಮಗೂ ಏನೇನು ಸಂಬಂಧವಿಲ್ಲ . ಆತ ಅಸ್ಪೃಶ್ಯರಿಗೆ ಮಾತ್ರವೇ ಮೀಸಲಾತಿ ಒದಗಿಸಿದ್ದಾನೆ, ಇತ್ಯಾದಿ ತಪ್ಪು ಗ್ರಹಿಕೆ ಈಗಲೂ ಇದೆ. ಜಾತಿ ಘರ್ಷಣೆ ನಡೆದೇ ಇದೆ. ಬಾಬಾ ಸಾಹೇಬರು ನೀಡಿರುವ ಸಂವಿಧಾನದ ಬಲದಿಂದಲೇ ಇಂದು ಶಿಕ್ಷಣ, ಉದ್ಯೋಗ, ರಾಜಕೀಯ ಅಧಿಕಾರ, ಕಾನೂನು, ಮೀಸಲಾತಿ, ಮತದಾನ, ಮೂಲಸೌಕರ್ಯ, ಮುಂತಾದ ಎಲ್ಲ ಹಕ್ಕುಗಳನ್ನು  ಪಡೆದು ಸ್ವಚ್ಛಂದವಾಗಿ ಬದುಕುತ್ತಿರುವ ಈ ದೇಶದ ಬಹುಸಂಖ್ಯಾತ ಜನರೇ ಹೀಗೆ ಮೂರ್ಖರಾದರೆ ಮಾಡುವುದೇನು?! ಹಾಗಾಗಿ ಮೊದಲು ನಾವು ಅಂಬೇಡ್ಕರರನ್ನು ಅರಿಯಬೇಕಿದೆ; ಅವರ ಸಂಘರ್ಷಮಯ ಜೀವನಗಾಥೆಯನ್ನು ತಿಳಿಯಬೇಕಿದೆ. ಅದಕ್ಕೂ ಮಿಗಿಲಾಗಿ ಅವರ ಸಂವಿಧಾನವನ್ನು  ಓದಬೇಕಿದೆ. ಆನಂತರವೇ ಅವರು ನಮಗೆ ಅರ್ಥವಾಗುತ್ತಾರೆ. ಹಾಗಾಗಿ ಅರಿವಿನ ಹಣತೆ ಹಚ್ಚೋಣ ಬನ್ನಿ ; ಅಂಬೇಡ್ಕರ್ ಆದರ್ಶದ ಬೆಳಕಿನತ್ತ ಸಾಗೋಣ ಬನ್ನಿ!
ಮಹಾರಾಷ್ಟ್ರದ ಮಣ್ಣಿನಲ್ಲಿ ಮೂಡಿಬಂದ  ಮಹಾಚೇತನ ಡಾ.ಬಾಬಾಸಾಹೇಬ್ ಅಂಬೇಡ್ಕರ್. ಅವರು ಇಂದು ಕೇವಲ ವ್ಯಕ್ತಿಯಾಗಿ ಮಾತ್ರ ಉಳಿದಿಲ್ಲ ; ದೈತ್ಯ ಶಕ್ತಿಯಾಗಿ ‘ಆಕಾಶವ ಎತ್ತಿ ನಿಲಿಸಿ, ನೀಲಿಯಾಗಿ ನಿಂತವರೆ’. ಅಕ್ಷರ ಕಲಿಯಲು ಅವಕಾಶ ನೀಡದ ವಂಚಿತರ ವಿರುದ್ಧ  ಬಾಲ್ಯದಲ್ಲೇ ಸೆಡ್ಡು ಹೊಡೆದು, ಅಕ್ಷರಗಳನ್ನು ತನ್ನದಾಗಿಸಿಕೊಂಡು, ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿ, ಅರ್ಥ ಶಾಸ್ತ್ರಜ್ಞ, ಶಿಕ್ಷಣ ತಜ್ಞ, ಪತ್ರಕರ್ತ, ನ್ಯಾಯವಾದಿ, ಸಮಾಜ ವಿಜ್ಞಾನಿ, ಸಂವಿಧಾನ ಶಿಲ್ಪಿ  ಎಲ್ಲವೂ ಆಗಿ, ಈ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರ ವ್ಯಕ್ತಿತ್ವ , ಪಾಂಡಿತ್ಯ , ಜ್ಞಾನವನ್ನು  ಮರೆಮಾಚಿ ಅವರನ್ನು ಅದುಮಿಡಲು ಕಾಣದ ಕೈಗಳು ಪ್ರಯತ್ನಿಸಿದಂತೆಲ್ಲಾ  ಅಷ್ಟೇ ವೇಗವಾಗಿ ಪುಟಿದೇಳುತ್ತ ‘ಎಲ್ಲರ ಅಂಬೇಡ್ಕರ್’ ಆಗಿ ಇಂದು ಮುಗಿಲೆತ್ತರಕ್ಕೇರಿದ್ದಾರೆ. ಕೇವಲ ಭಾರತೀಯರಿಗಷ್ಟೇ ಅಲ್ಲದೆ ಇಡೀ ವಿಶ್ವದ ಜ್ಞಾನಿಯಾಗಿ ಭರವಸೆಯ ಹೊಂಗಿರಣವಾಗಿದ್ದಾರೆ; ಮಹಿಳಾ ಸಬಲೀಕರಣದ ಕೇಂದ್ರ ಬಿಂದುವಾಗಿ ನೆಲೆ ನಿಂತಿದ್ದಾರೆ; ಆತ್ಮವಿಶ್ವಾಸದ ಅಸ್ಮಿತೆಯಾಗಿದ್ದಾರೆ.
