--Ads--

ಚಂದಿರನಿಗಿಂತ ಚಂದ ನಿನ್ನ ಪ್ರೀತಿಯ ಬಂಧ

On: July 26, 2026 6:23 PM
Follow ಮಾಡಿ
--Ads--

Whatsapp Channel

Join Now

Telegram Group

Join Now

 

ಮುದ್ದಾದ ರೋಹಿಣಿ
ಪ್ರತಿದಿನವೂ ಘಮಘಮಿಸುವ ಮುಂಜಾವಿನ ಹೂವು ನೀನು. ಅಂದು ಮುಸ್ಸಂಜೆ ನದಿ ತೀರದಿ ಪರಮ ಪ್ರೇಮದ ರಮಣೀಯವಾದ ವಾತಾವರಣದಲ್ಲಿ ಯಾವುದೋ ಕಾಣದ ಲೋಕದಿಂದ ಬಂದವಳಂತೆ ಎದುರು ನಿಂತಿದ್ದೆ. ಅಚ್ಚ ಮಲ್ಲಿಗೆಗಿಂತಲೂ ಬೆಳ್ಳಗೆ ಮೈಬಣ್ಣ. ನಾಗರ ಜಡೆಯ ಬೀಸಿಕೊಂಡು, ಗೆಜ್ಜೆ ಶಬ್ದ ಮಾಡಿಕೊಂಡು, ಬಿಂಕದಿ ನೀ ನಡೆಯುತಿರುವಾಗ ನಿನ್ನಂದ ಸೆರೆ ಹಿಡಿಯಲು ಕಣ್ಣೆರಡು ಸಾಲವು ಎಂದೆನಿಸಿತು. ನಿನ್ನವು ಪುಟ್ಟ ಹೆಜ್ಜೆಯಾಗಿದ್ದರೂ ದಿಟ್ಟ ಹೆಜ್ಜೆಯಾಗಿದ್ದವು. ನೀನು ನಡೆದ ದಾರಿಯನ್ನೇ ಕಾಲು ಹಿಂಬಾಲಿಸುತ್ತಿದ್ದವು. ನಿನ್ನ ನಡೆಯ ಸೊಗಸಿನ ಸುಗಂಧ ಪರಿಮಳ ಆಗಲೇ ಮನದಲ್ಲಿ ಮನೆ ಮಾಡಿತ್ತು. ಚಂದದ ಬೆಳದಿಂಗಳು ಹರಡುತ್ತಿತ್ತು.
ಸನಿಹ ನಿಂತು ಮಾತನಾಡುವಷ್ಟು ಸಲಿಗೆ ಇನ್ನೂ ಬೆಳೆದಿರಲಿಲ್ಲ. ದೂರ ನಿಂತು ನಿನ್ನ ನಿಲುವನು ಆಸ್ವಾದಿಸುತ್ತಿದ್ದೆ. ಹಾರುವ ಚಿಟ್ಟೆಗಳ, ಗೂಡಿನ ಹಕ್ಕಿಗಳ ನೋಡುತ ನೀ ಮೈಮರೆತಿದ್ದೆ. ಮುಳುಗುವ ದಿಗಂತದಿ ಸಾಗುವ ಪುಟ್ಟ ದೋಣಿಯತ್ತ ನಿನ್ನ ಚಿತ್ತ ಹರಿದಿತ್ತು. ನನ್ನ ಚಿತ್ತ ಮಾತ್ರ ನಿನ್ನತ್ತಲೇ ಇತ್ತು. ಮೋಹದಿಂದ ನಿನ್ನತ್ತ ವಾಲುತ್ತಲೇ ಇತ್ತು. ಉಸಿರಾಡುವ ಗೊಂಬೆಯನ್ನು ಎರಕ ಹೊಯ್ದ ಆ ದೇವನನ್ನು ಸ್ತುತಿಸುತ್ತಿತ್ತು. ನನಗಾಗಿಯೇ ಇವಳನ್ನು ಮೀಸಲಿಡು ಎಂದು ಬೇಡುತ್ತಿತ್ತು.
ಕೊರಳಲ್ಲಿನ ನಾಜೂಕಾದ ಚಿಕ್ಕ ಚೈನು ನೀಳವಾದ ಕತ್ತನ್ನು ಅಲಂಕರಿಸಿ ರತ್ನದ ಹರಳಿನ ಹಾರವೆಂಬಂತೆ ಬೀಗುತ್ತಿತ್ತು. ತುಟಿ ಬಿಡಿಸಿದ ಮುಗುಳುನಗೆ ಹೊಮ್ಮಿದರೆ ಅದೊಂದು ಬಂಗಾರದ ಹೊಳಪಿನಂತಿತ್ತು. ದೇವಲೋಕದ ಅಪ್ಸರೆ ಬೇರೆ ಅಲ್ಲ ನೀನು ಬೇರೆ ಅಲ್ಲ ಎಂಬ ಭಾವದಂತೆ. ನಿನ್ನ ಕಣ್ತುಂಬಿಸಿಕೊಳ್ಳುವುದೇ ದಿವ್ಯ ಆನಂದ ಎಂದೆನಿಸಿತ್ತು. ಹೂ ಬಿರಿದ ದಿಕ್ಕಿನಿಂದ ಬಂದವಳೇನೋ ಇವಳು ಎಂದು ಮನ ಕೇಳುತ್ತಿತ್ತು. ನೀನೇ ನನ್ನ ಮುದ್ದು ಹುಡುಗಿ ನೀನೇ ನಿನ್ನ ಮನದರಸಿ ಎಂದು ಮನಸ್ಸು ಹಾಡುತ್ತ ಕುಣಿಯುತ್ತಿತ್ತು. ಮುಗ್ಧ ನೋಟ ಮುದ್ದಾದ ನಗುವಿಗೆ ಮನಸ್ಸು ಒಪ್ಪಿಯಾಗಿತ್ತು ನೀನೇ ನನ್ನ ಚಿನ್ನ ನನ್ನ ರನ್ನ ಎಂದು ಹೇಳಲು ತುದಿಗಾಲಲ್ಲಿ ನಿಂತಿದ್ದೆ. ಅನುರಾಗದ ಅಲೆಗಳು ಮುತ್ತಾಗಿ ಮರಳಿ ಬರುತ್ತವೆ ಎಂದುಕೊಂಡೆ ಮನೆಗೆ ಮರಳಿದ್ದೆ.

