ವಿಜಯ ದರ್ಪಣ ನ್ಯೂಸ್….
ಶ್ರೀಮತಿ ಎಸ್.ಜಾನಕಿ….
ಲೇಖನ: ವಿವೇಕಾನಂದ ಎಚ್ ಕೆ

ಸ್ವಾತಂತ್ರ್ಯ ನಂತರದ ಸುಮಾರು 40 ವರ್ಷಗಳ ಕಾಲ ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿದ್ದುದು, ಮಾಧ್ಯಮವಾಗಿ ಪರಿಣಾಮಕಾರಿ ಸಂಪರ್ಕ ಸಾಧನವಾಗಿದ್ದು, ಜನಜಾಗೃತಿಯ ಮಾರ್ಗವಾಗಿದ್ದು, ಎಲ್ಲ ರೀತಿಯ ಮನರಂಜನೆ ಮತ್ತು ಸಾಂಸ್ಕೃತಿಕ, ಸಾಮಾಜಿಕ ಚಿಂತನೆಗಳ ವೇದಿಕೆಯಾಗಿದ್ದು, ನಮ್ಮ ಬದುಕಿನ ಭಾಗವಾಗಿದ್ದುದು, ಸಾಮಾನ್ಯ ಜನರ ಮೇಲೆ ಅತ್ಯಂತ ಹೆಚ್ಚು ಪರಿಣಾಮ ಬೀರುತ್ತಿದ್ದುದು ಮೂರು ಪ್ರಮುಖ ಮಾಧ್ಯಮಗಳು. ಒಂದು ಪತ್ರಿಕಾ ಮಾಧ್ಯಮ, ಎರಡು ರೇಡಿಯೋ, ಮೂರು ಚಲನಚಿತ್ರ ಮಾಧ್ಯಮ.
ಈ ಮೂರು ಮಾಧ್ಯಮಗಳ ಅತ್ಯಂತ ಪ್ರಭಾವಶಾಲಿ ಇದ್ದ ಕಾಲಘಟ್ಟದಲ್ಲಿ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಮಾನಸಿಕ ಸ್ಥಿತಿ ಕೂಡ ಅಷ್ಟೇ ಆಳವಾದ ಮತ್ತು ಒಂದಕ್ಕೊಂದು ಪೂರಕವಾದ ಕ್ರಿಯೆ ಪ್ರತಿಕ್ರಿಯೆಗಳನ್ನು ಹೊಂದಿತ್ತು.
ಜನರಲ್ಲಿ ಇನ್ನೂ
ಮಾನವೀಯ ಮೌಲ್ಯಗಳು, ಕೌಟುಂಬಿಕ ಸಂಬಂಧಗಳು ಉಳಿದಿದ್ದವು. ಪ್ರೀತಿ ಪ್ರೇಮ ಪ್ರಣಯದ ರೀತಿಯೇ ತಾಯಿ ತಂದೆ, ಅಣ್ಣ ತಮ್ಮ, ಅಕ್ಕ ತಂಗಿ, ಗಂಡ ಹೆಂಡತಿ ಸಂಬಂಧಗಳು ಸಹ ಗಾಢವಾಗಿದ್ದವು. ಸ್ನೇಹ ಕೂಡ ತನ್ನ ಉತ್ತುಂಗದಲ್ಲಿತ್ತು. ಜೊತೆಗೆ ಬದುಕಿನ್ನು ಸಂಕೀರ್ಣವಾಗಿರಲಿಲ್ಲ. ಹಣ ಕೇಂದ್ರೀಕೃತ ಸಮಾಜ ನಿರ್ಮಾಣವಾಗಿರಲಿಲ್ಲ, ಜಾಗತೀಕರಣಕ್ಕೆ ಭಾರತ ತೆರೆದುಕೊಂಡಿರಲಿಲ್ಲ. ಹೆಚ್ಚು ಕಡಿಮೆ ಗ್ರಾಮ ಭಾರತ ಅಸ್ತಿತ್ವದಲ್ಲಿತ್ತು. ನಗರಗಳು ಕೂಡ ಇಷ್ಟೊಂದು ಗಲಿಬಿಲಿಗೆ, ಗೊಂದಲಕ್ಕೆ ಒಳಗಾಗಿರಲಿಲ್ಲ. ಒಂದು ರೀತಿ ಪ್ರಶಾಂತ ವಾತಾವರಣ ಇರುತ್ತಿತ್ತು.