ಇಂದು ನಿಜವಾಗಿಯೂ ನಾವು ಆ ಬಾಬಾಸಾಹೇಬರನ್ನು ಪ್ರೀತಿಸುವುದೇ ಆದರೆ ಅವರು ತೋರಿದ ಹಾದಿಯಲ್ಲಿ ಹೆಜ್ಜೆ ಹಾಕಬೇಕಿದೆ. ಅದುವೇ ಅವರಿಗೆ ನಾವು ನೀಡುವ ನಿಜವಾದ ಗೌರವವಾಗಿದೆ. ಹಾಗಾಗಿ ಏಪ್ರಿಲ್-೧೪ ರ ಈ ಸುದಿನ ‘ಅರಿವಿನ ಹಣತೆ ಹಚ್ಚೋಣ’ ಬನ್ನಿ . ಬಾಬಾಸಾಹೇಬರು ತೋರಿದ ಹಾದಿಯಲ್ಲಿ ನಡೆಯುತ್ತಿರುವವರಿಗೆ ಶರಣೆನ್ನೋಣ ಬನ್ನಿ . ನಮ್ಮೆಲ್ಲರ ಹಿತ ಕಾಯುತ್ತಿರುವ ಈ ‘ಭಾರತದ ಸಂವಿಧಾನ’ಕ್ಕೂ ಸಲಾಂ ಹೇಳೋಣ ಬನ್ನಿ !
ಇತ್ತೀಚೆಗೆ ಅಂದರೆ ಜನವರಿ ೨೬ರಂದು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿರುವ ಹೊಚ್ಚ ಹೊಸ ಸಂವಿಧಾನ ಗೀತೆ “ಸಲಾಂ ಇಂಡಿಯಾ – ಸಲಾಂ ಸಂವಿಧಾನ”. ಈ ಸಾಕ್ಷ್ಯಚಿತ್ರಗೀತೆ ತುಂಬಾ ಅದ್ಭುತವಾಗಿ ಮೂಡಿಬಂದಿದೆ ; ಅಷ್ಟೇ ಅಲ್ಲ  ತುಂಬಾ ಸತ್ವಯುತವಾಗಿದೆ. ಕೇವಲ ಹದಿನೈದು ನಿಮಿಷಗಳಲ್ಲಿ ಅನಕ್ಷರಸ್ಥರೂ ಸಹ ಸಂವಿಧಾನದ ಆಶಯ ಹಾಗೂ ಹಕ್ಕುಗಳನ್ನು  ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ. ಸಂವಿಧಾನ ನಮಗೆ ಏನೆಲ್ಲಾ  ಕೊಟ್ಟಿದೆ. ರಾಷ್ಟ್ರಪತಿ, ಪ್ರಧಾನಿ, ಕೇಂದ್ರ-ರಾಜ್ಯ ಮಂತ್ರಿಗಳು, ಮುಖ್ಯಮಂತ್ರಿಗಳು ಮುಂತಾದ ಪ್ರಮುಖ ಪೀಠಗಳಲ್ಲಿ  ಅಲಂಕರಿಸಿರುವವರು ಎಷ್ಟೆಲ್ಲಾ  ಅಧಿಕಾರಗಳನ್ನು ಗಳಿಸಿದ್ದಾರೆ. ಪಂಚಾಯ್ತಿಯಿಂದ ಪಾರ್ಲಿಮೆಂಟಿನ ತನಕ, ಸಫಾಯಿ ಕರ್ಮಚಾರಿಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ತನಕ ಎಲ್ಲವನ್ನೂ  ನೀಡಿರುವ ನಮ್ಮ ‘ಸಂವಿಧಾನ’ ಎಷ್ಟು ಮುಖ್ಯ. ಅದನ್ನು ಕೊಟ್ಟವರ್ಯಾರು?! ಎಲ್ಲವನ್ನೂ ಹೇಳುವ ಈ ಅದ್ಭುತ ಗೀತೆಗೆ ತಾವೇ ಸಾಹಿತ್ಯ, ಸಂಗೀತ ನೀಡಿ ಹಾಡಿರುವವರು ಡಾ. ಹ.ರಾ. ಮಹಿಷ ಬೌದ್ಧ. ಜೊತೆಗೆ ಅವರ ಪತ್ನಿ ಶ್ರೀಮತಿ ಗಿರಿಜಾ ಮಹೇಶ್, ಕವಿಗಳಾದ ಹನಸೋಗೆ ಸೋಮಶೇಖರ್, ಹೋರಾಟಗಾರರಾದ ರೂಪೇಶ್ ರಾಜಣ್ಣ , ಗಾಯಕ ವೆ.ಚಿ.ಅರುಣ್ ಕುಮಾರ್ ಸೇರಿದಂತೆ ನೂರಾರು ಹಿರಿಯ- ಕಿರಿಯ ಗಾಯಕ-ಗಾಯಕಿಯರು ಈ ಸುಮಧುರ ಗೀತೆಗೆ ದನಿಯಾಗಿದ್ದಾರೆ. ಅದರಲ್ಲೂ ಆರಂಭದಲ್ಲಿ  ಡಾ.ಹಂಸಲೇಖ ಅವರು ಪಠಿಸಿರುವ ಸಂವಿಧಾನ ಪೀಠಿಕೆ ಈ ಸಾಕ್ಷ್ಯಚಿತ್ರಗೀತೆಗೆ ವಿಶೇಷ ಮೆರುಗು ನೀಡಿದೆ. ಸಣ್ಣ ಕಥನದ ಮೂಲಕ ಜನಸಾಮಾನ್ಯರಿಗೂ ಅರ್ಥವಾಗುವಂತೆ ಡಾ.ಮಹೇಶ್ ಅವರು ಹೀಗೆ ಅಚ್ಚುಕಟ್ಟಾಗಿ ಸಂವಿಧಾನದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಇದು ಪ್ರತಿಯೊಬ್ಬರೂ ವೀಕ್ಷಿಸಲೇಬೇಕಾದ ವಿಶಿಷ್ಟ ವಿಡಿಯೋ ತುಣುಕು (ಸಾಕ್ಷ್ಯ ಚಿತ್ರ ಗೀತೆ)  ಎಂದರೆ ತಪ್ಪಾಗಲಾರದು. ದಯವಿಟ್ಟು ಡಾ.ಹ.ರಾ.ಮಹೇಶ್ ಅವರ ಚಿಂತನೆಯ ಚಾವಡಿಯಾಗಿರುವ ಈ “N light India NEWS KANNADA”ದಲ್ಲಿ  ತಪ್ಪದೇ ನೋಡಿ. ಇದಕ್ಕಾಗಿ ಡಾ. ಮಹೇಶ್ ತುಂಬಾ ಶ್ರಮ ಪಟ್ಟಿದ್ದಾರೆ. ನಿರಂತರವಾಗಿ ಬಹುಜನ ಚಳವಳಿಯ ಮೂಲಕ ಅರಿವಿನ ಹಣತೆ ಹಚ್ಚುತ್ತಲೇ ಇದ್ದಾರೆ. ಅವರ ಶ್ರಮ ಸಾರ್ಥಕವಾಗಬೇಕೆಂದರೆ ನೀವು ಈ ಸಾಕ್ಷ್ಯ ಚಿತ್ರ ಗೀತೆಯನ್ನು ನಿಮ್ಮ ಗೆಳೆಯ-ಗೆಳತಿಯರಿಗೂ ಹಂಚಿ ನೋಡಲು ತಿಳಿಸಿ. ಅಂತೆಯೇ ‘ಅಂಬೇಡ್ಕರ್ ಹಬ್ಬ’ದ ಈ ಸುದಿನ ಡಾ. ಮಹೇಶ್ ಹಾಗೂ ಅವರ ಬಳಗಕ್ಕೆ ಮರೆಯದೆ ಸಲಾಂ ಹೇಳೋಣ ಬನ್ನಿ.
