ವಿಜಯ ದರ್ಪಣ ನ್ಯೂಸ್….
ವ್ಯಕ್ತಿತ್ವವನ್ನು ಶ್ರೇಷ್ಠವಾಗಿಸುವ ಒಂದು ಸರಳ ಸೂತ್ರ

‘ನಿನಗೆ ಬೇಡವಾದದ್ದನ್ನು ಇತರರಿಗೆ ಮಾಡಬೇಡ.’ ಎಂಬುದು ಉನ್ನತ ವ್ಯಕ್ತಿತ್ವಕ್ಕೆ ಸುವರ್ಣ ನಿಯಮ. ಅದರಂತೆಯೇ ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ ಇರುವ ಅತ್ಯುನ್ನತ ಸೂತ್ರ. ವ್ಯಕ್ತಿತ್ವ ವಿಕಸನ ಎಂದರೆ ಕೇವಲ ಒಳ್ಳೇಯ ಬಟ್ಟೆ ಧರಿಸುವುದು ಅಥವಾ ಇಂಗ್ಲಿಷಿನಲ್ಲಿ ಮಾತನಾಡುವುದಲ್ಲ. ನಿಜವಾದ ವ್ಯಕ್ತಿತ್ವವು ನಮ್ಮ ಆಲೋಚನೆ, ನಡವಳಿಕೆ ಮತ್ತು ಇತರರನ್ನು ನಾವು ಹೇಗೆ ನಡೆಸಿಕೊಳ್ಳುತ್ತೇವೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಜಗತ್ತಿನ ಅತ್ಯುನ್ನತ ವ್ಯಕ್ತಿತ್ವ ವಿಕಸನದ ಸೂತ್ರವೆಂದರೆ—”ನಿನಗೆ ಇತರರು ಏನು ಮಾಡಬಾರದೆಂದು ಬಯಸುತ್ತೀಯೋ, ಅದನ್ನು ನೀನೂ ಇತರರಿಗೆ ಮಾಡಬೇಡ” ನಿಮ್ಮ ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಈ ನಿಯಮ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಈ ಕೆಳಗಿನ ಅಂಶಗಳ ಮೂಲಕ ತಿಳಿಯೋಣ ಬನ್ನಿ.
ಆತ್ಮಾವಲೋಕನ
ಉತ್ತಮ ವ್ಯಕ್ತಿತ್ವದ ಮೊದಲ ಹೆಜ್ಜೆ ಆತ್ಮಾವಲೋಕನ. ನಮ್ಮ ಆಲೋಚನೆಗಳು, ನಡವಳಿಕೆಗಳು ಮತ್ತು ತಪ್ಪು-ಒಪ್ಪುಗಳನ್ನು ನಿಷ್ಪಕ್ಷಪಾತವಾಗಿ ವಿಶ್ಲೇಸುವುದೇ ಆತ್ಮಾವಲೋಕನ. ಇದು ಸ್ವಯಂ ಜಾಗೃತಿ, ನಮ್ಮ ತಪ್ಪುಗಳ ತಿದ್ದುವಿಕೆಗೆ ಮತ್ತು ಭಾವನಾತ್ಮಕ ನಿಯಂತ್ರಣಕ್ಕೆ ಹದಗೊಳಿಸುತ್ತದೆ. ಅಷ್ಟೇ ಅಲ್ಲ ಸಂಬಂಧಗಳಲ್ಲಿನ ಬಿರುಕನ್ನು ಮುಚ್ಚುತ್ತದೆ. ನಮ್ಮನ್ನು ಯಾರಾದರೂ ಗೌರವದಿಂದ ನಡೆಸಿಕೊಂಡಾಗ ನಮಗೆ ಸಂತೋಷವಾಗುತ್ತದೆ, ಅದೇ ಯಾರಾದರೂ ಕೀಳಾಗಿ ಕಂಡರೆ ನೋವಾಗುತ್ತದೆ. “ನನಗೆ ಬೇಡವಾದ ನೋವು ಇತರರಿಗೂ ಬೇಡ” ಎಂದು ಯೋಚಿಸುವುದೇ ಧನಾತ್ಮಕ ಚಿಂತನೆ.ಬಸವಣ್ಣನವರ ವಚನವೊಂದು ಹೀಗೆ ಹೇಳುತ್ತದೆ.: “ತನ್ನಂತೆ ಪರರ ಬಗೆದೊಡೆ ಕೈಲಾಸ ಕಾಣಾ ಕೂಡಲಸಂಗಮದೇವ.” ಅಂದರೆ, ಇತರರನ್ನು ತನ್ನಂತೆಯೇ ಕಾಣುವ ವಿಶಾಲ ಮನೋಭಾವ ಬÉಳÉಸಿಕೊಂಡಾಗ ನಮ್ಮ ವ್ಯಕ್ತಿತ್ವದಲ್ಲಿ ಶಾಂತಿ ಮತ್ತು ಪ್ರಬುದ್ಧತೆ ಮೂಡುತ್ತದೆ.