ಈ ರೂಪಸಿಯನ್ನು ನನ್ನ ಶೋಡಸಿಯನ್ನಾಗಿಸಬೇಕು ಎನ್ನುವ ಬಯಕೆ ಹಗಲು ರಾತ್ರಿ ಕಾಡುತ್ತಿತ್ತು. ಅದೊಂದು ದಿನ ಅವ್ವನಿಗೆ ಔಷಧಿ ತರಲೆಂದು ಬಸ್ಸಿಗಾಗಿ ಕಾಯುತ್ತಿದ್ದೆ. ವಯಸ್ಸಾದ ಅಜ್ಜಿಯನ್ನು ರಸ್ತೆ ದಾಟಿಸಿ ನನ್ನ ಬಳಿ ಬಂದು ನಿಂತೆ. ನಿನ್ನ ಆಗ ಕಂಡು ನೀ ಕರುಣಾಮಯಿ ಎಂದೆನಿಸಿ ಮಾತೆಗೆಳೆದೆ. ಅದೇ ಸಮಯಕ್ಕೆ ಗೊತ್ತಾಯಿತು. ವಾಚನಾಲಯದಲ್ಲಿ ಹೊಸದಾಗಿ ಬಂದ ಗ್ರಂಥಪಾಲಕಿ ನೀನೆಂದು. ಹುಡುಕುವ ಬಳ್ಳಿ ಕಾಲಿಗೆ ತೊಡರಿದಂತೆ ನನಗೆ ಓದಿ ನೌಕರಿ ಪಡೆಯಲೇಬೇಕಿತ್ತು.