ಬಡವರ ಬಂಧು, ಸ್ವಾಭಿಮಾನ ಸಿಂಧು, ಮಹಾ ನಾಯಕ ಡಾ.ಬಾಬಾಸಾಹೇಬರು ಈ ನಾಡಿಗೆ ನೀಡಿರುವ ಕೊಡುಗೆ  ತುಂಬಾ ಅಪಾರವಾದುದ್ದಾಗಿದೆ. ಅದಕ್ಕೆ ನಾವ್ಯಾರೂ ಬೆಲೆಕಟ್ಟಲಾಗದು. ಕೇವಲ ಪದಗಳಲ್ಲಿ  ವರ್ಣಿಸುವುದೂ ಕಷ್ಟ ಸಾಧ್ಯವೇ! ಆದರೂ ಈ ದುಸ್ಸಾಹಸಕ್ಕೆ ಕೈಹಾಕಿ ಕೋಟಗಾನಹಳ್ಳಿ ರಾಮಯ್ಯನವರು ಇತ್ತೀಚೆಗೆ ‘ಅಂಬೇಡ್ಕರ್ ಕೊಲಾಜ್’ ಎನ್ನುವ ಅದ್ಭುತ ನಾಟಕ ರಚಿಸಿ ಅದನ್ನು ರಂಗದ ಮೇಲೆ ತಂದಿದ್ದಾರೆ.
ಮೊನ್ನೆ ಕೋಲಾರದಲ್ಲಿ  ಈ “ಅಂಬೇಡ್ಕರ್ ಕೊಲಾಜ್” ನಾಟಕದ ಕುರಿತು ಕೋಲಾರದ ಜಿಲ್ಲಾಧಿಕಾರಿ ಎಂ.ಆರ್.ರವಿಯವರು ಮಾತನಾಡುತ್ತಾ “ಈ ನಾಟಕದ ಬಹಳ ದೊಡ್ಡ ವಿಶೇಷ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಆಗಿದ್ದಾರೆ. ಆ ವ್ಯಕ್ತಿತ್ವಕ್ಕೊಂದು ಚುಂಬಕ ಶಕ್ತಿ ಇದೆ. ಅವರು ಈ ಸೂರ್ಯ-ಚಂದ್ರರು ಇರೋವರೆಗೂ ಈ ಲೋಕದಲ್ಲಿ ಅಜರಾಮರವಾಗಿ ಇರುತ್ತಾರೆ. ಅವರನ್ನು ನಾವು ಇದುವರೆಗೂ ಭಾವನಾತ್ಮಕವಾಗಿ ಗೌರವಿಸಿದ್ದು , ಪ್ರೀತಿಸಿದ್ದು ಸಾಕು. ಇನ್ನಾದರೂ ಅವರನ್ನು ವೈಚಾರಿಕ ಶಕ್ತಿಯಾಗಿ ರೂಪಾಂತರಿಸಿಕೊಂಡರೆ ಸಂವಿಧಾನ, ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಶಕ್ತಿ ಬರುತ್ತದೆ. ಅಂತೆಯೇ ಮೈಸೂರು ರಂಗಾಯಣದ ಕಲಾವಿದರು ಮನಮುಟ್ಟುವ ಹಾಗೆ ಈ ನಾಟಕವನ್ನು ಪ್ರಸ್ತುತಪಡಿಸಿದ್ದಾರೆ. ಅದು ಎಲ್ಲಿಯೂ ಕೃತಕ ಎನಿಸಲಿಲ್ಲ. ತುಂಬಾ ನೈಜವಾಗಿತ್ತು” ಎಂದು ಅಭಿನಯಿಸಿದ ರಂಗಾಯಣದ ಕಲಾವಿದರು ಮತ್ತು ರಚನೆಕಾರರಾದ ಕೋಟಗಾನಹಳ್ಳಿ ರಾಮಯ್ಯ ಇಬ್ಬರನ್ನೂ ಮನದಾಳದಿಂದ ಅಭಿನಂದಿಸಿದ್ದಾರೆ. “ಈ ನಾಟಕದ ಸತ್ವವೇ ರಾಮಯ್ಯನವರ ಪರಿಕಲ್ಪನೆ. ನಾಟಕದ ಸಂಭಾಷಣೆಯಲ್ಲಿ  ಬರುವ ‘ಅಂಬೇಡ್ಕರ್ ಬರೆದ ಅಕ್ಷರಗಳನ್ನು ಮರೆತು, ಭಾವಚಿತ್ರಕ್ಕೆ ನಾವು ಸೀಮಿತವಾಗಿರುವುದು’ ಬಿಟ್ಟು ಈಗಲಾದರೂ ಅವರನ್ನು ವೈಚಾರಿಕ ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳಬೇಕು” ಎಂದು ಎಚ್ಚರಿಸಿದ್ದಾರೆ.