ಭಾವನಾತ್ಮಕ ಬುದ್ಧಿವಂತಿಕೆ
ಭಾವನಾತ್ಮಕ ಬುದ್ಧಿವಂತಿಕೆ ಎಂದರೆ ನಮ್ಮ ಸ್ವಂತ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು, ನಿಯಂತ್ರಿಸುವುದು ಮತ್ತು ಇತರರ ಭಾವನೆಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ಸೂಕ್ತವಾಗಿ ಸ್ಪಂದಿಸುವ ಸಾಮಥ್ರ್ಯ. ಇಂದಿನ ಜಗತ್ತಿನಲ್ಲಿ ಯಶಸ್ವಿ ಜೀವನಕ್ಕೆ ಬುದ್ಧಿವಂತಿಕೆಗಿಂತಲೂ ಭಾವನಾತ್ಮಕ ಬುದ್ಧಿವಂತಿಕೆ ಅತ್ಯಂತ ಮುಖ್ಯವಾಗಿದೆ. ನಮ್ಮ ಕೋಪ ಮತ್ತು ಭಾವನೆಗಳನ್ನು ನಿಯಂತ್ರಿಸುವುದು ವ್ಯಕ್ತಿತ್ವ ವಿಕಸನದ ಪ್ರಮುಖ ಭಾಗವಾಗಿದೆ. ಯಾರಾದರೂ ನಮ್ಮ ಮೇಲೆ ಕಿರುಚಾಡಿದರೆ ನಮಗೆ ಇಷ್ಟವಾಗುವುದಿಲ್ಲ. ಹಾಗಿದ್ದಾಗ ನಾವು ಇತರರ ಮೇಲೆ ಕೋಪಗೊಳ್ಳುವುದು ಎಷ್ಟು ಸರಿ? ಮಹಾತ್ಮ ಗಾಂಧೀಜಿಯವರು ಭಾವನಾತ್ಮಕ ನಿಯಂತ್ರಣವನ್ನು ಸಾಧಿಸಿದ್ದರು. ಗಾಂಧೀಜಿಯವರ ಸೂತ್ರ ಹೀಗಿದೆ: ‘ಕಣ್ಣಿಗೆ ಕಣ್ಣು ಎಂಬ ತತ್ವ ಜಗತ್ತನ್ನು ಕುರುಡು ಮಾಡುತ್ತದೆ.’ ಕಟು ನುಡಿ ಮತ್ತು ಹಿಂಸೆಯನ್ನು ತ್ಯಜಿಸಿ, ತಾಳ್ಮೆಯಿಂದ ವರ್ತಿಸುವುದು ಉನ್ನತ ವ್ಯಕ್ತಿತ್ವದ ಲಕ್ಷಣವಾಗಿದೆ. ಒತ್ತಡದ ಪರಿಸ್ಥಿತಿಯಲ್ಲಿ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವ ಕಲೆ ಸಿದ್ಧಿಸಿಕೊಳ್ಳಬೇಕು.