ಅಪ್ಪನಿಲ್ಲದ ಮಗನಿಗೆ ಅವ್ವನೇ ಅಪ್ಪನಾಗಿದ್ದು. ಅನಾಥಭಾವ ಎಂದೂ ಕಾಡಲು ಬಿಡಲಿಲ್ಲ. ಗಂಡನಿಲ್ಲದ ಬದುಕಿನಲ್ಲಿ ಸಂಬಂಧಿಗಳ ಅನುಮಾನ ಅವಮಾನದಿಂದ ಜರ್ಜರಿತಳಾಗದೇ ನನಗಾಗಿ ನಗು ಹೊತ್ತು ಬದುಕಿದವಳು. ಒಡೆದ ಗಾಜಿನ ಬಿರುಕಿನಂತೆ ಆಕೆಯ ಮನದಲ್ಲಾದ ಬಿರುಕನ್ನು ಎಂದೂ ಕಾಣದಂತೆ ಬದುಕಿದವಳು. ಮಾತುಗಳಿಗೆ ಗಾಯಗೊಳಿಸುವ ಶಕ್ತಿಯಿದೆ ಮಾತಿನಿಂದಾದ ಗಾಯಕ್ಕೆ ಮುಲಾಮಿಲ್ಲ ಎಂದೆಲ್ಲ ಕಂಡ ಅವ್ವ ಮೌನಕ್ಕೆ ಶರಣಾಗಿದ್ದಳು.ಜೀವನದುದ್ದಕ್ಕೂ ನೋವು ನುಂಗಿ ಕಷ್ಟ ಸಹಿಸಿದ ಅಮ್ಮ ಈಗಲಾದರೂ ಉಪ್ಪರಿಗೆಯಲ್ಲಿರಲಿ ಎಂದು ದೈವಕ್ಕೆ ಅಂಗಲಾಚುತ್ತಿದ್ದ ದಿನಗಳವು. ಜೀವನ ಉಪ್ಪಿಲ್ಲದ ಊಟವಾದಂತೆ ಆಗಿತ್ತು.

ಮನೆಗೆ ಬಂದಾಗಲೆಲ್ಲ ನೀ ಹೇಳುವ ಮಾತಿನಿಂದ ಅವ್ವನ ಮುಖದಲ್ಲಿ ಏನೋ ಗೆಲುವು ಕಾಣುತ್ತಿತ್ತು. ಗೋಡೆಯ ಮೂಲೆಯಲ್ಲಿ ಮೌನವಾಗಿ ಕುಳಿತುಕೊಳ್ಳುತ್ತಿದ್ದ ನನ್ನವ್ವ ನೋವು ಮರೆತು ಮಾತಿಗಿಳಿಯುವಂತೆ ಮಾಡಿದೆ. ಹಡೆದವ್ವ ಉತ್ಸಾಹದಿಂದ ಇರುವುದ ಕಂಡು ಹೊನ್ನಿನ ರಾಶಿ ಸಿಕ್ಕಷ್ಟು ಖುಷಿಯಾಯಿತು. ಶುದ್ಧ ಜಲದಂತಿದ್ದ ನಿನ್ನ ಸ್ನೇಹ ವರವೆನಿಸಿತು. ಕಷ್ಟಕ್ಕೆ ಬರದ ಸಂಬಂಧಗಳು ನಿರರ್ಥಕವಾದವುಗಳು. ಕಷ್ಟಕ್ಕೆ ಬರುವ ನಿನ್ನಂತಹ ಪುಟ್ಟ ಸಂಬಂಧವೇ ಮಿಗಿಲು ಎನಿಸಿತು. ಬಸವಳಿದ ಬದುಕಿಗೆ ದಾರಿದೀಪವಾದೆ. ಕತ್ತಲೆಯ ಹಾದಿಯಲ್ಲಿ ಕೈ ಹಿಡಿದು ನಡೆಸಿದೆ.