ನಿಜ ನಾವು ಭಾವನಾತ್ಮಕವಾಗಿ ಇಂದಿಗೂ ಬಾಬಾಸಾಹೇಬರ ಪ್ರತಿಮೆ, ಫೋಟೋಗಳನ್ನು ಮಾತ್ರ ಹೆಚ್ಚು ಪ್ರೀತಿಸುತ್ತಿದ್ದೇವೆ. ರಾಜಕಾರಣಿಗಳು ತೋರಿಕೆಗೆ ಮಾಡುವ ಅದ್ಧೂರಿ ಕಾರ್ಯಕ್ರಮಗಳಲ್ಲಿ  ಕುಣಿದು ಕುಪ್ಪಳಿಸಿ, ಅವರು ತೋರುವ ಹುಸಿ ಪ್ರೀತಿ ಮತ್ತು ಮೋಡಿ ಮಾತಿಗೆ ಬಲಿಯಾಗಿ, ಆ ನೀಚರನ್ನೇ ಅಂಬೇಡ್ಕರರ ಪ್ರತಿರೂಪ ಎಂದು ಭ್ರಮಿಸಿ, ಅಂಬೇಡ್ಕರರ ನಿಜ ಆಶಯಗಳನ್ನೇ ಮರೆತುಬಿಟ್ಟಿದ್ದೇವೆ. ಜಾತಿ, ಪಕ್ಷಗಳ ಬೇಲಿ ಕಟ್ಟಿಕೊಂಡು ದ್ವೇಷಾಸೂಯೆ ಕಕ್ಕುತ್ತಾ ಇಂದು ಅಂಬೇಡ್ಕರರನ್ನೂ ಹರಾಜಿಗಿಟ್ಟಿದ್ದೇವೆ; ಒಡೆದು ಆಳುವವರ ತೆವಲಿಗೆ ಬಲಿಯಾಗಿ ನಮ್ಮ ಮೆದುಳನ್ನೂ ಮಾರಿಬಿಟ್ಟಿದ್ದೇವೆ; ಇದು ತಪ್ಪು ! ಇನ್ನಾದರೂ ನಾವು ಅಂಬೇಡ್ಕರರನ್ನು ನಮ್ಮ ಎದೆಗೂಡಲ್ಲಿ  ಪ್ರತಿಷ್ಠಾಪಿಸಿಕೊಂಡು, ಅವರು ಕೊಟ್ಟಿರುವ ಅರಿವಿನ ಅಸ್ತ್ರವನ್ನು  ಕೈಗೆತ್ತಿಕೊಂಡು, ಅವರೇ ತೋರಿರುವ ಸ್ವಾಭಿಮಾನದ ಹಾದಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡಬೇಕು. ಕೋಟಗಾನಹಳ್ಳಿ ರಾಮಯ್ಯನವರು ಕೂಡ ತಮ್ಮ ‘ಅಂಬೇಡ್ಕರ್ ಕೊಲಾಜ್’ನಲ್ಲಿ  ಇದನ್ನೇ ಹೇಳಿದ್ದಾರೆ. ಅವರ ಆಶಯವನ್ನು ಅತ್ಯದ್ಭುತ ಹಾಗೂ ನೈಜವಾಗಿ ರಂಗಾಯಣ ಕಲಾವಿದರು ಅಭಿನಯಿಸಿದ್ದಾರೆ. ಹಾಗಾಗಿ ಆ ನಾಟಕ ವೀಕ್ಷಿಸಿರುವ ಕೋಲಾರದ ಜಿಲ್ಲಾಧಿಕಾರಿ ಎಂ.ಆರ್.ರವಿಯವರು ಅವರೆಲ್ಲರ ಕಾರ್ಯವನ್ನು ಮನಸಾರೆ ಮೆಚ್ಚಿ ಕೊಂಡಾಡಿದ್ದಾರೆ. ಒಟ್ಟಿನಲ್ಲಿ ನಾವು ಸಾಗಬೇಕಿರುವ ಹಾದಿಯ ದಿಕ್ಸೂಚಿಯಾಗಿ ಈ ‘ಅಂಬೇಡ್ಕರ್ ಕೊಲಾಜ್’ ಮೂಡಿ ಬಂದಿದೆ. ಈ ನಾಟಕವನ್ನು  ನಾವೆಲ್ಲರೂ ತಪ್ಪದೇ ನೋಡೋಣ. ಹಾಗೆಯೇ ಈ ಮಹತ್ಕಾರ್ಯದಲ್ಲಿ ಭಾಗಿಯಾಗಿ ಜಾಗೃತಿ ಮೂಡಿಸುತ್ತಿರುವ ಎಲ್ಲ ಮನಸ್ಸುಗಳಿಗೂ ‘ಅಂಬೇಡ್ಕರ್ ಹಬ್ಬ’ದ ಈ ಸುದಿನ ಸಲಾಂ ಹೇಳೋಣ ಬನ್ನಿ.