ಕ್ಷಮಾ ಗುಣ
ಕ್ಷಮಾ ಗುಣ ಎಂದರೆ ನೋವುಂಟು ಮಾಡಿದವರ ಮೇಲಿರುವ ಕೋಪ ಮತ್ತು ಸೇಡಿನ ಭಾವನೆಯನ್ನು ಕೈಬಿಟ್ಟು, ಅವರನ್ನು ಮನಸಾರೆ ಮನ್ನಿಸುವ ಉದಾತ್ತ ಗುಣ. ಕ್ಷಮಾ ಗುಣ ಮತ್ತು ನಾಯಕತ್ವದ ಗುಣಗಳು ಒಬ್ಬ ಉತ್ತಮ ನಾಯಕನಿಗೆ ಇರಬೇಕಾದ ಮುಖ್ಯ ಗುಣ ಕ್ಷಮೆ ಮತ್ತು ಸಹಿಷ್ಣುತೆ. ನಮ್ಮನ್ನು ಯಾರಾದರೂ ನೋಯಿಸಿದಾಗ ದ್ವೇಷ ಸಾಧಿಸುವುದು ಸುಲಭ, ಆದರೆ ಕ್ಷಮಿಸುವುದು ಕಷ್ಟ. ನೆಲ್ಸನ್ ಮಂಡೇಲಾ ಅವರು 27 ವರ್ಷ ಜೈಲಿನಲ್ಲಿ ತಮಗೆ ಹಿಂಸೆ ನೀಡಿದವರನ್ನು ದೇಶದ ಅಧ್ಯಕ್ಷರಾದಾಗ ಕ್ಷಮಿಸಿದರು. ಅವರೇ ಹೇಳಿದಂತೆ ನುಡಿ: “ದ್ವೇಷ ಸಾಧಿಸುವುದು ತಾನು ವಿಷ ಕುಡಿದು ಶತ್ರು ಸಾಯಲಿ ಎಂದು ಕಾಯುವಂತದ್ದು.” ದ್ವೇಷವನ್ನು ಬಿಟ್ಟು ಇತರರನ್ನು ಕ್ಷಮಿಸುವ ಗುಣ ನಿಮ್ಮನ್ನು ಸಮಾಜದಲ್ಲಿ ಒಬ್ಬ ಶ್ರೇಷ್ಠ ನಾಯಕನನ್ನಾಗಿ ಮಾಡುತ್ತದೆ. ದುರ್ಬಲ ವ್ಯಕ್ತಿ ಕ್ಷಮಿಸಲಾರ. ಕ್ಷಮಿಸುವುದರಿಂದ ಮತ್ತು ಇತರರಿಗೆ ಒಳ್ಳೆಯದನ್ನು ಮಾಡುವುದರಿಂದ ಮೆದುಳಿನಲ್ಲಿ ಧನಾತ್ಮಕ ಹಾರ್ಮೋನ್ಗಳು ಬಿಡುಗಡೆಯಾಗುತ್ತವೆ ಎಂದು ವಿಜ್ಞಾನ ಹೇಳುತ್ತದೆ. ಆದ್ದರಿಂದ ಕ್ಷಮಾಗುಣವನ್ನು ಬೆಳೆಸಿಕೊಳ್ಳಬೇಕು.
ಸಮಾನತೆ
ಜಾತಿ, ಧರ್ಮ, ಲಿಂಗ, ಬಣ್ಣ, ಅಂತಸ್ತು ಅಥವಾ ಆರ್ಥಿಕ ಹಿನ್ನೆಲೆಯ ಭೇದವಿಲ್ಲದೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಹಕ್ಕು, ಗೌರವ ಮತ್ತು ಅವಕಾಶಗಳನ್ನು ನೀಡುವ ತತ್ವವಾಗಿದೆ. ಇದು ನಮ್ಮ ಮನಸ್ಸಿನಲ್ಲಿರುವ ಕಿರಿದಾದ ಯೋಚನೆಗಳನ್ನು ದೂರಮಾಡಿ, ಪ್ರಜ್ಞಾವಂತ ನಾಗರಿಕನನ್ನಾಗಿ ಯೋಚಿಸುವಂತೆ ಮಾಡುತ್ತದೆ. ಸಮಾನತೆ ಮತ್ತು ಎಲ್ಲರನ್ನೂ ಗೌರವಿಸುವ ನಡವಳಿಕೆ ಎಲ್ಲರನ್ನೂ ಸಮಾನವಾಗಿ ಕಾಣುವ ವ್ಯಕ್ತಿಯನ್ನು ಇಡೀ ಜಗತ್ತು ಗೌರವಿಸುತ್ತದೆ. ಬಾಲ್ಯದಲ್ಲಿ ಅಸಮಾನತೆಯ ತೀವ್ರ ನೋವನ್ನು ಅನುಭವಿಸಿದ ಡಾ. ಬಿ. ಆರ್. ಅಂಬೇಡ್ಕರ್ ಅವರು, ಆ ನೋವನ್ನು ಸೇಡಾಗಿ ಬದಲಾಯಿಸಲಿಲ್ಲ. ಬದಲಿಗೆ ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಿದರು. ಅಂಬೇಡ್ಕರ್ ಅವರ ತತ್ವ: ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆಯನ್ನು ಗೌರವಿಸುವುದೇ ನಿಜವಾದ ಸಂಸ್ಕಾರ. ನಮ್ಮ ವ್ಯಕ್ತಿತ್ವದಲ್ಲಿ ಅಹಂಕಾರವನ್ನು ಬದಿಗೊತ್ತಿ, ಪ್ರತಿಯೊಬ್ಬರಿಗೂ ಗೌರವ ನೀಡುವುದನ್ನು ನಾವು ಕಲಿಯಬೇಕು. ಅಂಬೇಡ್ಕರ್ ಅವರ ಪ್ರಸಿದ್ಧ ನುಡಿಯಂತೆ ‘ ನಾನು ಧರ್ಮವನ್ನು ಗೌರವಿಸುತ್ತೇನೆ, ಅದು ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆಯನ್ನು ಕಲಿಸುತ್ತದೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಗೌರವಿಸುವುದೇ ನಿಜವಾದ ವ್ಯಕ್ತಿತ್ವ.
ನಿಸ್ವಾರ್ಥ ಸೇವೆ
ನಿಸ್ವಾರ್ಥ ಸೇವೆ ಎಂದರೆ ಕೇವಲ ದೊಡ್ಡ ಮೊತ್ತದ ಹಣವನ್ನು ದಾನ ಮಾಡುವುದಲ್ಲ. ಹಸಿದವರಿಗೆ ಅನ್ನ ನೀಡುವುದ, ದಾರಿ ತಪ್ಪಿದವರಿಗೆ ಸರಿಯಾದ ಮಾರ್ಗ ತೋರಿಸುವುದ ಅಥವಾ ಕಷ್ಟದಲ್ಲಿದ್ದವರಿಗೆ ಧೈರ್ಯದ ಮಾತುಗಳನ್ನಾಡುವುದು ಕೂಡ ನಿಸ್ವಾರ್ಥ ಸೇವೆಯೇ ಆಗಿದೆ. ಕರುಣೆ, ಸಹಾನುಭೂತಿ ಮತ್ತು ನಿಸ್ವಾರ್ಥ ಸೇವೆ ಇತರರ ಕಷ್ಟವನ್ನು ತನ್ನದೇ ಕಷ್ಟ ಎಂದು ಭಾವಿಸುವ ಗುಣವನ್ನು ‘ಎಂಪತಿ’ ಎನ್ನಲಾಗುತ್ತದೆ. ಮದರ್ ಥೆರೆಸಾ ಮತ್ತು ಕರ್ನಾಟಕದ ತ್ರಿವಿಧಿ ದಾಸೋಹಿ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ಹಸಿವು ಮತ್ತು ಅಜ್ಞಾನದ ನೋವನ್ನು ನೀಗಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಮದರ್ ಥೆರೆಸಾ ಹೇಳಿದಂತೆ “ಇತರರು ನಿಮಗೆ ಏನು ಮಾಡಬೇಕೆಂದು ಬಯಸುತ್ತೀರೋ, ಅದನ್ನೇ ಮೊದಲು ನೀವು ಅವರಿಗೆ ಮಾಡಿ.” ನಮ್ಮ ಸ್ವಾರ್ಥವನ್ನು ಮೀರಿ ಇತರರಿಗೆ ಸಹಾಯ ಮಾಡುವ ಹಸ್ತ ಚಾಚಿದಾಗ ನಮ್ಮ ವ್ಯಕ್ತಿತ್ವಕ್ಕೆ ದೈವಿಕ ಕಳೆ ಬರುತ್ತದೆ.