ಆ ಕಾಲಘಟ್ಟದ ಸಂಘರ್ಷಗಳು, ಸಮಸ್ಯೆಗಳು, ಬಂಡಾಯಗಳು, ಆಗಲೂ ಇದ್ದವು. ಆದರೆ ಪರಿಹಾರದ ಮಾರ್ಗಗಳು ಹೆಚ್ಚು ಸಂಕೀರ್ಣವಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಸಿನಿಮಾ ಮಾಧ್ಯಮ ಮತ್ತು ಅದರ ಮೂಲ ತಿರುಳಾದ ಹಾಡುಗಾರಿಕೆ ಜನರನ್ನು ಭಾವನಾತ್ಮಕವಾಗಿ ಮತ್ತೇರಿಸುತ್ತಿತ್ತು, ಹುಚ್ಚೆಬ್ಬಿಸುತ್ತಿತ್ತು, ಆಳಕ್ಕೆ ಎಳೆದೊಯ್ಯುತ್ತಿತ್ತು.
ಸಾಹಿತ್ಯ ರಚನೆಕಾರರ ಪದಗಳು , ಸಂಗೀತಗಾರರ ಭಾವನೆಗಳು, ಹಾಡುಗಾರರ ಭಾವ ಧ್ವನಿಗಳು ಹೊರಹೊಮ್ಮಿಸುತ್ತಿದ್ದುದು ಸಾಮಾನ್ಯ ಜನರಲ್ಲಿ ವರ್ಣಿಸಲಸಾಧ್ಯ ರೋಮಾಂಚನ ಮೂಡಿಸುತ್ತಿದ್ದವು. ಸಾಹಿತ್ಯದ ಪ್ರಮುಖ ಭಾಗಗಳಾದ ಕಾವ್ಯ, ಕಥೆ, ಕಾದಂಬರಿಗಳು ತಮ್ಮ ವಾಸ್ತವ ನೆಲೆಯನ್ನು ಕಳೆದುಕೊಳ್ಳುವಂತೆ ಭಾಷೆ, ಭಾವ, ಸಂಗೀತ, ಧ್ವನಿ, ಸಂಕಲನ, ನೆರಳು ಬೆಳಕಿನ ತಂತ್ರಜ್ಞಾನದ ಮೂಲಕ ಹೊಸ ಬರವಣಿಗೆಯ ಸಾಧ್ಯತೆಗಳು ಸೃಷ್ಟಿಯಾದವು. ಅದೇ ಚಲನಚಿತ್ರ ಸಾಹಿತ್ಯ, ಸಂಗೀತ, ಹಾಡುಗಾರಿಕೆ.
ಅಂತಹ ಕಾಲಘಟ್ಟದ ಅದ್ಭುತ ಹೆಣ್ಣು ಧ್ವನಿ ಶ್ರೀಮತಿ ಎಸ್ ಜಾನಕಿ. ದಕ್ಷಿಣ ಭಾರತದ ಅತ್ಯದ್ಭುತ ಜನಪ್ರಿಯ ಹಾಡುಗಾರರಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದವರು ಎಸ್ ಜಾನಕಿ.
ಆಗಿನ ಭಾರತದ ಕೌಟುಂಬಿಕ ವ್ಯವಸ್ಥೆಯೂ ಅದಕ್ಕೆ ಪೂರಕವಾಗಿತ್ತು. ಸಿನಿಮಾ ಗೀತ ರಚನೆಕಾರರೇ ಚಿತ್ರಕಥೆಯ ಅಗತ್ಯಗತೆ, ಅನುಗುಣವಾಗಿ ಸಾಹಿತ್ಯ ರಚಿಸುತ್ತಿದ್ದರು. ಅದಕ್ಕೆ ಸಂಗೀತ ಸಂಯೋಜಿಸಿ ಹಾಡುಗಾರರು ಹಾಡುತ್ತಿದ್ದರೆ ಅದರ ಭಾವ ತೀವ್ರತೆಯಲ್ಲಿ ಸಾಮಾನ್ಯ ಜನ ಕೊಚ್ಚಿ ಹೋಗುತ್ತಿದ್ದರು. ಅದರಲ್ಲಿ ಮೈ ಮರೆಯುತ್ತಿದ್ದರು. ಅಂತಹ ಕಾಲಘಟ್ಟದ ಸಿನಿಮಾ ಹಾಡುಗಳ ಜನಪ್ರಿಯತೆಯೇ ಎಸ್ ಜಾನಕಿ ಅಂತಹವರನ್ನು ದೈವ ಸ್ವರೂಪಿ ಎಂಬಂತೆ ಚಿತ್ರಿಸಲು ಕಾರಣವಾಗಿತ್ತು. ನಿಜವಾದ ಸಾಹಿತ್ಯ, ಸಂಗೀತ ಭಾವನಾತ್ಮಕವಾದಾಗ ಈ ರೀತಿಯ ಸನ್ನಿವೇಶಗಳು ಸೃಷ್ಟಿಯಾಗುತ್ತದೆ.
ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ……
ಶಬ್ದ ಅಥವಾ ಧ್ವನಿ ಕ್ರಮಬದ್ಧತೆಯ – ಶಿಸ್ತುಬದ್ಧತೆಯ ತರಂಗಗಳನ್ನು ಸಂಗೀತ ಎಂದು ಗ್ರಹಿಸಬಹುದೇ ?
ಅಥವಾ,
ಆ ಶಬ್ದಗಳ ಸುಶ್ರಾವ್ಯತೆ ಮಾತ್ರ ಸಂಗೀತವೇ ?
ಅಥವಾ,
ಧ್ವನಿ ಮತ್ತು ವಾದ್ಯಗಳ ಸಮ್ಮಿಲನದ ಭಾಷೆಗೆ ಸಂಗೀತ ಎನ್ನಬಹುದೇ……
ಅಥವಾ,
ಸಾಹಿತ್ಯ ಧ್ವನಿ ವಾದ್ಯಗಳ ಮಿಲನದ ಪ್ರಕ್ರಿಯೆಯೇ ಸಂಗೀತವೇ……
ಅಥವಾ,
ಧ್ವನಿಯ ಸ್ವರ, ಲಯ ತಾಳಗಳ ರೂಪವೇ ಸಂಗೀತ ಸೃಷ್ಟಿಸುತ್ತದೆಯೇ…..
ಭಾವನೆಗಳು ಅಕ್ಷರ ರೂಪದ ಸಾಹಿತ್ಯವಾಗಿ ಮೂಡಿದ ಮೇಲೆ ಆ ಅಕ್ಷರಗಳು ಮತ್ತೆ ಭಾವನೆಗಳಾಗಿ ಹಾಡಿನ ಮೂಲಕ ಪರಿವರ್ತನೆ ಹೊಂದಿ ಕೆಲವೊಮ್ಮೆ ಮತ್ತೆ ಅಕ್ಷರಗಳಾಗಿ ಮತ್ತೆ ಭಾವನೆಗಳಾಗುವ ಸರಪಳಿಯ ಕೊಂಡಿಯೊಂದು ಕಳಚಿದೆ……
ಸುಮಾರು ಮುಕ್ಕಾಲು ಶತಮಾನ ಮನರಂಜನಾ ಮಾಧ್ಯಮದ ಲೋಕದಲ್ಲಿ ಮಿನುಗಿ ಜನಪ್ರಿಯರಾಗಿದ್ದ , ಎಷ್ಟೋ ಜನರ ಪಾಲಿನ ನೋವು ನಲಿವುಗಳ, ನೀರವ ರಾತ್ರಿಗಳ, ಬೆಳದಿಂಗಳ ಕಲರವದ, ಪ್ರೀತಿ ಪ್ರೇಮ ಪ್ರಣಯ ವಿರಹಗಳಲ್ಲಿ , ಕೆಲವೊಮ್ಮೆ ಭಕ್ತಿ ವೈರಾಗ್ಯಗಳೊಂದಿಗೆ ಸದಾ ಜೊತೆಯಾಗಿದ್ದ ಧ್ವನಿಯೊಂದು ಹಾಡುವುದನ್ನು ನಿಲ್ಲಿಸಿದೆ….
ಕೆಲವು ಅಪರೂಪದ ಸ್ವಾಭಾವಿಕ ಪ್ರತಿಭೆಗಳು ಎಲ್ಲಾ ಕ್ಷೇತ್ರಗಳಲ್ಲೂ ಉದಯಿಸಿವೆ. ಹೆಚ್ಚು ಶ್ರಮವಿಲ್ಲದೆ, ( ಅವರ ಪ್ರತಿಭೆಯ ಕಾರಣದಿಂದಾಗಿ ) ಆದರೆ ಶ್ರದ್ಧೆ ಮತ್ತು ಸಮರ್ಪಣಾ ಮನೋಭಾವದಿಂದ ತುಂಬಾ ಸರಳವಾಗಿ ಆ ಪ್ರತಿಭೆಯನ್ನು ದುಡಿಸಿಕೊಂಡಿದ್ದಾರೆ.