ಅಂತೆಯೇ ಬಾಬಾಸಾಹೇಬರು ಮಹಾನಾಯಕರಾಗಿ ರೂಪುಗೊಳ್ಳಲು, ಮುಗಿಲೆತ್ತರ ಬೆಳೆಯಲು ಪ್ರೇರಕ ಶಕ್ತಿ ಅವರ ತಂದೆ ರಾಮಜೀ ಸಕ್ಪಾಲ್ ಕಾರಣ ಎಂದರೆ ತಪ್ಪಾಗಲಾರದು. ಬಾಲ್ಯದಲ್ಲೇ ಅವರು ಬಿತ್ತಿದ ನೀತಿ ಪಾಠ ಹಾಗೂ ಮನೆಯ ಉತ್ತಮ ಸಂಸ್ಕೃತಿ ಇಂದಿನ ವಿಶ್ವ ಜ್ಞಾನಿ ಅಂಬೇಡ್ಕರ್ ಅವರನ್ನು ರೂಪಿಸಿತು. ಇವರು ಕಬೀರ ಪಂಥದವರು, ಕಬೀರರ ಧೋಹೆಗಳನ್ನು ಮಕ್ಕಳಿಗೆ ಮುಂಜಾನೆ ಮತ್ತು ಸಾಯಂಕಾಲ ಹೇಳಿಕೊಡುತ್ತಿದ್ದರು. ಆಂಗ್ಲ ಭಾಷೆಯನ್ನು ಬಲ್ಲವರಾಗಿದ್ದ ರಾಮಜಿಯವರು 14 ವರ್ಷಗಳ ಕಾಲ ಮಿಲಿಟರಿ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸಿದ್ದರು. ಇವರು ಮರಾಠಿ, ಹಿಂದಿ ಭಾಷೆಯಲ್ಲೂ  ಪ್ರಬುದ್ಧ ಜ್ಞಾನ ಹೊಂದಿದ್ದರು. ಸಾಲದೆಂಬಂತೆ ರಾಮಜಿ ಅವರ ತಂದೆ ಮಾಲೋಜಿ ಸಕ್ಪಾಲ್ ಅವರು ಸಹ ಬ್ರಿಟಿಷ್ ‘ಈಸ್ಟ್ ಇಂಡಿಯಾ ಕಂಪನಿ’ಯ ಬಾಂಬೆಯ ಸೇನೆಯಲ್ಲಿ ಸೇರಿ, ಹವಾಲ್ದಾರರಾಗಿ ನಿವೃತ್ತಿ ಹೊಂದಿದ್ದರು. ಇವರು ಆ ಕಾಲಕ್ಕೆ 19 ಮೆಡಲ್ ಗಳನ್ನು ಗಳಿಸಿದ್ದರು. ಜೊತೆಗೆ ಭೀಮಾ ಬಾಯಿ ಕೂಡ ಸುಸಂಸ್ಕೃತ ಮನೆತನದಿಂದ ಬಂದವರಾಗಿದ್ದರು. ಹಾಗಾಗಿ ಬಾಬಾಸಾಹೇಬರಿಗೆ, ಬಾಲ್ಯದಿಂದಲೇ ಹಟ, ಛಲ, ಎದೆಗಾರಿಕೆ, ಓದುವ ಹವ್ಯಾಸ, ಉತ್ತಮ ಸಂಸ್ಕಾರ ಎಲ್ಲವೂ ರಕ್ತಗತವಾಗಿ ಬಂದಿತ್ತು.
ರಾಮಜಿ ಸಕ್ಪಾಲ್ ರವರು ಮಿಲಿಟರಿ ಸೇವೆಯಿಂದ ನಿವೃತ್ತಿಯಾದ ನಂತರ ದಾಪೋಲಿಗೆ ಬಂದರು. ಆದರೆ ಕೆಲವೇ ದಿನಗಳಲ್ಲಿ ಮಿಲಿಟರಿ ಕ್ವಾರ್ಟಸ್ಸಿನಲ್ಲಿ ಅವರಿಗೆ ಸೇವೆ ಸಿಕ್ಕ ಕಾರಣ ‘ಸಾತಾರ’ಕ್ಕೆ ಕುಟುಂಬವನ್ನು ವರ್ಗಾಯಿಸಿದರು. ಬಾಬಾಸಾಹೇಬ್ ಅವರ  ಪ್ರಾಥಮಿಕ ಶಿಕ್ಷಣ ಸಾತಾರದಲ್ಲಿ ಪ್ರಾರಂಭವಾಯಿತು. ಇವರಿಗೆ ಪ್ರಾಥಮಿಕ ಶಾಲೆಯಲ್ಲಿಯೇ ಅಸ್ಪೃಶ್ಯತೆಯ ಬಿಸಿ ತಟ್ಟಿತು. ಶಿಕ್ಷಕರು ಮತ್ತು ಸಹಪಾಠಿಗಳು ಇವರು ದಲಿತ ಜಾತಿಗೆ ಸೇರಿದವರೆಂಬ ಏಕೈಕ ಕಾರಣಕ್ಕಾಗಿ ಇವರನ್ನು ಸೇರುತ್ತಿರಲ್ಲಿಲ್ಲ. ಯಾರೂ ಇವರ ಸಂಸ್ಕಾರ ಹಾಗೂ ಪ್ರತಿಭೆಯನ್ನು ಗುರುತಿಸಲಿಲ್ಲ. ಆದರೆ ಅಲ್ಲಿನ ಶಿಕ್ಷಕರಲ್ಲಿ  ಒಬ್ಬರಾದ ಫೆಂಡೆಸೆ ಅಂಬೇಡ್ಕರ್ ಎಂಬ ಶಿಕ್ಷಕರು ಈ ಬಾಲಕನ ಪ್ರತಿಭೆ, ಕಲಿಯುವ ಹಂಬಲ, ಸೂಕ್ಷ್ಮಬುದ್ಧಿಶಕ್ತಿಯನ್ನು ಗುರುತಿಸಿ ಇವರನ್ನು ಪ್ರೋತ್ಸಾಹಿಸಿದರು. ಹಲವಾರು ನೋವು ಮತ್ತು ಅವಮಾನಗಳ ನಡುವೆಯೇ ಹೇಗೋ ಪ್ರಾಥಮಿಕ ಶಿಕ್ಷಣವನ್ನು  ಅಂಬೇಡ್ಕರ್ ಸಾತಾರದಲ್ಲಿ ಮುಗಿಸಿ, ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಂಬೆಯ ಎಲಿಫಿನ್ ಸ್ಟನ್ ಹೈಸ್ಕೂಲಿಗೆ ಸೇರಲು ನಿರ್ಧರಿಸಿದರು. ಸಾತಾರದಂತೆ ಇಲ್ಲಿ  ಶೋಷಣೆ ಇರಲಿಕ್ಕಿಲ್ಲ ಎಂಬ ಭಾವನೆಯೊಂದಿಗೆ ಬಾಂಬೆಗೆ ಹೋಗಿ ಕಾರ್ಮಿಕರ ಬಡಾವಣೆಯಾದ ಪರೇಲ ಎಂಬಲ್ಲಿ ಒಂದು  ಬಾಡಿಗೆ ಕೋಣೆಯನ್ನು ಹಿಡಿದು ಶಾಲೆಗೆ ಸೇರಿದರು. ಆದರೆ ಅಲ್ಲಿಯೂ ಅಸ್ಪೃಶ್ಯತೆಯ ಬಿಸಿ ತಪ್ಪಲಿಲ್ಲ. ಇವರಿಗೆ ಶಾಲೆಯಲ್ಲಿ  ಸಂಸ್ಕೃತ ಕಲಿಸಲು ಸಹ ನಿರಾಕರಿಸಲಾಯಿತು. ಇದೇ ಶಾಲೆಯಲ್ಲಿ  ಒಮ್ಮೆ ಶಿಕ್ಷಕರು ಬೋರ್ಡ್ ಮೇಲೆ ಹಾಕಿದ್ದ ಬೀಜಗಣಿತದ ಲೆಕ್ಕವನ್ನು ಶಾಲೆಯ ಯಾವ ವಿದ್ಯಾರ್ಥಿಯೂ ಬಿಡಿಸಲಾಗದಿದ್ದಾಗ ಭೀಮರಾವ್ ಅದನ್ನು  ಬಿಡಿಸಲು ಶಾಲೆಯ ಶಿಕ್ಷಕರು ಅನುಮತಿ ನೀಡುತ್ತಾರೆ. ಅಂಬೇಡ್ಕರ್ ಬೋರ್ಡ್ ಬಳಿ ತೆರಳುತ್ತಿದ್ದಂತೆಯೇ ವಿದ್ಯಾರ್ಥಿಗಳು ತಮ್ಮ ಊಟದ ಬುತ್ತಿ ಬೋರ್ಡಿನ ಹಿಂದುಗಡೆ ಇಟ್ಟಿದ್ದರಿಂದ ಅಸ್ಪೃಶ್ಯ ಮಹಾರ ಜಾತಿಗೆ ಸೇರಿದ ಇವರು ಬೋರ್ಡ್ ಮುಟ್ಟಿದರೆ ಅವರ ಬುತ್ತಿ ಮೈಲಿಗೆಯಾಗುತ್ತವೆ ಎಂದು ನಿರಾಕರಿಸುತ್ತಾರೆ. ಇಂತಹ ಹತ್ತು ಹಲವು ಕಹಿ ಅನುಭವಗಳ ನಡುವೆಯೇ ಡಾ. ಅಂಬೇಡ್ಕರ್ 1907ರಲ್ಲಿ 10ನೆ ತರಗತಿಯಲ್ಲಿ  ಪಾಸಾಗುತ್ತಾರೆ. ಅಸ್ಪೃಶ್ಯ ವರ್ಗದ ಮೊಟ್ಟ ಮೊದಲ ಈ ಬಾಲಕನ ಸಾಧನೆ ಕಂಡು ಆಗಿನ ಸಮಾಜ ಸುಧಾರಕರಾದ ಎಸ್ ಕೆ ಭೋಲೆಯವರು ಅಂಬೇಡ್ಕರರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲು ನಿರ್ಧರಿಸುತ್ತಾರೆ. ಸರಕಾರಿ ಶಾಲೆಯ ನಿವೃತ್ತ ಶಿಕ್ಷಕರಾದ ಕೆ ಎ ಕೆಲಸ್ಕರ್ ಅವರು ಈ ಸಮಾರಂಭಕ್ಕೆ  ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ ಮತ್ತು ಅಂಬೇಡ್ಕರ್ ರವರನ್ನು ತುಂಬು ಹೃದಯದಿಂದ ಅಭಿನಂದಿಸಿ, ತಾವೇ ಬರೆದ ಭಗವಾನ್ ಬುದ್ಧನ ಚರಿತ್ರೆಯ ಪುಸ್ತಕವನ್ನು  ಕಾಣಿಕೆಯಾಗಿ ನೀಡುತ್ತಾರೆ. ಅಲ್ಲಿಂದ ಬಾಬಾಸಾಹೇಬರು ಗೌತಮ ಬುದ್ಧನನ್ನು  ಅಪ್ಪಿಕೊಂಡು, ಬೌದ್ಧ ಧರ್ಮದ ಅಮೂಲಾಗ್ರ ಅಧ್ಯಯನ ನಡೆಸಿ ಇಂದು ಭಾರತದಲ್ಲಿ ಅದರ ಪುನರ್ ಸ್ಥಾಪನೆಗೂ ಕಾರಣರಾಗಿದ್ದಾರೆ. ‘ಬುದ್ಧ ಮತ್ತು ಆತನ ಧಮ್ಮ'(Buddha & his Dhamma) ಎನ್ನುವ ಅಮೂಲ್ಯವಾದ ಕೃತಿಯನ್ನು  ನಮಗೆ ನೀಡಿ ನಮ್ಮೆಲ್ಲರ ಬಾಳಿಗೆ ಬೆಳಕಾಗಿದ್ದಾರೆ. ಇಂದು ಬೌದ್ಧಾನುಯಾಯಿಗಳು ಭಾರತದಾದ್ಯಂತ ಇದ್ದಾರೆಂದರೆ ಅದಕ್ಕೆ ಪ್ರಮುಖ ಕಾರಣ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಎಂದರೆ ತಪ್ಪಾಗಲಾರದು.