ಎಳೆ ಬಿಸಿಲ ಮಳೆಬಿಲ್ಲು ಎನಿಸಿದೆ. ಎದೆಯ ಆಲಾಪನೆಯನ್ನು ಆಲಿಸಿದೆ. ಕನಸಿನ ಭಾವವಾಗಿ ಅರಳಿದೆ. ಪ್ರೀತಿಯ ದೀಪ ಹಚ್ಚಿದೆ. ಮೆಲ್ಲಮೆಲ್ಲನೆ ನಲ್ಲೆಯಾದೆ.. ಕೊನೆಯವರೆಗೂ ನಿನ್ನೊಲವಿನ ಆಸರೆಯ ನೆರಳಿನಲ್ಲಿ ಸಾಗುವಾಸೆ ಹುಟ್ಟಿಸಿದೆ. ಎಂದೂ ಕವನ ಗೀಚಿದವನಲ್ಲ ಆದರೆ ನಿನ್ನೊಲವು ನನ್ನನ್ನು ಕವಿ ಮಾಡಿದೆ. ‘ಹೃದಯ ಕದ್ದ ಚೋರಿ ನೀನೆ ಚೆಲುವೆ. ನಿನ್ನ ತಾಳಕ್ಕೆ ಕುಣಿವೆ ಒಲವೆ.’ ಎಂದೆಲ್ಲ ಅನುರಾಗದ ಕವನ ರಚಿಸಲು ಪ್ರೇರೇಪಿಸಿದೆ. ದುಃಖದ ಕಾವು ಕಂಡ ನನಗೆ ಸುಖದ ತಂಪು ಅರಿವಾಯಿತು. ಒಂದೇ ನೆರಳಲಿ ಬಾಳುವಾಸೆ ತಂದಿತು.

ನನಗೆ ಬೇಕಾದ ಪುಸ್ತಕಗಳನ್ನು ನೀನೇ ಮುತುವರ್ಜಿಯಿಂದ ತೆಗೆದಿರಿಸಿ ಕೊಡುವುದ ಕಂಡು ಇವಳೆಷ್ಟು ಸುಂದರಿಯೋ ಅಷ್ಟೇ ಒಳ್ಳೆಯವಳು ಎನ್ನುತ್ತಿತ್ತು ಮನಸ್ಸು. ನಿನ್ನ ನೆರವಿನ ಬಲದಿಂದ ಆರಂಕಿಯ ಕೆಲಸವೊಂದು ಭಾಗ್ಯದ ಬಾಗಿಲು ತೆರೆಸಿತು. ಕೋಟಿ ಜನ್ಮದ ಪುಣ್ಯವೇನೋ ಸೋತು ಕುಳಿತಾಗ ನಿನ್ನ ಸ್ನೇಹ ಸಿಂಚನ ಬದುಕಿನಲ್ಲಿ ಗೆಲುವು ತಂದಿತು. ನೀ ಸಿಕ್ಕ ಮೇಲೆ ನೋವು ನಲಿವಿನ ಹೂವಾಯಿತು. ಹೃದಯ ಪ್ರೇಮದ ಗೀತೆಯಾಗಿ ಮೊಳಗಿತು. ಒಲವಿನ ಬೇರು ಬೇರೂರಿದ ಕ್ಷಣವದು. ಬದುಕು ಹೂವಾಯಿತು.