ಹಾಡುಗಳ ನಿಜವಾದ ಅರ್ಥ ಏನೇ ಇರಲಿ ಮನುಷ್ಯ ಜೀವಿಯ ಬದುಕಿನಲ್ಲಿ ಅತಿಹೆಚ್ಚು ಆಕರ್ಷಕ ಧ್ವನಿ ಎಂದರೆ ಅದು ಸಾಮಾನ್ಯವಾಗಿ ಹಾಡುಗಳು ಎಂದು ಕರೆಯಲ್ಪಡುವ ಧ್ವನಿ ತರಂಗಗಳು…….
ಬಹುಶಃ ಹುಟ್ಟಿದ ಮಗುವಿನಿಂದ ವೃದ್ದರವರೆಗೆ ಒಂದಲ್ಲ ಒಂದು ರೀತಿಯ ಹಾಡುಗಳ ಮೋಹ ಅವರ ಮನಸ್ಸುಗಳ ಮೇಲೆ ಪ್ರಭಾವ ಬೀರುವುದನ್ನು ಕಾಣಬಹುದು……
ಕೇವಲ ಭಾರತ ದೇಶ ಮಾತ್ರವಲ್ಲ, ಇಡೀ ಸೃಷ್ಟಿಯ ಮನುಷ್ಯ ಪ್ರಾಣಿಯ ಎಲ್ಲರಿಗೂ ಇದು ಅನ್ವಯಿಸುತ್ತದೆ. ಭಾಷೆಗಳನ್ನು ಮೀರಿ ಅನೇಕ ವೈವಿಧ್ಯಮಯ ಪ್ರಕಾರಗಳಲ್ಲಿ ಇದು ಅಸ್ತಿತ್ವದಲ್ಲಿದೆ…..
ಜಾನಪದವೇ ಇರಲಿ, ಶಾಸ್ತ್ರೀಯವೇ ಆಗಿರಲಿ, ಪಾಶ್ಚಿಮಾತ್ಯವೇ ಇರಲಿ, ಮಧ್ಯಪ್ರಾಚ್ಯದ ಅಥವಾ ಆಫ್ರಿಕಾದ ಸಂಗೀತವೇ ಇರಲಿ ಒಟ್ಟಿನಲ್ಲಿ ಹಾಡುಗಳು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ಎಲ್ಲಾ ಕಾಲಮಾನಗಳನ್ನು ಮೀರಿ ಬೆಳೆದಿದೆ……
ಆಧುನಿಕತೆ ಮತ್ತು ತಂತ್ರಜ್ಞಾನ ಬೆಳೆದಂತೆ ಮುಖ್ಯವಾಗಿ ಸಿನಿಮಾ ರಂಗದ ಅಭಿವೃದ್ಧಿಯೊಂದಿಗೆ ಈ ಕ್ಷಣದಲ್ಲಿ ಹಾಡುಗಳು ಉತ್ತುಂಗಕ್ಕೇರಿದೆ……
ಸಂಕೀರ್ಣ ಬದುಕಿನ ಜಂಜಡಗಳಿಂದ ನರಳುತ್ತಿರುವ ಮನುಷ್ಯ ಮನರಂಜನೆ ಅಥವಾ ಮನಸ್ಸುಗಳ ಪುನಶ್ಚೇತನಕ್ಕಾಗಿ ಸಂಗೀತದ ಮೊರೆ ಹೋಗುವುದು ಸಾಮಾನ್ಯವಾಗಿ ನಾವು ಗಮನಿಸಿದ್ದೇವೆ ಮತ್ತು ಅನುಭವಿಸಿದ್ದೇವೆ…….
ಸಪ್ತ ಸ್ವರಗಳ ಸಹಾಯದಿಂದ ನವರಸಗಳನ್ನು ಹೊಮ್ಮಿಸುವ ಸಂಗೀತ ನಮ್ಮ ಭಾವನೆಗಳೊಂದಿಗೆ ಅಲೆಅಲೆಯಾಗಿ ತೇಲುತ್ತಾ ಸಾಗುವ ಪರಿ ಅನನ್ಯ….