ಪ್ರಾಥಮಿಕ ಶಾಲೆಯ ಶಿಕ್ಷಕರಾದ ಫೆಂಡಸೆ ಮತ್ತು ಪ್ರೌಢ ಶಾಲೆಯ ಶಿಕ್ಷಕರಾದ ಕೆಲಸ್ಕರ್ ಅವರು ಅಂಬೇಡ್ಕರ್ ಗೆ ಸಹಾಯ ಮಾಡಿದಂತೆ ಪ್ರೊ. ಮುಲ್ಲರ್ ಎಂಬ ಕಾಲೇಜು ಶಿಕ್ಷಕರು ಕೂಡ ಇವರು ಬಿ ಎ ಓದುವಾಗ ಹೆಚ್ಚು ಪ್ರೋತ್ಸಾಹವನ್ನು ಕೊಟ್ಟಿದ್ದಾರೆ. ಅದಕ್ಕಾಗಿ ಡಾ. ಬಾಬಾಸಾಹೇಬರಿಗೆ ಪ್ರೊ.ಮುಲ್ಲರ್ ಆದರ್ಶರಾಗುತ್ತಾರೆ. ಮೊದಲೇ ಸಯ್ಯಾಜಿರಾವ್ ಗಾಯಕವಾಡರೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಬಿ ಎ ಮುಗಿದ ನಂತರ ಬರೋಡಾದ ಮಹಾರಾಜರ ಆಸ್ಥಾನದಲ್ಲಿ ಮಿಲಿಟರಿ ಲೆಫ್ಟಿನೆಂಟ್ ಆಗಿ ನೇಮಕವಾಗುತ್ತಾರೆ. ಆದರೆ ಅವರು ಅಲ್ಲಿ ಹೆಚ್ಚು ಕಾಲ ಕೆಲಸ ಮಾಡಲಾಗಲಿಲ್ಲ. ಅದಕ್ಕೂ ಪ್ರಮುಖ ಕಾರಣ ಎಂದರೆ ಅಸ್ಪೃಶ್ಯತೆಯೇ ಎಂದು ಬೇರೆ ಹೇಳಬೇಕಾಗಿಲ್ಲ.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿ ಭೀಮಾ ಬಾಯಿಯನ್ನು  ಬಾಬಾಸಾಹೇಬರು ತಮ್ಮ ಬಾಲ್ಯದಲ್ಲೇ ಕಳೆದುಕೊಂಡಿರುತ್ತಾರೆ. ಇದೀಗ ಫೆಬ್ರವರಿ 2, 1913 ರಲ್ಲಿ  ಬರೋಡಾದಲ್ಲಿ  ಕೆಲಸ ಮಾಡುತ್ತಿರುವಾಗಲೇ ಇವರಿಗೆ ಪ್ರೇರಕ ಶಕ್ತಿಯಾಗಿದ್ದ  ತಂದೆ ರಾಮಜಿಯವರನ್ನೂ  ಆರೋಗ್ಯ ಸಮಸ್ಯೆಯಿಂದಾಗಿಯೇ ಕಳೆದುಕೊಳ್ಳುತ್ತಾರೆ. ತಂದೆಯ ಅಂತ್ಯಕ್ರಿಯೆ ಮುಗಿಸಿದ ಡಾ. ಅಂಬೇಡ್ಕರರು ಮನದಲ್ಲೇ ಮುಂದೇನು? ಎಂಬ ಪ್ರಶ್ನೆಹಾಕಿಕೊಂಡು ತಂದೆಯ ಆಶಯದಂತೆ ಉನ್ನತ ವ್ಯಾಸಂಗ ಮಾಡಲು ನಿರ್ಧರಿಸುತ್ತಾರೆ. ಆನಂತರ ಅವರು ಪಟ್ಟ ಪಾಡು, ಗಳಿಸಿದ ಪದವಿಗಳು, ಹೋರಾಟದ ಬದುಕು, ಇವೆಲ್ಲವನ್ನು ಅನುಭವಿಸಲು ಮತ್ಯಾರಿಂದಲೂ ಸಾಧ್ಯವಿಲ್ಲ. ಒಂದು ಕ್ಷಣವೂ ತನಗಾಗಿ, ತನ್ನ ಸಂಸಾರಕ್ಕಾಗಿ ಬದುಕಲಿಲ್ಲ. ಬದಲಿಗೆ ತನ್ನಿಡೀ ಬದುಕನ್ನು “ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು” ನೀಡುವುದಕ್ಕಾಗಿ ಮುಡಿಪಾಗಿಟ್ಟುಬಿಟ್ಟರು. ಇಂದು ಸಮಾಜದಲ್ಲಿ ಏನೆಲ್ಲಾ  ಸ್ವಾತಂತ್ರ್ಯ, ಸಮಾನತೆ, ಸ್ವಚ್ಛಂದ ಬದುಕು, ಆರ್ಥಿಕ ಸಾಮಾಜಿಕ ಬದಲಾವಣೆ, ಅಭಿವೃದ್ಧಿ, ಕಾರ್ಮಿಕರು ಮಹಿಳೆಯರ ಸಬಲೀಕರಣ, ಕಾನೂನು ಸುವ್ಯವಸ್ಥೆ , ಉದ್ಯೋಗ ಉನ್ನತಾಧಿಕಾರ ಮುಂತಾದುವುಗಳನ್ನು ಕಾಣುತ್ತಿದ್ದೇವೋ ಅದೆಲ್ಲದರ ಹಿಂದೆ ಬಾಬಾಸಾಹೇಬರ ಬೆವರಿದೆ. ಅವರಂತೆ ಏಕಕಾಲದಲ್ಲಿ  ಎಲ್ಲವೂ ಆಗಿ, ಎಲ್ಲವನ್ನೂ ಸಾಧಿಸಿದವರು, ಪಾಂಡಿತ್ಯ ಪಡೆದವರು ಇಡೀ ವಿಶ್ವದಲ್ಲೇ ಯಾರೂ ಇನ್ನೂ ಹುಟ್ಟಿಲ್ಲ; ಹುಟ್ಟುವುದೂ ಇಲ್ಲ. ಹಾಗೆಂದೇ ಬಾಬಾಸಾಹೇಬರನ್ನು ಇಂದು ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ. ಅವರ ಜ್ಞಾನ ಪ್ರಭೆಯನ್ನು  ಕಂಡು “ಕಂದ ಕಂದ ಅಂಬೇಡ್ಕರರಂತಾಗು, ಕರುಣಶೀಲ ಜ್ಞಾನವಂತ ಬುದ್ಧನಂತಾಗು” ಎಂದು ತಾಯಂದಿರು ಹಂಬಲಿಸಿ ತಮ್ಮ ಮಕ್ಕಳಿಗೆ ತಿಳಿಹೇಳುತ್ತಿದ್ದಾರೆ. ವಿದೇಶಗಳಲ್ಲೇ ಹೆಚ್ಚಾಗಿ ಇಂದು ಇವರ ಹೆಸರಿನ ವಿಶ್ವವಿದ್ಯಾಲಯ, ವಾಚನಾಲಯ, ಮ್ಯೂಸಿಯಂಗಳು ತಲೆ ಎತ್ತುತ್ತಿವೆ. ‘ವಿಶ್ವ ಸಂಸ್ಥೆ’ ಇವರ ಜನ್ಮ ದಿನವನ್ನು  ‘ವಿಶ್ವ ಜ್ಞಾನ ದಿನ’ವನ್ನಾಗಿ ಘೋಷಿಸಿ ಹಲವು ವರ್ಷಗಳಿಂದ ಆಚರಿಸುತ್ತಾ ಬಂದಿದೆ.