ಇಬ್ಬರೂ ಭೇಟಿಯಾಗಬೇಕೆಂದು ನಿಶ್ಚಯಿಸಿದ್ದ ಸಂಜೆ ಅದು. ಅಪರೂಪದ ರೂಪವೊಂದು ಮುಸ್ಸಂಜೆಯ ಮೃದುವಾದ ತಂಗಾಳಿಯಂತೆ ಬಳಿ ಬರುವುದ ಕಂಡು ಮೂಕವಿಸ್ಮಿತನಾಗಿದ್ದೆ. ಸಿನಿತಾರೆ ಕಣ್ಮುಂದೆ ಬಂದಂತೆನಿಸಿ ಮೈ ಮರೆತಿದ್ದೆ. ನಿನ್ನ ಕಣ್ಣನೋಟದ ಹೊಳಪಿಗೆ ನೀಲಿ ಗಗನದಲ್ಲಿ ಚಂದಿರ ನಾಚಿ ಹೊಳೆಯುವುದನ್ನೇ ಮರೆತಿದ್ದ. ಚುಕ್ಕಿಗಳ ಬೆಳಕಿನಲ್ಲಿ ಬಳ್ಳಿಯ ಹೂವೊಂದು ಪಕ್ಕದ ಮರವ ಅಪ್ಪಿಕೊಳ್ಳುವ ದೃಶ್ಯ ಕಂಡು ಮನದಲ್ಲಿ ಆಸೆ ಚಿಮ್ಮಿತ್ತು. ಮಾತುಗಳೇ ಇಲ್ಲದ ಮೌನದಲ್ಲೂ ಭಾವನೆಗಳನ್ನು ಅರಿವ ಜೀವ ಪಕ್ಕದಲ್ಲಿದೆ ಎಂದು ಒಳಮನಸ್ಸು ಒತ್ತಿ ಒತ್ತಿ ಹೇಳುತ್ತಿತ್ತು. ನನ್ನೊಳಗೆ ಪ್ರೀತಿಯ ಅಲೆಯೊಂದು ಮೌನವಾಗಿ ಹೊಳೆದಿತ್ತು. ಹುಡುಕುತ್ತಿದ್ದ ಅಕ್ಕರೆಯ ಅನುರಾಗದ ಅಲೆ ಜೋಡಿಯಾಗುವುದು ಎದೆಯಲಿ ಬೆರೆಯುವುದೆಂದು ಎದೆ ನಂಬಿತ್ತು.
ತಂಪಾದ ತಂಗಾಳಿ ಮೆಲ್ಲನೆ ಬೀಸುತ್ತ ದೇಹವನ್ನು ತೀಡುತ್ತಿತ್ತು. ನೀನು ನಾಚಿಕೆಯಿಂದ ನಿನ್ನ ಮುಂಗುರುಳನ್ನು ಕಿವಿಯ ಹಿಂದೆ ಸರಿಸಿದಾಗ ನಿನ್ನ ಕೈ ಬೆರಳುಗಳು ನನಗೆ ತಾಗಿದವು. ಆ ಒಂದು ಸಣ್ಣ ಸ್ಪರ್ಷ ದೇಹದಲ್ಲಿ ಮಿಂಚಿನಂತೆ ಸಂಚರಿಸಿತು. ಏರಿದ ಎದೆ ಬಡಿತ ಇಬ್ಬರಿಗೂ ಕೇಳುತ್ತಿತ್ತು. ಮಾತಿಲ್ಲದೇ ಇಬ್ಬರ ಕೈಗಳು ಒಂದನ್ನೊಂದು ಅಪ್ಪಿಕೊಂಡು ಒಂದಾದವು. ಒಂದಾದ ಖುಷಿಯಲ್ಲಿ ಕೆನ್ನೆ ಕಣ್ಣು ತುಟಿ ಸವರಿಕೊಂಡವು. ನಾವೂ ಇದರಲ್ಲಿ ಪಾಲ್ಗೊಳ್ಳಬೇಕೆಂದು ಅಧರಗಳು ಮುಂದಾದವು. ಕೆಲ ಹೊತ್ತು ಜೇನು ಸವಿದು ಒಲ್ಲದ ಮನಸ್ಸಿನಿಂದ ಬೇರಾದವು.

ಬರೆಯಬೇಕೆಂದ ಸಾಲುಗಳು ಲೆಕ್ಕಕ್ಕಿಲ್ಲ. ಅವು ನನ್ನ ಹೆದರಿಕೆಗೆ ಹೆದರಿ ಕರಗಿ ಹೋಗಲಿಲ್ಲ. ಕಾಲದ ಸಹಜ ಓಟದ ಹರಿವಿಗೆ ಸಿಗಲಿಲ್ಲ. ಮನಮೋಹಕ ಚಿತ್ರಗಳಾಗಿ ಕಣ್ಣಲ್ಲಿ ಇಂದಿಗೂ ಉಳಿದಿವೆ ಎಲ್ಲ. ನೆನಪುಗಳು ಎದೆಯಲ್ಲಿ ತೇಲುತ್ತಿವೆ. ತುಟಿಯ ತುದಿಗಳಲಿ ಜೇನ ಹನಿಗಳ ನನಗಾಗಿಯೇ ಕಾಪಿಟ್ಟಿರುವೆ.. ಬಂದು ಬಿಡು ಸರಸದ ಮಂಚಕೆ ಕಾದಿರುವೆ ಮೈಮೇಲೆ ಜೇನಹೊಳೆ ಹರಿಸಲು. ಅಧರದ ಅಮೃತವ ಸಾಲವಾಗಿ ಪಡೆದು ಬಡ್ಡಿ ಸಮೇತ ಕೊಡಲು. ನನ್ನ ಮುದ್ದಿನ ಮಕ್ಕಳ ಮಮತೆಯ ತಾಯಿಯಾಗಲು.
ನಿನ್ನ ಮುದ್ದಿನ ರೋಹಿತ

ಲೇಖನ
 ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨

WhatsApp

Join Now

Telegram

Join Now

Instagram

Join Now