ಅಂತಹ ಸಂಗೀತ – ಹಾಡುಗಳ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಎಸ್. ಜಾನಕಿ ಅವರು ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದವರು. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ……
ಎಷ್ಟೋ ಪ್ರೇಮಿಗಳಿಗೆ, ಎಷೋ ವಿರಹಿಗಳಿಗೆ, ಎಷ್ಟೋ ನೋವುಂಡವರಿಗೆ, ಎಷ್ಟೋ ಕನಸುಗಾರರಿಗೆ, ಎಷ್ಟೋ ನಿರಾಶಾವಾದಿಗಳಿಗೆ, ಎಷ್ಟೋ ಹೃದಯಹೀನರಿಗೆ ತಮ್ಮ ಒಂದು ಹಾಡಿನ ಮೂಲಕ ಆ ಕ್ಷಣ ಒಂದು ಪ್ರತಿಕ್ರಿಯೆಯಾದ ಅವರ ಧ್ವನಿ ಹಾಡುವುದನ್ನು ನಿಲ್ಲಿಸಿ ಕೆಲ ವರ್ಷಗಳಾಗಿದ್ದವು.
ಬದುಕಿನ ಪಯಣದಲ್ಲಿ ಅನೇಕರಿಗೆ ಲಲಿತ ಕಲೆಗಳು ಸ್ಪೂರ್ತಿ ಪ್ರೇರಣೆ ಪ್ರಭಾವವನ್ನು ಹೊಂದುವ ಬಗೆಯನ್ನು ನೆನೆಯುತ್ತಾ…….
ಸಾವಿನ ನೆರಳಲ್ಲಿ ಬದುಕು….
ಒಬ್ಬ ಹೇಳಿದ ಜ್ಞಾನ ಮುಖ್ಯ,
ಇನ್ನೊಬ್ಬ ಹೇಳಿದ ಧ್ಯಾನ ಮುಖ್ಯ,
ಮತ್ತೊಬ್ಬ ಹೇಳಿದ ಭಕ್ತಿ ಮುಖ್ಯ,
ಮಗದೊಬ್ಬ ಹೇಳಿದ ಯೋಗ ಮುಖ್ಯ,
ಅಲ್ಲೊಬ್ಬ ಹೇಳಿದ ನಂಬಿಕೆ ಮುಖ್ಯ,
ಇಲ್ಲೊಬ್ಬ ಹೇಳಿದ ಕರ್ಮ ಮುಖ್ಯ,
ಹಿಂದೊಬ್ಬ ಹೇಳಿದ ತತ್ವ ಮುಖ್ಯ,
ಯಾವಾಗಲೋ ಒಬ್ಬ ಹೇಳಿದ ಸಿದ್ಧಾಂತ ಮುಖ್ಯ,
ಆಗೊಬ್ಬ ಅಂದ ಜೀವನ ಪವಿತ್ರವಾದುದು,
ಈಗೊಬ್ಬ ಅಂದ ಜೀವನ ನಶ್ವರ,
ಮತ್ತೊಬ್ಬ ಅಂದ ಜೀವನ ಅದ್ಭುತವಾದುದು,
ಮಗದೊಬ್ಬ ಅಂದ ಬದುಕು ಮಾಯೆ,
ಅಲ್ಲೊಬ್ಬ ಹೇಳಿದ ಬದುಕು ಭ್ರಮೆ,
ಇಲ್ಲೊಬ್ಬ ಅಂದ ಬದುಕು ಸುಂದರ,
ಹಿಂದೊಬ್ಬ ಹೇಳಿದ ದೇಹ ಮೂಳೆ ಮಾಂಸದ ತಡಿಕೆ,
ಆಗೊಬ್ಬ ಅಂದ ದೇಹವೇ ದೇಗುಲ,
ಯಾವಾಗಲೋ ಒಬ್ಬ ಹೇಳಿದ ಮೋಕ್ಷವೇ ಜೀವನದ ಅಂತಿಮ,
ಆದರೆ,
ಸಾಮಾನ್ಯನೊಬ್ಬ ಏನೂ ಹೇಳಲಿಲ್ಲ, ಜೀವಿಸಿದ,
ಬದುಕು ಬದುಕಷ್ಟೇ,
ಉಳಿದದ್ದೂ ಬದುಕಷ್ಟೇ,
ಸಹಜವಾಗಿ ಬದುಕಿ,
ಬೇರೇನೂ ಇಲ್ಲ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….