ಡಿಜಿಟಲ್ ಜವಾಬ್ದಾರಿ
ಡಿಜಿಟಲ್ ಜವಾಬ್ದಾರಿ ಮತ್ತು ಸಂವಹನ ಕಲೆ ಇಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿದೆ. ಆನ್ಲೈನ್ನಲ್ಲಿ ಇತರರನ್ನು ಟ್ರೋಲ್ ಮಾಡುವುದು, ನೆಗೆಟಿವ್ ಕಮೆಂಟ್ ಮಾಡುವುದು ವಿಕೃತ ವ್ಯಕ್ತಿತ್ವದ ಲಕ್ಷಣ. ನಮ್ಮನ್ನು ಯಾರಾದರೂ ಹಾಗೆ ಮಾಡಿದರೆ ಆಗುವ ನೋವನ್ನು ನೆನೆದು, ಇಂಟರ್ನೆಟ್ ಲೋಕದಲ್ಲಿ ಜವಾಬ್ದಾರಿಯುತವಾಗಿ ಮತ್ತು ಗೌರವಾನ್ವಿತವಾಗಿ ಸಂವಹನ ನಡೆಸುವುದು ಇಂದಿನ ಅಗತ್ಯವಾಗಿದೆ.
ಕೊನೆ ಹನಿ
ನನಗೆ ಬೇಡವಾದದ್ದು ಇತರರಿಗೂ ಬೇಡ ಎಂಬ ಒಂದು ಚಿಕ್ಕ ಸೂತ್ರವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ, ಜಗತ್ತಿನ ಅರ್ಧದಷ್ಟು ಸಮಸ್ಯೆಗಳು ತಾವಾಗಿಯೇ ಕೊನೆಗೊಳ್ಳುತ್ತವೆ. ವ್ಯಕ್ತಿತ್ವ ವಿಕಸನ ಎನ್ನುವುದು ಹೊರಗಿನ ಬದಲಾವಣೆಯಲ್ಲ, ಅದು ಒಳಗಿನ ಪರಿವರ್ತನೆ. “ನನಗೆ ಬೇಡವಾದ್ದನ್ನು ಇತರರಿಗೆ ಮಾಡಬಾರದು” ಎಂಬ ಈ ಸುವರ್ಣ ನಿಯಮವನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ, ನಮ್ಮ ವ್ಯಕ್ತಿತ್ವವು ಅತ್ಯಂತ ಆಕರ್ಷಕ, ಗೌರವಾನ್ವಿತ ಮತ್ತು ಪ್ರಭಾವಶಾಲಿಯಾಗಿ ಬದಲಾಗುತ್ತದೆ. ನಾವು ಇತರರಿಂದ ಏನು ನಿರೀಕ್ಷಿಸುತ್ತೇವೆಯೋ, ಅದನ್ನೇ ಮೊದಲು ಇತರರಿಗೆ ನೀಡಬೇಕು. ಸ್ವಾರ್ಥ, ದ್ವೇಷ ಮತ್ತು ಅಸೂಯೆಗಳನ್ನು ಬದಿಗಿಟ್ಟು ಎಲ್ಲರನ್ನೂ ನಮ್ಮಂತೆ ಕಂಡಾಗ ಜೀವನ ಸುಂದರ ನಂದನವನವಾಗುತ್ತದೆ.

ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142