ವಿಪರ್ಯಾಸವೆಂದರೆ ಬಾಬಾಸಾಹೇಬರು ಹುಟ್ಟಿ ಬೆಳೆದ ಈ ಭಾರತದಲ್ಲಿ  ಅವರನ್ನು  ಇಂದಿಗೂ ಅಸ್ಪೃಶ್ಯತೆಯ ದುರ್ಬೀನು ಹಿಡಿದು ನೋಡುತ್ತಿದ್ದಾರೆ. ಅವರ ಆದರ್ಶ ಜೀವನ ಹಾಗೂ ಅವರ ಕೊಡುಗೆಗಳನ್ನು ಸೂಕ್ತವಾಗಿ ಬಳಕೆ ಮಾಡಿಕೊಂಡವರಿಗಿಂತ ಸಂದರ್ಭಕ್ಕನುಗುಣವಾಗಿ ತಮಗೆ ಬೇಕಾದಂತೆ ದುರ್ಬಳಕೆ ಮಾಡಿಕೊಂಡವರೇ ಇಂದು ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  ಇಂದಿಗೂ ಪಟ್ಟಭದ್ರರು ಬಾಬಾಸಾಹೇಬರ ಪಾಂಡಿತ್ಯವನ್ನು  ಪರಿಗಣನೆಗೆ ತೆಗೆದುಕೊಂಡಂತಿಲ್ಲ . ಹಾಗೆಂದೇ ಅವರನ್ನು  ಈಗಲೂ ಒಂದು ಜನಾಂಗಕ್ಕೆ, ಒಂದು ಕೇರಿಗೆ ಕಟ್ಟಿಹಾಕುವ ಕುತಂತ್ರ ನಿರಂತರವಾಗಿ ನಡೆದೇ ಇದೆ. ಆ ಕುತಂತ್ರದ ನಡುವೆಯೂ ಇಂದು ಬಾಬಾಸಾಹೇಬರು ಬಹಳ ಪ್ರಬಲವಾಗಿ ಮುಗಿಲೆತ್ತರಕ್ಕೆ ಏರುತ್ತಲೇ ಇದ್ದಾರೆ. ತಮ್ಮ ಜ್ಞಾನ ಬಾಹುಗಳನ್ನು ವಿಶ್ವದಗಲ ಚಾಚುತ್ತಲೇ ಇದ್ದಾರೆ. ಅಂತೆಯೇ ಅದಕ್ಕೆ  ಪ್ರತಿಯಾಗಿ ಪಟ್ಟಭದ್ರರು ಸಹ ತಮ್ಮ ಪ್ರಯತ್ನ ಬಿಡದೆ ಬಾಬಾಸಾಹೇಬರ ವಿಚಾರಗಳನ್ನು ತಿರುಚುವ ಷಡ್ಯಂತ್ರವನ್ನು  ನಿರಂತರವಾಗಿ ತುಂಬಾ ನಾಜೂಕಾಗಿ ಮಾಡುತ್ತಲೇ ಬಂದಿದ್ದಾರೆ. ಅದಕ್ಕಾಗಿ ಕೊಟ್ಯಾಂತರ ರೂಪಾಯಿಗಳನ್ನು ವ್ಯಯ ಕೂಡ ಮಾಡುತ್ತಿದ್ದಾರೆ. ಆದರೆ ಆ ಹುನ್ನಾರವನ್ನು ಅರಿಯಲು ನಾವು ಮಾತ್ರ ಸಂಪೂರ್ಣವಾಗಿ ವಿಫಲರಾಗಿದ್ದೇವೆ; ಮೇಲೂ-ಕೀಳು, ಎಡ-ಬಲಗಳಲ್ಲಿ ಮುಳುಗಿ ಮೈಮರೆತಿದ್ದೇವೆ. ಅದುವೇ ಬೇಸರದ ಸಂಗತಿ.
ಆದರೆ ಆಶ್ಚರ್ಯದ ಸಂಗತಿ ಎಂದರೆ ಬಾಬಾಸಾಹೇಬರು ಆಗಲೇ ಮುಂದಾಲೋಚನೆ ನಡೆಸಿ ತಮ್ಮ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ (Revolution & counter Revolution) ಕೃತಿಯಲ್ಲಿ  ಇದನ್ನೆಲ್ಲಾ  ವಿವರವಾಗಿ ತಿಳಿಸಿ ಹೋಗಿದ್ದಾರೆ. ಆ ಮೂಲಕ ಪಟ್ಟಭದ್ರರ ನಿದ್ದೆಗೆಡಿಸಿದ್ದಾರೆ. ಅದುವೇ ಅಂಬೇಡ್ಕರರ ನಿಜವಾದ ತಾಕತ್ತು. ಹಾಗಾಗಿ ಏಪ್ರಿಲ್ 14 ರ ಈ ‘ಅಂಬೇಡ್ಕರ್ ಹಬ್ಬ’ದ ದಿನದಿಂದಲಾದರೂ ಎಚ್ಚೆತ್ತ ಹಾದಿಯಲ್ಲಿ  ಸಾಗೋಣ; ಅರಿವಿನ ಹಣತೆ ಹಚ್ಚೋಣ; ಮೌಢ್ಯತೆಯ ಮೆಟ್ಟಿ ನಿಲ್ಲೋಣ; ಸಂವಿಧಾನದ ಬೆಳಕಲ್ಲಿ  ಬದುಕೋಣ; ಬನ್ನಿ ! ಎಲ್ಲರಿಗೂ ಒಳಿತಾಗಲಿ. ನಮಸ್ಕಾರ.
 ಅಂಕ್ನಳ್ಳಿ ಜಯರಾಂ. ಮುಂಬೈ 

WhatsApp

Join Now

Telegram

Join Now

Instagram

Join Now